ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

CM Siddaramaiah: ಮೆಟ್ರೋ ದರ ಕಡಿಮೆ ಮಾಡಲು ಬಿಎಂಆರ್‌ಸಿಎಲ್‌ಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಮೆಟ್ರೋ ದರ ಏರಿಕೆ ವಿರುದ್ಧ ವ್ಯಕ್ತವಾದ ಸಾರ್ವಜನಿಕರ ವಿರೋಧವನ್ನು ಪರಿಗಣಿಸಿ ಎಲ್ಲೆಲ್ಲಿ ಅಸಹಜ ರೀತಿಯಲ್ಲಿ ದರ ಏರಿಕೆಯಾಗಿದೆಯೋ ಅಂತಹ ಕಡೆಗಳಲ್ಲಿ ಪ್ರಯಾಣ ದರ ಇಳಿಸುವಂತೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬೆಂಗಳೂರು: ನಮ್ಮ ಮೆಟ್ರೋದ (Namma Metro) ಟಿಕೆಟ್‌ ದರಗಳಲ್ಲಿ (ticket price hike) ಆಗಿರುವ ಭಾರಿ ಏರಿಕೆಯಿಂದ ಪ್ರಯಾಣಿಕರು ಶಾಕ್‌ಗೆ ಒಳಗಾಗಿದ್ದು, ಇದೀಗ ಈ ವಿಷಯವನ್ನು ಬಗೆಹರಿಸಲು ಸಿಎಂ ಸಿದ್ದರಾಮಯ್ಯ (CM Siddaramaiah) ಮುಂದಾಗಿದ್ದಾರೆ. ಮೆಟ್ರೋ ಪ್ರಯಾಣ ದರ ಹೆಚ್ಚಳದಲ್ಲಿ ಕೆಲವು ಸ್ಟೇಜ್‌ಗೆ ದುಪ್ಪಟ್ಟು ದರ ಹೆಚ್ಚಳ ಮಾಡಲಾಗಿದೆ. ಪ್ರಯಾಣಿಕರ ಹಿತ ದೃಷ್ಟಿಯಿಂದ ಅದನ್ನು ಕಡಿತ ಮಾಡುವಂತೆ ಬಿಎಂಆರ್​ಸಿಎಲ್​ಗೆ (BMRCL) ಸೂಚನೆ ನೀಡಿದ್ದಾರೆ.

ಬೆಂಗಳೂರಿಗರ ಸಂಚಾರ ಜೀವನಾಡಿಯಾಗಿರುವ ನಮ್ಮ ಮೆಟ್ರೋ ಟಿಕೆಟ್​ ದರ ಕಳೆದ ವಾರ ಯದ್ವಾತದ್ವಾ ಏರಿಕೆಯಾಗಿತ್ತು. ಇದರಿಂದ ಪ್ರಯಾಣಿಕರಿಗೆ ಭಾರೀ ಹೊರೆಯಾಗಿತ್ತು. ಶೇ.45 ರಿಂದ 50% ದರ ಏರಿಕೆ ಮಾಡಿದ್ದೇವೆ ಎಂದು ಬಿಎಂಆರ್​ಸಿಎಲ್​ ತಿಳಿಸಿತ್ತು. ಆದರೆ ಹಲವೆಡೆ ದರ ದುಪ್ಪಟ್ಟು ಆಗಿತ್ತು. ಪ್ರಯಾಣಿಕರು ಇದಕ್ಕೆ ಆಕ್ರೋಶದಿಂದ ಪ್ರತಿಕ್ರಿಯಿಸಿದ್ದರು. ದರ ಏರಿಕೆಯಲ್ಲಿರುವ ಗೊಂದಲವನ್ನು ಕೂಡಲೇ ಪರಿಹರಿಸುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದು, ಈ ಕುರಿತು ಟ್ವೀಟ್‌ ಮಾಡಿದ್ದಾರೆ.

ಸಿಎಂ ಟ್ವೀಟ್​ನಲ್ಲೇನಿದೆ?

ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಇತ್ತೀಚೆಗೆ ಪರಿಷ್ಕರಿಸಿರುವ ಪ್ರಯಾಣ ದರ ಏರಿಕೆ ಹಲವು ರೀತಿಯ ವೈಪರೀತ್ಯಗಳಿಂದ ಕೂಡಿದ್ದು, ಕೆಲವು ಕಡೆಗಳಲ್ಲಿ ಪ್ರಯಾಣ ದರ ದುಪ್ಪಟ್ಟಾಗಿರುವುದನ್ನು ಗಮನಿಸಿದ್ದೇನೆ. ಇದರ ವಿರುದ್ಧ ವ್ಯಕ್ತವಾದ ಸಾರ್ವಜನಿಕರ ವಿರೋಧವನ್ನು ಪರಿಗಣಿಸಿ ಎಲ್ಲೆಲ್ಲಿ ಅಸಹಜ ರೀತಿಯಲ್ಲಿ ದರ ಏರಿಕೆಯಾಗಿದೆಯೋ ಅಂತಹ ಕಡೆಗಳಲ್ಲಿ ಪ್ರಯಾಣ ದರ ಇಳಿಸುವಂತೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಿದ್ದೇನೆ.



ಮೆಟ್ರೊ ರೈಲು ವ್ಯವಸ್ಥೆ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಬೇಕಾಗಿರುವ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿರುವ ಕಾರಣ ಪ್ರಯಾಣ ದರ ಪರಿಷ್ಕರಣೆ ಅನಿವಾರ್ಯವಾಗಿತ್ತು ಎನ್ನುವುದು ನಿಜವಾದರೂ ಅಂತಿಮವಾಗಿ ಪ್ರಯಾಣಿಕರ ಹಿತರಕ್ಷಣೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯ ಎನ್ನುವುದನ್ನು ಬಿಎಂಆರ್‌ಸಿಎಲ್ ಗಮನಕ್ಕೆ ತಂದಿದ್ದೇನೆ ಎಂದು ಟ್ವೀಟ್​ ಮಾಡಿದ್ದಾರೆ.

ದುಬಾರಿ ಮೆಟ್ರೋ

ದೇಶದಲ್ಲೇ ದುಬಾರಿ ಅಂದರೆ ನಮ್ಮ ಮೆಟ್ರೋ ಮಾತ್ರ. ಕಾರಣ ನಮ್ಮ ಮೆಟ್ರೋದಲ್ಲಿ 25 ಕಿಮೀ ನಂತರದ ಪ್ರಯಾಣಕ್ಕೆ 90 ರುಪಾಯಿ ನಿಗದಿಪಡಿಸಿದೆ. ದೆಹಲಿ ಮೆಟ್ರೋದಲ್ಲಿ 32 ಕಿಮೀ ಅಂತರಕ್ಕೆ ಕೇವಲ 60 ರುಪಾಯಿ ಇದೆ.ಚೆನ್ನೈ ಮೆಟ್ರೋದಲ್ಲಿ 50 ರುಪಾಯಿ, ಕೊಲ್ಕತ್ತಾ ಮೆಟ್ರೋದಲ್ಲಿ 25 ರಿಂದ 30 ಕಿಮೀ 25 ರುಪಾಯಿ ಇದೆ. ಕೋಲ್ಕತ್ತಾ ಮೆಟ್ರೋದಲ್ಲಿ ಕನಿಷ್ಠ 5 ರುಪಾಯಿ ಗರಿಷ್ಠ 50 ರುಪಾಯಿ ಅಷ್ಟೇ.ಆದರೆ ನಮ್ಮ ಮೆಟ್ರೋದಲ್ಲಿ ಕನಿಷ್ಠ 10 ರುಪಾಯಿ ಗರಿಷ್ಠ- 90 ರುಪಾಯಿ ಇದೆ. ಹಾಗಾಗಿ ಪ್ರಯಾಣಿಕರು ನಮ್ಮ ಮೆಟ್ರೋ ನಮಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: Namma Metro: ಯದ್ವಾತದ್ವಾ ದರ ಏರಿಸಿದ ಮೆಟ್ರೋಗೇ ಶಾಕ್‌ ನೀಡಿದ ಬೆಂಗಳೂರಿಗರು, ಪ್ರಯಾಣಿಕರ ಸಂಖ್ಯೆ ತೀವ್ರ ಇಳಿಕೆ

ಹರೀಶ್‌ ಕೇರ

View all posts by this author