ಬೆಂಗಳೂರು: ಕೆಪಿಎಸ್‌ಸಿ ನೇಮಕಾತಿ ಹಗರಣ(KPSC Recruitment Scam) ಪ್ರಕರಣದಲ್ಲಿ ಸಿಐಡಿ ವಿಚಾರಣೆ ಎದುರಿಸುತ್ತಿರುವ ಶಿವಶಂಕರಪ್ಪ ಸಾಹುಕಾರ್(Shivashankarappa Sahukar) ಹಗರಣ ಒಪ್ಪಿಕೊಳ್ಳುವುದಕ್ಕೆ ನಕಾರ ವ್ಯಕ್ತಪಡಿಸಿದ್ದಾರೆ. ಸಿಐಡಿ(CID) ವಿಚಾರಣೆ ಸಂದರ್ಭದಲ್ಲಿ, ನಾನು ಮಗಳ ವಿಚಾರದಲ್ಲಿ ತಪ್ಪು ಮಾಡಿದ್ದೇನೆಯೇ ಹೊರತು ಪರೀಕ್ಷೆಯಲ್ಲಿ ಅಲ್ಲ. ಮಗಳ ವಿಚಾರದಲ್ಲಿ ತಾಂತ್ರಿಕ ತಪ್ಪುಗಳಾಗಿರಬಹುದು. ಅದನ್ನು ಹೊರತುಪಡಿಸಿ ಯಾರೊಂದಿಗೂ ನಾನು ವ್ಯವಹಾರ ಮಾಡಿಲ್ಲ ಎಂದು ಶಿವಶಂಕರಪ್ಪ ಹೇಳಿದ್ದಾರೆ ಎಂಬುದು ಸಿಐಡಿ ಮೂಲಗಳು ತಿಳಿಸಿದೆ.
ಜ್ಞಾನೇಂದ್ರ ಜತೆ ನನ್ನದು ಬರೀ ಆಡಳಿತ ವ್ಯವಹಾರ. ಅದನ್ನು ಬಿಟ್ಟು ಹಣಕಾಸಿನ ಮಾತು ಕತೆ ಯಾಗಲಿ, ಪರೀಕ್ಷೆ ವಿಚಾರ ಆಗಲಿ ಮಾತನಾಡಿಲ್ಲ. ಬಸವರಾಜ್ ಕನ್ನಾಳೆ(Basavaraj Kannale) ಯನ್ನು ನಾನು ಮುಖಾಮುಖಿ ಭೇಟಿಯೂ ಆಗಿಲ್ಲ. ನಾನು ಈ ಅವ್ಯವಹಾರದಲ್ಲಿ ಪರೋಕ್ಷವಾಗಿ ಯೂ ಕೈ ಹಾಕಿಲ್ಲ ಎಂದು ಸಿಐಡಿ ಮುಂದೆ ಹೇಳಿದ್ದಾರೆ. ಈ ಹಿಂದೆಯೇ ಸಾಕಷ್ಟು ವಿಚಾರದಲ್ಲಿ ನೋವು ಪಟ್ಟಿದ್ದೇನೆ ಎಂದು ಸಿಐಡಿ ಮುಂದೆ ಶಿವಶಂಕರಪ್ಪ ಗೋಳಾಡಿದ್ದಾರೆ.
ಇದನ್ನೂ ಓದಿ: KPSC Recruitment Scam: ಕೆಪಿಎಸ್‌ಸಿ ಹಗರಣ: ಜ್ಞಾನೇಂದ್ರ ಅಮಾನತು: ಕರ್ಮಕಾಂಡಕ್ಕೆ ಮತ್ತೊಂದು ಬಲಿ
ರೆಸಾರ್ಟ್‌ನಲ್ಲಿ ತರಬೇತಿ: ಪಶುವೈದ್ಯರ ನೇಮಕಾತಿಯಲ್ಲಿ ಅಕ್ರಮ(Illegality in the recruitment of veterinarians)ಕ್ಕೆ ಸಂಬಂಧಿಸಿದಂತೆ ಪಶು ವೈದ್ಯಾಧಿಕಾರಿ ಹುದ್ದೆ ಪಡೆಯಲು ಹಣ ಕೊಟ್ಟಿದ್ದ ಅಭ್ಯರ್ಥಿಗಳಿಗೆ ನಗರದ ಹೊರವಲಯದ ರೆಸಾರ್ಟ್‌ನಲ್ಲಿ ಪರೀಕ್ಷೆ ಬರೆಯಲು ತರಬೇತಿ ನೀಡಲಾಗಿದೆ ಎಂಬುದು ತನಿಖೆಯಿಂದ ಗೊತ್ತಾಗಿದೆ. ನಗರ ಹೊರವಲಯದ ದೇವನ ಹಳ್ಳಿಯಲ್ಲಿರುವ ವಿ ಕಂ ರೆಸಾರ್ಟ್‌ನಲ್ಲಿ ಹಣಕೊಟ್ಟ ಅಭ್ಯರ್ಥಿ ಗಳಿಗೆ ಪ್ರಶ್ನೆಗಳಿಗೆ ಹೇಗೆ ಉತ್ತರ ಬರೆಯ ಬೇಕೆಂಬುವುದು ತರಬೇತಿ ನೀಡಲಾಗಿತ್ತು ಎಂದು ತಿಳಿದು ಬಂದಿದೆ.
ಪರೀಕ್ಷೆಗೆ ಒಂದು ವಾರ ಮುಂಚಿತವಾಗಿ ಈ ರೆಸಾರ್ಟ್‌ನಲ್ಲಿ ಎಂಟರಿಂದ ಹತ್ತು ಮಂದಿ ಅಭ್ಯರ್ಥಿ ಗಳಿಗೆ ತರಬೇತಿ ನೀಡಲಾಗಿದೆ ಎಂಬುವುದು ಕಂಡು ಬಂದಿದೆ. ಈ ಬಗ್ಗೆ ಮಾಹಿತಿ ಪಡೆದು ಇ.ಡಿ ಹಾಗೂ ಸಿಐಡಿ ಅಽಕಾರಿಗಳು ಈ ರೆಸಾರ್ಟ್ ಮೇಲೆ ದಾಳಿ ನಡೆಸಿ ಹಲವಾರು ಸಾಕ್ಷಿಗಳನ್ನು ಕಲೆ ಹಾಕಿದ್ದಾರೆ. ಈ ನಡುವೆ ಹಗರಣದ ಕಿಂಗ್ಪಿನ್ ಎಂದು ಹೇಳಲಾಗಿರುವ ಬಸವರಾಜ್ ಕನ್ನಾಳೆಯನ್ನು ಸಿಐಡಿ ಪೊಲೀಸರು ಅಲ್ಲಿಗೆ ಕರೆದುಕೊಂಡು ಹೋಗಿ ಸ್ಥಳ ಮಹಜರು ಸಹ ಮಾಡಿದ್ದಾರೆ.
ತನಿಖೆಯನ್ನು ಚುರುಕುಗೊಳಿಸಿರುವ ಸಿಐಡಿ ಪೊಲೀಸರು ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ಸಹ 2ನೇ ಬಾರಿ ವಿಚಾರಣೆಗೆ ಒಳಪಡಿಸಿ ಕೆಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.
ಡಿವೈಎಸ್‌ಪಿಗಳೊಂದಿಗೆ ಕೆಪಿಎಸ್‌ಸಿ ಅಕ್ರಮದ ಆರೋಪಿ ದರ್ಶನ: ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ಹಾಗೂ ಮಧ್ಯವರ್ತಿ ಎನ್ನಲಾಗಿರುವ ಬಸವ ರಾಜ್ ಕನ್ನಾಳೆ, ಪೊಲೀಸ್ ಇಲಾಖೆಯ 9 ಮಂದಿ ಡಿವೈಎಸ್‌ಪಿ ಹಂತದ ಅಧಿಕಾರಿಗಳೊಂದಿಗೆ ಇರುವ ಫೋಟೋವೊಂದು ವೈರಲ್ ಆಗಿದ್ದು, ತೀವ್ರ ಚರ್ಚೆ ಹುಟ್ಟುಹಾಕಿದೆ.
ಮೈಸೂರಿನ ಪೊಲೀಸ್ ಅಕಾಡಮಿಯಲ್ಲಿ 2023-24ನೇ ಸಾಲಿನ ಪಾಸಿಂಗ್ ಔಟ್ ಪರೇಡ್ ವೇಳೆ ಈ ಫೋಟೋ ತೆಗೆಯಲಾಗಿದೆ ಎಂದು ಹೇಳಲಾಗಿದೆ. ಅಬಕಾರಿ ಡಿವೈಎಸ್‌ಪಿ ಹರ್ಷ, ಡಿವೈಎಸ್ ಪಿಗಳಾದ ಗೀತಾ ಪಾಟೀಲ, ಮುರ್ತುಜಾ ಖಾದ್ರಿ, ಗಾಯತ್ರಿ, ವಿಶ್ವನಾಥ್, ಮುಡೋಳಪ್ಪ, ಸಂತೋಷ್ ಹಾಗೂ ವಿಜಯ ಕ್ರಾಂತಿ ಅವ ರೊಂದಿಗೆ ಕನ್ನಾಳೆ ಕಾಣಿಸಿಕೊಂಡಿದ್ದಾನೆ.
ಈ ಹಿನ್ನೆಲೆಯಲ್ಲಿ ಆರೋಪಿಗೆ ಇರುವ ರಾಜಕೀಯ ಹಾಗೂ ಆಡಳಿತ ವಲಯದ ಪ್ರಭಾವಿಗಳ ಸಂಪ ರ್ಕದ ಬಗ್ಗೆಯೂ ತನಿಖಾ ಸಂಸ್ಥೆಗಳು ಗಮನ ಹರಿಸಿವೆ. ಕನ್ನಾಳೆ ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯನಾಗಿದ್ದ ಅವಧಿಯಲ್ಲಿ ಕುಲಪತಿ ಹುದ್ದೆ ಕೊಡಿಸುವುದಾಗಿ ಪ್ರಾಧ್ಯಾಪಕ ರೊಂದಿಗೆ ವ್ಯವಹಾರ ನಡೆಸಿದ ಹಾಗೂ ನಿವೃತ್ತ ಕುಲಪತಿಯೊಬ್ಬರಿಂದ ಹಣ ಹೂಡಿಕೆ ಮಾಡಿಸಿ ಕೊಂಡ ಗಂಭೀರ ಆರೋಪಗಳು ಕೇಳಿಬಂದಿವೆ. ತನಿಖಾಧಿಕಾರಿಗಳು ಈಗಾಗಲೇ ಈತನ ದೂರ ವಾಣಿ ಕರೆಗಳ ಮಾಹಿತಿ ಸಂಗ್ರಹಿಸಿದ್ದಾರೆ. ಎಬಿವಿಪಿ ಸಂಘಟನೆಯು ಕನ್ನಾಳೆಯನ್ನು ಸಿಂಡಿ ಕೇಟ್ ಸದಸ್ಯ ಸ್ಥಾನದಿಂದ ವಜಾಗೊಳಿಸು ವಂತೆ ಆಗ್ರಹಿಸಿದ್ದರೂ, ವಿವಿ ಆಡಳಿತ ಮಂಡಳಿ ಆತ ನಿಗೆ ಕ್ಲೀನ್ ಚಿಟ್ ನೀಡಿದೆ ಎನ್ನಲಾಗಿದೆ.
ಇದೇ ಹಗರಣಕ್ಕೆ ಸಂಬಂಧಿಸಿದಂತೆ, ಸಿಐಡಿ ವಿಚಾರಣೆ ವೇಳೆ ಸ್ಪಷ್ಟ ಉತ್ತರ ನೀಡದೆ ‘ಗೊತ್ತಿಲ್ಲ’ ಎಂದು ಉತ್ತರಿಸಿದ್ದ ಕೆಪಿಎಸ್‌ಸಿಯ ಹಿಂದಿನ ಪರೀಕ್ಷಾ ನಿಯಂತ್ರಕ, ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್(Gyanendra Kumar Gangwar) ಅವರನ್ನು ರಾಜ್ಯ ಸರಕಾರ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ದುಡ್ಡು ಕೊಟ್ಟ ದಡ್ಡ ಶಿಖಾಮಣಿಗಳಿಗೆ ಹುದ್ದೆ
ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ದೊಡ್ಡಮಟ್ಟದ ಅಕ್ರಮ ನಡೆದಿರುವುದು ಸಿಐಡಿ ತನಿಖೆಯಿಂದ ಬಯಲಾಗಿದೆ. ಈ ಹಗರಣದ ತನಿಖೆ ನಡೆಸುತ್ತಿರುವ ಪೊಲೀಸರು, ಆಯ್ಕೆಯಾದ ಟಾಪರ್ಸ್ ಪಟ್ಟಿಯನ್ನು ನೋಡಿ ಆಘಾತಕ್ಕೊಳಗಾಗಿzರೆ. ಪರೀಕ್ಷೆಯು ಅತ್ಯಂತ ಕಠಿಣವಾಗಿತ್ತು. ಆದರೂ, ಡಿಗ್ರಿಯಲ್ಲಿ ಕಳಪೆ ಅಂಕಗಳನ್ನು ಗಳಿಸಿ, ಹಲವು ಬಾರಿ ಪಾಸಾಗಲು ಪ್ರಯತ್ನಿಸಿ ಕೊನೆಗೆ ಪಾಸಾಗಿದ್ದವರು ಪಶುವೈದ್ಯಾಧಿಕಾರಿಗಳ ನೇಮಕಾತಿ ಪಟ್ಟಿಯಲ್ಲಿ ಟಾಪರ್ಸ್ ಪಟ್ಟಿಯಲ್ಲಿರುವುದು ಕಂಡುಬಂದಿದೆ. ಓಎಂಆರ್ ಶೀಟ್‌ಗಳಲ್ಲಿ ತಿದ್ದುಪಡಿ, ನಕಲಿ ಜಾತಿ ಪ್ರಮಾಣಪತ್ರಗಳ ಸೃಷ್ಟಿ, ಮತ್ತು ಹಣದ ವಿನಿಮಯದ ಮೂಲಕ ಅಕ್ರಮ ನೇಮಕಾತಿ ನಡೆದಿರುವುದನ್ನು ಸಿಐಡಿ ಪತ್ತೆ ಮಾಡಿದೆ. ಪ್ರತಿ ಹುದ್ದೆಗೆ 80 ಲಕ್ಷದಿಂದ 1 ಕೋಟಿ ರು.ವರೆಗೂ ಹಣದ ವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಹಗರಣದಲ್ಲಿ ಕೆಪಿಎಸ್ಸಿ ಅಧಿಕಾರಿಗಳು, ಅಧ್ಯಕ್ಷರು, ಸದಸ್ಯರು ಹಾಗೂ ಪರೀಕ್ಷಾ ಕಸ್ಟೋಡಿಯನ್ ಗಳು ಭಾಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ. ಬಸವರಾಜ್ ಕನ್ನಾಳೆಯ ಮನೆಯಲ್ಲಿ ದೊರೆತ ಡೈರಿಯು ಈ ಅಕ್ರಮಗಳ ಬಗ್ಗೆ ಮತ್ತಷ್ಟು ಸುಳಿವುಗಳನ್ನು ನೀಡಿದೆ. ಈ ಹಗರಣದಲ್ಲಿ ಭಾಗಿಯಾದ 29 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.