ಹೊಸಪೇಟೆ, ಮೇ 03: "ತುಂಗಭದ್ರಾ ಅಣೆಕಟ್ಟಿನ 33 ನೂತನ ಗೇಟ್‌ಗಳ ಅಳವಡಿಕೆಯಾಗಿದ್ದು, ಸ್ವಲ್ಪ ಕೆಲಸ ಬಾಕಿ ಇದೆ. ಮೇ 7ರ ಒಳಗಾಗಿ ಈ ಕೆಲಸ ಪೂರ್ಣಗೊಳಿಸಿ, ಮೇ 15ರಂದು ಇದರ ಉದ್ಘಾಟನೆ ಮಾಡಲು ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ತುಂಗಭದ್ರಾ ಅಣೆಕಟ್ಟು ಗೇಟ್ ಅಳವಡಿಕೆ ಕಾರ್ಯ ಪರಿಶೀಲನೆ ನಡೆಸಿದ ಬಳಿಕ ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
"ಇಂದು ಬಹಳ ಸಂತೋಷದ ದಿನ. 7.50 ಲಕ್ಷ ರೈತರ ಬದುಕಿಗೆ ರಕ್ಷಣೆ ನೀಡಲಾಗಿದೆ. ಅಣೆಕಟ್ಟು ವಿಚಾರವಾಗಿ ಟೀಕೆ ಮಾಡಿದವರಿಗೆ ಇಂದು ಉತ್ತರ ಸಿಕ್ಕಿದೆ. ನಾವು ಕೈಗೊಂಡ ತೀರ್ಮಾನಕ್ಕೆ ಫಲ ಸಿಕ್ಕಿದೆ. ನಾಲ್ಕು ಜಿಲ್ಲೆಗಳ ರೈತರನ್ನು ಕರೆಸಿ ಕಾರ್ಯಕ್ರಮ ಮಾಡಲಾಗುವುದು. ಈಗ ಅಣೆಕಟ್ಟಿನಲ್ಲಿ 10.50 ಟಿಎಂಸಿ ನೀರು ಇದೆ. ಮಳೆ ಬಿದ್ದರೆ 2 ತಿಂಗಳಲ್ಲಿ 44 ಟಿಎಂಸಿ ನೀರು ತುಂಬಲಿದೆ. ಈಗ ₹54 ಕೋಟಿ ವೆಚ್ಚ ಮಾಡಲಾಗಿದೆ. 64:34 ಅನುಪಾತದಲ್ಲಿ ಎರಡು ರಾಜ್ಯಗಳು ಬಂಡವಾಳ ಹಾಕಲಾಗುತ್ತಿದೆ" ಎಂದು ತಿಳಿಸಿದರು.
"ಅಣೆಕಟ್ಟು ಆಡಳಿತ ವಿಚಾರದಲ್ಲಿ ಸ್ವಾತಂತ್ರ್ಯ ನೀಡಿದ್ದು, ಯಾವುದೇ ಹಸ್ತಕ್ಷೇಪ ಆಗದಂತೆ ನೋಡಿಕೊಂಡಿದ್ದೇವೆ. 33 ಗೇಟ್ ಅಳವಡಿಕೆ ದೇಶಕ್ಕೆ ಮಾದರಿಯಾಗಿದೆ. ಇಡೀ ದೇಶ ಈ ಗೇಟ್ ಅಳವಡಿಕೆ ಕಾರ್ಯವನ್ನು ಇಡೀ ದೇಶ ನೋಡುತ್ತಿತ್ತು. 19ನೇ ಕ್ರೇಸ್ಟ್ ತುಂಡರಿಸಿದಾಗ ನಾವು ತಜ್ಞರ ಅಭಿಪ್ರಾಯ ಪಡೆದು ಅವರ ನೇತೃತ್ವದಲ್ಲೇ ಗೇಟ್ ಅಳವಡಿಕೆ ಕಾರ್ಯ ಮಾಡಿದ್ದೆವು" ಎಂದರು.
"ಇದರ ಜತೆಗೆ ಬೇರೆ ಯೋಜನೆಗಳಿಗೆ 300 ಕೋಟಿ ರೂ. ನೀಡಿದ್ದೇವೆ. ಸರಪಳಿ ಚೆನ್ನಾಗಿದೆ ಎಂದು ಹೇಳಿದ್ದರೂ, ಅದನ್ನು ಬದಲಿಸಲು ಸೂಚಿಸಿರುವೆ. ಇದರ ಜವಾಬ್ದಾರಿ ಚೆನ್ನೈ ಮೂಲದ ಸಂಸ್ಥೆಗೆ ನೀಡಲಾಗಿದೆ. ಮೊದಲ ಹಂತದ ಸರಪಳಿ ಆಗಮಿಸಲಿದೆ. ಈ ಕಾರ್ಯದಿಂದ ರೈತರು, ಜನರು ಸಂತೋಷವಾಗಿದ್ದಾರೆ. ಮುಂದಿನ 50 ವರ್ಷ ಈ ಗೇಟ್ ಗಳು ಏನೂ ಆಗುವುದಿಲ್ಲ" ಎಂದು ಹೇಳಿದರು.
ಟೀಕಾಕಾರರ ಬಾಯಿ ಮುಚ್ಚಿಸಿದ್ದೇವೆ
"ರೈತರು ನಮ್ಮ ಪರಿಸ್ಥಿತಿ ಅರಿತು, ತಮ್ಮ ಒಂದು ಬೆಳೆಯನ್ನು ತ್ಯಾಗ ಮಾಡಿದ್ದಾರೆ. ಈ ಸಹಕಾರ ನೀಡಿದ ರೈತರಿಗೆ ನಮನ ಸಲ್ಲಿಸುತ್ತೇನೆ. ರಾಜಕೀಯವಾಗಿ ಟೀಕೆ ಮಾಡುವವರು ಚಟಕ್ಕೆ ಮಾತನಾಡುತ್ತಾರೆ ಹೊರತು ಇಂತಹ ಕೆಲಸ ಮಾಡಿದ್ದಾರಾ? ಈ ಕೆಲಸದ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದೇವೆ" ಎಂದರು.
ನವಲಿ ಯೋಜನೆ ಚರ್ಚೆಗೆ ಆಂಧ್ರ ಸಿಎಂ ಸಮಯ ನೀಡುತ್ತಿಲ್ಲ
ನವಲಿ ಸಮಾನಾಂತರ ಜಲಾಶಯ ಹಾಗೂ ಹೂಳು ಎತ್ತುವ ಬಗ್ಗೆ ಕೇಳಿದಾಗ, "ಈ ವಿಚಾರವಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿಗಳು ನಮಗೆ ಸಮಯ ನೀಡುತ್ತಿಲ್ಲ. ಇನ್ನು ಈ ನೀರನ್ನು ಪಂಪ್ ಮಾಡಿ ಬೇರೆ ಕಡೆ ಸಂಗ್ರಹಣೆ ಮಾಡಬೇಕು ಎಂಬ ಪ್ರಸ್ತಾವನೆ ವರದಿಯೂ ನಮ್ಮ ಮುಂದೆ ಇದೆ. ಈ ವಿಚಾರವಾಗಿ ಮಂಡಳಿಯಲ್ಲಿ ಚರ್ಚೆ ಮಾಡಲು ಆಂಧ್ರ ಸಿಎಂ ಮುಂದಾಗುತ್ತಿಲ್ಲ. ಅವರಿಗೆ ಈಗ ಹೆಚ್ಚಿನ ನೀರು ಸಿಗುತ್ತಿದೆ. ಹೀಗಾಗಿ ಅವರು ಈ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ. ಈ ಬಗ್ಗೆ ಏನೇ ತೀರ್ಮಾನ ಆಗಬೇಕಿದ್ದರೂ ಮಂಡಳಿಯಲ್ಲಿ ತೀರ್ಮಾನ ಆಗಬೇಕು" ಎಂದು ತಿಳಿಸಿದರು.
ಚೀನಾ ಮಾದರಿಯಲ್ಲಿ ಹೂಳು ಎತ್ತಬಹುದು ಎಂದು ಕೇಳಿದಾಗ, "ಈ ಹೂಳನ್ನು ಎತ್ತಿ ಬೇರೆ ಕಡೆ ಹಾಕುವುದು ಸುಲಭದ ಮಾತಲ್ಲ. ಇದನ್ನು ಖಾಸಗಿಯವರಿಗೆ ನೀಡಬೇಕು. ಖಾಸಗಿ ಅವರಿಗೆ ಲಾಭ ಆಗುವುದಿದ್ದರೆ ಅವರು ಅದನ್ನು ಮಾಡುತ್ತಾರೆ. ಅಲ್ಲಿ ತೆಗೆದ ಹೂಳನ್ನು ಎಲ್ಲಿ ಹಾಕಬೇಕು? ಇದನ್ನು ಖಾಸಗಿಯವರಿಗೆ ನೀಡಬೇಕಾದರೆ ಜಾಗತಿಕ ಟೆಂಡರ್ ಕರೆಯಬೇಕು" ಎಂದರು.
ಅಣೆಕಟ್ಟು ಎತ್ತರ ಹೆಚ್ಚಳ ಪ್ರಸ್ತಾಪವಿಲ್ಲ
ಅಣೆಕಟ್ಟು ಎತ್ತರ ಮಾಡಲಾಗುವುದೇ ಎಂದು ಕೇಳಿದಾಗ, "ಆ ವಿಚಾರಕ್ಕೆ ಕೈ ಹಾಕುವುದಿಲ್ಲ. ಈಗ ಇರುವ ವ್ಯವಸ್ಥೆಯಲ್ಲಿ ವ್ಯರ್ಥವಾಗುತ್ತಿರುವ ನೀರನ್ನು ಉಳಿಸಿಕೊಳ್ಳಲು ದಾರಿ ಹುಡುಕಲಾಗುತ್ತಿದೆ" ಎಂದು ತಿಳಿಸಿದರು.
ಗೇಟ್ ಗಾತ್ರ 2 ಅಡಿ ಎತ್ತರ ಮಾಡಲಾಗಿದ್ದು, ಹೆಚ್ಚಿನ ನೀರು ಸಂಗ್ರಹದ ಬಗ್ಗೆ ಕೇಳಿದಾಗ, "ನಾನು ಈ ತಾಂತ್ರಿಕ ವಿಚಾರವಾಗಿ ಮಾತನಾಡಿ ವಿವಾದ ಮಾಡಿಕೊಳ್ಳುವುದಿಲ್ಲ. ನಮ್ಮ ಅಣೆಕಟ್ಟು ಭದ್ರತೆಗೆ ಅಗತ್ಯ ತೀರ್ಮಾನ ಮಾಡಿದ್ದೇವೆ" ಎಂದು ತಿಳಿಸಿದರು.
ರಾಜ್ಯದಲ್ಲಿ 86 ಸಾವಿರ ಕಡತಗಳು ವಿಲೇವಾರಿ ಆಗದೆ ಬಾಕಿ ಉಳಿದಿವೆ ಎಂದು ಕೇಳಿದಾಗ, "ಈ ವಿಚಾರವಾಗಿ ಸಿಎಂ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿದ್ದು, ಎಲ್ಲವನ್ನು ವಿಲೇವಾರಿ ಮಾಡಲು ಹೇಳಿದ್ದಾರೆ. ಇವುಗಳ ಸರ್ಕಾರಿ ಆದೇಶ ಹೊರಡಿಸಲು ಸೂಚಿಸಿದ್ದಾರೆ" ಎಂದರು.
ಕೈಗಾರಿಗೆಗಳಿಂದಾಗಿ ಅಣೆಕಟ್ಟು ನೀರು ಕಲುಷಿತವಾಗುತ್ತಿದೆ ಎಂದು ಕೇಳಿದಾಗ, "ಈ ಬಗ್ಗೆ ವರದಿ ತರಿಸಿಕೊಂಡು ನೋಡುತ್ತೇವೆ" ಎಂದರು.