Landlord Movie: ತಂದೆಯ ʼಲ್ಯಾಂಡ್ ಲಾರ್ಡ್ʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ದುನಿಯಾ ವಿಜಯ್ ಪುತ್ರಿ ರಿತನ್ಯ
Landlord Movie: ಜಡೇಶ ಕೆ. ಹಂಪಿ ನಿರ್ದೇಶನದ ಹಾಗೂ ನಟ ವಿಜಯ್ ಕುಮಾರ್ (ದುನಿಯಾ ವಿಜಯ್) ನಾಯಕರಾಗಿ ನಟಿಸುತ್ತಿರುವ ಚಿತ್ರ ʼಲ್ಯಾಂಡ್ ಲಾರ್ಡ್ʼ. ಇದೊಂದು ಗ್ರಾಮೀಣ ಸೊಗಡಿನ ಕಥೆ. 1980ರ ಕಾಲಘಟ್ಟದಲ್ಲಿ ನಡೆಯುವ ಕಥೆಯೂ ಆಗಿದೆ. ನಟಿ ರಚಿತಾರಾಮ್ ಈ ಚಿತ್ರದ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ದುನಿಯಾ ವಿಜಯ್ ಅವರ ಪುತ್ರಿ ರಿತನ್ಯ ಸಹ ಈ ಚಿತ್ರದ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಾಯಕರಾಗಿ ನಟಿಸಿದ್ದ ʼಸಾರಥಿʼ ಚಿತ್ರವನ್ನು ನಿರ್ಮಿಸಿದ್ದ ಕೆ.ವಿ. ಸತ್ಯಪ್ರಕಾಶ್ ಹನ್ನೆರಡು ವರ್ಷಗಳ ನಂತರ ʼಸಾರಥಿ ಫಿಲಂಸ್ʼ ಮೂಲಕ ನೂತನ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ನಿರ್ಮಾಣಕ್ಕೆ ಸತ್ಯಪ್ರಕಾಶ್ ಅವರ ಪುತ್ರ ಸೂರಜ್ ಗೌಡ ಅವರು ಸಾಥ್ ನೀಡಿದ್ದಾರೆ. ʼಜಂಟಲ್ ಮ್ಯಾನ್ʼ, ʼಗುರುಶಿಷ್ಯರುʼ ಚಿತ್ರಗಳ ನಿರ್ದೇಶಕ, ʼಕಾಟೇರʼ ಚಿತ್ರದ ಲೇಖಕ ಜಡೇಶ ಕೆ ಹಂಪಿ ನಿರ್ದೇಶನದ ಹಾಗೂ ನಟ ವಿಜಯ್ ಕುಮಾರ್ (ದುನಿಯಾ ವಿಜಯ್) (Duniya Vijay) ನಾಯಕರಾಗಿ ನಟಿಸುತ್ತಿರುವ ಚಿತ್ರ ʼಲ್ಯಾಂಡ್ ಲಾರ್ಡ್ʼ (Landlord Movie). ಪ್ರಸ್ತುತ ಈ ಚಿತ್ರದ ಚಿತ್ರೀಕರಣ ನೆಲಮಂಗಲದ ಬಳಿ ನಿರ್ಮಿಸಲಾಗಿರುವ ಅದ್ದೂರಿ ಸೆಟ್‌ನಲ್ಲಿ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ನಾಯಕ ದುನಿಯಾ ವಿಜಯ್ ಅವರ ಹುಟ್ಟುಹಬ್ಬ ಆಚರಣೆ ಹಾಗೂ ಪತ್ರಿಕಾಗೋಷ್ಠಿಯನ್ನು ಚಿತ್ರತಂಡ ಆಯೋಜಿಸಿತ್ತು. ದುನಿಯಾ ವಿಜಯ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಚಿತ್ರತಂಡದ ಸದಸ್ಯರು, ʼಲ್ಯಾಂಡ್ ಲಾರ್ಡ್ʼ ಚಿತ್ರದ ಕುರಿತು ಮಾತನಾಡಿದರು.
ಇದೊಂದು ಗ್ರಾಮೀಣ ಸೊಗಡಿನ ಕಥೆ. 1980ರ ಕಾಲಘಟ್ಟದಲ್ಲಿ ನಡೆಯುವ ಕಥೆಯೂ ಹೌದು. ʼʼನಮ್ಮ ಚಿತ್ರಕ್ಕೆ ʼಲ್ಯಾಂಡ್ ಲಾರ್ಡ್ʼ ಅಂತ ಹೆಸರಿಡಲಾಗಿದ್ದು, ʼಆಳಿದವರ ಕಥೆಯಲ್ಲ. ಅಳಿದು ಉಳಿದವರ ಕಥೆʼ ಎಂಬ ಅಡಿಬರಹವಿದೆ. ʼಸಾರಥಿʼಯಂತಹ ಸೂಪರ್ ಹಿಟ್ ಚಿತ್ರದ ನಿರ್ಮಾಪಕ ಕೆ.ವಿ.ಸತ್ಯಪ್ರಕಾಶ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಅವರ ಪುತ್ರ ಸೂರಜ್ ಗೌಡ ಸಾಥ್ ನೀಡಿದ್ದಾರೆ. ಈ ಕಥೆಗೆ ವಿಜಯ್ ಅವರೆ ಸೂಕ್ತ ನಾಯಕ. ರಚಿತಾ ರಾಮ್ ಈ ಚಿತ್ರದ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ವಿಜಯ್ ಅವರ ಪುತ್ರಿ ರಿತನ್ಯ ಸಹ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸ್ವಾಮಿ ಗೌಡ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಕೆ.ಎಂ. ಪ್ರಕಾಶ್ ಸಂಕಲನವಿದೆ. ಮಾಸ್ತಿ ಹಾಗೂ ಶ್ರೀಕಾಂತ್ ಸಂಭಾಷಣೆ ಬರೆದಿದ್ದಾರೆʼʼ ಎಂದು ನಿರ್ದೇಶಕ ಜಡೇಶ್ ಕೆ. ಹಂಪಿ ತಿಳಿಸಿದರು.
ʼʼಈ ಬಾರಿ ನನ್ನ ಹುಟ್ಟುಹಬ್ಬವನ್ನು ಅಭಿಮಾನಿಗಳ ಜತೆಗೆ ಆಚರಿಸಿಕೊಳ್ಳಲು ಆಗಲಿಲ್ಲ. ಅದಕ್ಕಾಗಿ ಅವರಲ್ಲಿ ಕ್ಷಮೆ ಕೇಳುತ್ತೇನೆʼʼ ಎಂದು ಮಾತನಾಡಿದ ನಾಯಕ ವಿಜಯ್ ಕುಮಾರ್, ʼʼಜಡೇಶ್ ಒಂದೊಳ್ಳೆ ಗ್ರಾಮೀಣ ಸೊಗಡಿನ ಕಥೆ ಮಾಡಿಕೊಂಡಿದ್ದಾರೆ. ನನ್ನ ಬಾಲ್ಯದಲ್ಲಿ ನಮ್ಮ ಹಳ್ಳಿಯಲ್ಲಿ ವಿದ್ಯುತ್ ದೀಪಗಳು ಇರಲಿಲ್ಲ. ಬುಡ್ಡಿ ದೀಪಗಳೆ ಹೆಚ್ಚು. ನಾನು ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಗೆಟಪ್‌ನಲ್ಲಿ ನಮ್ಮ ಹಳ್ಳಿಯ ಹಿರಿಯರು ಇರುತ್ತಿದ್ದರು. ಅಲ್ಲಿ ಜಾತಿ, ಮತ ಎಂಬ ಭೇದಭಾವ ಇರಲಿಲ್ಲ. ಇದ್ದದ್ದು ಎರಡೇ. ಒಂದು ಬಡವ. ಮತ್ತೊಂದು ಶ್ರೀಮಂತ. ಈ ಚಿತ್ರದಲ್ಲಿ ನಾನು ಬಡವರ ಪ್ರತಿನಿಧಿಯಾಗಿ ಅಭಿನಯಿಸುತ್ತಿದ್ದೇನೆ. ಸತ್ಯಪ್ರಕಾಶ್ ಹಾಗೂ ಸೂರಜ್ ಗೌಡ ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣ ಮಾಡುತ್ತಿದ್ದಾರೆ. ಉತ್ತಮ ಚಿತ್ರತಂಡದ ಜತೆಗೆ ಕೆಲಸ ಮಾಡುತ್ತಿರುವ ಖುಷಿ ಇದೆʼʼ ಎಂದರು.
ʼʼಸಾರಥಿʼ ಚಿತ್ರ ನನಗೆ ತುಂಬಾ ಕೀರ್ತಿ ತಂದುಕೊಟ್ಟ ಚಿತ್ರ. ಆನಂತರ ಕೆಲವು ಚಿತ್ರಗಳ ಕಥೆ ಕೇಳಿದ್ದೆ. ಕಾರಣಾಂತರದಿಂದ ನಿರ್ಮಿಸಲು ಆಗಿರಲಿಲ್ಲ. ಜಡೇಶ್ ಅವರ ಕಥೆ ಇಷ್ಟವಾಯಿತು. ಕೆಲವೇ ದಿನಗಳಲ್ಲಿ ಈ ಚಿತ್ರ ಆರಂಭವಾಯಿತು. ನಿರ್ಮಾಣದಲ್ಲಿ ನನ್ನ ಜತೆಗೆ ಮಗ ಸೂರಜ್ ಗೌಡ ಇದ್ದಾರೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಬೆಂಬಲವಿರಲಿʼʼ ಎಂದು ನಿರ್ಮಾಪಕ ಸತ್ಯಪ್ರಕಾಶ್ ಮನವಿ ಮಾಡಿದರು.
ಸಹ ನಿರ್ಮಾಪಕ ಸೂರಜ್ ಗೌಡ ಮಾತನಾಡಿ, ʼʼಈಗಾಗಲೇ ಚಿತ್ರಕ್ಕೆ ಎರಡು ಹಂತಗಳ ಚಿತ್ರೀಕರಣ ಮುಕ್ತಾಯವಾಗಿ, ಈಗ ಮೂರನೇ ಹಂತದ ಚಿತ್ರೀಕರಣ ನಡೆಯುತ್ತಿದೆ. ಮಾರ್ಚ್ ವೇಳೆಗೆ ಚಿತ್ರೀಕರಣ ಪೂರ್ಣಗೊಳಿಸಿ, ಆದಷ್ಟು ಬೇಗ ಚಿತ್ರವನ್ನು ತೆರೆಗೆ ತರುತ್ತೇವೆʼʼ ಎಂದರು.
ʼʼಇದು ಈ ನೆಲದ ಕಥೆ. ಕೋಲಾರ ಭಾಗದಲ್ಲಿ ನಡೆಯುವ ಕಥೆ. ಜಡೇಶ್ ಈ ನೆಲದ ಕಥೆಗಾರ. ಕಥೆ ತುಂಬಾ ಚೆನ್ನಾಗಿದೆ. ಶ್ರೀಕಾಂತ್ ಅವರು ನನ್ನ ಜತೆಗೆ ಈ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆʼʼ ಎಂದು ಸಂಭಾಷಣೆಕಾರ ಮಾಸ್ತಿ ವಿವರಿಸಿದರು.
ಈ ಸುದ್ದಿಯನ್ನೂ ಓದಿ | Makeup Kit Awareness 2025: ಸೌಂದರ್ಯವರ್ಧಕಗಳ ಬಾಳಿಕೆಗೆ ಈ 5 ಟಿಪ್ಸ್ ಫಾಲೋ ಮಾಡಿ
ʼʼನಾನು ಹಾಗೂ ಅಪ್ಪ, ಈ ಚಿತ್ರದಲ್ಲೂ ಅಪ್ಪ, ಮಗಳಾಗಿಯೇ ಅಭಿನಯಿಸುತ್ತಿದ್ದೇವೆ. ಮೊದಲ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿʼʼ ಎಂದರು ದುನಿಯಾ ವಿಜಯ್ ಪುತ್ರಿ ರಿತನ್ಯ. ಸಂಭಾಷಣೆಕಾರ ಶ್ರೀಕಾಂತ್, ನಿರ್ಮಾಣ ನಿರ್ವಾಹಕ ನರಸಿಂಹ ಜಾಲಹಳ್ಳಿ ಮುಂತಾದವರು ಉಪಸ್ಥಿತರಿದ್ದರು.