ಬೆಂಗಳೂರು: ಮದ್ಯದ ಬೆಲೆ ಏರಿಕೆ ನಡುವೆಯೂ ಕರ್ನಾಟಕದಲ್ಲಿ ಏಪ್ರಿಲ್ ತಿಂಗಳಿನಲ್ಲಿ ಭರ್ಜರಿ ಮದ್ಯ ಮಾರಾಟವಾಗಿದೆ. ಕಳೆದ ತಿಂಗಳ ( Liquor Sales) ವ್ಯಾಪಾರದಿಂದ ಬರೋಬ್ಬರಿ ರಾಜ್ಯ ಸರ್ಕಾರಕ್ಕೆ ಮೂರು ಸಾವಿರ ಕೋಟಿ ಆದಾಯ ಬಂದಿದೆ. ಕಳೆದ 13 ವರ್ಷಗಳ ಇತಿಹಾಸದಲ್ಲಿಯೇ ಇದೊಂದು ದಾಖಲೆ ಪ್ರಮಾಣದ ಮಾರಾಟ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏಪ್ರಿಲ್‌ನಲ್ಲಿ ದಾಖಲೆಯ 68.17 ಲಕ್ಷ ಬಾಕ್ಸ್ ಮಾರಾಟವಾಗಿದ್ದು, ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 3688 ಸಾವಿರ ಕೋಟಿ ರೂ. ಆದಾಯ ಬಂದಿದೆ.
ಅಬಕಾರಿ ಇಲಾಖೆ ನೀಡಿರುವ ಅಂಕಿಅಂಶಗಳ ಪ್ರಕಾರ, ಏಪ್ರಿಲ್ ತಿಂಗಳಲ್ಲಿ ಒಟ್ಟಾರೆ 118.56 ಲಕ್ಷ ಬಾಕ್ಸ್ ಮದ್ಯ ಮಾರಾಟವಾಗಿದೆ. ಇದರಲ್ಲಿ ಭಾರತೀಯ ತಯಾರಿತ ವಿದೇಶಿ ಮದ್ಯ 68.17 ಲಕ್ಷ ಬಾಕ್ಸ್ ಹಾಗೂ ಬಿಯರ್ 50.39 ಲಕ್ಷ ಬಾಕ್ಸ್ ಮಾರಾಟವಾಗಿದೆ. 2025 ಏಪ್ರಿಲ್‌ನಲ್ಲಿ ಸುಮಾರು 2904 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು. 2023ರ ಜುಲೈನಲ್ಲಿ 66.22 ಲಕ್ಷ ಬಾಕ್ಸ್ IML ಮಾರಾಟವಾಗಿದ್ದಾಗ ಸೃಷ್ಟಿಯಾಗಿತ್ತು. ಆದರೆ ಈ ಬಾರಿ ಏಪ್ರಿಲ್‌ನಲ್ಲಿ 68.17 ಲಕ್ಷ ಬಾಕ್ಸ್ ಮಾರಾಟದೊಂದಿಗೆ ಆ ದಾಖಲೆ ಕೂಡ ಮುರಿದಿದೆ. 2025 ಏಪ್ರಿಲ್‌ನಲ್ಲಿ 41.60 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದ್ದರೆ, ಈ ವರ್ಷ ಅದು 50.39 ಲಕ್ಷ ಬಾಕ್ಸ್‌ಗೆ ಏರಿಕೆಯಾಗಿದೆ. ಇದು ಶೇ.21ಕ್ಕೂ ಹೆಚ್ಚು ಬೆಳವಣಿಗೆಯನ್ನು ಸೂಚಿಸುತ್ತದೆ.
ಮದ್ಯ ಪ್ರಿಯರಿಗೆ ಮತ್ತೆ ಶಾಕ್; ಹೊಸ ತೆರಿಗೆ ವ್ಯವಸ್ಥೆ ಜಾರಿಯಾದ್ರೆ ಶೇ.20 ರಷ್ಟು ಬೆಲೆ ಹೆಚ್ಚಳ
ಈ ಬಾರಿ ನಗರ ಪ್ರದೇಶಕ್ಕಿಂತ ಗಡಿ ಭಾಗದಲ್ಲಿ ಹೆಚ್ಚಿನ ಮದ್ಯ ಮಾರಾಟವಾಗಿದೆ. ಕರ್ನಾಟಕ–ಕೇರಳ ಹಾಗೂ ಕರ್ನಾಟಕ–ತಮಿಳುನಾಡು ಗಡಿ ಭಾಗಗಳಲ್ಲಿ ಮಾರಾಟದಲ್ಲಿ ಹೆಚ್ಚಿನ ಏರಿಕೆ ಕಂಡುಬಂದಿದೆ. ಚುನಾವಣಾ ನಿಯಮಗಳು ಮತ್ತು ನಿಷೇಧಗಳು ಬೇರೆ ರಾಜ್ಯಗಳಲ್ಲಿ ಜಾರಿಯಲ್ಲಿದ್ದ ಕಾರಣ, ಗ್ರಾಹಕರು ಕರ್ನಾಟಕದ ಅಂಗಡಿಯತ್ತ ಮುಖ ಮಾಡಿದ್ದಾರೆ ಎನ್ನಲಾಗಿದೆ. ಕೇರಳ ಮತ್ತು ತಮಿಳುನಾಡು ಚುನಾವಣೆಯ ವೇಳೆ ಮದ್ಯ ಮಾರಾಟ ನಿರ್ಬಂಧಿಸಲಾಗಿತ್ತು. ಇದರ ಪರಿಣಾಮವಾಗಿ ಗಡಿ ಭಾಗಗಳಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ, ಹೆಚ್ಚಿನ ಪ್ರಮಾಣದ ಖರೀದಿ ನಡೆದಿದೆ.