ಬೆಂಗಳೂರು: ಮಾಜಿ ಸಚಿವ ಬಿ.ನಾಗೇಂದ್ರ ಅವರು ವಾಲ್ಮೀಕಿ ಅಭಿವೃದ್ಧಿ ನಿಗಮ ಅವ್ಯವ ಹಾರ ಪ್ರಕರಣ ಸಂಬಂಧ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ ಸಂಬಂಧ ಜಾರಿ ನಿರ್ದೇಶನಾಲಯ ಅಧಿಕಾರಿಗಳ ಮುಂದೆ ಸೋಮವಾರ ವಿಚಾರಣೆಗೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ.
ಜಾಲಹಳ್ಳಿಯ ಎಚ್‌ಎಂಟಿ ಭವನದಲ್ಲಿರುವ ಇ.ಡಿ ಕಚೇರಿಗೆ ಸೋಮವಾರ ಮಧ್ಯಾಹ್ನ ವಿಚಾರಣೆಗೆ ನಾಗೇಂದ್ರ ಹಾಜರಾಗಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದ್ದ ಬಹುಕೋಟಿ ಅಕ್ರಮ ಸಂಬಂಧ ನಾಗೇಂದ್ರ ವಿರುದ್ಧ ಪಿಎಂಎಲ್ಎ ಕಾಯ್ದೆಯಡಿ ಪ್ರಕರಣ ದಾಖಲಿಸಿ ಇ.ಡಿ ಬಂಧಿಸಿತ್ತು.
ಇದನ್ನೂ ಓದಿ: B Nagendra Resignation: ವಾಲ್ಮೀಕಿ ನಿಗಮ ಹಗರಣ; ಬಿ. ನಾಗೇಂದ್ರ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು
ನಾಗೇಂದ್ರ ವಿರುದ್ಧ 2024ರಲ್ಲಿ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿತ್ತು. ಪ್ರಕರಣದಲ್ಲಿ ಮಾಜಿ ಸಚಿವ ನಾಗೇಂದ್ರ ಅವರಲ್ಲದೆ, ಹೈದರಾಬಾದ್ - ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕನ ವ್ಯವಸ್ಥಾಪಕ ನಿರ್ದೇಶಕ ಸತ್ಯನಾರಾಯಣ್, ಬ್ಯಾಂಕ್ ಅಧ್ಯಕ್ಷ ಇಟಕಾರಿ ಸತ್ಯನಾರಾಯಣ, ವಾಲ್ಮೀಕಿ ಅಭಿವೃದ್ಧಿ ನಿಗಮದ ಎಂ.ಡಿ ಜೆ.ಜಿ.ಪದ್ಮನಾಭ, ಸಹಚರರಾದ ನಾಗೇಶ್ವರ ರಾವ್, ನೆಕ್ಕುಂಟಿ ನಾಗರಾಜ್ ಹಾಗೂ ವಿಜಯ್ ಕುಮಾರ್ ಗೌಡ ಸೇರಿದಂತೆ 24 ಮಂದಿ ಶಾಮೀಲಾಗಿದ್ದಾರೆ ಎಂದು ಇ.ಡಿ ಚಾರ್ಜ್ ಶೀಟ್‌ನಲ್ಲಿ ದಾಖಲಿಸಿದೆ.
ಅವ್ಯವಹಾರ ಸಂಬಂಧ ಎಸ್‌ಐಟಿ ಹಾಗೂ ಸಿಬಿಐ ಪರ್ಯಾಯವಾಗಿ ತನಿಖೆ ನಡೆಸುತ್ತಿವೆ. ಪತ್ತೆ ಹಚ್ಚಲಾದ 89.62 ಕೋಟಿ ಹಣ ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ವಿವಿಧ ಬ್ಯಾಂಕ್‌ಗಳಲ್ಲಿ ನಕಲಿ ಖಾತೆಗಳಿಗೆ ವರ್ಗಾವಣೆ ಆಗಿರುವುದು ತಿಳಿದು ಬಂದಿದೆ.