ಬೆಂಗಳೂರು: ಲೋಕೋಪಯೋಗಿ ಇಲಾಖೆಯ ಕಟ್ಟಡ ವಿಭಾಗಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆಯುವ ವೇಳೆ 20% ರಿಂದ 40% ಕ್ಕಿಂತ ಹೆಚ್ಚು ಅಸಾಮಾನ್ಯ ಕಡಿಮೆ ದರ (ಎ.ಎಲ್.ಬಿ) ನೀಡಿದ ಟೆಂಡರ್‌ಗಳನ್ನು ಸಮರ್ಪಕ ತಾಂತ್ರಿಕ ಹಾಗೂ ಹಣಕಾಸು ಪರಿಶೀಲನೆ ಇಲ್ಲದೇ ಮಂಜೂರು ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ.
ಅತಿ ಮುಖ್ಯವಾಗಿ, ಕಡಿಮೆ ದರದ ಟೆಂಡರ್‌ಗಳನ್ನು ಸ್ವೀಕರಿಸುವುದರಿಂದ ಸರ್ಕಾರಕ್ಕೆ ತಾತ್ಕಾಲಿಕ ವಾಗಿ ಹಣಕಾಸಿನ ಲಾಭ ಕಂಡುಬರುವ ಸಾಧ್ಯತೆ ಇದೆ. ಆದರೆ ಅಸಾಮಾನ್ಯವಾಗಿ ಕಡಿಮೆ ದರವನ್ನು ನಮೂದಿಸುವ ಗುತ್ತಿಗೆದಾರರಿಗೆ ಟೆಂಡರ್ ನೀಡಿದಲ್ಲಿ ಕಾಮಗಾರಿಗಳ ಗುಣಮಟ್ಟ ಕುಸಿತವಾಗುವ ಸಾಧ್ಯತೆ ಅತ್ಯಂತ ಹೆಚ್ಚು. ಇದರಿಂದ ಮುಂದಿನ ದಿನಗಳಲ್ಲಿ ದುರಸ್ತಿ ಹಾಗೂ ನಿರ್ವಹಣಾ ವೆಚ್ಚ ಹೆಚ್ಚಾಗಿ, ಸರ್ಕಾರಕ್ಕೆ ಇನ್ನಷ್ಟು ದೊಡ್ಡ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆ ಇದೆ. ಈ ಸಂಗತಿ ಅಧಿಕಾರಿಗಳಿಗೆ ತಿಳಿದಿದ್ದರೂ ಕೂಡ ನಿರ್ಲಕ್ಷ್ಯ ತೋರಲಾಗುತ್ತಿರುವುದು ಗಂಭೀರ ವಿಚಾರವಾಗಿದೆ.
ಇದನ್ನೂ ಓದಿ: Bangalore News: ಬೆಂಗಳೂರಿನ ಇಗ್ಗಲೂರಿನಲ್ಲಿ ಪೆಪ್ಸ್ ಮ್ಯಾಟ್ರೆಸ್ ನ 91ನೇ ‘ಗ್ರೇಟ್ ಸ್ಲೀಪ್ ಸ್ಟೋರ್’ ಉದ್ಘಾಟನೆ
ಇಂತಹ ಕ್ರಮ ಕೇವಲ ಪ್ರಕ್ರಿಯಾತ್ಮಕ ಲೋಪವಲ್ಲದೆ ಉದ್ದೇಶಪೂರ್ವಕ ನಿರ್ಲಕ್ಷ್ಯವಾಗಿದೆ. ಇದು ಸರ್ಕಾರದ ಅಂದಾಜು ದರ ವ್ಯವಸ್ಥೆಯನ್ನು ದುರ್ಬಲಗೊಳಿಸುವುದಲ್ಲದೇ ಸಾರ್ವಜನಿಕ ಹಣದ ಭದ್ರತೆ, ಕಾಮಗಾರಿಗಳ ಗುಣಮಟ್ಟ ಕುಸಿತ ಮತ್ತು ಆಡಳಿತದ ವಿಶ್ವಾಸಾರ್ಹತೆಯನ್ನು ಗಂಭೀರವಾಗಿ ಹಾನಿಗೊಳಿಸುತ್ತಿದೆ.
ಈ ಕುರಿತು ಕರ್ನಾಟಕ ರಾಜ್ಯ ಯುವ ಸಮೂಹದ ರಾಜ್ಯಾಧ್ಯಕ್ಷ ಎಸ್. ಸಂಗಮೇಶ್ ಅವರು ಲೋಕೋಪಯೋಗಿ ಮುಖ್ಯ ಅಭಿಯಂತರರಿಗೆ ಪತ್ರ ಬರೆದಿದ್ದು, ರಾಜ್ಯದ ಎಲ್ಲಾ ಮುಖ್ಯ ಅಭಿ ಯಂತರರು, ಅಧೀಕ್ಷಕ ಅಭಿಯಂತರರು ಹಾಗೂ ಕಾರ್ಯಪಾಲಕ ಅಭಿಯಂತರರ ವಲಯಗಳಲ್ಲಿ ಇಂತಹ ಅನಿಯಮಿತತೆಗಳು ನಡೆಯುತ್ತಿರುವುದಾಗಿ ಆರೋಪಿಸಿದ್ದಾರೆ. 20% ರಿಂದ 40% ಕ್ಕಿಂತ ಹೆಚ್ಚು ಅಸಾಮಾನ್ಯ ಕಡಿಮೆ ದರದ ಟೆಂಡರ್‌ಗಳ ಮಂಜೂರಾತಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ತಿಳಿಸಿದ್ದಾರೆ.
ಅಸಾಮಾನ್ಯ ಕಡಿಮೆ ದರದ ಟೆಂಡರ್‌ಗಳನ್ನು ಸಮಗ್ರ ವಿಶ್ಲೇಷಣೆ ಇಲ್ಲದೇ ಅಂಗೀಕರಿಸುವುದು ಕಾನೂನುಬಾಹಿರವಾಗಿದೆ. ನ್ಯಾಯಯುತ ಬಿಡ್ (Bid Justification), ಕಾರ್ಯಸಾಧ್ಯತೆ (Workability) ಹಾಗೂ ಹಣಕಾಸು ಸಾಮರ್ಥ್ಯ (Financial Capacity) ಪರಿಶೀಲನೆ ಕಡ್ಡಾಯವಾಗಿದೆ. ಸುಪ್ರೀಂ ಕೋರ್ಟ್ ಕೂಡ “ಸಾರ್ವಜನಿಕ ಹಿತಾಸಕ್ತಿ, ಪಾರದರ್ಶಕತೆ ಮತ್ತು ಸಮಾನ ಅವಕಾಶಗಳನ್ನು ಕಾಪಾಡುವುದು ಸರ್ಕಾರದ ಬಾಧ್ಯತೆ” ಎಂದು ಹಲವು ತೀರ್ಪುಗಳಲ್ಲಿ ಸ್ಪಷ್ಟಪಡಿಸಿದೆ.
ಈ ಹಿನ್ನೆಲೆಯಲ್ಲಿ ಒಂದು ವಾರದೊಳಗಾಗಿ ಸ್ವತಂತ್ರ ತಜ್ಞರ ಸಮಿತಿ ರಚಿಸಬೇಕು. ತಾಂತ್ರಿಕ ಅಧಿಕಾರಿಗಳು ಹಾಗೂ ಅನುಭವ ಹೊಂದಿದ ನುರಿತ ಗುತ್ತಿಗೆದಾರರನ್ನು ಸಮಿತಿ ಸದಸ್ಯರನ್ನಾಗಿ ನೇಮಿಸಬೇಕು. ಮಾರುಕಟ್ಟೆ ದರ ಹೋಲಿಕೆ ಹಾಗೂ ವಾಸ್ತವಿಕ ವೆಚ್ಚ ವಿಶ್ಲೇಷಣೆ ನಡೆಸಿ ಸಮಿತಿಯ ವರದಿ ಪಡೆಯುವುದನ್ನು ಕಡ್ಡಾಯಗೊಳಿಸಬೇಕು. ಈ ಪ್ರಕ್ರಿಯೆ ಇಲ್ಲದೇ ಮಂಜೂರಾದ ಎಲ್ಲಾ ಎ.ಎಲ್.ಬಿ ಟೆಂಡರ್‌ಗಳನ್ನು ಅಮಾನ್ಯ ಎಂದು ಘೋಷಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
20% ಕ್ಕಿಂತ ಹೆಚ್ಚು ಕಡಿಮೆ ದರದ ಎಲ್ಲಾ ಟೆಂಡರ್‌ಗಳನ್ನು ತಕ್ಷಣ ಸ್ಥಗಿತಗೊಳಿಸಿ, ಮರುಪರಿಶೀಲನೆ ಪೂರ್ಣಗೊಳ್ಳುವವರೆಗೆ ಪಾವತಿಗಳನ್ನು ನಿಲ್ಲಿಸಬೇಕು. ಅಗತ್ಯವಿದ್ದಲ್ಲಿ ಟೆಂಡರ್‌ಗಳನ್ನು ರದ್ದು ಪಡಿಸಬೇಕು. 15% ರಿಂದ 20% ಹೆಚ್ಚುವರಿ ಭದ್ರತಾ ಠೇವಣಿಯನ್ನು ಕನಿಷ್ಠ ಒಂದು ವರ್ಷದ ಅವಧಿಗೆ ಕಡ್ಡಾಯಗೊಳಿಸಬೇಕು. ಠೇವಣಿ ನೀಡದಿದ್ದಲ್ಲಿ ಒಪ್ಪಂದವನ್ನು ರದ್ದುಪಡಿಸಿ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು.
ಸರ್ಕಾರದ ನಷ್ಟವನ್ನು ಗುತ್ತಿಗೆದಾರರಿಂದ ಹಾಗೂ ಸಂಬಂಧಿತ ಅಧಿಕಾರಿಗಳಿಂದ ವೈಯಕ್ತಿಕವಾಗಿ ವಸೂಲಿ ಮಾಡಬೇಕು. ನಿಯಮ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಭ್ರಷ್ಟಾಚಾರ ಕಂಡುಬಂದಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಬೇಕು. ಎ.ಎಲ್.ಬಿ ಪ್ರಕರಣಗಳಿಗೆ ಸ್ಪಷ್ಟ ಎಸ್.ಒ.ಪಿ ರೂಪಿಸಬೇಕು.
15 ದಿನಗಳೊಳಗಾಗಿ ಸ್ಪಷ್ಟ ಹಾಗೂ ಲಿಖಿತ ಕ್ರಮ ವರದಿ ಸಲ್ಲಿಸಬೇಕು. ನಿಗದಿತ ಅವಧಿಯಲ್ಲಿ ಕ್ರಮ ಕೈಗೊಳ್ಳದಿದ್ದಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಮುಖ್ಯ ಅಭಿಯಂತರರಿಗೆ ಎಚ್ಚರಿಕೆ ನೀಡಿದ್ದಾರೆ.