ಬೆಂಗಳೂರು, ಜೂ. 1: ಸಿಲಿಕಾನ್ ಸಿಟಿ ಬೆಂಗಳೂರು (Bengaluru) ಟ್ರಾಫಿಕ್‌ಗೆ ಕುಖ್ಯಾತಿ ಪಡೆದಿದೆ. ಅದರಲ್ಲೂ ವಿಐಪಿ ವಾಹನಗಳ ಸಂಚಾರಕ್ಕಾಗಿ ರಸ್ತೆ ಬಂದ್ ಮಾಡಿದರೆ ಹೇಗಾಗಬಹುದು? ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಭಾರತದ ಸಿಲಿಕಾನ್ ವ್ಯಾಲಿ ಎಂದೇ ಕರೆಯಲ್ಪಡುವ ಬೆಂಗಳೂರಿನಲ್ಲಿ ಟ್ರಾಫಿಕ್‌ನಲ್ಲಿ ಸಿಲುಕಿದ ಒಬ್ಬ ವ್ಯಕ್ತಿ, ತಮ್ಮ ಅಸಮಾಧಾನವನ್ನು ಗಾಂಧಿ ಶೈಲಿಯ ಪ್ರತಿಭಟನೆಯ ಮೂಲಕ ವ್ಯಕ್ತಪಡಿಸಿದ್ದಾರೆ. ಗರ್ಭಿಣಿ ಪತ್ನಿಯೊಂದಿಗೆ ಪ್ರಯಾಣಿಸುತ್ತಿದ್ದ ಅವರು, ರಾಜ್ಯಪಾಲ ಥಾವರ್‌ಚಂದ ಗೆಹ್ಲೋಟ್ (Thaawarchand Gehlot) ಅವರಿಗಾಗಿ ತೆರವುಗೊಳಿಸಲಾಗಿದ್ದ ಹಳೆ ಏರ್‌ಪೋರ್ಟ್ ರಸ್ತೆಯಲ್ಲಿ ದೀರ್ಘಕಾಲದ ಟ್ರಾಫಿಕ್ ಜಾಮ್ ಉಂಟಾದ ಕಾರಣ ತೀವ್ರ ಅಸಹನೆಗೊಂಡರು.
ಇದನ್ನು ಧಿಕ್ಕರಿಸಿದ ವ್ಯಕ್ತಿ ರಸ್ತೆಯ ಮಧ್ಯದಲ್ಲಿ ನೇರವಾಗಿ ಕುಳಿತರು. ಹೆಸರು ಬಹಿರಂಗಪಡಿಸದ ಆ ವ್ಯಕ್ತಿ, ಮೇಲೇಳಲು ನಿರಾಕರಿಸುತ್ತಾ, ಸಾಮಾನ್ಯ ನಾಗರಿಕನ ಸಮಯವು ರಾಜಕಾರಣಿಯಷ್ಟೇ ಮೌಲ್ಯಯುತವಾಗಿದೆ ಎಂದು ಒತ್ತಿ ಹೇಳಿದರು. ಸಂಚಾರ ಪೊಲೀಸರೊಂದಿಗೆ ಮಾತಿನ ಜಟಾಪಟಿ ನಡೆಯಿತು. ರಾಜ್ಯಪಾಲರ ವಾಹನ ಸಾಗುವ ಉದ್ದೇಶಕ್ಕೆ ಇಲ್ಲಿ ಇತರ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು.
ಇಲ್ಲಿದೆ ವಿಡಿಯೊ:
“ನನ್ನ ಹೆಂಡತಿ ಗರ್ಭಿಣಿ. ನೀವು ಸಿಗ್ನಲ್ ಅನ್ನು ಏಕೆ ನಿರ್ಬಂಧಿಸಿದ್ದೀರಿ? ರಾಜ್ಯಪಾಲರು ವಿಐಪಿ ಎಂದ ಮಾತ್ರಕ್ಕೆ ನಾವು ಯಾರೂ ಅಲ್ಲವೇ?” ಎಂದು ಪ್ರಶ್ನಿಸಿದ್ದಾರೆ. ಇದು ಸಂಚಾರ ಪೊಲೀಸ್ ಹಾಗೂ ವ್ಯಕ್ತಿಯ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.
ಬೆಂಗಳೂರಿನಲ್ಲಿ ಆಟೋ ಚಾಲಕನಿಗೆ ಕಪಾಳಮೋಕ್ಷ ಮಾಡಿದ ಟ್ರಾಫಿಕ್ ಪೊಲೀಸ್: ಅಧಿಕಾರಿ ವರ್ತನೆಗೆ ನೆಟ್ಟಿಗರ ಆಕ್ರೋಶ!
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವಿಡಿಯೊ ಬೆಂಗಾವಲು ಪಡೆ ಅಂತಿಮವಾಗಿ ಜನದಟ್ಟಣೆಯ ರಸ್ತೆಯನ್ನು ಹಾದುಹೋಗುವುದನ್ನು ತೋರಿಸುತ್ತದೆ. ಆ ವ್ಯಕ್ತಿ ಅಂತಿಮವಾಗಿ ಸ್ಥಳದಿಂದ ಹೊರಡುವ ಮೊದಲು ಬಿಕ್ಕಟ್ಟನ್ನು ಹೇಗೆ ನಿವಾರಿಸಲಾಯಿತು ಎಂಬುದು ತಿಳಿದುಬಂದಿಲ್ಲ. ಈ ಘಟನೆಯು ವಿಐಪಿ ಸಂಸ್ಕೃತಿಯ ವಿರುದ್ಧದ ಅಸಮಾಧಾನವನ್ನು ಎತ್ತಿ ತೋರಿಸಿದೆ.
ವೆಚ್ಚ ಕಡಿತಕ್ಕೆ ಮೋದಿ ಸಲಹೆ
ಈ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಕಳೆದ ತಿಂಗಳು ಪ್ರಸ್ತಾಪಿಸಿದ್ದರು. ಸಚಿವರು ಹಾಗೂ ಅಧಿಕಾರಿಗಳಿಗೆ ಅಧಿಕೃತ ಪ್ರೋಟೋಕಾಲ್‌ಗಳನ್ನು ಅನುಸರಿಸುವ ವೇಳೆ ಸಂಯಮಿತ ಮತ್ತು ವೆಚ್ಚ ಕಡಿತಗೊಳಿಸುವ ವಿಧಾನವನ್ನು ಅಳವಡಿಸಿಕೊಳ್ಳುವಂತೆ ಸೂಚಿಸಿದ್ದರು. ಅಧಿಕಾರದ ಪ್ರದರ್ಶನಕ್ಕಿಂತ ಸರಳತೆ ಮತ್ತು ಕಾರ್ಯಕ್ಷಮತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಅವರು ಒತ್ತಿ ಹೇಳಿದ್ದರು.
ಆಡಳಿತದಲ್ಲಿ ಸರಳತೆ ಮತ್ತು ಮಿತವ್ಯಯವನ್ನು ಉತ್ತೇಜಿಸುವ ಕ್ರಮದ ಭಾಗವಾಗಿ, ಪ್ರಧಾನ ಮಂತ್ರಿ ತಮ್ಮದೇ ಬೆಂಗಾವಲು ಪಡೆಯ ಗಾತ್ರವನ್ನು ಶೇ. 50ರಷ್ಟು ಕಡಿಮೆ ಮಾಡಲು ಸೂಚಿಸಿದ್ದರು. ಜತೆಗೆ ಅನಗತ್ಯ ವೆಚ್ಚ ಹಾಗೂ ಸಾರ್ವಜನಿಕರಿಗೆ ಉಂಟಾಗುವ ತೊಂದರೆಗಳನ್ನು ತಗ್ಗಿಸುವ ಉದ್ದೇಶದಿಂದ ಎಲೆಕ್ಟ್ರಿಕ್ ವಾಹನಗಳನ್ನು (ಇವಿ) ಬಳಸುವಂತೆ ನಿರ್ದೇಶನ ನೀಡಿದ್ದರು.