ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru potholes: ಬೆಂಗಳೂರು ನಗರದ ರಸ್ತೆಗಳಿಗೆ ಸಿಎಸ್‌ ಭೇಟಿ, ಗುಂಡಿ ಮುಕ್ತಿಗೆ ವಾರದ ಗಡುವು

ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಶುಕ್ರವಾರ ಸಿಲ್ಕ್ ಬೋರ್ಡ್ ಜಂಕ್ಷನ್‍, ಎಚ್‌ಎಸ್ ಆರ್ 5 ಮತ್ತು 6ನೇ ಸೆಕ್ಟರ್, ಅಗರ ಕೆರೆ ರಸ್ತೆ ಮತ್ತು ಜಂಕ್ಷನ್‌, ಇಬ್ಬಲೂರು ಜಂಕ್ಷನ್‌, ಪಣತ್ತೂರು ಮುಖ್ಯ ರಸ್ತೆ ಹಾಗೂ ವಿಬ್‌ಗಯಾರ್‌ ಸ್ಕೂಲ್‌ ರಸ್ತೆ ಸೇರಿದಂತೆ ವಿವಿಧ ಕಡೆ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದರು.

ಬೆಂಗಳೂರು ನಗರದ ರಸ್ತೆಗಳಿಗೆ ಸಿಎಸ್‌ ಭೇಟಿ, ಗುಂಡಿ ಮುಕ್ತಿಗೆ ವಾರದ ಗಡುವು

-

ಹರೀಶ್‌ ಕೇರ ಹರೀಶ್‌ ಕೇರ Sep 20, 2025 7:25 AM

ಬೆಂಗಳೂರು : ರಾಜಧಾನಿ ಬೆಂಗಳೂರಿನ ವಿವಿಧ ಪ್ರದೇಶಗಳ ರಸ್ತೆಗಳನ್ನು ಶುಕ್ರವಾರ ಪರಿಶೀಲಿಸಿದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ (Chief secretary) ಶಾಲಿನಿ ರಜನೀಶ್‌ (shalini rajinish) ಅವರು, ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಹಾಗೂ ನಗರಪಾಲಿಕೆಯ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ರಸ್ತೆಗಳಲ್ಲಿನ ಗುಂಡಿ (Bengaluru potholes), ಧೂಳಿನ ಕಾರಣಕ್ಕೆ ಸಿಬ್ಬಂದಿ ಕೆಲಸಕ್ಕೆ ಬರುವ ಅವಧಿ ಹೆಚ್ಚಾಗುತ್ತಿದೆ. ಸಮಸ್ಯೆ ಸರಿಪಡಿಸುವ ಇಚ್ಛಾಶಕ್ತಿ ಕಾಣುತ್ತಿಲ್ಲ ಎಂಬ ಕಾರಣದಿಂದ ಹೊರ ಹೊಗಲು ನಿರ್ಧರಿಸಿರುವುದಾಗಿ ಉದ್ಯಮಿ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿತ್ತು.

ಹೀಗಾಗಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಶುಕ್ರವಾರ ಸಿಲ್ಕ್ ಬೋರ್ಡ್ ಜಂಕ್ಷನ್‍, ಎಚ್‌ಎಸ್ ಆರ್ 5 ಮತ್ತು 6ನೇ ಸೆಕ್ಟರ್, ಅಗರ ಕೆರೆ ರಸ್ತೆ ಮತ್ತು ಜಂಕ್ಷನ್‌, ಇಬ್ಬಲೂರು ಜಂಕ್ಷನ್‌, ಪಣತ್ತೂರು ಮುಖ್ಯ ರಸ್ತೆ ಹಾಗೂ ವಿಬ್‌ಗಯಾರ್‌ ಸ್ಕೂಲ್‌ ರಸ್ತೆ ಸೇರಿದಂತೆ ವಿವಿಧ ಕಡೆ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದರು.

ರಸ್ತೆಗಳಲ್ಲಿ ಗುಂಡಿಗಳನ್ನು ಕಂಡ ಶಾಲಿನಿ ರಜನೀಶ್‌, ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಧಿಕಾರಿ ಮತ್ತು ಎಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡರು. ಕಳೆದ ಎರಡು ವರ್ಷದಿಂದ ಏನು ಕೆಲಸ ಮಾಡಿದ್ದೀರಿ, ರಾಜ್ಯ ಸರ್ಕಾರ ಕೊಟ್ಟ ಅನುದಾನ ಏನಾಯಿತು. ಇಷ್ಟು ಕಳಪೆ ಗುಣಮಟ್ಟದ ಕಾಮಗಾರಿ ಮಾಡಲಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ಒಂದು ವಾರದಲ್ಲಿ ನಗರ ಎಲ್ಲ ರಸ್ತೆಗಳು ಗುಂಡಿ ಮುಕ್ತವಾಗಬೇಕು. ಒಂದು ವಾರದ ಬಳಿಕ ಮತ್ತೆ ಪರಿಶೀಲನೆ ನಡೆಸಲಾಗುವುದು. ಗುಂಡಿ ಕಂಡು ಬಂದರೆ ಸಂಬಂಧಪಟ್ಟ ಅಧಿಕಾರಿಯನ್ನು ಮುಲಾಜಿಲ್ಲದೇ ಅಮಾನತುಗೊಳಿಸಲಾಗುವುದು ಎಂದು ಶಾಲಿನಿ ರಜನೀಶ್‌ ಎಚ್ಚರಿಕೆ ಸಹ ನೀಡಿದ್ದಾರೆ.

ಸಿಲ್ಕ್ ಬೋರ್ಡ್ ಮೇಲ್ಸೇತುವೆ ಕೆಳಭಾಗ ರಾಜಕಾಲುವೆಯಲ್ಲಿ ಸಂಪೂರ್ಣ ಸ್ವಚ್ಛತೆ ಕಾಪಾಡಬೇಕು. ಬಳಕೆಯಾಗದ ಜಾಗದಲ್ಲಿ ಡೆಬ್ರೀಸ್, ರಾಜಕಾಲುವೆಯಲ್ಲಿ ಹೂಳನ್ನು ತೆರವು ಮಾಡಿ, ಸುಂದರೀಕರಣ ಮಾಡಿ ಫೇವರ್ ಬ್ಲಾಕ್ಸ್ ಅಳವಡಿಸಬೇಕು. ಎಚ್ ಎಸ್ ಆರ್ 5ನೇ ಸೆಕ್ಟರ್ ರಸ್ತೆ ತಿರುವು ಬಳಿ ಪಾದಚಾರಿ, ಎಲೆಕ್ಟ್ರಿಕಲ್ ಕಂಬ, ಡ್ರೈನ್ ಅನ್ನು ಸರಿಯಾಗಿ ಮಾಡಿ ಸುಗಮ ವಾಹನಗಳ ಸಂಚಾರಕ್ಕೆ ಅನುವಾಗುವಂತೆ ಮಾಡುವುದು ಮತ್ತು ರಸ್ತೆ ಮೇಲೆ ನೀರು ನಿಲ್ಲುತ್ತದೆ, ಕೂಡಲೆ ಚರಂಡಿ ಕಾಮಗಾರಿ ನಡೆಸಿ ನೀರು ಸರಾಗವಾಗಿ ಹೋಗಲು ವ್ಯವಸ್ಥೆ ಮಾಡುವಂತೆ ಸೂಚಿಸಿದರು.

ಸರ್ಜಾಪುರ ಸರ್ವೀಸ್ ರಸ್ತೆಯನ್ನು ಆದ್ಯತೆ ಮೇರೆಗೆ ಅಭಿವೃದ್ಧಿಪಡಿಸಲು ದಕ್ಷಿಣ ಪಾಲಕೆ ಆಯುಕ್ತರಿಗೆ ಸೂಚಿಸಿದ ಮುಖ್ಯ ಕಾರ್ಯದರ್ಶಿ, ಇಬ್ಲೂರು ಜಂಕ್ಷನ್ ಬಳಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಸ್ಕೈವಾಕ್ ನಿರ್ಮಾಣ ಮಾಡುವಂತೆ ತಿಳಿಸಿದರು. ಈ ವೇಳೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ, ನಗರ ಪಾಲಿಕೆಗಳ ಆಯುಕ್ತರಾದ ಕೆ.ಎನ್. ರಮೇಶ್ ಡಿ.ಎಸ್, ರಮೇಶ್, ಬಿಸ್ಮೈಲ್ ತಾಂತ್ರಿಕ ನಿರ್ದೇಶಕ ಡಾ. ಬಿ‌.ಎಸ್ ಪ್ರಹ್ಲಾದ್ ಮೊದಲಾದವರಿದ್ದರು.

ಇದನ್ನೂ ಓದಿ: Bengaluru Roads: ಮೊದಲು ರಸ್ತೆ ಗುಂಡಿ ಮುಚ್ಚಿ ಮಾನ ಕಾಪಾಡಿಕೊಳ್ಳಿ; ಡಿಕೆಶಿ ವಿರುದ್ಧ ಜೆಡಿಎಸ್‌ ಕಿಡಿ