ವಿಧಾನ ಪರಿಷತ್ ಚುನಾವಣೆ; ಕಾಂಗ್ರೆಸ್‌ನಿಂದ ಐವರು ಅಭ್ಯರ್ಥಿಗಳು ಕಣಕ್ಕೆ: ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ?
CM DK Shivakumar: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಖರ್ಗೆ ಬಳಿಕ ವಿಧಾನ ಪರಿಷತ್‌ಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದ್ದಾರೆ.
ಸಿಎಂ ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ). -
ಬೆಂಗಳೂರು, ಜೂ. 4: ʼʼವಿಧಾನ ಪರಿಷತ್‌ಗೆ ನಾವು ಐವರು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತಿದ್ದು, ಈಗಾಗಲೇ ನಾಲ್ವರು ಅಭ್ಯರ್ಥಿಗಳನ್ನು ಘೋಷಿಸಿದ್ದು, ಐದನೇ ಅಭ್ಯರ್ಥಿ ನಾಳೆ ಪ್ರಕಟಿಸಲಾಗುವುದು" ಎಂದು ಸಿಎಂ ಡಿ.ಕೆ. ಶಿವಕುಮಾರ್ (CM DK Shivakumar) ತಿಳಿಸಿದರು. ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಗುರುವಾರ ಅವರು ಪ್ರತಿಕ್ರಿಯೆ ನೀಡಿದರು.
ಮುಖ್ಯಮಂತ್ರಿಯಾಗಿ ಮೊದಲ ದಿನದ ಅನುಭವ ಹೇಗಿತ್ತು ಎಂದು ಕೇಳಿದಾಗ, ‘ʼನಾನು ಅಧಿಕಾರಿಗಳ ಜತೆಗೆ ಸಭೆ ಮಾಡಿದ್ದೇನೆ. ಕಾಂಗ್ರೆಸ್ ನನ್ನ ನೇತೃತ್ವದಲ್ಲಿ ಘೋಷಿಸಿದ ಭರವಸೆಗಳನ್ನು ಜನರಿಗೆ ಈಡೇರಿಸಿದ್ದೇವೆ. ರಾಜ್ಯದ ಜನ ನನ್ನ ಮೇಲೆ ಅಪಾರ ವಿಶ್ವಾಸ ಇಟ್ಟಿದ್ದು, ಮೊದಲ ದಿನದಿಂದ ನಿರೀಕ್ಷೆಗಳಿವೆ. ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನನ್ನನ್ನು ಪ್ರಶ್ನೆ ಮಾಡಿದಾಗ, ನನ್ನ ಶಾಸಕರ ಸಂಖ್ಯಾಬಲ 136 ಎಂದು ಹೇಳಿದ್ದೆʼ’ ಎಂದು ತಿಳಿಸಿದರು.
ನಾಳೆ ಮಲ್ಲಿಕಾರ್ಜುನ ಖರ್ಗೆ ಅವರಿಂದ ನಾಮಪತ್ರ ಸಲ್ಲಿಕೆ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸಲಿದ್ದಾರೆ. ಖರ್ಗೆ ಅವರ ನಾಮಪತ್ರ ಸಲ್ಲಿಕೆ ನಂತರ ಇತರ ಅಭ್ಯರ್ಥಿಗಳು ವಿಧಾನ ಪರಿಷತ್‌ಗೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆʼʼ ಎಂದು ಮಾಹಿತಿ ನೀಡಿದರು.
ಹರಿಪ್ರಸಾದ್ ಅವರಿಗೆ ಅಪಾರ ಅನುಭವವಿದೆ
ಈಗ ಕಾಂಗ್ರೆಸ್‌ನಲ್ಲಿ ಡಿಕೆ ಹಾಗೂ ಬಿಕೆ ಜೋಡಿ ನೇತೃತ್ವವಿದೆ ಎಂದು ಕೇಳಿದಾಗ, ‘ʼಅವರು ಕಾಂಗ್ರೆಸ್‌ನ ಹಿರಿಯ ಹಾಗೂ ನಿಷ್ಠಾವಂತ ನಾಯಕರು, ಕಾರ್ಯಕರ್ತರು. ನಾಲ್ಕು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದು, ಪ್ರಧಾನ ಕಾರ್ಯದರ್ಶಿಯಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ವಿಧಾನ ಪರಿಷತ್ ಸದಸ್ಯರಾಗಿದ್ದು, ನಾಳೆ ಕೂಡ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿದ್ದು, ಅಪಾರ ಅನುಭವ ಹೊಂದಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ನಾವೆಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡುತ್ತೇವೆ. ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತರುವುದು ನಮ್ಮ ಕರ್ತವ್ಯ. ನಮ್ಮ ಆಡಳಿತವನ್ನು ರಾಜ್ಯದ ಜನ ಗೌರವಿಸಿ, ಬೆಂಬಲಿಸುವ ವಿಶ್ವಾಸವಿದೆ. ಉತ್ತಮ ಆಡಳಿತ ನೀಡುವುದು ನಮ್ಮ ಗುರಿʼʼ ಎಂದರು.
ಹೊರ ರಾಜ್ಯದವರಿಗಿಲ್ಲ ಉಚಿತ ಬಸ್ ಪಾಸ್
ವಿದ್ಯಾರ್ಥಿಗಳಿಗೆ ಉಚಿತ ಪಾಸ್ ವಿತರಣೆ ಬಗ್ಗೆ ಕೇಳಿದಾಗ, ʼʼನಾವು ನಮ್ಮ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುತ್ತಿದ್ದು, ಹೊರಗಿನವರಿಗೆ ಹೇಗೆ ಉಚಿತ ಬಸ್ ಪಾಸ್ ನೀಡಲು ಸಾಧ್ಯ? ನಮ್ಮ ಯೋಜನೆಗಳು ಕೇವಲ ಕನ್ನಡಿಗರಿಗೆ ಮಾತ್ರ. ಬೇರೆ ರಾಜ್ಯದವರಿಗೆ ನೀಡಲು ಆಗುವುದಿಲ್ಲ. ನೀವು ಕೇವಲ ಮಹಿಳೆಯರಿಗೆ ಮಾತ್ರ ಉಚಿತ ಬಸ್ ಪ್ರಯಾಣ ಕಲ್ಪಿಸಿದ್ದೀರಿ ಎಂದು ವಿದ್ಯಾರ್ಥಿಗಳು ಪ್ರಶ್ನೆ ಮಾಡುತ್ತಿದ್ದರು. ಈಗ ಒಂದನೇ ತರಗತಿಯಿಂದ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಉಚಿತ ಪಾಸ್ ನೀಡಲಾಗುವುದುʼʼ ಎಂದು ಹೇಳಿದರು.
ರಾಹುಲ್ ಗಾಂಧಿ ಆಗಮಿಸುತ್ತಿರುವುದರಿಂದ ಕಾಂಗ್ರೆಸ್ ಭವನ ಶಂಕುಸ್ಥಾಪನೆ ಕಾರ್ಯಕ್ರಮ ಮಾಡಲಾಗುವುದೇ ಎಂದು ಕೇಳಿದಾಗ, ʼʼಈ ಕಾರ್ಯಕ್ರಮವನ್ನು ಬೇರೊಂದು ದಿನ ನಿಗದಿ ಮಾಡಲಾಗುವುದು. ಸಮಯದ ಕೊರತೆಯಿಂದ ನಾವು ಈ ಹಿಂದೆ ನಿಗದಿ ಮಾಡಿದ ಕಾರ್ಯಕ್ರಮ ಮುಂದೂಡಿದ್ದೇವೆʼʼ ಎಂದರು.
ಎಸ್‌ಐಆರ್ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಂಡ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಭಾನುವಾರ ಕನಕಪುರ ಭೇಟಿ
ʼʼನಾನು ಭಾನುವಾರ (ಜೂನ್ 7) ಕನಕಪುರಕ್ಕೆ ಭೇಟಿ ನೀಡುತ್ತಿದ್ದು, ಬೆಳಗ್ಗೆಯಿಂದ ರಾತ್ರಿವರೆಗೂ 20 ಕಡೆಗಳಿಗೆ ತೆರಳುತ್ತೇನೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಜನರನ್ನು ಅಲ್ಲೇ ಭೇಟಿ ಮಾಡುವೆ. ಅಲ್ಲಿಂದ ಅನೇಕರು ಬಂದು ಇಲ್ಲಿ ಕಾಯುವುದು ಬೇಡ. ನಾನೇ ನಿಮ್ಮನ್ನು ಭೇಟಿ ಮಾಡಲು ಬರುತ್ತೇನೆ. ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ನಾನು ಯಾರನ್ನು ಭೇಟಿ ಮಾಡಲು ಆಗುವುದಿಲ್ಲ. 2 ದಿನ ಕಾಲಾವಕಾಶ ನೀಡಿ. ನನಗೆ ಸಹಕಾರ ನೀಡಿ ಎಂದು ನನ್ನ ಜಿಲ್ಲೆಯ ಜನರಿಗೆ ಮನವಿ ಮಾಡುತ್ತೇನೆʼʼ ಎಂಬುದಾಗಿ ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.