'ರೇಸ್ ಫಾರ್ 7' ರನ್ ಕಾರ್ಯಕ್ರಮವು ಅಪರೂಪದ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿ ಸಲು, ಆರಂಭಿಕ ಹಂತದಲ್ಲಿ ರೋಗನಿರ್ಣಯವನ್ನು ಉತ್ತೇಜಿಸಲು ಮತ್ತು ದೇಶಾದ್ಯಂತ ಚಿಕಿತ್ಸೆಯ ಲಭ್ಯತೆಯನ್ನು ಸುಧಾರಿಸಲು ಕರೆ ನೀಡುತ್ತಿದೆ
ಬೆಂಗಳೂರು: ನೋವೊ ನಾರ್ಡಿಸ್ಕ್ ಇಂಡಿಯಾ ಮತ್ತು ಆರ್ಗನೈಸೇಶನ್ ಫಾರ್ ರೇರ್ ಡಿಸೀಸ್ ಇನ್ ಇಂಡಿಯಾ (ಓ ಆರ್ ಡಿ ಐ) ಸಂಸ್ಥೆಗಳು ಸಹಭಾಗಿತ್ವದಲ್ಲಿ ಬೆಂಗಳೂರಿನಲ್ಲಿ 11ನೇ ಆವೃತ್ತಿಯ 'ರೇಸ್ ಫಾರ್ 7' ಓಟವನ್ನು ಯಶಸ್ವಿಯಾಗಿ ಆಯೋಜಿಸಿವೆ. ಕರ್ನಾಟಕ ಸರ್ಕಾರದ ಗೌರವಾನ್ವಿತ ಆರೋಗ್ಯ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಮತ್ತು ಓಆರ್‌ಡಿಐ ಸಹ-ಸಂಸ್ಥಾಪಕ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಶಿರೋಳ್ ಅವರು ಈ ಓಟಕ್ಕೆ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ರೋಗಿಗಳು, ಆರೈಕೆದಾರರು ಮತ್ತು ವೈದ್ಯರು ಸೇರಿದಂತೆ ವಿವಿಧ ಕ್ಷೇತ್ರದ ಜನರು ಭಾಗವಹಿಸಿದ್ದರು. ಭಾರತದಲ್ಲಿ ಅಪರೂಪದ ಕಾಯಿಲೆಗಳೊಂದಿಗೆ ಬದುಕುತ್ತಿರುವವರಿಗೆ ಉತ್ತಮ ವೈದ್ಯಕೀಯ ಸೇವೆ ಮತ್ತು ಬೆಂಬಲವನ್ನು ಒದಗಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಧ್ವನಿ ಎತ್ತಿದರು.
ಇದನ್ನೂ ಓದಿ: T20 world Cup 2026: ಶ್ರೀಲಂಕಾ ತಂಡದ ವೈಫಲ್ಯದ ಬಗ್ಗೆ ಕುಮಾರ ಸಂಗಕ್ಕಾರ ದೊಡ್ಡ ಹೇಳಿಕೆ!
ಭಾರತದಲ್ಲಿ ಅಪರೂಪದ ಕಾಯಿಲೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ತಡೆಗಟ್ಟುವ ಚಿಕಿತ್ಸಾ ಆಯ್ಕೆಗಳ ಅಗತ್ಯವನ್ನು ತಿಳಿಸಿ ಮಾತನಾಡಿದ ನೋವೊ ನಾರ್ಡಿಸ್ಕ್ ವ್ಯವಸ್ಥಾಪಕ ನಿರ್ದೇಶಕ ವಿಕ್ರಾಂತ್ ಶ್ರೋತ್ರಿಯ ಅವರು, "ಭಾರತದಲ್ಲಿ ಅಪರೂಪದ ಕಾಯಿಲೆಗಳ ನಿರ್ವಹಣೆಗೆ ತಡೆಗಟ್ಟುವಿಕೆ ಮತ್ತು ನಿರಂತರ ಚಿಕಿತ್ಸೆ ಒದಗಿಸುವುದರ ಕಡೆಗೆ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ. 'ಫ್ಯಾಕ್ಟರ್ ಡೆಫಿಷಿಯನ್ಸಿ' ಮತ್ತು 'ಗ್ರೋತ್ ಹಾರ್ಮೋನ್ ಡೆಫಿಷಿಯನ್ಸಿ' ಯಂತಹ ಪರಿಸ್ಥಿತಿಗಳು ಈ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ, ಸಮಯೋಚಿತ ರೋಗನಿರ್ಣಯ ಮತ್ತು ಸುಸ್ಥಿರ ಚಿಕಿತ್ಸಾ ಪದ್ಧತಿಗಳ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತವೆ. 'ರೇಸ್ ಫಾರ್ 7' ನಂತಹ ಯೋಜನೆಗಳು ಸಾರ್ವಜನಿಕ ಚರ್ಚೆಯನ್ನು ಹುಟ್ಟು ಹಾಕಲು ಮತ್ತು ಅಪರೂಪದ ಕಾಯಿಲೆಗಳಿಂದ ಪೀಡಿತರಾದ ರೋಗಿಗಳು ಹಾಗೂ ಕುಟುಂಬಗಳಿಗೆ ಉತ್ತಮ ಫಲಿತಾಂಶ ನೀಡುವ ನೀತಿಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ನೋವೊ ನಾರ್ಡಿಸ್ಕ್ ನಂಬುತ್ತದೆ. ವಿಜ್ಞಾನ ಮತ್ತು ಮಾನವೀ ಯತೆ ಒಂದಾಗಿ, ಯಾವುದೇ ರೋಗಿಯು ಅಸಹಾಯಕನಾಗದಂತಹ ವೈದ್ಯಕೀಯ ವ್ಯವಸ್ಥೆಯನ್ನು ರೂಪಿಸುವುದು ನಮ್ಮ ಬದ್ಧತೆಯಾಗಿದೆ" ಎಂದು ಹೇಳಿದರು.
ಭಾಗವಹಿಸಿದವರಿಗೆ ಧನ್ಯವಾದ ಸಮರ್ಪಿಸಿ ಮಾತನಾಡಿದ ಓಆರ್‌ಡಿಐ ಸಹ-ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಶಿರೋಳ್ ಅವರು, "2016 ರಿಂದ ನಾವು 'ರೇಸ್ ಫಾರ್ 7' ಆಯೋಜಿಸುತ್ತಿದ್ದು, ಈ ಕಾರ್ಯಕ್ರಮವು ರೋಗಿಗಳು ಮತ್ತು ಅವರ ಕುಟುಂಬಗಳನ್ನು ಸಬಲೀಕರಣಗೊಳಿಸುವ ಉದ್ದೇಶದ ಜೊತೆಗೆ ಅಪರೂಪದ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಲು ಸಮರ್ಪಿತವಾಗಿದೆ. ಪ್ರತಿ ವರ್ಷವೂ ನಾವು ಅಭೂತಪೂರ್ವ ಬೆಂಬಲವನ್ನು ಪಡೆಯುತ್ತಿದ್ದು, ಇದು ರೋಗಿಗಳಿಗೆ ಬಲ ತುಂಬುತ್ತದೆ ಮತ್ತು ಆರಂಭಿಕ ರೋಗನಿರ್ಣಯ, ಸಮಯೋಚಿತ ಚಿಕಿತ್ಸೆಯ ಲಭ್ಯತೆ ಮತ್ತು ಅಪರೂಪದ ಕಾಯಿಲೆ ಗಳೊಂದಿಗೆ ಬದುಕುತ್ತಿರುವ ವ್ಯಕ್ತಿಗಳಿಗೆ ಉತ್ತಮ ಆರೋಗ್ಯ ಫಲಿತಾಂಶಗಳನ್ನು ನೀಡುವ ನೀತಿಗಳ ಪ್ರಾಮುಖ್ಯತೆಯನ್ನು ಸಾರುತ್ತದೆ" ಎಂದು ಹೇಳಿದರು.
ರೇಸ್ ಫಾರ್ 7 ಎಂಬುದು ವಾರ್ಷಿಕ ಜಾಗೃತಿ ಓಟ ಕಾರ್ಯಕ್ರಮವಾಗಿದ್ದು, ಇದು 7,000ಕ್ಕೂ ಹೆಚ್ಚು ಅಪರೂಪದ ಕಾಯಿಲೆಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ. ಅಪರೂಪದ ಕಾಯಿಲೆಗಳನ್ನು ಹೊಂದಿರುವ ವ್ಯಕ್ತಿಗಳು ಅಥವಾ ಸಮುದಾಯ ಎದುರಿಸುತ್ತಿರುವ ಸವಾಲುಗಳನ್ನು ಎತ್ತಿ ತೋರಿಸಲು ವಿವಿಧ ಗುಂಪುಗಳ ಜನರು ಒಟ್ಟಾಗಿ 7 ಕಿಲೋಮೀಟರ್ ನಡೆಯುವ ಅಥವಾ ಓಡುವ ಮೂಲಕ ಇಲ್ಲಿ ಒಂದಾಗುತ್ತಾರೆ. ಆರಂಭಿಕ ಹಂತದ ತಡೆಗಟ್ಟುವಿಕೆ ಮತ್ತು ಸಮಗ್ರ ದೀರ್ಘಕಾಲೀನ ಆರೈಕೆಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುವ ಮೂಲಕ, ಅಪರೂಪದ ಕಾಯಿಲೆಗಳ ಸಕ್ರಿಯ ನಿರ್ವಹಣೆಯು ರೋಗಿಗಳ ಚಿಕಿತ್ಸೆಯ ಫಲಿತಾಂಶ ಮತ್ತು ಜೀವನದ ಗುಣಮಟ್ಟ ವನ್ನು ಹೇಗೆ ಗಮನಾರ್ಹವಾಗಿ ಸುಧಾರಿಸುತ್ತದೆ ಎಂಬುದನ್ನು ಈ ಕಾರ್ಯಕ್ರಮವು ಸಾರಿತು.
ಭಾರತವು ವಿಶ್ವದ ಅಪರೂಪದ ಕಾಯಿಲೆಗಳಿಂದ ಬಳಲುತ್ತಿರುವವರಲ್ಲಿ ಅಂದಾಜು 25% ರಷ್ಟು ಜನರಿಗೆ ನೆಲೆಯಾಗಿದೆ. ಅಲ್ಲದೇ ಅಪರೂಪದ ಕಾಯಿಲೆಗಳ ಸಂಖ್ಯೆ ಬೆಳೆಯುತ್ತಲೇ ಇದೆ; ಅಸ್ತಿತ್ವದಲ್ಲಿರುವ 7,000 ಕಾಯಿಲೆಗಳ ಜೊತೆಗೆ ಪ್ರತೀ ವರ್ಷ ಸುಮಾರು 250 ಹೊಸ ಅಪರೂಪದ ಕಾಯಿಲೆಗಳು ಸೇರ್ಪಡೆಯಾಗುತ್ತಿವೆ. ಸುಮಾರು 80% ಅಪರೂಪದ ಕಾಯಿಲೆಗಳು ಆನುವಂಶಿಕ ಮೂಲವನ್ನು ಹೊಂದಿದ್ದು, ಇವುಗಳಲ್ಲಿ 50% ರಷ್ಟು ಮಕ್ಕಳಿಗೆ ಬಾಧಿಸುತ್ತವೆ; ದುರಂತವೆಂದರೆ ಇವರಲ್ಲಿ ಅನೇಕರು ಐದು ವರ್ಷದ ವಯಸ್ಸನ್ನು ಮೀರಿ ಬದುಕುಳಿಯುವುದಿಲ್ಲ.
ಭಾರತದ ಅಪರೂಪದ ಕಾಯಿಲೆಗಳ ಸ್ಥಿತಿಗತಿಯಲ್ಲಿನ ಬದಲಾವಣೆಯ ಕುರಿತು ಮಾತನಾಡಿದ ಸೆಂಟರ್ ಫಾರ್ ಹ್ಯೂಮನ್ ಜೆನೆಟಿಕ್ಸ್‌ನ ನಿರ್ದೇಶಕಿ ಡಾ. ಮೀನಾಕ್ಷಿ ಭಟ್ ಅವರು, "ಭಾರತದ ಅಪರೂಪದ ಕಾಯಿಲೆಗಳ ಕ್ಷೇತ್ರವು ವಿಕಸನಗೊಳ್ಳುತ್ತಿದೆ, ಆದರೆ ಸವಾಲುಗಳು ಇನ್ನೂ ಅಗಾಧವಾಗಿವೆ. ಕಳೆದ ಎರಡು ದಶಕಗಳಲ್ಲಿ, ಸಾವಿರಾರು ಕುಟುಂಬ ಗಳು ವಿಳಂಬಿತ ರೋಗನಿರ್ಣಯ, ಚಿಕಿತ್ಸೆಗಳ ಸೀಮಿತ ಲಭ್ಯತೆ ಮತ್ತು ಅನಿಶ್ಚಿತತೆಯ ಭಾವನಾತ್ಮಕ ಹೊರೆಯೊಂದಿಗೆ ಹೋರಾಡುವುದನ್ನು ನಾವು ನೋಡಿದ್ದೇವೆ. ಇಂದು ಆಶಾದಾಯಕ ವಿಷಯವೆಂದರೆ, ಅಪರೂಪದ ಕಾಯಿಲೆಗಳಿಗೆ ನೀತಿ ನಿರೂಪಣೆ, ಧನಸಹಾಯ ಮತ್ತು ರೋಗಿಗಳಿಗೆ ಬೆಂಬಲ ಒದಗಿಸುವ ವಿಚಾರದಲ್ಲಿ ನಿರಂತರ ಗಮನ ಹರಿಸುವ ಅಗತ್ಯವಿದೆ ಎಂಬ ಜಾಗೃತಿ ಹೆಚ್ಚುತ್ತಿದೆ. ರೇಸ್ ಫಾರ್ 7 ನಂತಹ ಯೋಜನೆಗಳು ಜಾಗೃತಿಯೇ ಮೊದಲ ಹೆಜ್ಜೆ ಎಂಬುದನ್ನು ನಮಗೆ ನೆನಪಿಸುತ್ತವೆ" ಎಂದು ಹೇಳಿದರು.
ಅಪರೂಪದ ಕಾಯಿಲೆಗಳೊಂದಿಗೆ ಬದುಕುತ್ತಿರುವ ಜನರಿಗೆ ಆರೋಗ್ಯ ಸೇವೆಯನ್ನು ಹೆಚ್ಚು ಸುಲಭವಾಗಿ ಲಭ್ಯವಾಗುವಂತೆ ಮಾಡುವ ನೀತಿಗಳು ಮತ್ತು ಕಾರ್ಯಕ್ರಮಗಳ ಪರವಾಗಿ ಜಾಗೃತಿ ಮೂಡಿಸುವ ಬದ್ಧತೆ ಸಾರುವ ಮೂಲಕ ಕಾರ್ಯಕ್ರಮವು ಮುಕ್ತಾಯವಾಯಿತು. ರೇಸ್ ಫಾರ್ 7 ಈಗ ರೋಗಿಗಳು, ವೈದ್ಯಕೀಯ ಸಿಬ್ಬಂದಿಗಳು ಮತ್ತು ನೀತಿ ನಿರೂಪಕರ ನಡುವಿನ ಅಂತರವನ್ನು ಕಡಿಮೆ ಮಾಡುವ ಒಂದು ಚಳುವಳಿಯಾಗಿ ಬೆಳೆದಿದೆ.