#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Namma Metro: ಯದ್ವಾತದ್ವಾ ದರ ಏರಿಸಿದ ಮೆಟ್ರೋಗೇ ಶಾಕ್‌ ನೀಡಿದ ಬೆಂಗಳೂರಿಗರು, ಪ್ರಯಾಣಿಕರ ಸಂಖ್ಯೆ ತೀವ್ರ ಇಳಿಕೆ

ಸಮಯ ಉಳಿತಾಯದಿಂದ ಮಧ್ಯಮ ವರ್ಗದ ಜನರು ಕೆಲಸಕ್ಕೆ ಹೋಗಲು ಕಾರು, ಬೈಕ್​ ಬಿಟ್ಟು ನಮ್ಮ ಮೆಟ್ರೋವನ್ನೇ ಅವಲಂಬಿಸಿದ್ದರು. ಪ್ರತಿದಿನ ಮೆಟ್ರೋದಲ್ಲಿ ಅಂದಾಜು 8ರಿಂದ 9 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಆದ್ರೆ ದರ ಏರಿಕೆ ಆದ ಮೇಲೆ ಪ್ರತಿದಿನ 6 ರಿಂದ 7 ಲಕ್ಷ ಪ್ರಯಾಣಿಕರು ಮಾತ್ರ ಸಂಚಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಯದ್ವಾತದ್ವಾ ದರ ಏರಿಕೆ ವಿರೋಧಿಸಿ ಮೆಟ್ರೋ ಪ್ರಯಾಣಿಕರ ಸಂಖ್ಯೆ ತೀವ್ರ ಇಳಿಕೆ

ನಮ್ಮ ಮೆಟ್ರೋ

ಹರೀಶ್‌ ಕೇರ ಹರೀಶ್‌ ಕೇರ Feb 13, 2025 11:02 AM

ಬೆಂಗಳೂರು: ಬಿಎಂಆರ್​ಸಿಎಲ್​​ (BMRCL) ನಮ್ಮ ಮೆಟ್ರೋ (Namma Metro) ಟಿಕೆಟ್ ದರವನ್ನು (Ticket Price Hike) ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದ್ದು, ಇದರಿಂದ ದಿನನಿತ್ಯದ ಪ್ರಯಾಣಿಕರು ರೊಚ್ಚಿಗೆದ್ದಿದ್ದಾರೆ. ಇದೀಗ ದೊಡ್ಡ ಪ್ರಮಾಣದಲ್ಲಿ ಮೆಟ್ರೋ ಪ್ರಯಾಣವನ್ನೇ ಧಿಕ್ಕರಿಸಿ (Passengers reduced) ಇತರ ಸಾರ್ವಜನಿಕ ವಾಹನ ಸೌಲಭ್ಯ ಅಥವಾ ದ್ವಿಚಕ್ರ ವಾಹನಗಳತ್ತ ಸಾಗಿದ್ದಾರೆ. ಟಿಕೆಟ್ ದರ ಏರಿಕೆಯಾದ ಬೆನ್ನಲ್ಲೇ ಮೆಟ್ರೋನಲ್ಲಿ ಸಾಗುವ ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತವಾಗಿದೆ.

ಸಮಯ ಉಳಿತಾಯದಿಂದ ಮಧ್ಯಮ ವರ್ಗದ ಜನರು ಕೆಲಸಕ್ಕೆ ಹೋಗಲು ಕಾರು, ಬೈಕ್​ ಬಿಟ್ಟು ನಮ್ಮ ಮೆಟ್ರೋವನ್ನೇ ಅವಲಂಬಿಸಿದ್ದರು. ಪ್ರತಿದಿನ ಮೆಟ್ರೋದಲ್ಲಿ ಅಂದಾಜು 8ರಿಂದ 9 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಆದ್ರೆ ದರ ಏರಿಕೆ ಆದ ಮೇಲೆ ಪ್ರತಿದಿನ 6 ರಿಂದ 7 ಲಕ್ಷ ಪ್ರಯಾಣಿಕರು ಮಾತ್ರ ಸಂಚಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಪ್ರಯಾಣಿಕರ ಸಂಖ್ಯೆ ಕುಂಠಿತವಾಗುತ್ತಿದ್ದಂತೆಯೇ ಸಹಜವಾಗಿ ಕಲೆಕ್ಷನ್​ ಸಹ ಕಡಿಮೆಯಾಗಿದೆ. ದರ ಏರಿಕೆ ಮಾಡುವ ಮೊದಲು ಒಂದು ದಿನಕ್ಕೆ 2 ಕೋಟಿ ರೂಪಾಯಿಯಿಂದ 2.50 ಕೋಟಿ ರುಪಾಯಿ ಕಲೆಕ್ಷನ್ ಆಗುತ್ತಿತ್ತು. ದರ ಏರಿಕೆ ಬಳಿಕ ದಿನಕ್ಕೆ ಒಂದೂವರೆಯಿಂದ 2 ಕೋಟಿ ರೂ.ವರೆಗೆ ಮಾತ್ರ ಕಲೆಕ್ಷನ್ ಆಗುತ್ತಿದೆ. ಈ ಸೋಮವಾರದಿಂದ ಮೆಟ್ರೋ ಪ್ರಯಾಣಿಕರು ಮೆಟ್ರೋ ಬಿಟ್ಟು ತಮ್ಮ ಸ್ವಂತ ಕಾರು, ಬೈಕ್ ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಹೀಗಾಗಿ ಕಳೆದ ನಾಲ್ಕು ದಿನದಿಂದ ಬೆಂಗಳೂರು ನಗರದಲ್ಲಿ ವಿಪರೀತವಾಗಿ ಟ್ರಾಫಿಕ್ ಸಮಸ್ಯೆ ಸಹ ಹೆಚ್ಚಾಗಿದೆ.

ಮೆಟ್ರೋ ದರ ಏರಿಕೆಯನ್ನು ಜನರು ಖಂಡಿಸುತ್ತಿದ್ದಾರೆ. ದೊಡ್ಡ ಮಟ್ಟದಲ್ಲಿ ಪ್ರಯಾಣಿಕರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಬಿಎಂಆರ್​ಸಿಎಲ್ 45% ರಿಂದ 50% ರಷ್ಟು ದರ ಏರಿಕೆ ಮಾಡಿದ್ದೇವೆ ಎಂದು ಹೇಳುತ್ತಿದೆ. ಆದರೆ ಏರಿಕೆಯಾಗಿರುವುದು 100%ರಷ್ಟು. ಅಂದ್ರೆ ದುಪ್ಪಟ್ಟು ಏರಿಕೆಯಾಗಿದೆ.

ರೈತರು, ಕನ್ನಡಪರ ಹೋರಾಟಗಾರರು,ಪ್ರಗತಿಪರ ಸಂಘಟನೆಗಳು ಮತ್ತು ಪ್ರಯಾಣಿಕರು ಸೇರಿದಂತೆ ಪ್ರಯಾಣಿಕರು ಬಿಎಂಆರ್​ಸಿಎಲ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಮತ್ತೊಂದೆಡೆ ಬಿಜೆಪಿ ಹಾಗೂ ಕಾಂಗ್ರೆಸ್​ ನಾಯಕರ ನಡುವೆ ಆರೋಪ ಪ್ರತ್ಯಾರೋಪಗಳು ನಡೆಯುತ್ತಿವೆ.

ಮೆಟ್ರೋ ದರ ಏರಿಕೆ ಮಾಡುವುದು ನಮ್ಮ ಕೈನಲ್ಲಿ ಇಲ್ಲ ಎಂದು ಕಾಂಗ್ರೆಸ್​ ನಾಯಕರು ಎನ್​ಡಿಎ ನೇತೃತ್ವದ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಿದ್ದಾರೆ. ಮತ್ತೊಂದೆಡೆ ಬಿಜೆಪಿ ನಾಯಕರು ಸಹ ರಾಜ್ಯ ಸರ್ಕಾರ ಸಲಹೆ ನೀಡಿದ್ದಕ್ಕೇ ಏರಿಕೆಯಾಗಿದೆ ಎಂದು ತಿರುಗೇಟು ನೀಡುತ್ತಿದ್ದಾರೆ. ಹೀಗೆ ಎರಡೂ ಪಕ್ಷಗಳ ನಾಯಕರ ಕೆಸರೆರಚಾಟ ಮುಂದುವರೆದಿದೆ.

ದರ ಏರಿಕೆ ಬಗ್ಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಸಂಸತ್​ನಲ್ಲಿ ಪ್ರಸ್ತಾಪ ಮಾಡಿದ್ದಾರೆ. ಅಲ್ಲದೇ ಸಂಬಂಧಪಟ್ಟ ಕೇಂದ್ರ ಸಚಿವರನ್ನು ಸಹ ಭೇಟಿ ಮಾಡಿದ್ದು, ದರ ಏರಿಕೆಯಿಂದ ಮಾಧ್ಯಮ ವರ್ಗದ ಜನರಿಗೆ ಆಗುತ್ತಿರುವ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ತೇಜಸ್ವಿ ಸೂರ್ಯ, ರಾಜ್ಯ ಸರ್ಕಾರ ಈ ಬಗ್ಗೆ ಕೇಂದ್ರಕ್ಕೆ ಒಂದು ಪತ್ರ ಬರೆದರೆ ಮಾತ್ರ ಏರಿಕೆ ಮಾಡಲಾಗಿರುವ ದರವನ್ನು ಇಳಿಕೆ ಮಾಡಲು ಸಾಧ್ಯ ಎಂದಿದ್ದಾರೆ.

ಮೆಟ್ರೋ ದರ ಏರಿಕೆ ಬಗ್ಗೆ ಆರೋಪ ಪ್ರತ್ಯಾರೋಪ ಮಾತ್ರವಲ್ಲದೇ ಇದೀಗ ಆಡಳಿತ ಪಕ್ಷ ಕಾಂಗ್ರೆಸ್​ ಪ್ರತಿಭಟನೆಗೆ ಮುಂದಾಗಿದೆ. ದರ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಇಂದು (ಫೆಬ್ರವರಿ 13) ಬೆಂಗಳೂರಿನ ಪ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ನಡೆಸಲಿದೆ. ವಿಪಕ್ಷ ಬಿಜೆಪಿ ಸಹ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ. ಇಂದು ಕಾಂಗ್ರೆಸ್ ನಡೆಸುತ್ತಿರುವುದರಿಂದ ಬಿಜೆಪಿ ನಾಳೆ (ಫೆಬ್ರವರಿ 14) ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ಮಾಡಲು ತೀರ್ಮಾನಿಸಿದೆ.

ಇದನ್ನೂ ಓದಿ: Namma Metro Fare Hike: ಮೆಟ್ರೋ ಟಿಕೆಟ್ ದರ ಹೆಚ್ಚಳಕ್ಕೆ ಆಕ್ರೋಶ; ಮಾದಾವರ ಮೆಟ್ರೋ ನಿಲ್ದಾಣದ ಬಳಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ