ಬೆಂಗಳೂರು: ಹೆಗಡೆ ನಗರದ ಜಾಮೀಯ ಮೊಹಮ್ಮದೀಯ ಮಂಸೂರ ಆಡಳಿತ ಮಂಡಳಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಾಮರ್ ಇಂಟರ್‌ನ್ಯಾಷನಲ್ ಇಸ್ಲಾಮಿಕ್ ಶಾಲೆ ನಡೆಸುತ್ತಿದ್ದು, ಈ ಶಿಕ್ಷಣ ಸಂಸ್ಥೆಯ ಮಾನ್ಯತೆ ರದ್ದಾಗಿದೆ. ಈ ಶಾಲೆಯಲ್ಲಿ 2026-27 ನೇ ಸಾಲಿಗೆ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳದಂತೆ ವಿದ್ಯಾರ್ಥಿಗಳು, ಪೋಷಕರು, ಕನ್ನಡ ಸಂಘಟನೆಗಳು ಇಂದು ಪ್ರತಿಭಟನೆ ನಡೆಸಿದವು.
ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಬಾರದು. ಶಾಲೆ ಮುಚ್ಚುವಂತೆ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ನೆಲದ ಕಾನೂನಿಗೆ ಗೌರವ ನೀಡಬೇಕು. ಮುಂದಿನ ಆದೇಶದವರೆಗೆ ಶಾಲಾ ದಾಖಲಾತಿ ನಡೆಸಬಾರದು ಎಂದು ಹೈಕೋರ್ಟ್ ಆದೇಶವನ್ನು ಪರಿಪಾಲಿಸಬೇಕು. ಇಲ್ಲಿ ಮಕ್ಕಳ ಶಿಕ್ಷಣ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಶಾಲೆಯ ಮುಂಭಾಗ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಹಮೀದ್ ಪಾಷಾ ಮಾತನಾಡಿ, ಶಿಕ್ಷಣ ಸಂಸ್ಥೆ ಮುಚ್ಚುವಂತೆ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಇಷ್ಟಾದರೂ ಸರ್ಕಾರದ ನಿಯಮಗಳು, ನ್ಯಾಯಾ ಲಯದ ಆದೇಶಗಳನ್ನು ಧಿಕ್ಕರಿಸಿ ಶಾಲಾ ದಾಖಲಾತಿ ಮಾಡಿಕೊಳ್ಳುತ್ತಿದೆ. ಇಲ್ಲಿ ಮಕ್ಕಳ ಹಕ್ಕು ಗಳನ್ನು ದಮನ ಮಾಡಲಾಗುತ್ತಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಈ ನಕಲಿ ಶಿಕ್ಷಣ ಸಂಸ್ಥೆ 10 ಲಕ್ಷ ರೂಪಾಯಿ ಅನುದಾನ ಪಡೆದು ಬೊಕ್ಕಸಕ್ಕೆ ಭಾರೀ ವಂಚನೆ ಮಾಡಿದೆ. "ದಿ ಅಲ್ ಜಾಮೀಯ ಮೊಹ್ಮದೀಯಾ ಎಜುಕೇಷನ್ ಸೊಸೈಟಿ ಎಂದು ಮುಂಬೈನ ನೋಂದಾಯಿತ ಸಂಖ್ಯೆ ಯನ್ನು ತೋರಿಸಿಕೊಂಡು ಸಾರ್ವಜನಿಕರಿಗೆ ಮತ್ತು ಸರ್ಕಾರಕ್ಕೆ ತೆರಿಗೆ ವಂಚಿಸುತ್ತಿದೆ. ಈ ಶಾಲೆಯು ನೋಂದಾಯಿತವಲ್ಲದ ಮದರಸದಿಂದ ನಡೆಯುತ್ತಿದ್ದು, ಇದಕ್ಕೆ ಅನುದಾನ ನೀಡಿರುವುದು ಅಕ್ಷಮ್ಯ ಅಪರಾಧ ಎಂದರು.
ಈ ಶಾಲೆ ಒಂದು ಸಂಸ್ಥೆ. ಟ್ರಸ್ಟ್ ಅಲ್ಲ. ಕರ್ನಾಟಕ ಶಿಕ್ಷಣ ಕಾಯ್ದೆ 1983 ಮತ್ತು ಮಕ್ಕಳ ಹಕ್ಕುಗಳ ಶಿಕ್ಷಣ ಕಾಯ್ದೆ 2009 ರ ಪ್ರಕಾರ ನೋಂದಾಯಿತ ಹೆಸರಿನಲ್ಲಿ ನಾಮಫಲಕ ಅಳವಡಿಸುವುದು ಕಡ್ಡಾಯವಾಗಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಶಾಲಾ ರಶೀದಿಯಲ್ಲಿ ಜಾಮೀಯಾ ಮೊಹಮ್ಮ ದೀಯ ಮಂನ್ಸೂರ ರೆಸಿಡೆನ್ಸಿಯಲ್ ಶಾಲೆ (ನಿರ್ವಹಣೆ: “ಜಾಮೀಯ ಮೊಹಮ್ಮದೀಯಾ ಎಜುಕೇಷನ್ ಸೊಸೈಟಿ ಮುಂಬೈ"). ಮತ್ತು ಸಾಮರ್ ಇಂಟರ್‌ನ್ಯಾಷನಲ್ ಇಸ್ಲಾಮಿಕ್ ಶಾಲೆ (ನಿರ್ವಹಣೆ: "ಅಲ್ ಜಾಮೀಯ ಮೊಹಮ್ಮದೀಯಾ ಎಜುಕೇಷನ್ ಸೊಸೈಟಿ ಮುಂಬೈ") ಎಂದು ನಮೂದಿಸಿದ್ದಾರೆ ಎಂದರು.
ಶಾಲೆ ನಡೆಸುತ್ತಿರುವ ಜಾಗದ ವ್ಯಾಜ್ಯ ಕೂಡ ನ್ಯಾಯಾಲಯದಲ್ಲಿದೆ. ವಿವಾದಿತ ಹಿನ್ನೆಲೆಯ ಶಾಲೆ ಮತ್ತು ಆಡಳಿತ ಮಂಡಳಿಯಿಂದ ಉತ್ತಮ ಶಿಕ್ಷಣ, ಮಕ್ಕಳ ಹಕ್ಕುಗಳ ರಕ್ಷಣೆ ಸಾಧ್ಯವಿಲ್ಲ. ಮಾನ್ಯತೆ ಯನ್ನು ನೋಂದಾಯಿತವಲ್ಲದ ಸಾರ್ವಜನಿಕ ಸೊಸೈಟಿ ಹೆಸರಿನಲ್ಲಿ ಪಡೆದಿದ್ದು, ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿದೆ. ಇಲ್ಲಿ ಮಕ್ಕಳ ಶೋಷಣೆ ನಡೆಯುತ್ತಿದ್ದು, ಅವರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ. ತೆರಿಗೆ ವಂಚನೆ, ಭೂಕಬಳಿಕೆ ಮತ್ತು ಇತರೆ ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿರುವ ಈ ಶಾಲೆಯ ಮೇಲೆ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಹಮೀದ್ ಪಾಷಾ ಆಗ್ರಹಿಸಿದರು.