Sringeri Postal Ballot recount: ಶೃಂಗೇರಿ ಕಾಂಗ್ರೆಸ್ ಅಭ್ಯರ್ಥಿಯ ಅಂಚೆ ಮತ ತಿದ್ದಿ ಷಡ್ಯಂತ್ರ; ಕಾನೂನು ಹೋರಾಟ ಮಾಡ್ತೇವೆ ಎಂದ ಡಿಕೆಶಿ
ಮಾಜಿ ಶಾಸಕ ಜೀವರಾಜ್ ಅವರು ಅಧಿಕಾರಿಗಳ ದುರ್ಬಳಕೆ ಮಾಡಿಕೊಂಡು ಅಂಚೆ ಮತಗಳಲ್ಲಿ ಅಕ್ರಮ ಮಾಡಿದ್ದಾರೆ ಎಂದು ವರದಿಯಾಗಿದೆ. ಜಯನಗರ ಕ್ಷೇತ್ರದಲ್ಲೂ ನಮಗೆ ಇದೇ ರೀತಿ ಅನ್ಯಾಯ ಮಾಡಲಾಗಿದೆ. ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್. -
ಬೆಂಗಳೂರು/ಹೊಸಪೇಟೆ, ಮೇ 03: ಚಿಕ್ಕಮಗಳೂರಿನ ಶೃಂಗೇರಿಯಲ್ಲಿ (Sringeri Postal Ballot recount) ದೊಡ್ಡ ಪ್ರಮಾಣದಲ್ಲಿ ಷಡ್ಯಂತ್ರ ಹಾಗೂ ವ್ಯವಸ್ಥಿತ ಅಪರಾಧ ನಡೆದಿದೆ. ಇದು ದೇಶ, ಪ್ರಜಾಪ್ರಭುತ್ವಕ್ಕೆ ಕಳಂಕ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕಿಡಿಕಾರಿದರು. ಬೆಂಗಳೂರಿನ ಸದಾಶಿವನಗರ ನಿವಾಸ ಹಾಗೂ ಹೊಸಪೇಟೆಯಲ್ಲಿ ಮಾಧ್ಯಮಗಳಿಗೆ ಅವರು ಭಾನುವಾರ ಪ್ರತಿಕ್ರಿಯೆ ನೀಡಿದರು.
"ಈ ರೀತಿಯೂ ಮಾಡುತ್ತಾರೆ ಎಂದು ಊಹೆ ಮಾಡಿರಲಿಲ್ಲ. ಮಾಜಿ ಶಾಸಕ ಜೀವರಾಜ್ ಅವರು ಅಧಿಕಾರಿಗಳ ದುರ್ಬಳಕೆ ಮಾಡಿಕೊಂಡು ಅಂಚೆ ಮತಗಳಲ್ಲಿ ಅಕ್ರಮ ಮಾಡಿದ್ದಾರೆ ಎಂದು ವರದಿಯಾಗಿದೆ. ನಮ್ಮ ಸ್ಥಳೀಯ ಅಭ್ಯರ್ಥಿಗಳು, ಏಜೆಂಟರು ದೂರು ನೀಡಿದ್ದರು. ಚುನಾವಣೆ ಮತ ಎಣಿಕೆ ಬಳಿಕ ನಮ್ಮ ಎಜೆಂಟರು ಅವರ ಎಜೆಂಟರು ಹಾಗೂ ಅಧಿಕಾರಿಗಳು ಸಹಿ ಹಾಕಿದ್ದಾರೆ. ಇದಾದ ಬಳಿಕ ಈ ರೀತಿ ನಡೆಸಿದ್ದಾರೆ" ಎಂದರು.
ಕಾನೂನು ಹೋರಾಟ ಮಾಡುತ್ತೇವೆ
"ಎಲ್ಲಾ ರಾಜಕೀಯ ಪಕ್ಷಗಳು ಈ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ನಮ್ಮ ಅಭ್ಯರ್ಥಿಗೆ ಬಂದ ಅಂಚೆ ಮತಗಳನ್ನು ತಿದ್ದಿ ಅವುಗಳನ್ನು ಅಸಿಂಧುಗೊಳಿಸಲು ಷಡ್ಯಂತ್ರ ಮಾಡಲಾಗಿತ್ತು. ಈ ವಿಚಾರವಾಗಿ ದೊಡ್ಡ ತನಿಖೆ ಆಗಬೇಕು. ಕಾನೂನು ಹಾಗೂ ನ್ಯಾಯಾಲಯದಲ್ಲಿ ಇರುವ ಅವಕಾಶದಲ್ಲಿ ಹೋರಾಟ ಮಾಡಲಾಗುವುದು. ಜಯನಗರ ಕ್ಷೇತ್ರದಲ್ಲೂ ಇದೇ ರೀತಿ ಅನ್ಯಾಯ ಮಾಡಲಾಗಿದೆ. ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಅಂಚೆ ಮತಪತ್ರಗಳನ್ನು ತಿರುಚಲಾಗಿದೆ: ಶಾಸಕ ಟಿ.ಡಿ.ರಾಜೇಗೌಡ ಆರೋಪ
ಚಿಕ್ಕಮಗಳೂರು: ಶೃಂಗೇರಿ ಕ್ಷೇತ್ರದ ಮರು ಮತ ಎಣಿಕೆಯಲ್ಲಿ ಅಂಚೆ ಮತಪತ್ರಗಳನ್ನು ತಿರುಚಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಆರೋಪಿಸಿದ್ದಾರೆ. ಅಂಚೆ ಮತಪತ್ರಗಳ ಮರು ಎಣಿಕೆ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಟ್ರ್ಯಾಂಗ್‌ರೂಮ್‌ನಲ್ಲಿ ಸಂರಕ್ಷಿಸಲಾದ ಬಾಕ್ಸ್‌ಗಳನ್ನು ಪರಿಶೀಲಿಸಿದ ವೇಳೆ ಬೀಗ ಒಡೆದಿರುವುದು, ಟ್ರಂಕ್‌ಗಳನ್ನೇ ಮುರಿದಿರುವುದು ಕಂಡುಬರುತ್ತದೆ. ನನಗೆ ಇದ್ದ ಅಂಚೆ ಮತಗಳಲ್ಲಿ ಮತ್ತೊಂದು ಗೆರೆ ಎಳೆಯುವ ಮೂಲಕ ಅದನ್ನು ಅಮಾನ್ಯಗೊಳಿಸಲು ಸಂಚು ನಡೆದಿದೆ ಎಂದು ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶ ನಾಳೆ ಘೋಷಣೆ: ಫಾಲ್ಟಾ ಕ್ಷೇತ್ರಕ್ಕಿಲ್ಲ ನಾಯಕನ ಆಯ್ಕೆ
ಮತಪತ್ರದಲ್ಲಿ ಮತದಾರರು ಬಳಸಿದ ಪೆನ್ನಿಗಿಂತಲೂ ಭಿನ್ನವಾದ ಒಂದೇ ಇಂಕಿನ ಪೆನ್ನನ್ನು ಬಳಸಿ ಗೆರೆ ಎಳೆಯಲಾಗಿದೆ. ನನಗೆ ಬಂದಿದ್ದ ಮತಗಳಲ್ಲಿ 158 ಅಮಾನ್ಯವಾಗಿವೆ. ಈ ಕೃತ್ಯವನ್ನು ಮೂರು ವರ್ಷಗಳ ಹಿಂದೆಯೇ ಮಾಡಲಾಗಿದೆ ಎಂದು ಆರೋಪಿಸಿರುವ ಅವರು, ಮತಗಳನ್ನು ತಿರುಚಿರುವುದರ ವಿರುದ್ಧ ತಾವು ಮಾಜಿ ಶಾಸಕ ಡಿ.ಎನ್.ಜೀವರಾಜ್ ಹಾಗೂ ಅವರ ಬೆಂಬಲಿಗರ ವಿರುದ್ಧ ದೂರು ನೀಡಿದ್ದೇವೆ ಎಂದು ಹೇಳಿದ್ದಾರೆ.