ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಡೊನಾಲ್ಡ್‌ ಟ್ರಂಪ್, ಜೋ ಬೈಡನ್ ಹತ್ಯೆಗೆ ಸುಪಾರಿ ಕೊಡ್ತಾ ಇರಾನ್‌? ಮಧ್ಯಪ್ರಾಚ್ಯ ಸಂಘರ್ಷಕ್ಕೆ ಪಾಕಿಸ್ತಾನದಿಂದ ಸ್ಫೋಟಕ ಟ್ವಿಸ್ಟ್‌

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮಾಜಿ ಅಧ್ಯಕ್ಷ ಜೋ ಬೈಡನ್ ಅವರನ್ನು ಹತ್ಯೆ ಮಾಡಲು ಇರಾನ್ ಸುಪಾರಿ ನೀಡಿದೆ ಎಂದು ಪಾಕಿಸ್ತಾನ ಮೂಲದ ವ್ಯಕ್ತಿಯೊಬ್ಬ ಸ್ಫೋಟಕ ಹೇಳಿಕೆ ನೀಡಿದ್ದಾನೆ. ಈ ಹೇಳಿಕೆ ಅಮೆರಿಕ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಟ್ರಂಪ್, ಬೈಡನ್ ಹತ್ಯೆಗೆ ಇರಾನ್‌ನಿಂದ ಸುಪಾರಿ?

ಪಾಕಿಸ್ತಾನ ಮೂಲದ ವ್ಯಕ್ತಿ ಮರ್ಚೆಂಟ್ -

Profile
Sushmitha Jain Mar 5, 2026 4:41 PM

ಇಸ್ಲಾಮಾಬಾದ್‌, ಮಾ. 5: ಅಮೆರಿಕದ ಪ್ರಮುಖ ರಾಜಕೀಯ ನಾಯಕರ ಹತ್ಯೆಗೆ ಸಂಚು ರೂಪಿಸಿದ ಆರೋಪ ಎದುರಿಸುತ್ತಿರುವ ಪಾಕಿಸ್ತಾನ ಮೂಲದ ವ್ಯಕ್ತಿಯೊಬ್ಬ ಕೋರ್ಟ್‌ನಲ್ಲಿ ಮಹತ್ವದ ಹೇಳಿಕೆ ನೀಡಿದ್ದಾನೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಾಜಿ ಅಧ್ಯಕ್ಷ ಜೋ ಬೈಡನ್ ಹಾಗೂ ಮಾಜಿ ರಾಯಭಾರಿ ನಿಕ್ಕಿ ಹ್ಯಾಲಿ ಅವರನ್ನು ಹತ್ಯೆ ಮಾಡಲು ಇರಾನ್ ಗೂಢಚಾರರು ತನ್ನನ್ನು ಸಂಪರ್ಕಿಸಿದ್ದರು ಎಂದು ಆತ ಹೇಳಿಕೊಂಡಿದ್ದಾನೆ.

ನ್ಯೂಯಾರ್ಕ್‌ನ ಬ್ರೂಕ್ಲಿನ್ ಫೆಡರಲ್ ಡಿಸ್ಟ್ರಿಕ್ಟ್ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಪಾಕಿಸ್ತಾನದ ಆಸಿಫ್ ಮರ್ಚೆಂಟ್ ಎಂಬಾತ ತನ್ನ ಪರವಾಗಿ ತಾನೇ ಸಾಕ್ಷ್ಯ ನೀಡಿದ್ದಾನೆ. ಈ ಸಂಚಿನಲ್ಲಿ ಭಾಗಿಯಾಗಿದ್ದರೂ, ರಾಜಕೀಯ ನಾಯಕರನ್ನು ಹತ್ಯೆ ಮಾಡುವ ಉದ್ದೇಶ ತನಗಿರಲಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾನೆ.

ಭಾಷಾಂತರಕಾರರ ನೆರವಿನಿಂದ ಉರ್ದುವಿನಲ್ಲಿ ಮಾತನಾಡಿದ ಮರ್ಚೆಂಟ್, “ಈ ಕೆಲಸವನ್ನು ನಾನು ಮನಃಪೂರ್ವಕವಾಗಿ ಮಾಡಲು ಇಷ್ಟಪಡಲಿಲ್ಲ. ಆರಂಭದಿಂದಲೇ ಈ ಕಾರ್ಯಾಚರಣೆ ಯಶಸ್ವಿಯಾಗುವುದಿಲ್ಲ ಎಂಬುದು ನನಗೆ ಗೊತ್ತಿತ್ತು” ಎಂದು ಹೇಳಿದ್ದಾನೆ.

ಟ್ರಂಪ್‌ ಹತ್ಯೆ ಸುಪಾರಿ ಬಗ್ಗೆ ಮಾಹಿತಿ ನೀಡಿದ ಪಾಕ್‌ ವ್ಯಕ್ತಿ:



ಎಫ್‌ಬಿಐ ಅಂಡರ್‌ಕವರ್ ಕಾರ್ಯಾಚರಣೆ

ಪ್ರಾಸಿಕ್ಯೂಟರ್‌ಗಳ ಪ್ರಕಾರ, ಈ ಸಂಚಿನಲ್ಲಿ ಅಮೆರಿಕದಲ್ಲಿ ಹಂತಕರನ್ನು ನೇಮಿಸುವುದು, ಸೂಕ್ಷ್ಮ ದಾಖಲೆಗಳನ್ನು ಕದಿಯುವುದು, ಪ್ರತಿಭಟನೆಗಳನ್ನು ಆಯೋಜಿಸುವುದು ಹಾಗೂ ರಾಜಕೀಯ ನಾಯಕರ ಹತ್ಯೆಗೆ ಯೋಜನೆ ರೂಪಿಸುವುದು ಸೇರಿತ್ತು. ಆದರೆ ಮರ್ಚೆಂಟ್ ಸಂಪರ್ಕಿಸಿದ ವ್ಯಕ್ತಿಗಳು ನಿಜವಾಗಿ ಎಫ್‌ಬಿಐ ಅಂಡರ್‌ಕವರ್ ಏಜೆಂಟ್‌ಗಳು ಆಗಿದ್ದರಿಂದ ಈ ಯೋಜನೆ ಮುಂದುವರಿಯಲಿಲ್ಲ.

ಮರ್ಚೆಂಟ್ ಹೇಳುವಂತೆ, ಯಾರನ್ನಾದರೂ ನೇರವಾಗಿ ಕೊಲ್ಲಲು ಸ್ಪಷ್ಟ ಆದೇಶ ಬಂದಿರಲಿಲ್ಲ. ಆದರೆ ಟೆಹರಾನ್‌ನಲ್ಲಿ ನಡೆದ ಸಭೆಗಳಲ್ಲಿ ತನ್ನನ್ನ ಸಂಪರ್ಕಿಸಿದ ಇರಾನ್‌ನ ವ್ಯಕ್ತಿ ಟ್ರಂಪ್, ಬೈಡನ್ ಹಾಗೂ ನಿಕ್ಕಿ ಹ್ಯಾಲಿ ಅವರ ಹೆಸರನ್ನು ಉಲ್ಲೇಖಿಸಿದ್ದಾಗಿ ಹೇಳಿದ್ದಾನೆ.

ಅಮೆರಿಕ–ಇರಾನ್ ಉದ್ವಿಗ್ನತೆ

ಈ ಪ್ರಕರಣದ ವಿಚಾರಣೆ ನಡೆಯುತ್ತಿರುವ ಸಮಯದಲ್ಲೇ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧದಿಂದ ಮಧ್ಯ ಏಷ್ಯಾದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಅಮೆರಿಕ ಮತ್ತು ಇಸ್ರೇಲ್ ಇರಾನ್ ವಿರುದ್ಧ ಬಾಂಬ್ ದಾಳಿಗಳನ್ನು ನಡೆಸಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.

ಖಮೇನಿ ಹತ್ಯೆ ಖಂಡಿಸಿ ಪ್ರತಿಭಟಿಸಿದ ಕಾಂಗ್ರೆಸ್‌ ಶಾಸಕನಿಗೆ ಈಗ ಸಂಕಷ್ಟ

ಅಮೆರಿಕ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್‌ಸೆತ್ ಹೇಳುವಂತೆ, 2024ರಲ್ಲಿ ಟ್ರಂಪ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಇರಾನಿನ ರಹಸ್ಯ ಘಟಕದ ನಾಯಕರನ್ನು ಅಮೆರಿಕ ನಡೆಸಿದ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ. ಈ ಘಟನೆಗಳೇ ಇಂದಿನ ಸಂಧಿಗ್ಧ ಪರಿಸ್ಥಿತಿಗೆ ಕಾರಣ ಎಂದು ಟ್ರಂಪ್ ಆಡಳಿತ ಹೇಳಿದೆ.

ರೆವಲ್ಯೂಷನರಿ ಗಾರ್ಡ್ಸ್ ಸಂಪರ್ಕ ಆರೋಪ

ಪ್ರಾಸಿಕ್ಯೂಟರ್‌ಗಳ ಪ್ರಕಾರ, ಮರ್ಚೆಂಟ್ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ (IRGC) ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿದ್ದ. ಅಮೆರಿಕದ ಡ್ರೋನ್ ದಾಳಿಯಲ್ಲಿ 2020ರಲ್ಲಿ ಹತ್ಯೆಗೀಡಾದ ಮೇಜರ್ ಜನರಲ್ ಕಾಸಿಂ ಸುಲೈಮಾನಿ ಸಾವಿಗೆ ಪ್ರತೀಕಾರ ತೀರಿಸಲು ಈ ಸಂಘಟನೆ ಹಲವು ವರ್ಷಗಳಿಂದ ಯೋಜನೆ ರೂಪಿಸುತ್ತಿತ್ತು ಎಂದು ಆರೋಪಿಸಲಾಗಿದೆ.

ವಿಚಾರಣೆ ವೇಳೆ ಮರ್ಚೆಂಟ್‌ನ ಸಾಮಾಜಿಕ ಜಾಲತಾಣ ಖಾತೆಯಿಂದ ಪಡೆದ ಕೆಲವು ಚಿತ್ರಗಳನ್ನು ನ್ಯಾಯಪೀಠಕ್ಕೆ ತೋರಿಸಲಾಗಿದ್ದು, ಅವುಗಳಲ್ಲಿ ಟ್ರಂಪ್ ವಿರುದ್ಧ ಅವಮಾನಕಾರಿ ಚಿತ್ರಗಳೂ ಇದ್ದವು ಎಂದು ಪ್ರಾಸಿಕ್ಯೂಟರ್‌ಗಳು ಹೇಳಿದ್ದಾರೆ.

ಇರಾನ್- ಇಸ್ರೇಲ್-ಅಮೆರಿಕ ಯುದ್ಧಕ್ಕೆ ಸದ್ಯದಲ್ಲೇ ಪಾಕಿಸ್ತಾನ ಪ್ರವೇಶ? ಕಾರಣ ಇದು

ಪಾಕಿಸ್ತಾನ ಮೂಲದ ಉದ್ಯಮಿ

47 ವರ್ಷದ ಮರ್ಚೆಂಟ್ ತನ್ನನ್ನು ಅನುಭವಿ ಉದ್ಯಮಿ ಎಂದು ಹೇಳಿಕೊಂಡಿದ್ದಾನೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಿದ ಬಳಿಕ ಬಾಳೆಹಣ್ಣು ರಫ್ತು, ಕಾರು ಮಾರಾಟ ಮತ್ತು ಗ್ಲಾಸ್ ಫೈಬರ್ ಇನ್ಸುಲೇಶನ್ ಆಮದು ಸೇರಿದಂತೆ ಹಲವು ವ್ಯವಹಾರ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಅಲ್ಲದೇ ಇತನಿಗೆ ಇಬ್ಬರು ಹೆಂಡತಿಯರು ಹಾಗೂ ಐದು ಮಕ್ಕಳಿದ್ದು, ಒಂದು ಕುಟುಂಬ ಪಾಕಿಸ್ತಾನ ಮತ್ತು ಮತ್ತೊಂದು ಕುಟುಂಬ ಇರಾನ್‌ನಲ್ಲಿ ವಾಸಿಸುತ್ತಿದೆ ಎಂದು ತಿಳಿದುಬಂದಿದೆ.

ಮರ್ಚೆಂಟ್ ಹೇಳುವಂತೆ, 2022ರ ಕೊನೆಯಲ್ಲಿ ಅವನು ಇರಾನಿನ ಅಧಿಕಾರಿಗಳ ಸಂಪರ್ಕಕ್ಕೆ ಬಂದನು. ಮೊದಲಿಗೆ ‘ಹವಾಲಾ’ ವ್ಯವಸ್ಥೆಯ ಮೂಲಕ ಹಣ ವರ್ಗಾವಣೆ ಮಾಡುವ ಕೆಲಸ ನೀಡಿದ್ದರು. ನಂತರ ಈ ಸಂಪರ್ಕಗಳು ನಿಧಾನವಾಗಿ ರಾಜಕೀಯ ಹಾಗೂ ರಹಸ್ಯ ಕಾರ್ಯಾಚರಣೆಗಳ ಕಡೆಗೆ ತಿರುಗಿತು ಎಂದು ಹೇಳಿದ್ದಾನೆ.

ಅಮೆರಿಕ ಪ್ರವೇಶ ಮತ್ತು ಬಂಧನ

2024ರ ಏಪ್ರಿಲ್‌ನಲ್ಲಿ ಮರ್ಚೆಂಟ್ ಅಮೆರಿಕಕ್ಕೆ ಪ್ರಯಾಣಿಸಿ ಟೆಕ್ಸಾಸ್‌ನ ಹೂಸ್ಟನ್‌ಗೆ ಬಂದಿದ್ದ. ಆಗಲೇ ಅವನ ಚಟುವಟಿಕೆ ಅಮೆರಿಕ ಅಧಿಕಾರಿಗಳ ಗಮನಕ್ಕೆ ಬಂದಿದ್ದವು. ವಲಸೆ ಅಧಿಕಾರಿಗಳು ಅವನನ್ನು ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿ ಅವನ ಬಳಿ ಇದ್ದ ವಸ್ತುಗಳನ್ನು ಪರಿಶೀಲಿಸಿದ್ದರು. 2024ರ ಜುಲೈ 12ರಂದು ಟೆಕ್ಸಾಸ್‌ನ ರಿಚ್ಮಂಡ್‌ನಲ್ಲಿ ಅವನನ್ನು ಬಂಧಿಸಿ ನಂತರ ನ್ಯೂಯಾರ್ಕ್‌ಗೆ ಕರೆದೊಯ್ಯಲಾಗಿತ್ತು.

ಬಂಧನದ ಬಳಿಕ ತಾನು ಅಮೆರಿಕದ ಅಧಿಕಾರಿಗಳೊಂದಿಗೆ ಸಹಕರಿಸಲು ಪ್ರಯತ್ನಿಸಿದ್ದೆ ಮತ್ತು ಗ್ರೀನ್ ಕಾರ್ಡ್ ಪಡೆಯುವ ಆಸೆಯೂ ಇತ್ತು ಎಂದು ಮರ್ಚೆಂಟ್ ಹೇಳಿಕೊಂಡಿದ್ದಾನೆ. ಆದರೆ ಪ್ರಾಸಿಕ್ಯೂಟರ್‌ಗಳು ಈ ವಾದಗಳನ್ನು ತಳ್ಳಿ ಹಾಕಿದ್ದು, ಅವನ ಮೇಲೆ ಗಂಭೀರ ಭಯೋತ್ಪಾದನೆ ಆರೋಪ ಹೊರಿಸಿದ್ದಾರೆ.