ಬೆಂಗಳೂರು: ನನ್ನ ಹಾಗೂ ವಿಶ್ವೇಶ್ವರ ಭಟ್ಟ(Vishwavani Editor in Chief Vishweshwar Bhat) ರ ಸ್ನೇಹ ಕಪಟ ರಹಿತ, ವೃತ್ತಿ ಮೀರಿದ ಸಂಬಂಧ ವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Karnataka Chief Minister Siddaramaiah)ಹೇಳಿದರು.
ವಿಶ್ವೇಶ್ವರ ಭಟ್ಟರ ನೂರನೇ ಪುಸ್ತಕ ‘ವಿದೇಶ ಕಾಲ’ ಪುಸ್ತಕವನ್ನು ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ನಾನು, ಭಟ್ಟರು ಹಾಗೂ ಶ್ರೀನಿವಾಸ್ ಅವರದ್ದು ವೃತ್ತಿ ಮೀರಿದ, ಕಪಟವಿಲ್ಲದ ಸ್ನೇಹ ವಾಗಿದೆ. ಅವರ ನೂರನೇ ಕೃತಿಯಾಗಿರುವ ವಿದೇಶ ಕಾಲವನ್ನು ನನಗೆ ಅರ್ಪಿಸಿರುವುದು ಅವರ ಪ್ರೀತಿ ಹಾಗೂ ಅಭಿಮಾನದ ಸಂಕೇತವಾಗಿದೆ ಎಂದು ಅಭಿಪ್ರಾಯಪಟ್ಟರು.

ನಾನು, ಶ್ರೀನಿವಾಸ್ ಅವರು ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೆ, ವಿಶ್ವೇಶ್ವರ ಭಟ್ಟರು ಪತ್ರಕರ್ತರಾಗಿ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ನಾವಿದ್ದರೂ, ನಮ್ಮ ಸ್ನೇಹ ಎಲ್ಲವನ್ನು ಮೀರಿದೆ. ವಿಶ್ವೇಶ್ವರ ಭಟ್ಟರು ನೂರನೇ ಕೃತಿ ಯನ್ನು ಬಿಡುಗಡೆಗೊಳಿಸಿದ್ದು, ಇನ್ನಷ್ಟು ಕೃತಿಗಳು ಅವರಿಂದ ಮೂಡಿ ಬರಲಿ ಎಂದು ಆಶಿಸುತ್ತೇವೆ ಎಂದರು.
ಇದನ್ನೂ ಓದಿ: Vishweshwar Bhat Column: ರಸ್ತೆಗೆ ಹೆಸರಿಡುವವರು ಗೊತ್ತು, ಆದರೆ ಊರಿಗೆ ಯಾರು ಹೆಸರಿಡುತ್ತಾರೆ ?
ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವ ಸಮಯದಲ್ಲಿ ಪುಸ್ತಕದ ಆಸಕ್ತಿ ಹೆಚ್ಚಿಸುವ ಕೆಲಸವನ್ನು ವಿಶ್ವೇಶ್ವರ ಭಟ್ಟರು ಮಾಡುತ್ತಿದ್ದಾರೆ. ಅವರ ಈ ಸಾಹಿತ್ಯ ಕೃಷಿ ಇನ್ನಷ್ಟು ಸಾಗಲಿ. ವಿಶ್ವವಾಣಿ ಪತ್ರಿಕೆಯ ಸಂಪಾದಕರಾಗಿ, ಪ್ರವಾಸಿ ಪ್ರಪಂಚ ಎನ್ನುವ ಪ್ರವಾಸೋದ್ಯಮಕ್ಕೆ ಮೀಸಲಿ ರುವ ವಾರ ಪತ್ರಿಕೆಯನ್ನು ಆರಂಭಿಸಿದ್ದಾರೆ. ಈ ಎಲ್ಲ ಒತ್ತಡದ ನಡುವೆಯೂ ಅವರು ನೂರು ಪುಸ್ತಕಗಳನ್ನು ಬರೆದಿರುವುದು ದೊಡ್ಡ ಸಾಧನೆ. ಅವರು ಇನ್ನಷ್ಟು ಪುಸ್ತಕಗಳನ್ನು ಬರೆಯಲಿ ಎಂದು ಶುಭ ಕೋರಿದರು.
ಈಗಾಗಲೇ ನೂರಕ್ಕೂ ಹೆಚ್ಚು ದೇಶಗಳನ್ನು ಸುತ್ತುವ ಮೂಲಕ ಜಗತ್ತಿನ ಅರ್ಧಕ್ಕಿಂತ ಹೆಚ್ಚು ದೇಶಗಳನ್ನುಸುತ್ತಿರುವ ವಿಶ್ವೇಶ್ವರ ಭಟ್ಟರು ಮುಂದಿನ ದಿನದಲ್ಲಿ ಇನ್ನುಳಿದ ದೇಶಗಳನ್ನು ಸುತ್ತಿ ಬರುತ್ತಾರೆ ಎನ್ನುವ ನಂಬಿಕೆಯಿದೆ. ವಿದೇಶ ಪ್ರವಾಸದೊಂದಿಗೆ ಅಲ್ಲಿನ ಅನುಭವ ನಮ್ಮ ಜನರಿಗೆ ತಲುಪಿಸುವ, ಜ್ಞಾನ ಹಂಚುವ ಕೆಲಸ ಹೀಗೆ ಮುಂದುವರಿಯಲಿ ಎಂದು ಆಶಿಸಿದರು.