Shivaraj Tangadagi: 'ಶುಭವಾಗಲಿ' ಬರೆಯಲು ಸಚಿವ ತಂಗಡಗಿ ಪರದಾಟ; ವಿಡಿಯೊ ವೈರಲ್
Shivaraj Tangadagi: ಕನ್ನಡದಲ್ಲಿ ಬರೆಯಲು ಪರದಾಡಿದ ಸಚಿವ ಶಿವರಾಜ್ ತಂಗಡಗಿ ಅವರ ವಿರುದ್ಧ ರಾಜ್ಯ ಬಿಜೆಪಿ ಆಕ್ರೋಶ ಹೊರಹಾಕಿದೆ. ಅನಕ್ಷರಸ್ಥರ ದೊಡ್ಡಿಯಾಗಿರುವ ಕಾಂಗ್ರೆಸ್ ಸರ್ಕಾರ ಕನ್ನಡದ ಅಸ್ಮಿತೆಗೆ ಕೊಳ್ಳಿ ಇಟ್ಟಿದೆ. ಇಂತಹ ಮಹಾನ್ ಮೇಧಾವಿಗಳಾದ ಶಿಕ್ಷಣ ಸಚಿವ, ಕನ್ನಡ ಮತ್ತು ಸಂಸ್ಕೃತಿ ಸಚಿವರನ್ನು ಪಡೆದ ಕರುನಾಡು ಪಾವನ ಎಂದು ವ್ಯಂಗ್ಯವಾಡಿದೆ.
ಕಾರಟಗಿ: ಈ ಹಿಂದೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಪ್ಪು ತಪ್ಪಾಗಿ ಕನ್ನಡ ಓದಿ, ಉಚ್ಚರಿಸಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಟ್ರೋಲ್ ಆಗಿದ್ದರು. ಇದೀಗ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಅವರು ಬೋರ್ಡ್ ಮೇಲೆ ಕನ್ನಡ ಬರೆಯಲು ಪರದಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕೊಪ್ಪಳ ಜಿಲ್ಲೆಯ ಕಾರಟಗಿ ಜೆ.ಪಿ.ನಗರದ ಅಂಗನವಾಡಿಯಲ್ಲಿ ʼಶುಭವಾಗಲಿʼ ಎಂದು ಬರೆಯಲು ಸಚಿವ ಶಿವರಾಜ ತಂಗಡಗಿ ಒದ್ದಾಡಿದ್ದಾರೆ. ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿವ ಶಿವರಾಜ ತಂಗಡಗಿ ಅವರು, ಮಕ್ಕಳ ಎದುರಲ್ಲಿ ಕಪ್ಪುಹಲಗೆ ಮೇಲೆ ʼಶುಭವಾಗಲಿʼ ಎಂದು ಬರೆಯಲು ಹೋಗಿ ತಪ್ಪಾಗಿ ಬರೆದು ಪೇಚಿಗೆ ಸಿಲುಕಿದ್ದಾರೆ.
ಮೊದಲು ಶಬವಾಗಲಿ ಎಂದು ಬರೆದಿದ್ದಾರೆ. ಇದನ್ನು ಗಮನಿಸಿದ ಅಧಿಕಾರಿಗಳು, ಸಾರ್, 'ಶುಭ' ಎಂದಿದ್ದಾರೆ. ಎಚ್ಚೆತ್ತ ಸಚಿವರು, ಕೂಡಲೇ ಸರಿಮಾಡಿಕೊಂಡಿದ್ದಾರೆ. ಈ ಎಲ್ಲ ಪ್ರಹಸನದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬಿಜೆಪಿಗರು ಹಾಗೂ ಮಾಜಿ ಶಾಸಕ ಬಸವರಾಜ ಧಡೆಸುಗೂರ ಬೆಂಬಲಿಗರು ಟ್ರೋಲ್ ಮಾಡುತ್ತಿದ್ದಾರೆ. ವಿದ್ಯಾ ಮಂತ್ರಿ ಮಧು ಬಂಗಾರಪ್ಪ ಅವರಿಗೆ ಸರಿಯಾಗಿ ಕನ್ನಡ ಓದಲು ಬರೋದಿಲ್ಲ ಎಂಬ ವಿಚಾರ ಈ ಹಿಂದೆ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಸಚಿವ ಶಿವರಾಜ ತಂಗಡಗಿ ಅವರ ಸರದಿ ಎಂಬ ಕಾಮೆಂಟ್ ಜಾಲತಾಣದಲ್ಲಿ ಹರಿದಾಡುತ್ತಿವೆ.
ಶುಭವಾಗಲಿ ಎಂದು ಬರೆಯಲು ಕಷ್ಟಪಟ್ಟ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ. #ಕನ್ನಡ #Kannada @BJP4Karnataka pic.twitter.com/tOmkpnJSnF
— Vinayak Mathapati (@Vinayak_Mathapa) February 1, 2025
ಕನ್ನರಾಮಯ್ಯ ಸರ್ಕಾರದಿಂದ ಕನ್ನಡದ ಕಗ್ಗೂಲೆ ಎಂದ ಬಿಜೆಪಿ
ಕನ್ನಡದಲ್ಲಿ ಬರೆಯಲು ಪರದಾಡಿದ ಸಚಿವ ಶಿವರಾಜ್ ತಂಗಡಗಿ ಅವರ ವಿರುದ್ಧ ರಾಜ್ಯ ಬಿಜೆಪಿ ಆಕ್ರೋಶ ಹೊರಹಾಕಿದೆ. ಕನ್ನರಾಮಯ್ಯ ಸರ್ಕಾರದಿಂದ ಕನ್ನಡದ ಕಗ್ಗೂಲೆಯಾಗುತ್ತಿದೆ. ಕನ್ನಡ ಓದಲು ಬರೆಯಲು ಬಾರದ ಅನಕ್ಷರಸ್ಥ ಶಿಕ್ಷಣ ಸಚಿವ ಮಧು ಬಂಗಾರಪ್ಪಒಂದು ಕಡೆಯಾದರೆ, ಕನ್ನಡದ ಸುಲಭವಾದ ಪದವನ್ನು ಬರೆಯಲು ಕನ್ನಡ ಮತ್ತು ಸಂಸ್ಕೃತಿ ಸಚಿವ ತಂಗಡಗಿ ವಿಲ ವಿಲ ಒದ್ದಾಡಿದ್ದಾರೆ.
ಅನಕ್ಷರಸ್ಥರ ದೊಡ್ಡಿಯಾಗಿರುವ ಕಾಂಗ್ರೆಸ್ ಸರ್ಕಾರ ಕನ್ನಡದ ಅಸ್ಮಿತೆಗೆ ಕೊಳ್ಳಿ ಇಟ್ಟಿದೆ. ಇಂತಹ ಮಹಾನ್ ಮೇಧಾವಿಗಳಾದ ಶಿಕ್ಷಣ ಸಚಿವ, ಕನ್ನಡ ಮತ್ತು ಸಂಸ್ಕೃತಿ ಸಚಿವರನ್ನು ಪಡೆದ ಕರುನಾಡು ಪಾವನ.
ಕೆ.ಪಿ.ಎ.ಸ್ಸಿ ಪ್ರಶ್ನೆ ಪತ್ರಿಗಳಲ್ಲೂ ಪದೇ ಪದೆ ಕನ್ನಡ ವ್ಯಾಕರಣ ತಪ್ಪಾಗಿ ಮುದ್ರಿಸುವುದು. ಕನ್ನಡ ಶಾಲೆಗಳನ್ನು ಮುಚ್ಚಿಸುತ್ತಿರುವುದು ಈ ಎಲ್ಲವನ್ನೂ ನೋಡಿದರೆ ಕರುನಾಡಲ್ಲಿ ಕನ್ನಡವನ್ನು ಅಳಿಸಿ ಹಾಕಬೇಕೆಂದು ಕಾಂಗ್ರೆಸ್ ಹೊರಟಿದೆ ಎಂದು ಕಿಡಿಕಾರಿದೆ.