ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ನಾಳೆ ಡಿಕೆ ಶಿವಕುಮಾರ್ (DK Shivakumar) ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸಚಿವ ಸಂಪುಟ ಸೇರಲು ಆಕಾಂಕ್ಷಿ ಶಾಸಕರ ಭರ್ಜರಿ ಲಾಬಿ ಮತ್ತು ಕಸರತ್ತು ಶುರುವಾಗಿದೆ. ಸದ್ಯ ಹಲವರು ದೆಹಲಿಗೆ ತೆರಳಿದ್ದು, ಹೈಕಮಾಂಡ್ ಮನವೊಲಿಸಲು ಕಸರತ್ತು ನಡೆಸಲಾಗುತ್ತಿದೆ. ಇನ್ನು ಮೂವರನ್ನು ಉಪಮುಖ್ಯಮಂತ್ರಿ ಮಾಡುವಂತೆ ಹೈಕಮಾಂಡ್ ಮುಂದೆ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಮಗನಿಗೆ ಡಿಸಿಎಂ ಸ್ಥಾನ ಬೇಡ ಅಂದಿರೋ ಸಿದ್ದರಾಮಯ್ಯ ಅವರು ಜಿ. ಪರಮೇಶ್ವರ್, ಎಂ.ಬಿ. ಪಾಟೀಲ್ ಮತ್ತು ಜಮೀರ್ ಅಹ್ಮದ್ಗೆ ಡಿಸಿಎಂ ಹುದ್ದೆ ನೀಡುವಂತೆ ಹೈಕಮಾಂಡ್ ಮುಂದೆ ಬಿಗಿ ಪಟ್ಟು ಹಿಡಿದಿದ್ದಾರೆಂದು ವರದಿ ಆಗಿದೆ.
ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದು, ಸಚಿವ ಸ್ಥಾನದ ಆಕಾಂಕ್ಷಿಗಳು ಕೂಡ ಭರ್ಜರಿ ಲಾಭ ನಡೆಸಿದ್ದಾರೆ. ಡಿಕೆಶಿ ಹಾಗೂ ಸಿದ್ದರಾಮಯ್ಯ ಸೇರಿ 10 ರಿಂದ 12 ಸಚಿವರ ಮೊದಲ ಪಟ್ಟಿಯನ್ನು ಕೆಸಿ ವೇಣುಗೋಪಾಲ್ ಹಾಗೂ ಸುರ್ಜೇವಾಲಗೆ ನೀಡಿದ್ದಾರೆ. ಹೈಕಮಾಂಡ್ ನಾಯಕರ ಪರಿಶೀಲನೆ ಬಳಿಕ ಪಟ್ಟಿ ಎಐಸಿಸಿ ಅಧ್ಯಕ್ಷ ಖರ್ಗೆ ಕಳುಹಿಸಲಿದ್ದಾರೆ. ಲಿಸ್ಟ್ನಲ್ಲಿ ಡಿಕೆ ಶಿವಕುಮಾರ್, ಯುಟಿ ಖಾದರ್, ಸತೀಶ್ ಜಾರಕಿಹೊಳಿ, ಡಾ.ಜಿ.ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ರಾಮಲಿಂಗಾರೆಡ್ಡಿ, ಡಾ.ಯತೀಂದ್ರ ಹಾಗೂ ಭೈರತಿ ಸುರೇಶ್, ಕೆ.ಜೆ.ಜಾರ್ಜ್, ಕೃಷ್ಣ ಭೈರೇಗೌಡ, ಎಂ.ಬಿ.ಪಾಟೀಲ್ ಹಾಗೂ ಈಶ್ವರ ಖಂಡ್ರೆ ಅವರ ಹೆಸರುಗಳಿವೆ ಎಂದು ಹೇಳಲಾಗುತ್ತಿದೆ.
5,000 ಕೋಟಿ ರೂ. ಎಲ್ಲಿ ಹೋಗಿದೆ ಎಂದು ಹೇಳುವಿರಾ? ಸಿದ್ದರಾಮಯ್ಯಗೆ ಸುರೇಶ್ ಕುಮಾರ್ ಬಹಿರಂಗ ಪತ್ರ
ಎನ್.ಎ. ಹ್ಯಾರಿಸ್, ಬಿ.ಆರ್. ಪಾಟೀಲ್, ಪ್ರದೀಪ್ ಈಶ್ವರ್, ರಿಜ್ವಾನ್ ಅರ್ಷದ್, ಡಿ. ರವಿಶಂಕರ್, ಹಂಪನಗೌಡ ಬಾದರ್ಲಿ, ಬಸವರಾಜ ರಾಯರೆಡ್ಡಿ, ಮಾಗಡಿ ಶಾಸಕ ಬಾಲಕೃಷ್ಣ ಹಾಗೂ ಎಸ್.ಆರ್. ಶ್ರೀನಿವಾಸ್ ಸೇರಿದಂತೆ ಹಲವರು ಮಂತ್ರಿಗಿರಿಗೆ ಬೇಡಿಕೆ ಇಟ್ಟಿದ್ದಾರೆ. ಜೂನ್ 3 ರಂದು ಡಿಕೆ ಶಿವಕುಮಾರ್ ಪದಗ್ರಹಣಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜಭವನದಲ್ಲಿ ಸಂಜೆಯ ಶುಭ ಮುಹೂರ್ತದಲ್ಲೇ ನೂತನ ಮುಖ್ಯಮಂತ್ರಿಯ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. ಡಿಕೆ ಶಿವಕುಮಾರ್ ಜೊತೆಯೇ 10 ರಿಂದ 12 ಸಚಿವರು ಕೂಡ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.