ಬೆಂಗಳೂರು: ಯುಎಸ್ ಮೂಲದ ತಂತ್ರಜ್ಞಾನ ಸಂಸ್ಥೆ ಮಾಡರ್, ರಾಜ್ಯದ ವಿವಿಧ ಜಿಲ್ಲೆ ಗಳಲ್ಲಿ ಮುಂದಿನ 5 ವರ್ಷಗಳಲ್ಲಿ ಸುಮಾರು 5,000 ಸಸಿಗಳನ್ನು ನೆಡುವ ಅಭಿಯಾನ ಕೈಗೊಳ್ಳಲಿದೆ. ಬೆಂಗಳೂರಿನಲ್ಲಿ ಕಾರ್ಯಚಟುವಟಿಕೆ ಹೊಂದಿರುವ ಕಂಪನಿ, ಈ ಮೂಲಕ ರಾಜ್ಯದಲ್ಲಿ ಹಸಿರು ಸಂಪತ್ತನ್ನು ಹೆಚ್ಚಿಸುವ ಗುರಿ ಹೊಂದಿದೆ.
ಈ ಮೂಲಕ ತನ್ನ ಸಮುದಾಯಗಳು ಮತ್ತು ಉದ್ಯೋಗಿಗಳನ್ನು ಪರಿಸರ ಉಳಿಸುವ ಕಾರ್ಯದಲ್ಲಿ ತೊಡಗಿಸಲಿದೆ. ‘ಪ್ರಾರಂಭಿಕ ಹಂತದಲ್ಲಿ ಚಿಕ್ಕಮಗಳೂರು, ಕೊಪ್ಪಳ ಮತ್ತು ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಕಡೆ ಗಿಡ ನೆಡುವಿಕೆಯನ್ನು ಕೈಗೊಳ್ಳಲಾಗುವುದು. ಜುಲೈ ವೇಳೆಗೆ ಈ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆಯಿದೆ’ ಎಂದು ಮಾಡರ್‌ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎರಿಕ್ ಆಂಡರ್ಸನ್ ತಿಳಿಸಿದ್ದಾರೆ.
2021ರಲ್ಲಿ ಸ್ಥಾಪನೆಯಾದ ಮಾಡರ್, ಜಾಗತಿಕವಾಗಿ 7,400 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದು, 5,000 ಕ್ಕೂ ಹೆಚ್ಚು ಜನ ಭಾರತದಲ್ಲಿ ನೆಲೆಸಿದ್ದಾರೆ.