ಬೆಂಗಳೂರು: ಫುಟ್‌ಬಾಲ್ ಪ್ರೇಮಿಗಳಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ ಸಿಕ್ಕಿದೆ. ಫಿಫಾ ವಿಶ್ವಕಪ್-2026ರ (FIFA World Cup 2026) ಟೂರ್ನಿಯ ಮಹತ್ವದ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ನಡೆಯುವ ದಿನಗಳಂದು ಬೆಂಗಳೂರು ನಗರ ವ್ಯಾಪ್ತಿಯ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳನ್ನು ಮಧ್ಯರಾತ್ರಿ 3:30ರವರೆಗೂ ತೆರೆಯಲು ಅನುಮತಿ ನೀಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.
ಪೊಲೀಸ್ ಕಮಿಷನರ್ ಅವರ ಆದೇಶದ ಪ್ರಕಾರ, ಮುಂಬರುವ ಜುಲೈ 14, ಜುಲೈ 15 ಹಾಗೂ ಜುಲೈ 19ರ ದಿನಗಳಂದು ಬೆಂಗಳೂರಿನ ಎಲ್ಲಾ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ಸಾರ್ವಜನಿಕರಿಗೆ ಹಾಗೂ ಗ್ರಾಹಕರಿಗೆ ಮಧ್ಯರಾತ್ರಿ 3:30ರ ವರೆಗೂ ಮುಕ್ತವಾಗಿರಲಿವೆ. ಈ ಮೂಲಕ ತಡರಾತ್ರಿ ಪಂದ್ಯ ವೀಕ್ಷಿಸುವ ಕ್ರೀಡಾ ಅಭಿಮಾನಿಗಳಿಗೆ ಯಾವುದೇ ತೊಂದರೆಯಾಗದಂತೆ ನೆಚ್ಚಿನ ಆಹಾರವನ್ನು ಸವಿಯಲು ಮುಕ್ತ ಅವಕಾಶ ಕಲ್ಪಿಸಿಕೊಡಲಾಗಿದೆ.
ಪ್ರಸ್ತುತ ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯು ಯುಎಸ್ಎ, ಕೆನಡಾ ಹಾಗೂ ಮೆಕ್ಸಿಕೋ ದೇಶಗಳ ಜಂಟಿ ಆತಿಥ್ಯದಲ್ಲಿ ಆಯೋಜನೆಗೊಂಡಿದೆ. ಈ ಬಾರಿಯ ವಿಶ್ವಕಪ್‌ನ ಸೆಮಿಫೈನಲ್ ಹಾಗೂ ಫೈನಲ್‌ನ ಮೂರೂ ಪ್ರಮುಖ ಪಂದ್ಯಗಳು ಭಾರತೀಯ ಕಾಲಮಾನದ ಪ್ರಕಾರ ತಡರಾತ್ರಿ ಅಂದರೆ ಬೆಳಗಿನ ಜಾವ 12:30ಕ್ಕೆ ಆರಂಭವಾಗಲಿವೆ. ಪಂದ್ಯಗಳು ತಡರಾತ್ರಿ ಆರಂಭವಾಗುವುದರಿಂದ ಫುಟ್‌ಬಾಲ್ ಅಭಿಮಾನಿಗಳು ನಗರದ ವಿವಿಧೆಡೆ ದೊಡ್ಡ ಪರದೆಗಳ ಮುಂದೆ ಹಾಗೂ ಹೋಟೆಲ್‌ಗಳಲ್ಲಿ ಒಟ್ಟಿಗೆ ಸೇರುವ ಸಾಧ್ಯತೆ ಹೆಚ್ಚಿರುತ್ತದೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳ ಅನುಕೂಲಕ್ಕಾಗಿ ಆ ದಿನಗಳಲ್ಲಿ ಬೆಳಗಿನ ಜಾವ 3 ಗಂಟೆಯವರೆಗೆ ಆಹಾರ ಸೇವೆಗಳನ್ನು ಒದಗಿಸಲು ಅನುಮತಿ ನೀಡಬೇಕೆಂದು ‘ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ’ (NRAI) ದೇಶದ ಪ್ರಮುಖ ನಗರಗಳ ಪೊಲೀಸ್ ಇಲಾಖೆಗಳಿಗೆ ವಿಶೇಷ ಮನವಿ ಸಲ್ಲಿಸಿತ್ತು.
FIFA 2026: ಸ್ಪೇನ್ vs ಫ್ರಾನ್ಸ್ ನಡುವೆ ಸೆಮಿಫೈನಲ್ ಗೆಲ್ಲುವ ತಂಡವನ್ನು ಆರಿಸಿದ ಆಲಿಯರ್ ಕಾನ್!
ರೆಸ್ಟೋರೆಂಟ್ ಅಸೋಸಿಯೇಷನ್ ಸಲ್ಲಿಸಿದ್ದ ಈ ಮನವಿಯನ್ನು ಸಕಾರಾತ್ಮಕವಾಗಿ ಪುರಸ್ಕರಿಸಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತರು, ಕ್ರೀಡಾ ಅಭಿಮಾನಿಗಳ ಹಿತದೃಷ್ಟಿಯಿಂದ ನಿಗದಿಗಿಂತ ಅರ್ಧ ಗಂಟೆ ಹೆಚ್ಚುವರಿಯಾಗಿ ಅಂದರೆ ಬೆಳಗಿನ ಜಾವ 3.30ರ ವರೆಗೆ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಆಹಾರ ಸೇವೆ ಒದಗಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.