ಬೆಂಗಳೂರು: ದೇವನಹಳ್ಳಿಯಿಂದ ಮೆಜೆಸ್ಟಿಕ್‌ಗೆ ಚಲಿಸುತ್ತಿದ್ದ ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಬಸ್ (ನೋಂದಣಿ ಕೆಎ-57 ಎಫ್-4029) ನಲ್ಲಿ ಪ್ರಯಾಣಿಕ ಹಾಗೂ ಕಂಡಕ್ಟರ್‌ಗೆ ಟಿಕೆಟ್‌ಗೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ. ಈಶಾನ್ಯ ರಾಜ್ಯದ (Viral Video) ಪ್ರಯಾಣಿಕನೊಬ್ಬನಿಗೆ ಕಂಡಕ್ಟರ್ ಕಪಾಳಮೋಕ್ಷ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಹೇಳಲಾಗಿದೆ. ಪ್ರಯಾಣಿಕನೊಬ್ಬ ಕಂಡಕ್ಟರ್ ಜೊತೆ ಜಗಳವಾಡುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕನ್ನಡ ಬಾರದ ಯುವಕ ಬಸ್ ಹತ್ತಿದ್ದ. ಆತ ಕಂಡಕ್ಟರ್ ಬಳಿ ಟಿಕೆಟ್ ನೀಡಲು ಕೇಳಿದ್ದಾನೆ ಎನ್ನಲಾಗಿದೆ. ಆದರೆ ಕಂಡಕ್ಟರ್ ಅವನ ಬಳಿಗೆ ಹೋಗಲಿಲ್ಲ ಎಂದು ಪ್ರಯಾಣಿಕ ಆರೋಪಿಸಿದ್ದಾನೆ. ನಂತರ ತಪಾಸಣಾ ದಳ ಬಸ್ ಹತ್ತಿದಾಗ, ಮಾನ್ಯ ಟಿಕೆಟ್ ಇಲ್ಲದೆ ಪ್ರಯಾಣಿಸಿದ್ದಕ್ಕಾಗಿ ಪ್ರಯಾಣಿಕನಿಗೆ ₹420 ದಂಡ ವಿಧಿಸಲಾಯಿತು. ಇದು ಜಗಳಕ್ಕೆ ಕಾರಣವಾಯಿತು. ಸಿಟ್ಟಿಗೆದ್ದ ಕಂಡಕ್ಟರ್ ಪ್ರಯಾಣಿಕನ ಮೇಲೆ ಹಲ್ಲೆ ಮಾಡಿದ್ದಾರೆ. ಪ್ರಯಾಣಿಕನನ್ನು ಚೆಕಿಂಗ್ ಅಧಿಕಾರಿಗಳು ಪ್ರಶ್ನಿಸಿದ್ದಕ್ಕೆ, ತಾನು ಪದೇ ಪದೇ ಬಸ್ ಪ್ರಯಾಣ ಮಾಡುವವನಲ್ಲ ಮತ್ತು ಆದ್ದರಿಂದ ಟಿಕೆಟ್ ಖರೀದಿಸಲು ಕಂಡಕ್ಟರ್ ಅನ್ನು ಮೊದಲೇ ಸಂಪರ್ಕಿಸುವ ಅವಶ್ಯಕತೆಯಿದೆ ಎಂದು ತಿಳಿದಿರಲಿಲ್ಲ ಎಂದು ಹೇಳಿಕೊಂಡಿದ್ದಾನೆ.
ವೀಡಿಯೊದಲ್ಲಿ ಆ ವ್ಯಕ್ತಿ ಕಂಡಕ್ಟರ್‌ಗೆ ಎದುರಾಗಿ ಹಿಂದಿಯಲ್ಲಿ, ನಿಮ್ಮ ಹೆಸರು ಹೇಳಿ, ನಾನು ಪೊಲೀಸ್ ಠಾಣೆಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾನೆ. ಅಷ್ಟೇ ಅಲ್ಲದೇ ಆತ ತನ್ನ ಸ್ವಂತ ಎಕ್ಸ್ ಖಾತೆಯಲ್ಲಿ, ಈ ವಿಡಿಯೋವನ್ನು ಹಂಚಿಕೊಂಡಿದ್ದಾನೆ. ಬೆಂಗಳೂರಿನಲ್ಲಿ ವಾಸಿಸುವ ಈಶಾನ್ಯದಿಂದ ಬಂದವನಾಗಿ, ಸಂಭಾವ್ಯ ಅಪಾಯಗಳ ಬಗ್ಗೆ ನನಗೆ ತಿಳಿದಿದೆ. ನಾನು ದೈಹಿಕವಾಗಿ ಪ್ರತೀಕಾರ ತೀರಿಸಿಕೊಂಡಿದ್ದರೆ, ಅವನು ಹೆಚ್ಚು ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸುತ್ತಿದ್ದನು, ಬಹುಶಃ ಗೂಂಡಾಗಳನ್ನು ಕರೆತರುತ್ತಿದ್ದನು. ನನ್ನ ಸುರಕ್ಷತೆಯ ಭಯದಿಂದ ನಾನು ಸುಮ್ಮನಾದೆ ಎಂದು ಹೇಳಿದ್ದಾನೆ.
ವಿಡಿಯೋಗೆ ಹಲವರು ಕಮೆಂಟ್ ಮಾಡಿದ್ದು, ಬೆಂಗಳೂರಿನಲ್ಲಿ ಪರಭಾಷಿಕರ ಮೇಲಿನ ದೌರ್ಜನ್ಯ ಮಿತಿಮೀರಿದೆ. ಕಾನೂನು ಎಲ್ಲರಿಗೂ ಒಂದೇ ತಪ್ಪು ಯಾರೇ ಮಾಡಿದ್ದರು ಅವರಿಗೆ ಶಿಕ್ಷೆಯಾಗಬೇಕು ಎಂದು ಕಮೆಂಟ್ ಮಾಡಿದ್ದಾರೆ. ವಿಡಿಯೋ ವೈರಲ್ ಆದ ನಂತರ, BMTC ಡಾಕೆಟ್ ಸಂಖ್ಯೆ BMTC2025011158 ಅಡಿಯಲ್ಲಿ ದೂರು ದಾಖಲಿಸಲಾಗಿದೆ ಎಂದು ದೃಢಪಡಿಸಿತು. ಆದಾಗ್ಯೂ, ಘಟನೆಯ ಬಗ್ಗೆ ನಿಗಮವು ಇನ್ನೂ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.