FIFA 2026: ಸ್ಪೇನ್ vs ಫ್ರಾನ್ಸ್ ನಡುವೆ ಸೆಮಿಫೈನಲ್ ಗೆಲ್ಲುವ ತಂಡವನ್ನು ಆರಿಸಿದ ಆಲಿಯರ್ ಕಾನ್!
2026ರ ಫಿಫಾ ವಿಶ್ವಕಪ್ ಟೂರ್ನಿಯು ನಿರ್ಣಾಯಕ ಹಂತಕ್ಕೆ ಬಂದು ತಲುಪಿದೆ. ಸದ್ಯ ಸೆಮಿಫೈನಲ್ಸ್‌ಗೆ ಪ್ರವೇಶ ಮಾಡಿರುವ ನಾಲ್ಕು ತಂಡಗಳ ನಡುವೆ ಇದೀಗ ವಿಶ್ವಕಪ್ ಗೆಲ್ಲಲು ಪೈಪೋಟಿ ನಡೆಯುತ್ತಿದೆ. ಇದರ ನಡುವೆ ಸ್ಪೇನ್ ಹಾಗೂ ಫ್ರಾನ್ಸ್ ನಡುವೆ ಸೆಮಿಫೈನಲ್ ಗೆಲ್ಲುವ ತಂಡವನ್ನು ಮಾಜಿ ಗೋಲ್-ಕೀಪರ್ ಆಲಿವರ್ ಕಾನ್ಹ್ ಭವಿಷ್ಯ ನುಡಿದಿದ್ದಾರೆ.
-
ನವದೆಹಲಿ: ಫಿಫಾ ವಿಶ್ವಕಪ್ 2026ರ (FIFA World Cup 2026) ಟೂರ್ನಿಯು ಇದೀಗ ರೋಚಕ ಸೆಮಿಫೈನಲ್ ಹಂತವನ್ನು ತಲುಪಿದ್ದು, ಪ್ರಶಸ್ತಿ ಜಯಿಸುವ ತಂಡ ಯಾವುದು ಎಂಬ ಕುತೂಹಲ ಫುಟ್‌ಬಾಲ್ ಅಭಿಮಾನಿಗಳಲ್ಲಿ ಮನೆಮಾಡಿದೆ. ಜರ್ಮನಿಯ ದಿಗ್ಗಜ ಗೋಲ್‌ಕೀಪರ್ ಮತ್ತು ‘Zee 5’ನ ತಜ್ಞರಾಗಿರುವ ಆಲಿವರ್ ಕಾನ್ (Oliver Kahn), ಅಂತಿಮ ನಾಲ್ಕರ ಘಟ್ಟದ ಪೈಪೋಟಿಯ ಬಗ್ಗೆ ತಮ್ಮ ವಿಶ್ಲೇಷಣೆಯನ್ನು ಹಂಚಿಕೊಂಡಿದ್ದಾರೆ.
ಸೆಮಿಫೈನಲ್ ಪ್ರವೇಶಿಸುವ ತಂಡಗಳ ಕುರಿತು ಮಾತನಾಡಿದ ಆಲಿವರ್ ಕಾನ್, "ಈ ಹಂತದಲ್ಲಿ ತಾಂತ್ರಿಕ ಶಿಸ್ತು, ಮಾನಸಿಕ ದೃಢತೆ ಮತ್ತು ಆಟದ ಸೂಕ್ಷ್ಮ ವ್ಯತ್ಯಾಸಗಳೇ ನಿರ್ಣಾಯಕ ಪಾತ್ರ ವಹಿಸುತ್ತವೆ. ಕೇವಲ ಬಲಪ್ರದರ್ಶನಕ್ಕಿಂತ ಹೆಚ್ಚಾಗಿ, ಬುದ್ಧಿವಂತಿಕೆಯಿಂದ ಆಡುವ ತಂಡವೇ ಜಯಶೀಲರಾಗಲಿದ್ದಾರೆ," ಎಂದು ಹೇಳಿದ್ದಾರೆ.
ಸ್ಪೇನ್ ಮತ್ತು ಫ್ರಾನ್ಸ್ ನಡುವಿನ ಸೆಮಿಫೈನಲ್ ಪಂದ್ಯವನ್ನು ಟೂರ್ನಿಯ ‘ಅತ್ಯಂತ ಆಕರ್ಷಕ ತಾಂತ್ರಿಕ ಕದನ’ ಎಂದು ಬಣ್ಣಿಸಿದ ಕಾನ್, "ಸ್ಪೇನ್‌ನ ಚೆಂಡಿನ ನಿಯಂತ್ರಣದ (Possession-based) ಶೈಲಿಗೆ, ಫ್ರಾನ್ಸ್‌ನ ಮಾರಕ ಪ್ರತಿ-ದಾಳಿ (Counter-attacking) ಎದುರಾಗಲಿದೆ. ಮಿಡ್‌ಫೀಲ್ಡ್ ನಿಯಂತ್ರಣವೇ ಈ ಪಂದ್ಯದ ತಿರುವು," ಎಂದರು.
ಫಿಫಾ ವಿಶ್ವಕಪ್ ತಂಡಗಳ ಸಂಖ್ಯೆ 64ಕ್ಕೆ ಹೆಚ್ಚಳ ಸಾಧ್ಯತೆ; ಭಾರತ ಅರ್ಹತೆ ಪಡೆಯುತ್ತದೆಯೇ?
ಫ್ರಾನ್ಸ್‌ನ ಬಲಿಷ್ಠ ರಕ್ಷಣಾಪಡೆಯನ್ನು ಭೇದಿಸಲು ಸ್ಪೇನ್ ತಂಡವು ತಾಳ್ಮೆಯಿಂದ ಆಡಬೇಕಾದ ಅಗತ್ಯವಿದೆ ಎಂದು ಸಲಹೆ ನೀಡಿದ ಅವರು, "ಚೆಂಡನ್ನು ವೇಗವಾಗಿ ಚಲಿಸುವುದು, ಮೈದಾನದಲ್ಲಿ ‘ಓವರ್‌ಲೋಡ್’ ಸೃಷ್ಟಿಸುವುದು ಮತ್ತು ರಕ್ಷಣಾತ್ಮಕ ಸಮತೋಲನ ಕಾಯ್ದುಕೊಳ್ಳುವುದು ಸ್ಪೇನ್ ಪಾಲಿಗೆ ಅನಿವಾರ್ಯ" ಎಂದು ಎಚ್ಚರಿಸಿದರು.
ಆಧುನಿಕ ಫುಟ್‌ಬಾಲ್‌ನಲ್ಲಿ ಗೋಲ್‌ಕೀಪರ್‌ಗಳ ಪಾತ್ರದ ಬಗ್ಗೆ ಮಾತನಾಡಿದ ಕಾನ್, "ಇಂದಿನ ಗೋಲ್‌ಕೀಪರ್‌ಗಳು ಕೇವಲ ಕೊನೆಯ ರಕ್ಷಕರಲ್ಲ, ಅವರು ಆಕ್ರಮಣದ ಮೊದಲ ರೂವಾರಿಗಳು. ಅವರ ಒಂದು ಸಣ್ಣ ನಿರ್ಧಾರ ಅಥವಾ ತಪ್ಪು ಪಂದ್ಯದ ದಿಕ್ಕನ್ನೇ ಬದಲಿಸಬಲ್ಲದು," ಎಂದು ತಮ್ಮ ಅನುಭವ ಹಂಚಿಕೊಂಡರು.
ಫಿಫಾ ವಿಶ್ವಕಪ್‌ನಲ್ಲಿ 'ವಯಾಗ್ರ' ಚರ್ಚೆ! ಆಟಗಾರರು ಎನರ್ಜಿ ಪಿಲ್ ಬಳಸಿದ್ರರಾ? ಇಲ್ಲಿದೆ ಸತ್ಯ!
ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕಾನ್, ಫ್ರಾನ್ಸ್ ತಂಡಕ್ಕೆ ಅಲ್ಪ ಮುನ್ನಡೆ ನೀಡಿದರು. "ತಂಡದ ಸಮತೋಲನ, ಆಟಗಾರರ ಆಳ ಮತ್ತು ಯಾವುದೇ ಸನ್ನಿವೇಶದಲ್ಲೂ ಪಂದ್ಯ ಗೆಲ್ಲುವ ಸಾಮರ್ಥ್ಯದ ದೃಷ್ಟಿಯಿಂದ ಫ್ರಾನ್ಸ್ ಹೆಚ್ಚು ಪರಿಪೂರ್ಣವಾಗಿ ಕಾಣುತ್ತಿದೆ. ಆದಾಗ್ಯೂ, ಸೆಮಿಫೈನಲ್ ಹಂತದಲ್ಲಿರುವ ಯಾವುದೇ ತಂಡಕ್ಕೂ ವಿಶ್ವಕಪ್ ಗೆಲ್ಲುವ ಸಾಮರ್ಥ್ಯವಿದೆ," ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಫಿಫಾ ವಿಶ್ವಕಪ್ 2026 ಅನ್ನು ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ಬಂಗಾಳಿ ಭಾಷೆಗಳಲ್ಲಿ ಝೀ5 (Zee5) ನಲ್ಲಿ ನೇರವಾಗಿ ವೀಕ್ಷಿಸಬಹುದು. ಸ್ಪೇನ್ ಹಾಗೂ ಫ್ರಾನ್ಸ್ ನಡುವಣ ಮೊದಲನೇ ಸೆಮಿಫೈನಲ್ ಪಂದ್ಯ ಜುಲೈ 15 ರಂದು ತಡರಾತ್ರಿ 12:30ಕ್ಕೆ (ಭಾರತೀಯ ಕಾಲಮಾನ) ನಡೆಯಲಿದೆ.