ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MUDA Scam: ಮುಡಾ ಹಗರಣ; ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ, ಸಚಿವ ಭೈರತಿ ಸುರೇಶ್‌ಗೆ ಇಡಿ ನೋಟಿಸ್​

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ED) ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಸಿದ್ದರಾಮಯ್ಯ ಮತ್ತು ಸಚಿವ ಭೈರತಿ ಸುರೇಶ್ ಅವರಿಗೆ ಸೋಮವಾರ (ಜ. 27) ನೋಟಿಸ್​​ ಜಾರಿ ಮಾಡಿದೆ.

ಮುಡಾ ಹಗರಣ; ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ, ಭೈರತಿ ಸುರೇಶ್‌ಗೆ ಇಡಿ ನೋಟಿಸ್​

ಸಿದ್ದರಾಮಯ್ಯ. -

Ramesh B Ramesh B Jan 27, 2025 11:31 AM

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ED) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಮತ್ತು ಸಚಿವ ಭೈರತಿ ಸುರೇಶ್ ಅವರಿಗೆ ಸೋಮವಾರ (ಜ. 27) ನೋಟಿಸ್​​ ಜಾರಿ ಮಾಡಿದೆ (MUDA Scam). ಇಂದು ಮತ್ತು ನಾಳೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ.

ಇಡಿ ಸಮನ್ಸ್‌ ಪ್ರಶ್ನಿಸಿ ಸಿಎಂ ಪತ್ನಿ ಪಾರ್ವತಿ ಮತ್ತು ಭೈರತಿ ಸುರೇಶ್‌ ಹೈಕೋರ್ಟ್‌ನಲ್ಲಿ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದಾರೆ. ಇದರ ವಿಚಾರಣೆ ಇಂದು ಸಂಜೆ ನಡೆಯಲಿದೆ.

ಏನಿದು ಪ್ರಕರಣ?

ಸಿಎಂ ಸಿದ್ದರಾಮಯ್ಯ ಅವರು ಅಧಿಕಾರ ದುರ್ಬಳಕೆ ಮಾಡಿಕೊಂದು ಮುಡಾ ನಿವೇಶನಗಳನ್ನು ಪತ್ನಿಯ ಹೆಸರಿಗೆ ಮಂಜೂರು ಮಾಡಿಸಿಕೊಂಡಿರುವ ಆರೋಪ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಸೂಚಿಸಬೇಕು ಎಂದು ಕೋರಿ ಮಾಹಿತಿ ಹಕ್ಕು ಕಾರ್ಯಕರ್ತ ಟಿ.ಜೆ.ಅಬ್ರಹಾಂ, ಸ್ನೇಹಮಯಿ ಕೃಷ್ಣ ಹಾಗೂ ಪ್ರದೀಪ್‌ ಕುಮಾರ್‌ ಎಂಬುವವರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದರು. ಅಲ್ಲದೇ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಟಿ.ಜೆ.ಅಬ್ರಹಾಂ, ಸ್ನೇಹಮಯಿ ಕೃಷ್ಣ ಖಾಸಗಿ ದೂರು ಸಲ್ಲಿಸಿದ್ದರು.

ಮುಡಾದಲ್ಲಿ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಅಕ್ರಮವಾಗಿ 14 ನಿವೇಶನಗಳನ್ನು ಪಡೆದಿದ್ದಾರೆ ಎಂಬ ಆರೋಪ ಸಂಬಂಧ ಸಿದ್ದರಾಮಯ್ಯ ಸೇರಿ ಐವರು ಆರೋಪಿಗಳ ವಿರುದ್ಧ ವಿಶೇಷ ತನಿಖಾ ದಳ ಅಥವಾ ಬೇರಾವುದೇ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಸ್ನೇಹಮಯಿ ಕೃಷ್ಣ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದರು.

ಲೋಕಾಯುಕ್ತ ತನಿಖಾ ವರದಿ ಇಂದು ಕೋರ್ಟ್‌ಗೆ ಸಲ್ಲಿಕೆ

ಈ ಮಧ್ಯೆ ಮುಡಾ ಹಗರಣದ ತನಿಖಾ ವರದಿಯನ್ನು ಲೋಕಾಯುಕ್ತ ಅಧಿಕಾರಿಗಳು ಸೋಮವಾರ ಕೋರ್ಟ್‌ಗೆ ಸಲ್ಲಿಸಲಿದ್ದಾರೆ. ಲೋಕಾಯುಕ್ತ ಎಸ್​​ಪಿ ಟಿ.ಜೆ. ಉದೇಶ್ ನೇತೃತ್ವದಲ್ಲಿ ತನಿಖೆ ನಡೆದು ವರದಿ ಸಿದ್ಧಪಡಿಸಲಾಗಿದೆ.

ಈ ಸುದ್ದಿಯನ್ನೂ ಓದಿ: MUDA Scam: ಮುಡಾ ಹಗರಣ; ಇಡಿಯಿಂದ 300 ಕೋಟಿ ರೂ. ಮೌಲ್ಯದ 142 ಸ್ಥಿರಾಸ್ತಿಗಳ ಮುಟ್ಟುಗೋಲು