ಕೆಪಿಎಸ್ಸಿ ಹಗರಣ: ಸಾಹುಕಾರ್ ಸೇರಿ ನಾಲ್ವರ ವಿರುದ್ಧ ಇ.ಡಿ ಚಾರ್ಜ್ಶೀಟ್ ಸಲ್ಲಿಕೆ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನೇಮಕಾತಿ ಹಗರಣದಲ್ಲಿ ಮತ್ತಷ್ಟ ಸ್ಫೋಟಕ ಮಾಹಿತಿಗಳು ಬಹಿರಂಗವಾಗಿವೆ. ಆರೋಪಿಗಳು ಪೆನ್ಡ್ರೈವ್ ಮೂಲಕ ಪಶು ವೈದ್ಯಾಧಿಕಾರಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ್ದು. ವಿಲ್ಲಾದಲ್ಲಿ ಡೀಲ್ ಮಾಡಿದ್ದಾರೆ. ಪ್ರಶ್ನೆಪತ್ರಿಕೆಗಳ ಸೋರಿಕೆ, ಅಭ್ಯರ್ಥಿಗಳಿಗೆ ಉತ್ತರ ಕೀ ವಿತರಣೆ ಹಾಗೂ ಸರಕಾರಿ ಉದ್ಯೋಗ ಕೊಡಿಸುವುದಾಗಿ ಕೋಟ್ಯಂತರ ರುಪಾಯಿ ಹಣ ವಸೂಲಿ ಮಾಡಿದ ಆರೋಪದ ಹಿನ್ನೆಲೆ ಆಯೋಗದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಸೇರಿದಂತೆ ನಾಲ್ವರ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಪ್ರಾಸಿಕ್ಯೂಷನ್ ದೂರು ಸಲ್ಲಿಸಿದೆ.
ಪ್ರಕರಣದಲ್ಲಿ ಒಟ್ಟು 8.69 ಕೋಟಿ ಮೌಲ್ಯದ ಅಕ್ರಮ ಹಣದ ವಹಿವಾಟು ನಡೆದಿರುವುದನ್ನು ತನಿಖೆಯಲ್ಲಿ ಪತ್ತೆಹಚ್ಚಲಾಗಿದೆ. ಶಿವಶಂಕರಪ್ಪ ಸಾಹುಕಾರ್, ಮಾಜಿ ಸದಸ್ಯೆ ಬಿ.ವಿ ಗೀತಾ ಶಿವಮೂರ್ತಿ, ಅಂದಿನ ಪರೀಕ್ಷಾ ನಿಯಂತ್ರಕ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಹಾಗೂ ಬಸವರಾಜ್ ಕನ್ನಾಳೆ ವಿರುದ್ಧ ಹಣ ಅಕ್ರಮ ವರ್ಗಾವಣೆ ತಡೆ ಕಾಯಿದೆಯಡಿ ಪ್ರಕರಣ ದಾಖಲಿಸಿ ಪ್ರಾಸಿಕ್ಯೂಷನ್ ದೂರು ಸಲ್ಲಿಸಲಾಗಿದೆ.
ಪ್ರಾಸಿಕ್ಯೂಷನ್ ದೂರಿನಲ್ಲಿ ಶಿವಶಂಕರಪ್ಪ ಸಾಹುಕಾರ್ಗೆ ಸಂಬಂಧಿಸಿದಂತೆ 4.17 ಕೋಟಿ ರು., ಬಿ.ವಿ ಗೀತಾಗೆ 1.48 ಕೋಟಿ ರು., ಜ್ಞಾನೇಂದ್ರ ಕುಮಾರ್ ಗಂಗ್ವಾರ್ಗೆ 1.52 ಕೋಟಿ ರು. ಹಾಗೂ ಬಸವರಾಜ್ ಕನ್ನಾಳೆಗೆ 1.52 ಕೋಟಿ ರು. ಅಪರಾಧದ ಆದಾಯದ ನಂಟು ಇರುವುದು ಬೆಳಕಿಗೆ ಬಂದಿದೆ. ಕೆಎಎಸ್ ಪರೀಕ್ಷೆಯಲ್ಲಿಯೂ ಅಕ್ರಮ ನಡೆದಿರುವ ಬಗ್ಗೆ ಇ.ಡಿ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: KPSC ಹಗರಣ; IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ವಿರುದ್ದ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ ಸರ್ಕಾರ
ಶಿವಶಂಕರಪ್ಪ ಸಾಹುಕಾರ್ ಸೂಚನೆಯಂತೆ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರು ಆರು ಅಭ್ಯರ್ಥಿಗಳಿಗೆ ಕೀ ಉತ್ತರಗಳನ್ನು ಬಿ.ವಿ ಗೀತಾ ಅವರಿಗೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ತಮಗೆ ಬೇಕಾದ ಅಭ್ಯರ್ಥಿಗೆ ಕೆಎಎಸ್ ಸಂದರ್ಶನದಲ್ಲಿ ಹೆಚ್ಚಿನ ಅಂಕ ಕೊಡಿಸುವ ಭರವಸೆ ನೀಡಲಾಗಿತ್ತು. ಈ ವ್ಯವಹಾರದಲ್ಲಿ ಶಿವಶಂಕರಪ್ಪ ಸಾಹುಕಾರ್ ಒಬ್ಬ ಅಭ್ಯರ್ಥಿಯಿಂದ 20 ಲಕ್ಷದ ಪೈಕಿ 10 ಲಕ್ಷ ಪಡೆದಿದ್ದರೆ, ಬಿ.ವಿ ಗೀತಾ ಮತ್ತೊಬ್ಬ ಅಭ್ಯರ್ಥಿಯಿಂದ 40 ಲಕ್ಷಕ್ಕೆ ಬೇಡಿಕೆ ಇಟ್ಟು, ಜನವರಿ 8 ರಂದು 20 ಲಕ್ಷ ರುಪಾಯಿಯನ್ನು ತಮ್ಮ ಕಾರಿನಲ್ಲಿ ನಗದು ರೂಪದಲ್ಲಿ ಪಡೆದಿದ್ದರು ಎಂದು ಇ.ಡಿ ಆರೋಪಿಸಿದೆ.
ಡೀಲ್ ಬಳಿಕ ಪೆನ್ಡ್ರೈವ್ ನಾಶ, ಮುದ್ರಿತ ಪ್ರಶ್ನೆಪತ್ರಿಕೆ ಬೆಂಕಿಗೆ: ಸುಟ್ಟುಹಾಕಿದ್ದರು ಈ ಪ್ರಶ್ನೆಪತ್ರಿಕೆ ಸೋರಿಕೆಗಾಗಿ ಬಸವರಾಜ ಕನ್ನಾಳೆ ಒಟ್ಟು 10 ಅಭ್ಯರ್ಥಿಗಳಿಂದ 3.20 ಕೋಟಿ ರು. ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಪೈಕಿ ಒಟ್ಟು 1.52 ಕೋಟಿ ರು. ತನಕ ಅವರು ವಸೂಲಿ ಮಾಡಿದ್ದರು. ಈ 1.52 ಕೋಟಿ ರೂಪಾಯಿಗಳಲ್ಲಿ 92 ಲಕ್ಷ ರು. ಬ್ಯಾಂಕಿಂಗ್ ಮಾರ್ಗಗಳ ಮೂಲಕ ಹಾಗೂ 60 ಲಕ್ಷ ರು. ನಗದು ರೂಪದಲ್ಲಿ ಸ್ವೀಕರಿಸಲಾಗಿತ್ತು.
ಉಳಿದ ಬಾಕಿ ಹಣದ ಭದ್ರತೆಗಾಗಿ ಕನ್ನಾಳೆ ಅಭ್ಯರ್ಥಿಗಳಿಂದ ಸಹಿ ಮಾಡಿದ ಖಾಲಿ ಚೆಕ್ಗಳು ಮತ್ತು ಪ್ರಾಮಿಸರಿ ನೋಟ್ ಗಳನ್ನು ಪಡೆದುಕೊಂಡಿದ್ದರು. ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ತೋರಿಸಿ ಹಣ ಪಡೆದ ಬಳಿಕ, ಸಾಕ್ಷ್ಯ ಉಳಿಯದಂತೆ ನೋಡಿಕೊಳ್ಳಲು ಬಸವರಾಜ ಕನ್ನಾಳೆ ಆ ಪೆನ್ಡ್ರೈವ್ ಅನ್ನು ನಾಶಪಡಿಸಿ, ಮುದ್ರಿತ ಪ್ರಶ್ನೆಪತ್ರಿಕೆಗಳನ್ನು ಸುಟ್ಟುಹಾಕಿದ್ದರು.
ಕೀ ಉತ್ತರ ಸೋರಿಕೆ: ಸಾಹುಕಾರ್ ಹಾಗೂ ಗೀತಾ ಪಾತ್ರ
ಅಕ್ರಮವಾಗಿ ಸಂಗ್ರಹಿಸಿದ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳು, ಬೀದರ್ ಜಿಲ್ಲೆಯ ಭಾಲ್ಕಿಯ ಓಂ ಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘ, ಬಸವರಾಜ್ ಕನ್ನಾಳೆ ಅವರ ಭಗವತಿ ಎಂಟರ್ಪ್ರೈಸಸ್ ಹಾಗೂ ಸ್ನೇಹಿತರ ಖಾತೆಗಳ ಮೂಲಕ ವರ್ಗಾವಣೆ ಮಾಡಲಾಗಿತ್ತು. ಜ್ಞಾನೇಂದ್ರ ಗಂಗ್ವಾರ್ ಅವರು ಬಸವರಾಜ್ ಕನ್ನಾಳೆಯಿಂದ ಸುಮಾರು 1.52 ಕೋಟಿ ಪಡೆದಿದ್ದು, ಅದರಲ್ಲಿ 52.30 ಲಕ್ಷ ಮೌಲ್ಯದ ಚಿನ್ನಾಭರಣ ಭಾವಿ ಪತ್ನಿಯ ಹೆಸರಿನಲ್ಲಿ ಖರೀದಿಸಿದ್ದರು.
13.31 ಲಕ್ಷ ವಿಮಾನ ಪ್ರಯಾಣದ ವೆಚ್ಚವನ್ನೂ ಮೂರನೇ ವ್ಯಕ್ತಿಗಳ ಖಾತೆಗಳ ಮೂಲಕ ಪಾವತಿಸ ಲಾಗಿತ್ತು. ಶಿವಶಂಕರಪ್ಪ ಸಾಹುಕಾರ್ 2025ರ ಆಗಸ್ಟ್ನಿಂದ ಡಿಸೆಂಬರ್ವರೆಗೆ 3.99 ಕೋಟಿ ನಗದನ್ನು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಬಳಿ ಬಚ್ಚಿಟ್ಟಿದ್ದರು. ಇದಕ್ಕೂ ಮೊದಲು 8 ರಿಂದ 10 ಕೋಟಿ ರು. ಹಣ ಇದೇ ರೀತಿ ಇರಿಸಲಾಗಿತ್ತು. ಈ ಹಣವನ್ನು ಬಿ.ವಿ ಗೀತಾ ಮತ್ತು ಅವರ ಮಗಳಿಗೆ ವರ್ಗಾಯಿಸಲಾಗಿತ್ತು. ಶಹಾಪುರ ತಾಲೂಕಿನ ಮದ್ರಕಿ ಗ್ರಾಮದಲ್ಲಿರುವ ಜಮೀನಿನಲ್ಲಿ ಶಾಲೆ, ಕನ್ವೆನ್ಷನ್ ಹಾಲ್ ಮತ್ತು ರೆಸ್ಟೋರೆಂಟ್ ನಿರ್ಮಿಸಲು ಈ ಹಣ ಬಳಸುವ ಯೋಜನೆಯಿತ್ತು. ಬಿ.ವಿ.ಗೀತಾ ಮತ್ತು ಅವರ ಮಗಳ ಹೆಸರಿನಲ್ಲಿ 1 ಕೋಟಿ ಹಣವನ್ನು ಅಸುರಕ್ಷಿತ ಸಾಲವೆಂದು ತೋರಿಸಿ ವರ್ಗಾವಣೆ ಮಾಡಲಾಗಿತ್ತು. ಆದರೆ, ಈ ಸಾಲಕ್ಕೆ ಯಾವುದೇ ಒಪ್ಪಂದ, ಭದ್ರತೆ ಅಥವಾ ಮರುಪಾವತಿಯ ವ್ಯವಸ್ಥೆ ಇರಲಿಲ್ಲ ಎಂದು ಇ.ಡಿ ತನ್ನ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.
ಮುಖ್ಯಾಂಶಗಳು
ಡೀಲ್ಗಾಗಿ 10 ಅಭ್ಯರ್ಥಿಗಳಿಂದ ಒಟ್ಟು 3.20 ಕೋಟಿ ಬೇಡಿಕೆ
ಗೆಳತಿಗೆ 52.30 ಲಕ್ಷದ ಚಿನ್ನಾಭರಣ ಗಿಫ್ಟ್ ಕೊಟ್ಟಿದ್ದ ಜ್ಞಾನೇಂದ್ರ
ರಿಯಲ್ ಎಸ್ಟೇಟ್ನಲ್ಲಿ ಸಾಹುಕಾರ್ 3.99 ಕೋಟಿ ರು. ಹೂಡಿಕೆ
ಅಕ್ರಮ ಹಣ ವರ್ಗಾವಣೆ ಮತ್ತು ಹಣದ ಹೂಡಿಕೆ ಜಾಲ ಪತ್ತೆ
ಬಿ.ವಿ.ಗೀತಾ ಶಿವಮೂರ್ತಿ ಅವರ ಸಾಲದ ನಾಟಕ ಬೆಳಕಿಗೆ
ಹಗರಣದ ಪಿತೂರಿ ಮತ್ತು ಅಕ್ರಮಗಳ ತನಿಖೆಯಲ್ಲಿ ಅನಾವರಣ