ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಾರತ–ಅಮೆರಿಕ ಕೃಷಿ ಸಹಕಾರಕ್ಕೆ ಹೊಸ ಚೈತನ್ಯ: ಇಫ್ಕೋ ಅಧ್ಯಕ್ಷ ದಿಲೀಪ್ ಸಂಘಾಣಿ ನೇತೃತ್ವದ ಸಂವಾದಕ್ಕೆ USIBC ಮೆಚ್ಚುಗೆ

ವಾಷಿಂಗ್ಟನ್ನಲ್ಲಿ ನಡೆದ ಈ ಸಭೆಯಲ್ಲಿ ಕೃಷಿ ನವೋದ್ಯಮ, ಸುಸ್ಥಿರ ಕೃಷಿ ಅಭಿವೃದ್ಧಿ, ಆಹಾರ ಮತ್ತು ಪೌಷ್ಟಿಕ ಭದ್ರತೆ, ಮಣ್ಣಿನ ಆರೋಗ್ಯ ಸುಧಾರಣೆ ಹಾಗೂ ರೈತರ ಸಮೃದ್ಧಿಗೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ವ್ಯಾಪಕ ಚರ್ಚೆಗಳು ನಡೆದವು. ಕೃಷಿ ಉತ್ಪಾದಕತೆ ಹೆಚ್ಚಿಸುವುದು, ಆಧುನಿಕ ತಂತ್ರಜ್ಞಾನಗಳ ಬಳಕೆಯನ್ನು ಉತ್ತೇಜಿಸುವುದು ಹಾಗೂ ರೈತರಿಗೆ ತಾಂತ್ರಿಕ ನೆರವು ಒದಗಿಸುವ ವಿಷಯಗಳಿಗೂ ಆದ್ಯತೆ ನೀಡಲಾಯಿತು.

ಬೆಂಗಳೂರು: ಭಾರತ ಮತ್ತು ಅಮೆರಿಕ ನಡುವಿನ ಕೃಷಿ ಸಹಕಾರವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ನಡೆದ ಮಹತ್ವದ ಸಂವಾದಕ್ಕೆ ಅಮೆರಿಕ–ಭಾರತ ವಾಣಿಜ್ಯ ಮಂಡಳಿ U.S.-India Business Council (USIBC) ಮೆಚ್ಚುಗೆ ವ್ಯಕ್ತಪಡಿಸಿದೆ. ಇಫ್ಕೋ ಅಧ್ಯಕ್ಷ ದಿಲೀಪ್ ಸಂಘಾಣಿ ಅವರ ನೇತೃತ್ವದ ನಿಯೋಗದೊಂದಿಗೆ ನಡೆದ ಸಭೆಯು ಉಭಯ ದೇಶಗಳ ಕೃಷಿ ಕ್ಷೇತ್ರದ ಸಹಕಾರಕ್ಕೆ ಹೊಸ ಚೈತನ್ಯ ನೀಡಲಿದೆ ಎಂದು ಮಂಡಳಿ (USIBC) ತಿಳಿಸಿದೆ.

ವಾಷಿಂಗ್ಟನ್ನಲ್ಲಿ ನಡೆದ ಈ ಸಭೆಯಲ್ಲಿ ಕೃಷಿ ನವೋದ್ಯಮ, ಸುಸ್ಥಿರ ಕೃಷಿ ಅಭಿವೃದ್ಧಿ, ಆಹಾರ ಮತ್ತು ಪೌಷ್ಟಿಕ ಭದ್ರತೆ, ಮಣ್ಣಿನ ಆರೋಗ್ಯ ಸುಧಾರಣೆ ಹಾಗೂ ರೈತರ ಸಮೃದ್ಧಿಗೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ವ್ಯಾಪಕ ಚರ್ಚೆಗಳು ನಡೆದವು. ಕೃಷಿ ಉತ್ಪಾದಕತೆ ಹೆಚ್ಚಿಸುವುದು, ಆಧುನಿಕ ತಂತ್ರಜ್ಞಾನಗಳ ಬಳಕೆಯನ್ನು ಉತ್ತೇಜಿಸುವುದು ಹಾಗೂ ರೈತರಿಗೆ ತಾಂತ್ರಿಕ ನೆರವು ಒದಗಿಸುವ ವಿಷಯಗಳಿಗೂ ಆದ್ಯತೆ ನೀಡಲಾಯಿತು.

ಇದನ್ನೂ ಓದಿ: Bangalore News: ಬೂಸ್ಟ್, ಐಐಎಸ್‌ಸಿಯಲ್ಲಿ 'ವಾಧ್ವಾನಿ ಇನ್ನೋವೇಶನ್ ಸೆಂಟರ್' ಆರಂಭ

ಸಭೆಯ ನಂತರ ಅಮೆರಿಕ–ಭಾರತ ವಾಣಿಜ್ಯ ಮಂಡಳಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಗಳಲ್ಲಿ ಈ ಸಂವಾದವನ್ನು ಭಾರತ–ಅಮೆರಿಕ ಕೃಷಿ ಸಹಕಾರವನ್ನು ಬಲಪಡಿಸುವ ಪ್ರಮುಖ ಪ್ರಯತ್ನವೆಂದು ಬಣ್ಣಿಸಿದೆ. ಎರಡೂ ರಾಷ್ಟ್ರಗಳ ನಡುವೆ ಜ್ಞಾನ, ತಂತ್ರಜ್ಞಾನ ಮತ್ತು ಉತ್ತಮ ಕೃಷಿ ಪದ್ಧತಿಗಳ ವಿನಿಮಯವು ರೈತರಿಗೆ ದೀರ್ಘಕಾಲೀನ ಲಾಭ ತರುವ ಸಾಧ್ಯತೆ ಇದೆ ಎಂದು ಮಂಡಳಿ ಅಭಿಪ್ರಾಯಪಟ್ಟಿದೆ.

ಅಮೆರಿಕದ ಪ್ರಮುಖ ವ್ಯಾಪಾರ ಮತ್ತು ಕೈಗಾರಿಕಾ ಸಂಸ್ಥೆಗಳಲ್ಲಿ ಒಂದಾದ ಈ ಮಂಡಳಿ ಸಭೆಗೆ ನೀಡಿರುವ ಮಹತ್ವವು ಭಾರತೀಯ ಸಹಕಾರ ಚಳವಳಿಗೆ ಜಾಗತಿಕ ಮಟ್ಟದಲ್ಲಿ ದೊರೆಯುತ್ತಿರುವ ಮಾನ್ಯತೆಯನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ, ಇಫ್ಕೋದ ಅಂತರರಾಷ್ಟ್ರೀಯ ಖ್ಯಾತಿ ಹಾಗೂ ಜಾಗತಿಕ ವೇದಿಕೆಗಳಲ್ಲಿ ಭಾರತೀಯ ರೈತರ ಹಿತಾಸಕ್ತಿಗಳನ್ನು ಪರಿಣಾಮಕಾರಿಯಾಗಿ ಪ್ರತಿನಿಧಿ ಸುತ್ತಿರುವ ದಿಲೀಪ್ ಸಂಘಾಣಿ ಅವರ ನಾಯಕತ್ವಕ್ಕೂ ಇದು ಸಾಕ್ಷಿಯಾಗಿದೆ.

ಕೃಷಿ ತಜ್ಞರು, ನೀತಿ ನಿರ್ಧಾರಕರು ಮತ್ತು ಕೈಗಾರಿಕಾ ಪ್ರತಿನಿಧಿಗಳು ಭಾರತ–ಅಮೆರಿಕ ಸಹಕಾರ ವನ್ನು ಇನ್ನಷ್ಟು ವಿಸ್ತರಿಸುವುದರಿಂದ ಕೃಷಿ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗಿ ರೈತರ ಆದಾಯ ಮತ್ತು ಉತ್ಪಾದಕತೆ ಹೆಚ್ಚಳಕ್ಕೆ ನೆರವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದಿಲೀಪ್ ಸಂಘಾಣಿ ಅವರ ನೇತೃತ್ವದಲ್ಲಿ ನಡೆದ ಈ ಸಂವಾದವನ್ನು ಭಾರತ–ಅಮೆರಿಕ ಕೃಷಿ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದ್ದು, ಜಾಗತಿಕ ಮಟ್ಟದಲ್ಲಿ ಸಹಕಾರ ಆಧಾರಿತ ಕೃಷಿ ಅಭಿವೃದ್ಧಿಗೆ ಹೊಸ ದಿಕ್ಕು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.