ಬೆಂಗಳೂರು: ಸ್ಟೇಜ್ ಬೈ ಸ್ಟೇಜ್ ನಮ್ಮ ಮೆಟ್ರೋ ಪ್ರಯಾಣದ ದರದಲ್ಲಿ ಶೇ.100ರಷ್ಟು ಹೆಚ್ಚಳವಾಗಿದ್ದನ್ನು ಕಡಿಮೆ ಮಾಡಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ. ನಮ್ಮ ಮೆಟ್ರೋ ಪ್ರಯಾಣದ ಗರಿಷ್ಠ ದರ ಹೆಚ್ಚಳ ಶೇ.70ಕ್ಕೆ ಇಳಿಕೆ ಮಾಡಲು ತೀರ್ಮಾನಿಸಲಾಗಿದ್ದು, ಇಂದಿನಿಂದ ಪರಿಷ್ಕೃತ ಪ್ರಯಾಣದ ಇಳಿಕೆ ದರಗಳು ಜಾರಿಯಾಗಿವೆ.
ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ.ಮಹೇಶ್ವರ ರಾವ್ ಅವರು ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೆಟ್ರೋ ದರದ ಗರಿಷ್ಠ ಹೆಚ್ಚಳವನ್ನು ಶೇಕಡಾ 70ಕ್ಕೆ ನಿಗದಿಪಡಿಸಲಾಗಿದೆ. ಈ ಬದಲಾವಣೆಗಳು ಫೆಬ್ರವರಿ 14ರಿಂದ ಜಾರಿಗೆ ಬರಲಿವೆ ಎಂದು ಘೋಷಿಸಿದರು.
ಇತ್ತೀಚೆಗೆ ಮೆಟ್ರೋ ಪ್ರಯಾಣ ದರ ಏರಿಕೆ ಮಿತಿಮೀರಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಪ್ರವೇಶಿಸಿದ್ದರು. ಮೆಟ್ರೋ ರೈಲು ದರದಲ್ಲಿನ ಅಸಂಗತತೆಗಳನ್ನು ಸರಿಪಡಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತಕ್ಕೆ ನಿರ್ದೇಶನ ನೀಡಿದ್ದೇನೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಬೆಂಗಳೂರು ಮೆಟ್ರೋ ಪ್ರಯಾಣ ದರ ಪರಿಷ್ಕರಣೆಯನ್ನು ಜಾರಿಗೆ ತಂದಿರುವ ರೀತಿ ಅಸಂಗತತೆಗೆ ಕಾರಣವಾಗಿದೆ. ಕೆಲವು ವಿಭಾಗಗಳಲ್ಲಿ ದರಗಳು ದ್ವಿಗುಣಗೊಂಡಿವೆ ಎಂದು ಸಿದ್ದರಾಮಯ್ಯ ಹೇಳಿದ್ದರು. ನಂತರ ಸುದ್ದಿಗೋಷ್ಠಿಯಲ್ಲಿ ಮಹೇಶ್ವರ ರಾವ್ ದರ ಪರಿಷ್ಕರಣೆ ನಿರ್ಧಾರ ಪ್ರಕಟಿಸಿದ್ದರು.
ಈ ಹಿನ್ನೆಲೆಯಲ್ಲಿ ಮೆಟ್ರೋ ಟಿಕೆಟ್ ನ ಕನಿಷ್ಠ ಹಾಗೂ ಗರಿಷ್ಠ ದರ ಹಾಗೆಯೇ ಇರಲಿದೆ. ಆದರೆ ಕೆಲವು ಸ್ಟೇಷನ್ ಗಳಿಗೆ ಇರುವ ಟಿಕೆಟ್ ಬೆಲೆಯಲ್ಲಿ 10 ರೂ ಇಳಿಸಲಾಗಿದೆ. ಟಿಕೆಟ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ, ಕನಿಷ್ಠ ಬೆಲೆ 10 ರೂ ಹಾಗೂ ಗರಿಷ್ಠ ಬೆಲೆ 90 ರೂ ಹಾಗೆಯೇ ಇರಲಿದೆ. ಆದರೆ ಕೆಲವು ದೂರಗಳಿಗೆ ಏರಿಸಿದ್ದ ಬೆಲೆಯಲ್ಲಿ ಗರಿಷ್ಠ 10 ರೂ ಇಳಿಸಲಾಗಿದೆ. ಮೆಜೆಸ್ಟಿಕ್ ನಿಂದ ವೈಟ್ ಫೀಲ್ಡ್ ಗೆ ಏರಿಸಲಾಗಿದ್ದ 90 ರೂ ದರವನ್ನು 80 ಕ್ಕೆ ಇಳಿಸಲಾಗಿದೆ. ಮೆಜೆಸ್ಟಿಕ್ ನಿಂದ ವಿಧಾನಸೌಧಕ್ಕೆ ಇದ್ದ 20 ರೂ ದರವನ್ನು 10 ರೂ ಗೆ ಇಳಿಸಲಾಗಿದೆ. ಚಲ್ಲಘಟ್ಟಕ್ಕೆ ಇದ್ದ 70 ರೂ ಅನ್ನು 60 ಕ್ಕೆ ಇಳಿಸಲಾಗಿದೆ. ಮೆಜೆಸ್ಟಿಕ್ ನಿಂದ ಬೈಯಪ್ಪನಹಳ್ಳಿಗೆ ಇದ್ದ 60 ರೂ ಅನ್ನು 50 ಕ್ಕೆ ಇಳಿಸಲಾಗಿದೆ.
ಇದನ್ನೂ ಓದಿ: Metro fare hike: ಜನಾಕ್ರೋಶದ ಬೆನ್ನಲ್ಲೇ ಮೆಟ್ರೋ ಟಿಕೆಟ್ ದರ ಇಳಿಕೆಗೆ ಬಿಎಂಆರ್‌ಸಿಎಲ್ ನಿರ್ಧಾರ!