ಸರ್ವಪಕ್ಷ ಸಭೆಯಲ್ಲಿ ಮೇಕೆದಾಟು ಯೋಜನೆಗೆ ಒಕ್ಕೊರಲ ಬೆಂಬಲ
ಮಳೆಯಾಗಿದೆ, ತಮಿಳುನಾಡಿಗೆ ನೀರು ಬಿಡಲು ಸಮಸ್ಯೆಯಿಲ್ಲ : ಸಿಎಂ
ಮಂಗಾರು ಕೊರತೆಯ ಈ ಸಂಕಷ್ಟ ಕಾಲದಲ್ಲಿಯೂ ನೀರು ಹರಿಸಬೇಕೆಂಬ ಆದೇಶವನ್ನು ಸಂಬಂಧಿಸಿದಂತೆ ಪಕ್ಷಾತೀತವಾಗಿ ಎದುರಿಸೋಣ. ಈ ಸಂಕಷ್ಟ ಸೂತ್ರಕ್ಕೆ ಶಾಶ್ವತ ಪರಿಹಾರ ವಾಗಿರುವ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬೇಕಿರುವ ಅಗತ್ಯಕ್ರಮಗಳನ್ನು ತೆಗೆದು ಕೊಳ್ಳೋಣ ಎನ್ನುವ ಮಾತುಗಳು ಸರ್ವಪಕ್ಷ ಸಭೆಯಲ್ಲಿ ವ್ಯಕ್ತವಾಗಿದೆ. ತಮಿಳುನಾಡಿಗೆ ನಿತ್ಯ 3500 ಕ್ಯುಸೆಕ್ ನೀರು ಹರಿಸಬೇಕೆಂಬ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಆದೇಶದ ಬಳಿಕ ಕರ್ನಾಟಕದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಆದೇಶ ಮಾಡಿರುವಷ್ಟು ನೀರು ಹರಿಯುತ್ತಿದೆ.
ಆದರೆ ಮಳೆ ಕೊರತೆ ಯಿರುವುದರಿಂದ, ಒಟ್ಟಾರೆಯಾಗಿ ಮುಂದಿನ ದಿನಗಳಲ್ಲಿ ಎದುರಾಗುವ ಸಮಸ್ಯೆಗಳನ್ನು ಯಾವ ರೀತಿ ಎದುರಿಸಬೇಕು ಎನ್ನುವುದನ್ನು ಚರ್ಚಿಸಲು ಗೃಹಕಚೇರಿ ಕೃಷ್ಣದಲ್ಲಿ ಭಾನುವಾರ ಸರ್ವಪಕ್ಷ ಸಭೆ ನಡೆಯಿತು. ಈ ಸಭೆಯಲ್ಲಿ ರಾಜ್ಯದ ಹಿತ ಕಾಯಲು ಏನೆ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಕಾವೇರಿ ವಿಚಾರದಲ್ಲಿ ರಾಜ್ಯದ ಹಿತ ಕಾಯುವ ವಿಚಾರದಲ್ಲಿ ಏನೆ ಕ್ರಮಗಳನ್ನು ಕೈಗೊಳ್ಳಬೇಕು, ಯಾವ ನಿಲುವನ್ನು ರಾಜ್ಯ ಸರಕಾರ ಹೊಂದಬೇಕು ಎಂಬ ಬಗ್ಗೆ ಚರ್ಚೆಗಳು ನಡೆದಿದ್ದು, ಇದರ ಜತೆಗೆ ಮೇಕೆದಾಟು ಯೋಜನೆ ಅನುಷ್ಠಾನದ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕುಡಿಯುವ ನೀರಿಗೆ ನಾವು ಆದ್ಯತೆ ನೀಡಿದ್ದೇವೆ. ಕುಡಿಯುವ ನೀರನ್ನು ಸಂಗ್ರಹಿಸುವ ಜತೆಗೆ ರೈತರ ಹಿತದೃಷ್ಟಿಗೂ ಮುಂದಾಗಿದ್ದೇವೆ ಎಂದರು.
ರಾಜಕಾರಣ ಏನೇ ಇದ್ದರೂ ನಾವು ಅದನ್ನು ಬಿಟ್ಟು ಎಲ್ಲ ಸಂದರ್ಭದಲ್ಲೂ ರಾಜ್ಯದ ರೈತರ ಹಿತಕ್ಕಾಗಿ ಒಗ್ಗಟ್ಟಿನಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಎಲ್ಲರೂ ಹೊರಗೆ ಏನೇ ಹೇಳಿಕೆ ನೀಡಿದರೂ ರಾಜ್ಯದ ವಿಚಾರದಲ್ಲಿ ನೀವೆ ಸಹಕಾರ ನೀಡುತ್ತಾ ಬಂದಿದ್ದೀರಿ ಅದಕ್ಕೆ ನಾನು ಆಭಾರಿ ಎಂದರು. ಉತ್ತಮ ಮಳೆ, ನೀರು ಹರಿಸಲು ಸಮಸ್ಯೆಯಿಲ್ಲ: ವರುಣನ ಕೃಪೆಯಿಂದ ಕೊಡಗಿನ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ.
ಈಗಾಗಲೇ ನಮ್ಮಲ್ಲಿ 57 ಟಿಎಂಸಿ ನೀರು ಲಭ್ಯವಿದ್ದು, ಒಳಹರಿವು ಹೆಚ್ಚಾಗಿದೆ. ನಿತ್ಯ 3500 ಕ್ಯುಸೆಕ್ ನೀರು ಬಿಡಲು ಕಾವೇರಿ ಪ್ರಾಧಿಕಾರ ಆದೇಶಿಸಿದೆ. ಒಳಹರಿವು ಹೆಚ್ಚಾಗಿರುವುದರಿಂದ ಅಣೆಕಟ್ಟು ತುಂಬಿ ನೀರು ಹರಿದು ಹೋಗುತ್ತಿದೆ. ನೀರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ. ತಮಿಳುನಾಡಿಗೆ ಬಿಡಬೇಕಿರುವ ನೀರಿಗಿಂತ ಹೆಚ್ಚಿನ ನೀರನ್ನು ಬಿಡಬೇಕಾಗುತ್ತದೆ. ಆದರೆ ನಾವು ಕುಡಿಯುವ ನೀರನ್ನು ಸಂಗ್ರಹಿಸುವ ಜತೆಗೆ ರೈತರ ಹಿತದೃಷ್ಟಿಯಿಂದಲೂ ಕ್ರಮಕ್ಕೆ ಮುಂದಾಗಿದ್ದೇವೆ.
ರೈತರು ಈಗಾಗಲೇ ಹಾಕಿದ್ದ ಬೆಳೆ ರಕ್ಷಣೆಗೆ ಕೆಆರ್‌ಎಸ್ ಕಬಿನಿ ನಾಲೆಗಳಿಗೆ ನೀರು ಹರಿದಿದೆ ಎಂದು ವಿವರಿಸಿದರು. ಈ ನಡುವೆ ತಮಿಳುನಾಡು ಸರಕಾರ ಕೂಡ ಸಂಕಷ್ಟ ಪರಿಸ್ಥಿತಿಯಲ್ಲಿ ಬೇಡಿಕೆ ಯಿಟ್ಟಿದೆ. ನೀರು ಹರಿಸುವ ಬಗ್ಗೆ ಡಿಎಂಕೆ ಪಕ್ಷ ಖಾಸಗಿಯಾಗಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಅದಕ್ಕೆ ಮಾನ್ಯತೆ ಕೊಡುವುದು ಅನುಮಾನವಿದೆ. ಕೋರ್ಟ್ ವಿಚಾರ ನಿರ್ವಹಿಸುವಾಗ ಹಿರಿಯರ ಅನುಭವವನ್ನು ಪರಿಗಣಿಸಬೇಕಾಗಿದೆ. ರಾಜ್ಯದ ಹಿತ ಕಾಪಾಡಬೇಕಾಗಿದೆ. ಕೃಷಿ ಸಂಬಂಧ ಮಾರ್ಗದರ್ಶನ ನೀಡಬೇಕಾಗಿದೆ ಎಂದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿ. ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಸದಾನಂದಗೌಡ, ಬಸವರಾಜ ಬೊಮ್ಮಾಯಿ, ವೀರಪ್ಪ ಮೊಯ್ಲಿ, ಕೇಂದ್ರ ಸಚಿವರಾದ ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ಸಚಿವರಾದ ರಾಮಲಿಂಗಾರೆಡ್ಡಿ, ಕೃಷ್ಣ ಭೈರೇಗೌಡ, ಎಂ.ಬಿ.ಪಾಟೀಲ, ಕೆ.ಜೆ.ಜಾರ್ಜ್, ದೆಹಲಿಯಲ್ಲಿ ಕರ್ನಾಟಕದ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ವಿರೋಧ ಪಕ್ಷದ ನಾಯಕ ಅಶೋಕ್,
ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಎಚ್.ಕೆ.ಪಾಟೀಲ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿ ಪ್ರಸಾದ್, ನಿವೃತ್ತ ನ್ಯಾಯಾಧೀಶ ನಾಗಮೋಹನದಾಸ್, ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಮುಖ್ಯಮಂತ್ರಿಯವರ ವಿಶೇಷ ಸಲಹೆಗಾರ ಜಿ.ಸಿ.ಚಂದ್ರಶೇಖರ್, ಆರ್ಥಿಕ ಸಲಹೆಗಾರ ಎಲ್.ಕೆ. ಅತೀಕ್, ಅಪರ ಮುಖ್ಯಕಾರ್ಯದರ್ಶಿ ತುಷಾರ್ ಗಿರಿನಾಥ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.
![]()
ಸಂಕಷ್ಟ ಸಮಯದಲ್ಲಿ ಮೇಕೆದಾಟು ಶಾಶ್ವತ ಪರಿಹಾರ. ಈ ಬಗ್ಗೆ ನಾನು ಶೀಘ್ರ ನಿರ್ಧಾರ ಕೈಗೊಳ್ಳ ಬೇಕು. ತಮಿಳುನಾಡು ಸರಕಾರದೊಂದಿಗೆ ಸೌಹಾರ್ದಯುತವಾಗಿ ಮಾತನಾಡಿ ತೀರ್ಮಾನವಾಗ ಬೇಕು ಎನ್ನುವ ಸಲಹೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಬಂದಿದೆ. ಮೇಕೆದಾಟಿಗೆ ನಮ್ಮ ಬೆಂಬಲವಿದೆ ಎಂದಿದ್ದಾರೆ.
-ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ
![]()
ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮಲೆನಾಡು, ಕೊಡಗು ಭಾಗದಲ್ಲಿ ಸುರಿದ ಮಳೆಯಿಂದಾಗಿ ಜಲಾಶಯಗಳಿಗೆ ಉತ್ತಮ ಪ್ರಮಾಣದ ನೀರು ಹರಿದುಬರುತ್ತಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿಗೆ ತರಾತುರಿಯಲ್ಲಿ ನೀರು ಹರಿಸಿ ಸಾಧನೆ ಎಂದು ಬಿಂಬಿಸಿಕೊಳ್ಳುವುದು ಸರಿಯಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಬಲವಾಗಿ ವಾದ ಮಂಡಿಸಬೇಕು.
- ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ
![]()
ಪ್ರತಿಭಟನೆ ಕೈಬಿಡಿ: ಸಿಎಂ ಉತ್ತಮ ಮಳೆಯಾಗುತ್ತಿರುವುದರಿಂದ ಒಳಹರಿವು ಹೆಚ್ಚಾಗಿದೆ. ತಮಿಳುನಾಡಿಗೆ 3500 ಕ್ಯುಸೆಕ್ ನೀರನ್ನು ಬಿಟ್ಟರೂ, ರಾಜ್ಯಕ್ಕೆ ಸಮಸ್ಯೆ ಯಾಗುವುದಿಲ್ಲ. ಪ್ರಕೃತಿ ನಮಗೆ ಸಹಾಯ ಮಾಡಿದೆ. ಆದ್ದರಿಂದ ಕರ್ನಾಟಕ ಬಂದ್ ಮಾಡುವುದು ಬೇಡ, ಸಂಘಟನೆಗಳು ಬಂದ್ ನಿಲ್ಲಿಸಬೇಕು ಎಂದು ಡಿಕೆಶಿ ಮನವಿ ಮಾಡಿದ್ದಾರೆ. ಕುಡಿಯುವ ನೀರಿಗೆ 40 ಟಿಎಂಸಿ ಕಾಯ್ದಿ ರಿಸಬೇಕು. ನೀರಿನ ಸಂಗ್ರಹಣೆ ಬಗ್ಗೆ ತಮಿಳುನಾಡಿಗೆ ಮಾಹಿತಿ ಇದೆ. ತ.ನಾಡು ಸುಪ್ರೀಂ ಕೋರ್ಟ್‌ಗೆ ಹೋದರೂ ಪ್ರಯೋಜನ ಆಗದು.
- ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ