Namma Metro: ನಮ್ಮ ಮೆಟ್ರೋ ಕಿತ್ತಳೆ ಮಾರ್ಗ; ಪೀಣ್ಯ ನಿಲ್ದಾಣ ಸ್ಥಳಾಂತರಕ್ಕೆ ಬಿಎಂಆರ್‌ಸಿಎಲ್ ಚಿಂತನೆ
Namma Metro: ಹೊಸ ನಿಲ್ದಾಣವನ್ನು ಪೀಣ್ಯ ಮತ್ತು ಗೊರಗುಂಟೆಪಾಳ್ಯದಲ್ಲಿ ಅಸ್ತಿತ್ವದಲ್ಲಿರುವ ಮೆಟ್ರೋ ನಿಲ್ದಾಣಗಳಿಗೆ ಎರಡು ಪ್ರತ್ಯೇಕ ಪಾದಚಾರಿ ಮೇಲ್ಸೇತುವೆಗಳ ಮೂಲಕ ಸಂಪರ್ಕಿಸಲು ಯೋಜಿಸಲಾಗಿದೆ. ಕಿತ್ತಳೆ ಮಾರ್ಗದಲ್ಲಿ 300 ಮೀಟರ್‌ಗಳಷ್ಟು ಅಂತರ ಕಡಿಮೆ ಮಾಡುವ ಉದ್ದೇಶದಿಂದ ಸರ್ಕಾರದ ಮುಂದೆ ಬಿಎಂಆರ್‌ಸಿಎಲ್ ಪ್ರಸ್ತಾವನೆ ಇಟ್ಟಿದೆ.
![Peenya Metro station](https://cdn-vishwavani-prod.hindverse.com/media/images/Peenya_Metro_station.max-1280x720.jpg)
![Profile](https://vishwavani.news/static/img/user.png)
ಬೆಂಗಳೂರು: ನಮ್ಮ ಮೆಟ್ರೋ (Namma Metro) 3ನೇ ಹಂತದ ಯೋಜನೆ (ಕಿತ್ತಳೆ ಮಾರ್ಗ) ಭಾಗವಾಗಿ ಪೀಣ್ಯದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮೆಟ್ರೋ ನಿಲ್ದಾಣವನ್ನು ಸ್ಥಳಾಂತರಿಸಲು ಬಿಎಂಆರ್‌ಸಿಎಲ್ ಚಿಂತನೆ ನಡೆಸಿದೆ. ಈ ಯೋಜನೆ ಮೆಟ್ರೋ 3ನೇ ಹಂತದ ಭಾಗವಾಗಿದ್ದು (Orange Line), ಜೆ.ಪಿ. ನಗರ ಹಂತ-4 ರಿಂದ ಕೆಂಪಾಪುರ (32.15 ಕಿಮೀ) ವರೆಗಿನ ಆರೆಂಜ್ ಲೈನ್ ಅನ್ನು 300 ಮೀಟರ್‌ಗಳಷ್ಟು ಕಡಿಮೆ ಮಾಡುವ ಉದ್ದೇಶದಿಂದ ಪೀಣ್ಯ ಮೆಟ್ರೋ ನಿಲ್ದಾಣವನ್ನು ಸ್ಥಳಾಂತರ ಮಾಡಲು ಬಿಎಂಆರ್‌ಸಿಎಲ್ ಯೋಚಿಸಿದೆ. ಹೊಸ ನಿಲ್ದಾಣವನ್ನು ಪೀಣ್ಯ ಮತ್ತು ಗೋರಗುಂಟೆಪಾಳ್ಯದಲ್ಲಿ ಅಸ್ತಿತ್ವದಲ್ಲಿರುವ ಮೆಟ್ರೋ ನಿಲ್ದಾಣಗಳಿಗೆ ಎರಡು ಪ್ರತ್ಯೇಕ ಪಾದಚಾರಿ ಮೇಲ್ಸೇತುವೆಗಳ ಮೂಲಕ ಸಂಪರ್ಕಿಸಲು ಚಿಂತನೆ ನಡೆಸಿದೆ.
3ನೇ ಹಂತದ ವಿವರವಾದ ಯೋಜನಾ ವರದಿ (DPR) ಅನ್ನು ರಾಜ್ಯ ಸರ್ಕಾರ ಈಗಾಗಲೇ ಅನುಮೋದಿಸಿದೆ. ಆರೆಂಜ್ ಲೈನ್ ಮತ್ತು ಹೊಸಹಳ್ಳಿಯಿಂದ ಕಡಬಗೆರೆವರೆಗಿನ ಎರಡನೇ ಕಾರಿಡಾರ್ (12.5 ಕಿಮೀ) ಸೇರಿ 3ನೇ ಹಂತ ಎರಡು ಕಾರಿಡಾರ್‌ಗಳನ್ನು ಒಳಗೊಂಡಿದೆ. ಈ ಹಿಂದಿನ ಯೋಜನೆಯ ಪ್ರಕಾರ ಜೆ.ಪಿ. ನಗರ, ಮೈಸೂರು ರಸ್ತೆ, ಸುಮನಹಳ್ಳಿ ಮತ್ತು ಪೀಣ್ಯದಲ್ಲಿ ಇಂಟರ್‌ಚೇಂಜ್ ನಿಲ್ದಾಣಗಳನ್ನು ಯೋಜಿಸಲಾಗಿತ್ತು. ಆದರೆ ಪೀಣ್ಯ ಮೆಟ್ರೋ ನಿಲ್ದಾಣದ ಸ್ಥಳದಲ್ಲಿ ಇಂಟರ್ಚೇಂಜ್ ವ್ಯವಸ್ಥೆ ನಿರ್ಮಾಣಕ್ಕೆ ಅತಿ ಹೆಚ್ಚಿನ ಎತ್ತರದ ಸ್ಥಳ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಇಂಟರ್‌ಚೇಂಜ್ ನಿಲ್ದಾಣದ ಬಗ್ಗೆ ಮರು ಪರಿಶೀಲನೆ ನಡೆಯುತ್ತಿದೆ.
ಎಲ್ಲಿಗೆ ಸ್ಥಳಾಂತರ?
ಪೀಣ್ಯ ಮೆಟ್ರೋ ನಿಲ್ದಾಣವನ್ನು ಹೊರ ವರ್ತುಲ ರಸ್ತೆಯ ಗೊರಗುಂಟೆಪಾಳ್ಯ ಸಿಗ್ನಲ್ ಇರುವ ಸ್ಥಳಕ್ಕೆ ಸ್ಥಳಾಂತರಿಸುವ ಬಗ್ಗೆ ಯೋಚನೆ ನಡೆಸಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.
ಹೊಸ ನಿಲ್ದಾಣವನ್ನು ಪೀಣ್ಯ ಮತ್ತು ಗೋರ್ಗುಂಟೆಪಾಳ್ಯದಲ್ಲಿರುವ ಅಸ್ತಿತ್ವದಲ್ಲಿರುವ ಮೆಟ್ರೋ ನಿಲ್ದಾಣಗಳಿಗೆ ಎರಡು ಪ್ರತ್ಯೇಕ ಪಾದಚಾರಿ ಮೇಲ್ಸೇತುವೆಗಳ ಮೂಲಕ ಸಂಪರ್ಕಿಸಲಾಗುವುದು. ಮೆಟ್ರೋ ನಿರ್ಮಾಣ ಸ್ಥಳಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗುರುವಾರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಿಎಂಆರ್‌ಸಿಎಲ್ ಅಧಿಕಾರಿಗಳು ಈ ಪ್ರಸ್ತಾವನೆ ಬಗ್ಗೆ ವಿವರಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | ಹೊಸ ಆದಾಯ ತೆರಿಗೆ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ!
ಮೂರನೇ ಹಂತ ಪೂರ್ಣ ಡಬಲ್ ಡೆಕ್ಕರ್
ಬೆಂಗಳೂರಲ್ಲಿ ಸದ್ಯ 3.36 ಕಿ.ಮೀ. ಮಾತ್ರ ಡಬಲ್ ಡೆಕ್ಕರ್ ಇದ್ದು, ನಮ್ಮ ಮೆಟ್ರೊ ಮೂರನೇ ಹಂತ ಪೂರ್ಣ ಡಬಲ್ ಡೆಕ್ಕರ್ ಆಗಲಿದೆ. ಇದರಿಂದ 44.65 ಕಿ.ಮೀ. ಸೇರ್ಪಡೆಗೊಳ್ಳಲಿದ್ದು, ಹೆಬ್ಬಾಳ, ಕಾಮಾಕ್ಯ ಜಂಕ್ಷನ್, ಜೆ.ಪಿ.ನಗರ ಮತ್ತಿತರ ಪ್ರಮುಖ ಜಂಕ್ಷನ್‌ಗಳಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡಲಿದೆ.
ಮೂರನೇ ಹಂತದ (ಕಿತ್ತಳೆ ಮಾರ್ಗ) ಯೋಜನೆಯಲ್ಲಿ ಮೊದಲು ಡಬಲ್ ಡೆಕ್ಕರ್ ಸೇರಿರಲಿಲ್ಲ. ಮುಂದೆ ನಗರದಲ್ಲಿ ಮೆಟ್ರೋ ಎತ್ತರಿಸಿದ ಮಾರ್ಗ ಎಲ್ಲೆಲ್ಲಿ ಬರುತ್ತದೋ ಅಲ್ಲೆಲ್ಲ ಡಬಲ್ ಡೆಕರ್ ನಿರ್ಮಿಸಬೇಕು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರು ಸೂಚಿಸಿದ್ದರಿಂದ ಕಿತ್ತಳೆ ಮಾರ್ಗದಲ್ಲಿ ಡಬಲ್ ಡೆಕ್ಕರ್ ಸೇರ್ಪಡೆ ಮಾಡಲಾಗಿದೆ.
ಕಿತ್ತಳೆ ಮಾರ್ಗದ ಕಾರಿಡಾರ್ 1 ಕೆಂಪಾಪುರದಿಂದ ಹೆಬ್ಬಾಳ, ಪೀಣ್ಯ, ಸುಮನಹಳ್ಳಿ ಕ್ರಾಸ್, ಮೈಸೂರು ರಸ್ತೆ, ಕಾಮಾಕ್ಯ ಜಂಕ್ಷನ್‌ಗಳ ಮೂಲಕ ಜೆ.ಪಿ.ನಗರ 4ನೇ ಹಂತದವರೆಗೆ 32.15 ಕಿಲೋ ಮೀಟರ್ ಹಾಗೂ ಕಾರಿಡಾರ್-2 ಹೊಸಹಳ್ಳಿಯಿಂದ ಕಡಬಗೆರೆವರೆಗೆ 12.5 ಕಿ.ಮೀ. ನಿರ್ಮಾಣಗೊಳ್ಳಲಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆಯನ್ನು ಕೂಡ ನೀಡಿದ್ದು ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆ.
ಈ ಮೆಟ್ರೊ ಮಾರ್ಗದಲ್ಲಿ ಡಬಲ್ ಡೆಕ್ಕರ್ ರಸ್ತೆ ನಿರ್ಮಿಸಲು ಪ್ರತಿ ಕಿ.ಮೀ.ಗೆ ₹ 120 ಕೋಟಿ ವೆಚ್ಚವಾಗಲಿದೆ. ಕೇಂದ್ರ ಸರ್ಕಾರವು ಮೆಟ್ರೊ ಯೋಜನೆಗಷ್ಟೇ ರಾಜ್ಯ ಸರ್ಕಾರದೊಂದಿಗೆ ವೆಚ್ಚ ಹಂಚಿಕೊಳ್ಳಲಿದೆ. ಡಬಲ್ ಡೆಕ್ಕರ್ ರಸ್ತೆ ನಿರ್ಮಾಣ ವೆಚ್ಚವನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರ ಅಥವಾ ಬಿಬಿಎಂಪಿ ಭರಿಸಬೇಕಿರುತ್ತದೆ.