ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Koragajja Movie: ಕೊಚ್ಚಿಯಲ್ಲಿ ʼಕೊರಗಜ್ಜʼ ಚಿತ್ರದ ಪ್ರಚಾರಕ್ಕೆ ಅಡ್ಡಿ; ನಟ ಮಮ್ಮುಟ್ಟಿ ಟೀಂ ವಿರುದ್ಧ ಭಾರಿ ಆಕ್ರೋಶ

ಕೊರಗಜ್ಜ ಚಿತ್ರತಂಡದಿಂದ ಕೊಚ್ಚಿಯ ಪಂಚತಾರ ಹೋಟೆಲ್‌ನಲ್ಲಿ ಜನವರಿ 24ರಂದು ರಾತ್ರಿ 8ಕ್ಕೆ ಅದ್ಧೂರಿ ಪತ್ರಿಕಾಗೋಷ್ಠಿ ಹಾಗೂ ಭೋಜನಕೂಟ ಆಯೋಜಿಸಲಾಗಿತ್ತು. ಆದರೆ, ಪ್ರೆಸ್ ಮೀಟ್‌ನ ಮುಂಚಿನ ದಿನ ತಡರಾತ್ರಿ ಚಿತ್ರತಂಡಕ್ಕೆ ಮಲಯಾಳಂ ʻಛಾತಪಾಚʼ ಚಿತ್ರತಂಡದ ಪಿಆರ್‌ಒ ಕರೆ ಮಾಡಿ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಅಥವಾ ಮುಂದೂಡುವಂತೆ ದಿಢೀರ್ ಆಗಿ ತಿಳಿಸಿದ್ದರು ಎನ್ನಲಾಗಿದೆ. ಇದರಿಂದ ಕೊರಗಜ್ಜ ಚಿತ್ರತಂಡ ಅಸಮಾಧಾನ ಹೊರಹಾಕಿದೆ.

ಬೆಂಗಳೂರು: ಬಿಡುಗಡೆಗೆ ಸಿದ್ಧವಾಗಿರುವ ಕನ್ನಡದ ಪ್ಯಾನ್ ಇಂಡಿಯಾ ಫಿಲ್ಮ್ ʻಕೊರಗಜ್ಜʼ (Koragajja Movie) ಚಿತ್ರತಂಡ ಪ್ರಮೋಷನ್‌ಗೆ ಕೇರಳದ ಕೊಚ್ಚಿಯಲ್ಲಿ ನಟ ಮಳಯಾಲಂ ನಟ ಮಮ್ಮುಟ್ಟಿ (Actor mammootty) ಅಡಚಣೆ ಮಾಡಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಕೊರಗಜ್ಜ ಚಿತ್ರತಂಡ ಅಸಮಾಧಾನ ಹೊರಹಾಕಿದೆ.

ಕೊರಗಜ್ಜ ಚಿತ್ರತಂಡದಿಂದ ಕೊಚ್ಚಿಯ ʻಹಾಲಿಡೇ ಇನ್ʼ ಪಂಚತಾರ ಹೊಟೆಲ್‌ನ 'ಗ್ರ್ಯಾಂಡ್ ಬಾಲ್ ರೂಮ್‌'ನಲ್ಲಿ ಜನವರಿ 24ರಂದು ರಾತ್ರಿ 8ಕ್ಕೆ ಅದ್ಧೂರಿ ಪತ್ರಿಕಾಗೋಷ್ಠಿ ಹಾಗೂ ಭೋಜನಕೂಟ ಆಯೋಜಿಸಲಾಗಿತ್ತು. ಒಂದು ವಾರದ ಮೊದಲೇ ಕೊಚ್ಚಿಯ ಪಿಆರ್‌ಒ ಮುಖಾಂತರ ಎಲ್ಲಾ ಮಾಧ್ಯಮಗಳಿಗೆ ಪತ್ರಿಕಾಗೋಷ್ಠಿಯ ಆಮಂತ್ರಣ ಕೂಡ ರವಾನೆಯಾಗಿತ್ತು. ಆದರೆ ಪ್ರೆಸ್ ಮೀಟ್‌ನ ಮುಂಚಿನ ದಿನ ತಡರಾತ್ರಿ ಚಿತ್ರತಂಡಕ್ಕೆ ಮಲಯಾಳಂ ʻಛಾತಪಾಚʼ ಚಿತ್ರತಂಡದ ಪಿಆರ್‌ಒ ಕರೆ ಮಾಡಿ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಅಥವಾ ಮುಂದೂಡುವಂತೆ ದಿಢೀರ್ ಆಗಿ ತಿಳಿಸಿದ್ದರು ಎನ್ನಲಾಗಿದೆ.

ಲಕ್ಷಾಂತರ ರುಪಾಯಿ ಖರ್ಚು ಮಾಡಿ ಅದ್ದೂರಿ ಪತ್ರಿಕಾಗೋಷ್ಠಿ ನಡೆಸಲು ತಯಾರಿ ನಡೆಸಿದ್ದ 'ಕೊರಗಜ್ಜ' ಚಿತ್ರತಂಡಕ್ಕೆ ಇದರಿಂದ ಆಘಾತವಾಗಿದೆ. ಈ ಬಗ್ಗೆ ಕಾರಣ ಕೇಳಿದಾಗ ಹಿರಿಯ ನಟ ಮಮುಟ್ಟಿ ಅಭಿನಯಿಸಿದ್ದ ಈ ಮಲಯಾಳಂ ಚಿತ್ರದ ಪ್ರಮೋಷನ್‌, ʻಕೊರಗಜ್ಜʼ ಚಿತ್ರದ ಪ್ರಮೋಷನ್ ಸಮಯದಲ್ಲೇ ಅಂತಿಮ ಕ್ಷಣದಲ್ಲಿ ತೀರ್ಮಾನವಾಗಿದೆ. ಮಮುಟ್ಟಿಯವರು ಈ ಕಾರ್ಯಕ್ರಮಕ್ಕೆ ಹಾಜರಾಗುವುದರಿಂದ ಕನ್ನಡ ಚಿತ್ರ ʻಕೊರಗಜ್ಜʼಗೆ ಜರ್ನಲಿಸ್ಟ್‌ಗಳು ಹಾಜರಾಗುವುದು ಅಸಾಧ್ಯ. ಆದ್ದರಿಂದ ಪ್ರೆಸ್‌ಮೀಟ್ ರದ್ದುಗೊಳಿಸುವುದು ಉತ್ತಮ ಎಂಬ ಸಲಹೆ ಬಂತು. ಹೀಗಾಗಿ ಕಾರ್ಯಕ್ರಮ ರದ್ದು ಮಾಡುವಂತಾಯಿತು ಎಂದು ಚಿತ್ರತಂಡ ಬೇಸರ ಹೊರಹಾಕಿದೆ.

ʻಕೊರಗಜ್ಜʼ ಚಿತ್ರದ ಪತ್ರಿಕಾಗೋಷ್ಠಿಗೆ ಹಾಲಿವುಡ್-ಬಾಲಿವುಡ್ ಚಿತ್ರಗಳ ಅಂತಾರಾಷ್ಟ್ರೀಯ ಖ್ಯಾತಿಯ ಕಬೀರ್ ಬೇಡಿ ಆದಿಯಾಗಿ ಹಲವರು ಆಗಲೇ ಆಗಮಿಸಿರುವುದರಿಂದ ಮತ್ತು ಹೋಟೆಲ್‌ನ ಡಿನ್ನರ್ ಮತ್ತು ಐಷಾರಾಮಿ ರೂಂಗಳಿಗೆ ಲಕ್ಷಾಂತರ ಹಣ ಪಾವತಿಸಿರುವುದರಿಂದ ಪತ್ರಿಕಾಗೋಷ್ಠಿಯನ್ನು ಮುಂದೂಡುವುದು ಅಥವಾ ರದ್ದುಗೊಳಿಸುವುದರಿಂದ ಚಿತ್ರದ ನಿರ್ಮಾಪಕರಿಗೆ ಲಕ್ಷಾಂತರ ರುಪಾಯಿ ನಷ್ಟವಾಗುವ ಸಂಕಟ ಎದುರಾಗಿತ್ತು. ಆದರೆ ಮಮ್ಮುಟ್ಟಿಯಂತಹ ನಟನ ಮತ್ತು ಅವರ ತಂಡದ ಏಕಸ್ವಾಮ್ಯದಿಂದಾಗಿ ಯಾರೊಂದಿಗೂ ತಮ್ಮ ಸಂಕಟವನ್ನು ಹೇಳಿಕೊಳ್ಳದ ಪರಿಸ್ಥಿತಿ ʻಕೊರಗಜ್ಜʼ ಚಿತ್ರ ತಂಡಕ್ಕೆ ಎದುರಾಗಿತ್ತು ಎಂದು ತಿಳಿದುಬಂದಿದೆ.

ಈ ಘಟನೆ ಬಗ್ಗೆ ಕೊರಗಜ್ಜ ಚಿತ್ರದ ನಿರ್ದೇಶಕ ಸುಧೀರ್ ಅತ್ತಾವರ್ ಮಾತನಾಡಿ, ''ಮುಂಬೈ, ಬೆಂಗಳೂರು, ಹೈದರಾಬಾದ್​ನಂತಹ ಮಹಾನಗರಗಳಲ್ಲಿ ಇರುವ ಹಾಗೆ ಕೊಚ್ಚಿಯಲ್ಲಿ ಮೂರ್ನಾಲ್ಕು ಜರ್ನಲಿಸ್ಟ್​ಗಳು ಸಿನಿಮಾ ವಿಭಾಗವನ್ನು ಪ್ರತಿನಿಧಿಸುವುದಿಲ್ಲ. ಕೊಚ್ಚಿಯಂತಹ ಸಣ್ಣ ನಗರಗಳಲ್ಲಿ ಫಿಲ್ಮ್ ಮತ್ತು ಸ್ಪೋರ್ಟ್ಸ್ ಸೆಕ್ಷನ್​​ಗೆ ಒಬ್ಬೊಬ್ಬರೇ ಮಾಧ್ಯಮ ಪ್ರತಿನಿಧಿಗಳಿರುತ್ತಾರೆ. ಆದ್ದರಿಂದ ಸಿನಿಮಾಗೆ ಸಂಬಂಧಪಟ್ಟಂತೆ ಎರಡೆರಡು ಪ್ರೆಸ್ಸ್ ಮೀಟ್ ಅಥವಾ ಪ್ರಚಾರ ಕಾರ್ಯಕ್ರಮಗಳನ್ನು ಏಕಕಾಲದಲ್ಲಿ ಏರ್ಪಡಿಸುವುದಿಲ್ಲ. ಪಿಆರ್​ಓಗಳೊಂದಿಗೆ ಚರ್ಚಿಸಿ, ಬೇರೆ ಬೇರೆ ಸಮಯಗಳಲ್ಲಿ ಮತ್ತೊಂದು ಸಿನಿಮಾದ ಪ್ರಮೋಷನ್​​ಗೆ ತೊಂದರೆ ಆಗದ ರೀತಿಯಲ್ಲಿ ಆಯೋಜಿಸುತ್ತಾರೆ. ಇದು ಇಂಡಸ್ಟ್ರಿಯ ಬೆಳವಣಿಗೆಗೆ ಮಾನವೀಯತೆಯ ಮತ್ತು ನೈತಿಕತೆಯ ದೃಷ್ಟಿಯಿಂದ ದಕ್ಷಿಣ ಭಾರತ ಚಿತ್ರರಂಗದಲ್ಲಿ ಒಂದು ಭಾಷೆಯ ನಿರ್ಮಾಪಕ ಮತ್ತೊಂದು ಭಾಷೆಯ ನಿರ್ಮಾಪಕನಿಗೆ ಸಹಕರಿಸುವ ರೀತಿ. ಆದರೆ ಈ ಬಾರಿ ಪದ್ಮಭೂಷಣ ಪ್ರಶಸ್ತಿ ಪಡೆದ ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ಮತ್ತು ಅವರ ಚಿತ್ರತಂಡ ಈ ರೀತಿಯ ವರ್ತನೆ ತೋರಿಸಿದ್ದು, ನಮಗೆ ಊಹಿಸಲೂ ಸಾಧ್ಯವಾಗುತ್ತಿಲ್ಲ'' ಎಂದು ತಿಳಿಸಿದ್ದಾರೆ.

ನಟ ಕಬೀರ್ ಬೇಡಿ ಪ್ರತಿಕ್ರಿಯಿಸಿ, “ನಾನು ಮಲಯಾಳಂ ಭಾಷೆಯ ಸಿನಿಮಾಗಳನ್ನು ಇಷ್ಟ ಪಡುತ್ತೇನೆ. ದೇಶದ ಸುಮಾರು 25% ರಾಷ್ಟ ಪ್ರಶಸ್ತಿಗಳನ್ನು ಮಲಯಾಳಂ ಭಾಷೆ ಪಡೆದುಕೊಂಡಿದೆ. ಮಲಯಾಳಂ ಭಾಷೆಯ ಮೇಲಿನ ಗೌರವದಿಂದಲೇ ಕೊರಗಜ್ಜ ಚಿತ್ರದ ಪ್ರಮೋಷನ್‌ಗೆ ಕೊಚ್ಚಿಗೆ ಬಂದಿದ್ದೇನೆ. ಆದರೆ ಈ ಘಟನೆ ಮೋಸ್ಟ್ ಅನ್ಫಾರ್ಚುನೇಟ್ ಎಂದು ಹೇಳಿದ್ದಾರೆ. ಮಮ್ಮುಟ್ಟಿಗೆ ಈ ವಿಚಾರ ತಿಳಿಯದೇ ಮಾಡಿರಬಹುದು. ಆದರೆ, ಕೇವಲ ಒಂದು ದಿನ ಮುಂಚಿತವಾಗಿ ನಿಗದಿಯಾಗಿದ್ದ ಪ್ರೆಸ್‌ಮೀಟ್‌ಗೆ ತೊಂದರೆ ನೀಡಿದ್ದು ಸರಿ ಎನಿಸುವುದಿಲ್ಲ ಎಂದು ತನ್ನ ಬೇಸರ ವ್ಯಕ್ತಪಡಿಸಿದ್ದಾರೆ.

Bengaluru Film Festival 2026: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟಿಸಿದ ಸಿಎಂ

ಹಿರಿಯ ನಟಿ ಭವ್ಯ ಮಾತನಾಡಿ, “ನಮ್ಮ ʻಕೊರಗಜ್ಜʼ ಚಿತ್ರದ ಪ್ರಮೋಷನ್‌ನ ಪತ್ರಿಕಾಗೋಷ್ಟಿಗೆ ಆಗಮಿಸಿದ್ದ ಹಾಲಿವುಡ್-ಬಾಲಿವುಡ್ ಚಿತ್ರಗಳ ಅಂತಾರಾಷ್ಟ್ರೀಯ ಖ್ಯಾತಿಯ ಕಬೀರ್ ಬೇಡಿಯಂತಹ ಹಿರಿಯ ನಟನಿಗೆ, ಮಮುಟ್ಟಿಯಂತಹ ನಟರು ಮಾಡಿದ ಅವಮಾನದಂತಿತ್ತು ಈ ಬೆಳವಣಿಗೆ. ಮಮುಟ್ಟಿಯವರು ತಮ್ಮ ಚಿತ್ರದ ಪ್ರಮೋಷನ್ ಮಾಡುವುದು ತಪ್ಪೇನೂ ಅಲ್ಲ. ಆದರೆ, ಈ ರೀತಿಯ ದಬ್ಬಾಳಿಕೆ ಮಾಡಿ, ಅಂತರಾಷ್ಟ್ರೀಯ ಮನ್ನಣೆಯ ಅತ್ಯಂತ ಗೌರವಾನ್ವಿತ ನಟನಿಗೆ ಅವಮಾನ ಮಾಡಿರುವುದು ಒಪ್ಪುವಂತಹ ವಿಚಾರವಲ್ಲ” ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.