ಬೆಂಗಳೂರು: ಇಂದಿನ ದಿನಗಳಲ್ಲಿ ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಬೊಜ್ಜು ಮತ್ತು ಅಧಿಕ ತೂಕದ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಉದ್ದೇಶದಿಂದ, 'ರೈನ್ಬೋ ಚಿಲ್ಡ್ರನ್ಸ್ ಆಸ್ಪತ್ರೆ'ಯು ವಿಶೇಷವಾದ 'ಗ್ರೋ ಫಿಟ್' ಕ್ಲಿನಿಕ್ ಅನ್ನು ಆರಂಭಿಸಿದೆ.
ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ನ ರಾಷ್ಟ್ರೀಯ ಅಧ್ಯಕ್ಷ ಡಾ. ಜಿ.ವಿ. ಬಸವರಾಜ ಅವರ ಸಮ್ಮುಖದಲ್ಲಿ ಈ ನೂತನ ಕ್ಲಿನಿಕ್ ಲೋಕಾರ್ಪಣೆಗೊಂಡಿತು. ಮಕ್ಕಳ ಮತ್ತು ಹದಿಹರೆ ಯದವರ ಎಂಡೋಕ್ರೈನಾಲಜಿ ತಜ್ಞರಾದ ಡಾ. ಪೂರ್ಣಿಮಾ ಆರ್.ಎನ್ ಅವರ ನೇತೃತ್ವದಲ್ಲಿ ಈ ಕ್ಲಿನಿಕ್ ಕಾರ್ಯನಿರ್ವಹಿಸಲಿದೆ.
ಏಕೆ ಈ ಕ್ಲಿನಿಕ್?
ನಗರ ಪ್ರದೇಶಗಳಲ್ಲಿ ಬದಲಾದ ಜೀವನಶೈಲಿ, ಮೊಬೈಲ್-ಟಿವಿಗಳ ಅತಿಯಾದ ಬಳಕೆ, ದೈಹಿಕ ಚಟುವಟಿಕೆಗಳ ಕೊರತೆ ಮತ್ತು ಜಂಕ್ ಫುಡ್ಗಳ ಸೇವನೆಯಿಂದಾಗಿ ಹದಿಹರೆಯದವರಲ್ಲಿ ಬೊಜ್ಜಿನ ಸಮಸ್ಯೆ ವಿಪರೀತವಾಗಿ ಕಾಡುತ್ತಿದೆ. ಇದನ್ನು ಆರಂಭದಲ್ಲಿಯೇ ಗುರುತಿಸಿ ಸೂಕ್ತ ಚಿಕಿತ್ಸೆ ಮತ್ತು ಮಾರ್ಗದರ್ಶನ ನೀಡದಿದ್ದರೆ, ಭವಿಷ್ಯದಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗ ಬಹುದು. ಈ ಆತಂಕವನ್ನು ದೂರ ಮಾಡಲು ರೈನ್ಬೋ ಆಸ್ಪತ್ರೆ ಈ ವಿನೂತನ ಹೆಜ್ಜೆ ಇಟ್ಟಿದೆ.
ಇದನ್ನೂ ಓದಿ: Health Tips: ಮಹಿಳೆಯರಿಗೆ ಫ್ರೊಟೀನ್ ಆಹಾರ ಏಕೆ ಅಗತ್ಯ!
ಒಂದೇ ಸೂರಿನಡಿ ಮೂರು ತಜ್ಞರ ಸೇವೆ
ಬನ್ನೇರುಘಟ್ಟ ಘಟಕದಲ್ಲಿ ಪ್ರತಿ ತಿಂಗಳ 1ನೇ ಮತ್ತು 3ನೇ ಗುರುವಾರ ಈ ಕ್ಲಿನಿಕ್ ತೆರೆದಿರುತ್ತದೆ. ಇದರ ಅತಿ ದೊಡ್ಡ ವಿಶೇಷತೆ ಎಂದರೆ, ಚಿಕಿತ್ಸೆಗಾಗಿ ಪೋಷಕರು ಬೇರೆ ಬೇರೆ ವೈದ್ಯರ ಬಳಿ ಅಲೆದಾಡುವ ಅಗತ್ಯವಿಲ್ಲ. ಒಂದೇ ಭೇಟಿಯಲ್ಲಿ ಹದಿಹರೆಯದವರ ವೈದ್ಯರು (ಅಡೊಲೊಸೆಂಟ್ ಫಿಸಿಷಿಯನ್). ಡಯಟಿಷಿಯನ್ ಮತ್ತು ಎಂಡೋಕ್ರೈನಾಲಜಿಸ್ಟ್ ಸೇರಿ ಮಗುವಿನ ದೈಹಿಕ ಬೆಳವಣಿಗೆ, ಪೌಷ್ಟಿಕಾಂಶದ ಅಗತ್ಯತೆಗಳು ಹಾಗೂ ಹಾರ್ಮೋನ್ ಸಮಸ್ಯೆಗಳ ಸಂಪೂರ್ಣ ತಪಾಸಣೆ ನಡೆಸುತ್ತಾರೆ.
ಈ ಬಗ್ಗೆ ಹೆಚ್ಚಿನ ವಿವರಗಳನ್ನು ಹಂಚಿಕೊಂಡಿರುವ ರೈನ್ಬೋ ಆಸ್ಪತ್ರೆಯ ಕನ್ಸಲ್ಟೆಂಟ್ ಡಾ. ಪೂರ್ಣಿಮಾ ಆರ್. ಎನ್, “ಈ 'ಗ್ರೋ ಫಿಟ್' ಕ್ಲಿನಿಕ್ನ ಪ್ರಮುಖ ಉದ್ದೇಶವೇ ಮಕ್ಕಳಿಗೆ ಒಂದೇ ಸೂರಿನಡಿ ಸಮಗ್ರ ವೈದ್ಯಕೀಯ ಮತ್ತು ಜೀವನಶೈಲಿಯ ಮಾರ್ಗದರ್ಶನ ನೀಡುವುದು. ಇದರಿಂದ ಮಕ್ಕಳಲ್ಲಿ ಚೈತನ್ಯ ಹೆಚ್ಚುವುದರ ಜೊತೆಗೆ, ಭವಿಷ್ಯದಲ್ಲಿ ಬರಬಹುದಾದ ಮಧುಮೇಹ ಮತ್ತು ರಕ್ತದೊತ್ತಡದಂತಹ ದೀರ್ಘಕಾಲೀನ ಕಾಯಿಲೆಗಳನ್ನು ತಡೆಯಬಹುದು. ಅಲ್ಲದೆ, ಇದು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ,” ಎಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಡಾ. ಜಿ. ವಿ. ಬಸವರಾಜ ಅವರು, “ನಗರ ಪ್ರದೇಶಗಳಲ್ಲಿ ಹದಿಹರೆಯದವರ ಬೊಜ್ಜು ಆತಂಕಕಾರಿ ಮಟ್ಟದಲ್ಲಿ ಹೆಚ್ಚುತ್ತಿದೆ. ಹದಿಹರೆಯದಲ್ಲಿ ತೂಕ ನಿರ್ವಹಣೆ ಎಂದರೆ ಕೇವಲ ಸೌಂದರ್ಯದ ದೃಷ್ಟಿಯಲ್ಲ, ಇದು ಭವಿಷ್ಯದ ಕಾಯಿಲೆಗಳನ್ನು ತಡೆಯುವ ಪ್ರಮುಖ ಹೆಜ್ಜೆಯಾಗಿದೆ. 'ಗ್ರೋ ಫಿಟ್'ನಂತಹ ಕ್ಲಿನಿಕ್ಗಳು ಮಕ್ಕಳಿಗೆ ಸರಿಯಾದ ಸಮಯದಲ್ಲಿ ವೈದ್ಯಕೀಯ ಮಾರ್ಗದರ್ಶನ ನೀಡಲು ಅತ್ಯಗತ್ಯ,” ಎಂದು ಶ್ಲಾಘಿಸಿದರು.
ದೇಶದ 11 ನಗರಗಳಲ್ಲಿ 26 ಆಸ್ಪತ್ರೆಗಳು, 6 ಕ್ಲಿನಿಕ್ಗಳು ಮತ್ತು 2,685 ಬೆಡ್ಗಳ ಸಾಮರ್ಥ್ಯವನ್ನು ಹೊಂದಿರುವ 'ರೈನ್ಬೋ ಚಿಲ್ಡ್ರನ್ಸ್ ಮೆಡಿಕೇರ್ ಲಿ.' ಮಕ್ಕಳ ಮತ್ತು ಮಹಿಳೆಯರ ಆರೋಗ್ಯ ಸೇವೆಯಲ್ಲಿ ಮುಂಚೂಣಿಯಲ್ಲಿದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು 24/7 ಲಭ್ಯವಿರುವ ನುರಿತ ವೈದ್ಯರ ತಂಡದೊಂದಿಗೆ ನವಜಾತ ಶಿಶುಗಳ ನಿಗಾ ಘಟಕ, ಮಕ್ಕಳ ಶಸ್ತ್ರಚಿಕಿತ್ಸೆ ಮತ್ತು ತಾಯಂದಿರ ಸಮಗ್ರ ಆರೈಕೆ ಸೇವೆಗಳನ್ನು ಒದಗಿಸುತ್ತಿದೆ.