#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Namma Metro Fare Hike: ಮೆಟ್ರೋ ಟಿಕೆಟ್ ದರ ಹೆಚ್ಚಳಕ್ಕೆ ಆಕ್ರೋಶ; ಮಾದಾವರ ಮೆಟ್ರೋ ನಿಲ್ದಾಣದ ಬಳಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

Namma Metro Fare Hike: ನೆಲಮಂಗಲ ಸಮೀಪದ ಮಾದಾವರ ಮೆಟ್ರೋ ನಿಲ್ದಾಣದ ಬಳಿ ಪ್ರತಿಭಟನೆ ನಡೆದಿದೆ. ಬ್ಯಾರಿಕೇಡ್ ತಳ್ಳಿಕೊಂಡು ಮೆಟ್ರೋ ನಿಲ್ದಾಣದ ಒಳಗೆ ನುಗ್ಗಲು ಬಿಜೆಪಿ ಕಾರ್ಯಕರ್ತರು ಯತ್ನಿಸಿದ್ದರಿಂದ ಅವರನ್ನು ತಡೆಯಲು ಪೊಲೀಸರು ಹಾಗೂ ಮೆಟ್ರೋ ಸಿಬ್ಬಂದಿ ಹರಸಾಹಸಪಟ್ಟರು.

ಮೆಟ್ರೋ ಟಿಕೆಟ್ ದರ ಹೆಚ್ಚಳ ಖಂಡಿಸಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

Profile Prabhakara R Feb 10, 2025 8:15 PM

ಬೆಂಗಳೂರು: ಮೆಟ್ರೋ ಟಿಕೆಟ್ ದರ ಹೆಚ್ಚಳಕ್ಕೆ (Namma Metro Fare Hike) ಪ್ರಯಾಣಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಒಂದೆಡೆ ದರ ಏರಿಕೆಯಲ್ಲಿ ರಾಜ್ಯ ಸರ್ಕಾರದ ಪಾತ್ರವಿಲ್ಲ, ಕೇಂದ್ರ ಸರ್ಕಾರದ ಸಮಿತಿಯೇ ಮೆಟ್ರೋ ದರ ಪರಿಷ್ಕರಣೆ ಮಾಡಿದೆ ಎಂದು ಕೈ ನಾಯಕರು ಹೇಳಿತ್ತಿದ್ದರೆ, ಮತ್ತೊಂದೆಡೆ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ. ಈ ನಡುವೆ ಮೆಟ್ರೋ ಟಿಕೆಟ್ ದರ ಹೆಚ್ಚಳ ಖಂಡಿಸಿ ನೆಲಮಂಗಲ ಸಮೀಪದ ಮಾದಾವರ ಮೆಟ್ರೋ ನಿಲ್ದಾಣದ ಬಳಿ ಬಿಜೆಪಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು. ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ರಾಮಮೂರ್ತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆ ವೇಳೆ ಬ್ಯಾರಿಕೇಡ್ ತಳ್ಳಿಕೊಂಡು ಮೆಟ್ರೋ ನಿಲ್ದಾಣದ ಒಳಗೆ ನುಗ್ಗಲು ಬಿಜೆಪಿ ಕಾರ್ಯಕರ್ತರು ಯತ್ನಿಸಿದ್ದರಿಂದ ಅವರನ್ನು ತಡೆಯಲು ಪೊಲೀಸರು ಹಾಗೂ ಮೆಟ್ರೋ ಸಿಬ್ಬಂದಿ ಹರಸಾಹಸಪಟ್ಟರು.

ಪೆಟ್ರೋಲ್, ಡೀಸೆಲ್, ಹಾಲು, ಬಸ್ಸು ಟಿಕೆಟ್ ದರ ಏರಿಕೆಯ ಬರೆಯಿಂದ ಈಗಾಗಲೇ ಹೈರಾಣಾಗಿರುವ ರಾಜ್ಯದ ಜನತೆಗೆ ಕಾಂಗ್ರೆಸ್ ಸರ್ಕಾರ ಬೆಂಗಳೂರು ಮೆಟ್ರೋ ದರವನ್ನು ಏಕಾಏಕಿ ಶೇ.46 ಏರಿಸುವ ಮೂಲಕ ಜನಸಾಮಾನ್ಯರ ಗಾಯದ ಮೇಲೆ ಮತ್ತೊಂದು ಬರೆ ಎಳೆದಿದೆ ಎಂದು ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.



ದರ ಏರಿಕೆ ಆದೇಶವನ್ನು ಹಿಂಪಡೆಯುವಂತೆ ಬಿಜೆಪಿ ಮನವಿ

ಬೆಂಗಳೂರು: ಮೆಟ್ರೋ ದರ ಏರಿಕೆ ಮಾಡಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ಬಿಜೆಪಿ ನಿಯೋಗವು ಮೆಟ್ರೋ ನಿರ್ದೇಶಕರಿಗೆ ದರ ಏರಿಕೆ ಆದೇಶವನ್ನು ಹಿಂಪಡೆಯುವಂತೆ ಸೋಮವಾರ ಮನವಿ ಮಾಡಿತು. ಅಲ್ಲದೇ, ದರ ಏರಿಕೆ ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ತೀವ್ರವಾದ ಹೋರಾಟ ಕೈಗೊಳ್ಳುವುದಾಗಿ ಆಗ್ರಹಿಸಿದೆ.

ನಿಯೋಗದಲ್ಲಿ ರಾಜ್ಯ ಮುಖ್ಯ ವಕ್ತಾರರಾದ ಶ್ರೀ ಅಶ್ವತ್ಥ ನಾರಾಯಣ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷರು ಹಾಗೂ ಶಾಸಕರಾದ ಸಿ.ಕೆ.ರಾಮಮೂರ್ತಿ, ಶಾಸಕರಾದ ರವಿ ಸುಬ್ರಹ್ಮಣ್ಯ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ಎಸ್. ಹರೀಶ್, ರಾಜ್ಯ ವಕ್ತಾರರಾದ ಪ್ರಕಾಶ್ ಶೇಷರಾಘವಾಚಾರ್ ಮತ್ತು ಪ್ರಮುಖರು ಉಪಸ್ಥಿತರಿದ್ದರು.

ಈ ವೇಳೆ ಶಾಸಕ ರವಿ ಸುಬ್ರಹ್ಮಣ್ಯ ಮಾತನಾಡಿ, ಮೆಟ್ರೋ ಪ್ರಯಾಣದರ ಏರಿಕೆಯನ್ನು ಹಿಂಪಡೆಯಬೇಕು. ಇಲ್ಲಿ ದೇಶದಲ್ಲೇ ಮೆಟ್ರೋ ದರ ಗರಿಷ್ಠ ಪ್ರಮಾಣದಲ್ಲಿ ಹೆಚ್ಚಿಸಿದ್ದಾರೆ. ಇದನ್ನು ಖಂಡಿಸುತ್ತೇವೆ. ಮೆಟ್ರೋ ಸಂಪಾದನೆ ಮಾಡುವ ಇಲಾಖೆ ಅಲ್ಲ, ಸೇವಾ ವಲಯ. ನಗರದ ದಟ್ಟಣೆ ಕಡಿಮೆ ಮಾಡುವ ಸಲುವಾಗಿ ಮೆಟ್ರೋ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ. ಏಕಾಏಕಿ ದರ ಏರಿಕೆಯನ್ನು ನಾವು ಖಂಡಿಸುತ್ತೇವೆ ಎಂದು ರವಿ ಸುಬ್ರಹ್ಮಣ್ಯ ತಿಳಿಸಿದರು.



ಈ ಸುದ್ದಿಯನ್ನೂ ಓದಿ | Viral News: ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ; ಕಿಡಿಕಾರಿದ ಪ್ರಯಾಣಿಕರು

ಈಗಾಗಲೇ ರಾಜ್ಯ ಸರ್ಕಾರ ಜನರ ಮೇಲೆ ದರ ಏರಿಕೆಯ ಬರೆ ಎಳೆದಿದೆ. ಈಗ ಮೆಟ್ರೋ ದರ 46% ಏರಿಕೆ ಮಾಡಿ ಪ್ರಹಾರ ಮಾಡಲಾಗಿದೆ ಎಂದ ಅವರು, ಮೆಟ್ರೋ ನಿಲ್ದಾಣಗಳಲ್ಲಿ ಜನರಿಗೆ ಅಗತ್ಯ ಅನುಕೂಲಗಳನ್ನೂ ಮೆಟ್ರೋ ಮಾಡಲಿ ಎಂದು ಒತ್ತಾಯಿಸಿದರು.