ಬೆಂಗಳೂರು: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ (Mangaluru cooker Blast Case) ಅಪರಾಧಿ ಮೊಹಮ್ಮದ್ ಶಾರೀಕ್ಗೆ (Mohammad Shariq) 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 94 ಸಾವಿರ ರೂಪಾಯಿ ದಂಡ ವಿಧಿಸಿ ಎನ್ಐಎ ವಿಶೇಷ ನ್ಯಾಯಾಲಯ ಇಂದು ತೀರ್ಪು ನೀಡಿದೆ. 2022ರ ನವೆಂಬರ್ 19ರಂದು ಮಂಗಳೂರಿನ ಕಂಕನಾಡಿ ಬಳಿ ಆಟೋರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡಿತ್ತು. ಆರೋಪಿ ಶಾರಿಕ್ ಬಾಂಬ್ ಹೊತ್ತು ಸಾಗಿಸುತ್ತಿದ್ದಾಗಲೇ ಅದು ಆಕಸ್ಮಿಕವಾಗಿ ಸ್ಫೋಟಗೊಂಡಿದ್ದರಿಂದ ಭಾರಿ ಅನಾಹುತ ತಪ್ಪಿತ್ತು. ಘಟನೆಯಲ್ಲಿ ಶಾರೀಕ್ ಮತ್ತು ಆಟೋ ಚಾಲಕ ಗಾಯಗೊಂಡಿದ್ದರು.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಎನ್‌ಐಎ ವಿಶೇಷ ನ್ಯಾಯಾಲಯವು, ಆರೋಪಿ ವಿರುದ್ಧದ ಸಾಕ್ಷ್ಯಗಳನ್ನು ಪುರಸ್ಕರಿಸಿದೆ. ಶಾರೀಕ್ ವಿರುದ್ಧ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಶಿಕ್ಷೆ ಪ್ರಕಟಿಸಲಾಗಿದೆ. ಐಪಿಸಿ ಸೆಕ್ಷನ್ 121ಎ (ಭಾರತ ಸರ್ಕಾರದ ವಿರುದ್ಧ ಯುದ್ಧ ಸಾರುವ ಸಂಚು), ಐಪಿಸಿ ಸೆಕ್ಷನ್ 122 (ಯುದ್ಧ ಮಾಡುವ ಉದ್ದೇಶದಿಂದ ಶಸ್ತ್ರಾಸ್ತ್ರ ಸಂಗ್ರಹಣೆ), ಐಪಿಸಿ ಸೆಕ್ಷನ್ 326 (ಮಾರಕ ಆಯುಧಗಳಿಂದ ಗಂಭೀರ ಗಾಯಗೊಳಿಸುವುದು), ಯುಎಪಿಎ (UAPA-ಭಯೋತ್ಪಾದನಾ ಚಟುವಟಿಕೆಗಳ ತಡೆ ಕಾಯ್ದೆಯಡಿ ಕಠಿಣ ಶಿಕ್ಷೆ) ಕಾಯ್ದೆಯಡಿ ಅಪರಾಧಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.
ಏನಿದು ಪ್ರಕರಣ?
2022ರ ನ.19ರಂದು ಸಂಜೆ ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಟೋದಲ್ಲಿ ಶಾರೀಕ್ ತೆರಳುವಾಗ (ಐಇಡಿ) ಕುಕ್ಕರ್ ಸ್ಫೋಟಗೊಂಡಿತ್ತು. ಸ್ಫೋಟದ ರಭಸಕ್ಕೆ ಉಗ್ರನ ಜತೆ ಆಟೋ ಚಾಲಕ ಪುರುಷೋತ್ತಮ್ ಪೂಜಾರಿ ಅವರು ಸಹ ಗಂಭೀರ ಗಾಯಗೊಂಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಶಂಕಿತನನ್ನು ಬಂಧಿಸಿದ್ದರು.
ಕೃತ್ಯದ ಹಿಂದೆ ಐಸಿಸ್ ನಂಟು ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ (ಯುಎಪಿಎ) ಪ್ರಕರಣ ದಾಖಲಿಸಿ ಎನ್ಐಎ ತನಿಖೆ ಕೈಗೊಂಡಿತ್ತು. ಕೃತ್ಯದ ಕುರಿತು ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ನ್ಯಾ. ಕೆಂಪರಾಜು ಅವರು ಅಪರಾಧಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹94 ಸಾವಿರ ದಂಡ ವಿಧಿಸಿದ್ದಾರೆ.
ಶಿವಮೊಗ್ಗದ ತೀರ್ಥಹಳ್ಳಿ ಮೂಲದ ಶಾರೀಕ್, ಐಸಿಸ್ ಹಾಗೂ ಸಿಮಿ ಉಗ್ರ ಸಂಘಟನೆಗಳಿಂದ ಪ್ರೇರಿತನಾಗಿದ್ದ. ಶಿವಮೊಗ್ಗ ಐಸಿಸ್ ಮಾಡ್ಯುಲ್ ಸದಸ್ಯನಾಗಿದ್ದ. ಈತನ ವಿರುದ್ಧ 2020ರಲ್ಲಿ ಮಂಗಳೂರಿನ ಗೋಡೆ ಬರಹ ಹಾಗೂ ಶಿವಮೊಗ್ಗ ತುಂಗಾ ನದಿ ತೀರದಲ್ಲಿ ನಡೆಸಿದ್ದ ಪ್ರಾಯೋಗಿಕ ಬಾಂಬ್ ಸ್ಫೋಟ ಪ್ರಕರಣಗಳ ಆರೋಪಿಯಾಗಿದ್ದ. ವಿಚಾರಣೆ ವೇಳೆ ತಾನು ನಿರಾಪರಾಧಿ ಎಂದು ಹೇಳಿದ್ದ. ಬಳಿಕ 2025ರ ಡಿಸೆಂಬರ್ ನಲ್ಲಿ ನ್ಯಾಯಾಲಯಕ್ಕೆ ತಪ್ಪೊಪ್ಪಿಗೆ ಅರ್ಜಿ ಸಲ್ಲಿಸಿದ್ದ.
ಶಾರೀಕ್ ತಪ್ಪೊಪ್ಪಿ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿ ಅಪರಾಧಿಗೆ ಐಪಿಸಿ ಹಾಗೂ ಯುಎಪಿಎ ಕಾಯ್ದೆಗಳ ಸೆಕ್ಷನ್ ನಡಿ 10 ವರ್ಷ ಕಠಿಣ ಸಜೆ ಪ್ರಕಟಿಸಿದೆ. 2022ರಿಂದ ಜೈಲಿನಲ್ಲಿರುವ ಶಾರೀಕ್, ಈಗಾಗಲೇ ಮೂರುವರೆ ವರ್ಷ ಸಜೆ ಅನುಭವಿಸಿದ್ದಾನೆ. ಬಾಕಿ ಏಳೂವರೆ ವರ್ಷ ಜೈಲಿನಲ್ಲಿ ಇರಬೇಕಿದೆ.
ಪತಿ ಮೇಲೆ ಆ್ಯಸಿಡ್ ಎರಚಿದ ಪತ್ನಿ; ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ
ಧರ್ಮಸ್ಥಳ, ಕದ್ರಿ ಮಂಜುನಾಥ ದೇವಾಲಯ ಸೇರಿ ದಕ್ಷಿಣ ಭಾರತದ ದೇವಾಲಯಗಳಲ್ಲಿ ಬಾಂಬ್ ಸ್ಫೋಟಗೊಳಿಸುವುದು ಶಂಕಿತರ ಉಗ್ರರ ಹುನ್ನಾರವಾಗಿತ್ತು. ಇದೇ ಭಾಗವಾಗಿ ಕುಕ್ಕರ್‌ನಲ್ಲಿ ಐಇಡಿ ಇಟ್ಟು ಟೈಮರ್ ಫಿಕ್ಸ್ ಮಾಡಲಾಗಿತ್ತು. 90 ನಿಮಿಷಗಳ ಫಿಕ್ಸ್ ಮಾಡುವ ಬದಲು 9 ನಿಮಿಷಕ್ಕೆ ತಪ್ಪಾಗಿ ನಿಗದಿಪಡಿಸಿದ್ದರಿಂದ ಆಟೋದಲ್ಲಿ ತೆರಳುವಾಗ ಮಾರ್ಗ ಮಧ್ಯೆ ಸ್ಫೋಟಗೊಂಡಿತ್ತು. ಪ್ರಕರಣದ ಎರಡನೇ ಆರೋಪಿ ಸೈಯದ್ ಯಾಸೀನ್ಅನ್ನು ಬಾಂಬ್ ತಯಾರಿಕೆಗೆ ಅಗತ್ಯವಾದ ಉಪಕರಣಗಳನ್ನು ಪೂರೈಸಿದ ಆರೋಪದಡಿ ಬಂಧಿಸಲಾಗಿತ್ತು.