ದಾವಣಗೆರೆ, ನ. 9: ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿರುವ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿನ (Parappana Agrahara Jail) ಕೈದಿಗಳಿಗೆ ಐಷಾರಾಮಿ ಸವಲತ್ತುಗಳು ದೊರೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ದಾವಣಗೆರೆಯ ಹೆಲಿಪ್ಯಾಡ್‌ನಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಕೃತಕಾಮಿ ಉಮೇಶ್ ರೆಡ್ಡಿ ಹಾಗೂ ಶಂಕಿತ ಐಸಿಸ್ ಭಯೋತ್ಪಾದಕ ಶಕೀಲ್ ಸೇರಿದಂತೆ ಹಲವರಿಗೆ ರಾಜಾತಿಥ್ಯ ದೊರೆಯುತ್ತಿರುವ ವಿಚಾರ ಇತ್ತೀಚೆಗೆ ಬೆಳಕಿಗೆ ಬಂತು ಭಾರಿ ಕೋಲಾಹಲಕ್ಕೆ ಕಾರಣವಾಗಿತ್ತು.
ʼʼಈ ವಿಚಾರವಾಗಿ ಸೋಮವಾರ ಗೃಹ ಸಚಿವ ಜಿ. ಪರಮೇಶ್ವರ್ ಸಭೆ ಕರೆದಿದ್ದಾರೆ. ತಪ್ಪು ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಹಾಗೂ ಇನ್ನೂ ಮುಂದೆ ಇಂತಹ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಾಗುವುದುʼʼ ಎಂದು ಸಿಎಂ ತಿಳಿಸಿದರು.
ಈ ಸುದ್ದಿಯನ್ನೂ ಓದಿ: G Parameshwar: ಪರಪ್ಪನ ಅಗ್ರಹಾರದಲ್ಲಿ ಉಗ್ರನಿಗೆ ರಾಜಾತಿಥ್ಯ: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ಭಾಗವತ್ ಹೇಳಿದ್ದಕ್ಕೆಲ್ಲ ನಾವು ಉತ್ತರಿಸಲಾಗುವುದಿಲ್ಲ
ʼʼಆರ್‌ಎಸ್‌ಎಸ್ ಅನ್ನು ಹೊರಗಿಡುವ ಬಗ್ಗೆ ಸರ್ಕಾರದ ಆದೇಶದಲ್ಲಿ ಹೇಳಿಲ್ಲ. ಯಾವುದೇ ಸಂಘ ಸಂಸ್ಥೆಗಳು ಆಯಾ ಜಿಲ್ಲಾಧಿಕಾರಿಗಳ ಬಳಿ ಅನುಮತಿ ಪಡೆಯಬೇಕು ಎಂದು ಹೇಳಿದ್ದೇವೆ. ಅವರು ಹಾಗೆ ಭಾವಿಸಿಕೊಂಡಿದ್ದಾರೆ. ಮೋಹನ್ ಭಾಗವತ್ ಹೇಳಿದ್ದಕ್ಕೆಲ್ಲ ನಾವು ಉತ್ತರಿಸಲಾಗುವುದಿಲ್ಲʼʼ ಎಂದರು.
ನ್ಯಾಯಾಲಯದ ಆದೇಶದ ಮೇರೆಗೆ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ
ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ʼʼಪ್ರಕರಣ ನ್ಯಾಯಾಲಯದಲ್ಲಿದೆ. ಯಾವಾಗ ಚುನಾವಣೆ ನಡೆಸಬೇಕೆಂದು ಸೂಚಿಸಲಾಗುವುದೋ ಆಗ ನಡೆಸಲಾಗುವುದುʼʼ ಎಂದು ತಿಳಿಸಿದರು.
ಸಕ್ಕರೆ ಮಾಲೀಕರು ಬದ್ಧರಾಗುವ ಭರವಸೆ ಇದೆ
ಸಕ್ಕರೆ ಕಾರ್ಖಾನೆ ಮಾಲೀಕರು ಸರ್ಕಾರದ ತೀರ್ಮಾನದ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಮಾತನಾಡಿ, ʼʼಅವರ ಸಮ್ಮುಖದಲ್ಲಿಯೇ ಈ ಬಗ್ಗೆ ತೀರ್ಮಾನ ಮಾಡಲಾಗಿದೆ. 50 ರೂ.ಗಳನ್ನು ಎಲ್ಲರೂ ಕೊಡಲೇಬೇಕು. ಕೊಡದಿರುವವರೂ ಕೊಡುತ್ತಾರೆ ಎಂದು ಭಾವಿಸಿದ್ದೇನೆʼʼ ಎಂದರು.
ಆದೇಶ ಪಾಲಿಸದ ಸಕ್ಕರೆ ಕಾರ್ಖಾನೆ ಮಾಲೀಕರ ಮೇಲೆ ಕ್ರಮ
ಬಸನಗೌಡ ಪಾಟೀಲ ಯತ್ನಾಳ್ ಸಹ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ʼʼಸರ್ಕಾರದ ಆದೇಶ ಪಾಲಿಸದ ಸಕ್ಕರೆ ಕಾರ್ಖಾನೆ ಮಾಲೀಕರ ಮೇಲೆ ಕ್ರಮ ಕೈಗೊಳ್ಳಲಾಗುವುದುʼʼ ಎಂದು ಎಚ್ಚರಿಸಿದರು.
ಅತಿವೃಷ್ಟಿಯಿಂದ ಬೆಳೆಹಾನಿ: ರೈತರಿಗೆ ಪರಿಹಾರ
ರೈತರಿಗೆ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ನಿಗದಿ ಮಾಡುತ್ತದೆ ಎಂದು ಸುದ್ದಿಗಾರ ಪ್ರಶ್ನೆಗೆ ಉತ್ತರ ನೀಡಿದ ಅವರು, ʼʼಅತಿವೃಷ್ಟಿಯಿಂದ 11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿದ್ದು ರೈತರಿಗೆ ಪರಿಹಾರ ನೀಡಲಾಗುವುದುʼʼ ಎಂದರು.
ವಾಲ್ಮೀಕಿ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯದ ಬಗ್ಗೆ ಏನಂದ್ರು?
ವಾಲ್ಮೀಕಿ ಸಮುದಾಯಕ್ಕೆ ಸಚಿವ ಸ್ಥಾನ ನೀಡುವ ಬಗ್ಗೆ ಮಾತನಾಡಿ, ʼʼಸಚಿವ ಸಂಪುಟ ಪುನರ್ ರಚನೆಯಾದಾಗ ಪರಿಗಣಿಸಲಾಗುವುದುʼʼ ಎಂದು ಭರವಸೆ ನೀಡಿದರು.