ಬೆಂಗಳೂರು, ಏ.13: ಪೀಣ್ಯ ಮೇಲ್ಸೇತುವೆಯಲ್ಲಿ (Peenya Flyover) ಅಂತಿಮ ಹಂತದ 'ಲೋಡ್ ಟೆಸ್ಟ್' (ಭಾರ ಪರೀಕ್ಷೆ) ನಡೆಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಅನುಮತಿ ಸಿಗದ ಹಿನ್ನೆಲೆ ಮುಂದೂಡಿಕೆ ಮಾಡಲಾಗಿದೆ. ಈ ಮೂಲಕ ವಾಹನ ಸಂಚಾರ (traffic) ಎಂದಿನಂತೆ ಇರಲಿದೆ.
ಪೀಣ್ಯದಿಂದ ನಾಗಸಂದ್ರದವರೆಗೆ ಸಂಪರ್ಕ ಕಲ್ಪಿಸುವ 4.2 ಕಿ.ಮೀ ಉದ್ದದ ಈ ಮೇಲ್ಸೇತುವೆಯ ಒಟ್ಟು 1,422 ಪ್ರಿಸ್ಟ್ರೆಸ್ಸಿಂಗ್ ಕೇಬಲ್‌ಗಳನ್ನು ಬದಲಾಯಿಸುವ ಕಾಮಗಾರಿ ಮುಕ್ತಾಯಗೊಂಡಿದೆ. ಹೊಸ ಕೇಬಲ್‌ಗಳನ್ನು ಅಳವಡಿಸಿದ ನಂತರ ಸೇತುವೆಯ ಸಾಮರ್ಥ್ಯ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಅಂತಿಮ ಲೋಡ್ ಟೆಸ್ಟ್ ಅತ್ಯಗತ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತುಕ್ಕು ಹಿಡಿದ ಕಾರಣಕ್ಕೆ ಹಳೆಯ ಕೇಬಲ್‌ಗಳು ಹಾಳಾಗಿದ್ದವು. ಹೀಗಾಗಿ, ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ. ಚಂದ್ರ ಕಿಶನ್ ಜೆ.ಎಂ. ನೇತೃತ್ವದ ತಜ್ಞರ ಸಮಿತಿಯ ವರದಿಯ ಆಧಾರದ ಮೇಲೆ ಸುಮಾರು 32 ಕೋಟಿ ರೂ. ವೆಚ್ಚದಲ್ಲಿ ಹೊಸ ಕೇಬಲ್‌ಗಳನ್ನು ಅಳವಡಿಸಲಾಗಿದೆ. ಭವಿಷ್ಯದಲ್ಲಿ ತೇವಾಂಶದಿಂದ ಕೇಬಲ್‌ಗಳಿಗೆ ಹಾನಿಯಾಗದಂತೆ ತಡೆಯಲು ಬಹು-ಪದರದ ರಕ್ಷಣಾ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಎನ್‌ಎಚ್‌ಎಐ ಯೋಜನಾ ನಿರ್ದೇಶಕರು ವಿವರಿಸಿದ್ದಾರೆ.
Peenya Elevated Flyover: ಪೀಣ್ಯ ಎಲಿವೇಟೆಡ್ ಫ್ಲೈಓವರ್ ಐದು ದಿನ ಬಂದ್, ಪರ್ಯಾಯ ಮಾರ್ಗ ಬಳಸಲು ಸೂಚನೆ
ಲೋಡ್ ಟೆಸ್ಟ್ ಹೇಗೆ ನಡೆಯಲಿದೆ?
ಆಯ್ಕೆ ಮಾಡಲಾದ ನಾಲ್ಕು ನಿರ್ದಿಷ್ಟ ಸ್ಪ್ಯಾನ್‌ಗಳ ಮೇಲೆ ತಲಾ 32 ಟನ್ ಭಾರ ಹೊತ್ತ 8 ಟ್ರಕ್‌ಗಳನ್ನು ನಿಲ್ಲಿಸಿ ಪರೀಕ್ಷೆ ನಡೆಸಲಾಗುತ್ತದೆ. ಈ ವೇಳೆ ಸೇತುವೆಯ ಬಾಗುವಿಕೆ ಮತ್ತು ರಚನಾತ್ಮಕ ಬದಲಾವಣೆಗಳನ್ನು ಗೇಜ್‌ಗಳ ಮೂಲಕ ಅಳೆಯಲಾಗುತ್ತದೆ. "ಈ ಅಂತಿಮ ಪರೀಕ್ಷೆ ಯಶಸ್ವಿಯಾದರೆ, ಮೇಲ್ಸೇತುವೆಯನ್ನು ಎಲ್ಲಾ ವಾಹನಗಳ ಸಂಚಾರಕ್ಕೆ ಅಧಿಕೃತವಾಗಿ ಸುರಕ್ಷಿತವೆಂದು ಘೋಷಿಸಲಾಗುವುದು," ಎಂದು ಅವರು ತಿಳಿಸಿದ್ದಾರೆ.
ತಪ್ಪಿದ್ದಲ್ಲ ಟ್ರಾಫಿಕ್ ಜಾಮ್ ಭೀತಿ
ಫ್ಲೈಓವರ್ ಬಂದ್ ಮಾಡುವ ಕುರಿತು ಎನ್‌ಎಚ್‌ಎಐ ಸಲ್ಲಿಸಿರುವ ಪ್ರಸ್ತಾವನೆಯನ್ನು ಪರಿಶೀಲಿಸುತ್ತಿರುವುದಾಗಿ ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ. ಈ ಮೇಲ್ಸೇತುವೆಯು ಉತ್ತರ ಭಾಗದ ವಾಹನ ಸಂಚಾರಕ್ಕೆ ಅತ್ಯಂತ ಪ್ರಮುಖವಾಗಿದ್ದು, 5 ಟ್ರಾಫಿಕ್ ಸಿಗ್ನಲ್‌ಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಒಂದು ವೇಳೆ ಸೇತುವೆ ಬಂದ್ ಆದರೆ, ಬದಲಿ ಮಾರ್ಗಗಳಿಲ್ಲದ ಕಾರಣ ಎಲ್ಲಾ ವಾಹನಗಳು ಕೆಳಗಿನ ರಸ್ತೆಯಲ್ಲೇ ಚಲಿಸಬೇಕಾಗುತ್ತದೆ. ಇದರಿಂದ ವಿಪರೀತ ಟ್ರಾಫಿಕ್ ಜಾಮ್ ಉಂಟಾಗಲಿದ್ದು, ದಟ್ಟಣೆ ನಿಯಂತ್ರಿಸಲು ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
Namma Metro: ನಮ್ಮ ಮೆಟ್ರೋ ಕಿತ್ತಳೆ ಮಾರ್ಗ; ಪೀಣ್ಯ ನಿಲ್ದಾಣ ಸ್ಥಳಾಂತರಕ್ಕೆ ಬಿಎಂಆರ್ಸಿಎಲ್ ಚಿಂತನೆ
2010ರಲ್ಲಿ ಉದ್ಘಾಟನೆಗೊಂಡಿದ್ದ ಸೇತುವೆಯನ್ನು, ಕೇಬಲ್ ದೋಷದ ಕಾರಣ ಡಿಸೆಂಬರ್ 2021ರಲ್ಲಿ ಬಸ್ ಮತ್ತು ಟ್ರಕ್‌ಗಳ ಸಂಚಾರಕ್ಕೆ ನಿರ್ಬಂಧಿಸಲಾಗಿತ್ತು. 2022ರ ಫೆಬ್ರವರಿಯಲ್ಲಿ ಲಘು ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಇತ್ತೀಚಿನ ತಿಂಗಳುಗಳಲ್ಲಿ ಕಾಮಗಾರಿಗಾಗಿ ಪ್ರತಿ ಬುಧವಾರದಂದು ಟ್ರಾಫಿಕ್ ನಿರ್ಬಂಧಿಸಲಾಗುತ್ತಿತ್ತು.