ಬೆಂಗಳೂರು, ಜ.27: ಗಣರಾಜ್ಯೋತ್ಸವ ಅಂಗವಾಗಿ (Republic day 2026) ಲಾಲ್‌ಬಾಗ್ ಬಾಟನಿಕಲ್ ಗಾರ್ಡನ್‌ನಲ್ಲಿ (Lalbagh Botanical Garden) ನಡೆದ 219ನೇ ಪ್ಲವರ್ ಶೋಗೆ (Lalbagh flower show) ತೆರೆ ಬಿದ್ದಿದೆ. 'ತೇಜಸ್ವಿ ವಿಸ್ಮಯ' ಶೀರ್ಷಿಕೆಯಡಿ ನಡೆದ ಈ 11 ದಿನಗಳ ಕಾರ್ಯಕ್ರಮವು ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರ (Poornachandra Tejaswi) ಸಾಹಿತ್ಯ, ಪ್ರಕೃತಿ ಪ್ರೇಮ ಮತ್ತು ವಿಸ್ಮಯದ ಲೋಕವನ್ನು ಹೂವುಗಳ ಮೂಲಕ ಜನರ ಮುಂದೆ ತೆರೆದಿಟ್ಟಿತು.
ಶೋದ ಕೊನೆಯ ದಿನವಾದ ಸೋಮವಾರ ಹೆಚ್ಚಿನ ಜನ ಫ್ಲವರ್ ಶೋಗೆ ಭೇಟಿ ನೀಡಿ ಗಾಜಿನ ಮನೆಯಲ್ಲಿ ಸೃಷ್ಟಿಯಾದ ಮೂಡಿಗೆರೆಯ ಪ್ರಕೃತಿ ಜೊತೆಗೆ ತೇಜಸ್ವಿಯ ವಿಸ್ಮಯ ಲೋಕ ಕಣ್ತುಂಬಿಕೊಂಡರು. ಕೊನೆಯ ದಿನವಾದ ಜನವರಿ 26ರಂದು ದಾಖಲೆ ಸಂಖ್ಯೆಯ ಜನರು ಭೇಟಿ ನೀಡಿ ಹೂವಿನ ಲೋಕದಲ್ಲಿ ಮುಳುಗಿದರು. ಶೋವನ್ನು ತೇಜಸ್ವಿಯವರಿಗೆ ಸಮರ್ಪಿಸಲಾಗಿತ್ತು. ಗಾಜಿನ ಮನೆಯಲ್ಲಿ ಮಂತ್ರ ಮಾಂಗಲ್ಯ, ಪ್ರಕೃತಿಯ ಸೊಬಗು, ಗ್ರಾಮೀಣ ಜೀವನ, ಕಾಡು-ಪ್ರಾಣಿಗಳು, ನದಿ-ಬೆಟ್ಟಗಳು ಹೂಗಳಿಂದ ಅದ್ಭುತವಾಗಿ ರಚನೆಗೊಂಡಿದ್ದವು.
95ಕ್ಕೂ ಹೆಚ್ಚು ತಳಿಗಳ ಸುಮಾರು 32 ಲಕ್ಷ ಹೂವುಗಳು- ಇವುಗಳಲ್ಲಿ 27 ಲಕ್ಷ ಲಾಲ್‌ಬಾಗ್‌ನಲ್ಲೇ ಬೆಳೆದವು- ಬಳಸಿ ಪ್ರದರ್ಶಿಸಲಾಗಿತ್ತು. ವನ್ಯಜೀವಿ ಫೋಟೋಗಳು, ಕೀಟಗಳ ಮಾದರಿಗಳು, ಮರದ ಕೊರಡುಗಳು, ನಾರು-ಬೇರು ಶಿಲ್ಪಗಳು ಮತ್ತು ಡೊಳ್ಳು ಕುಣಿತ ಪ್ರದರ್ಶನಗಳು ಜನರನ್ನು ಮಂತ್ರಮುಗ್ಧಗೊಳಿಸಿದವು. ಸಂಜೆ ತೇಜಸ್ವಿ ಸಾಹಿತ್ಯ ಆಧರಿಸಿದ ನಾಟಕಗಳು ಪ್ರದರ್ಶನಗೊಂಡವು.
ಒಟ್ಟು 11 ದಿನಗಳಲ್ಲಿ 8,10,973 ಜನರು ಭೇಟಿ ನೀಡಿದರು. ಟಿಕೆಟ್ ಮಾರಾಟದಿಂದ ಮಾತ್ರ 2,46,27,088 ರೂ. ಸಂಗ್ರಹವಾಗಿದ್ದು, ಒಟ್ಟು ಆದಾಯ 2,74,77,088 ರೂ. ಆಗಿದೆ. ಕೇವಲ 3 ಕೋಟಿ ವೆಚ್ಚದಲ್ಲಿ ಆಯೋಜಿಸಿದ ಈ ಶೋಗೆ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದೆ. ಕೊನೆಯ ದಿನವೇ ಅತಿ ಹೆಚ್ಚು ಜನ (1,89,155) ಭೇಟಿ ನೀಡಿ 65 ಲಕ್ಷಕ್ಕೂ ಅಧಿಕ ಆದಾಯ ತಂದರು.