ಬೆಂಗಳೂರು: ಸ್ಥಳೀಯ ಸಂಸ್ಥೆ ಚುನಾವಣೆಗೆ ರಾಜ್ಯ ಸರಕಾರ ಸಿದ್ಧತೆ ನಡೆಸಿಕೊಳ್ಳುತ್ತಿರುವ ಹೊಸ್ತಿಲಿನಲ್ಲಿಯೇ ಹಲವು ಶಾಸಕರು ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯಿತಿ ಚುನಾವಣೆ ನಡೆಸುವ ಬಗ್ಗೆ ಕೊಸರಾಟ ಶುರು ಮಾಡಿದ್ದಾರೆ.
ಸೋಮವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ, ಹಲವು ಶಾಸಕರು ರಾಜ್ಯದಲ್ಲಿ ಭೀಕರ ಬರವಿದೆ. ಅನುದಾನ ಸೂಕ್ತ ಪ್ರಮಾಣದಲ್ಲಿ ಸಿಕ್ಕಿಲ್ಲ. ಆದ್ದರಿಂದ ಈ ಹಂತದಲ್ಲಿ ಗ್ರಾಪಂ, ಜಿಪಂ ಚುನಾವಣೆಗಳು ನಡೆಸಿದರೆ ಸ್ಥಳೀಯವಾಗಿ ನಿಭಾಯಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಡಿಸೆಂಬರ್ ಅಂತ್ಯಕ್ಕೆ ನಡೆಸಲು ಉದ್ದೇಶಿಸಿರುವ ಚುನಾವಣೆಗಳನ್ನು ಮುಂದೂಡುವುದು ಸೂಕ್ತ ಎನ್ನುವ ಅಭಿಪ್ರಾಯವನ್ನು ಶಾಸಕರು ಸಭೆಯಲ್ಲಿ ಮಂಡಿಸಿದ್ದಾರೆ ಎನ್ನಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಶಿವಕುಮಾರ್, ಚುನಾವಣೆ ಮಾಡಲೇ ಬೇಕಾದ ಅನಿರ್ವಾಯತೆಯಿದೆ. ಆದ್ದರಿಂದ ಜಿಲ್ಲಾ ಮಟ್ಟದಲ್ಲಿ ಚುನಾವಣಾ ಸಿದ್ಧತೆ ಆರಂಭಿಸಿ ಎಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ಈ ಹಿಂದೆ ಪ್ರಿಯಾಂಕ್ ಖರ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ ಯತ್ ರಾಜ್ ಸಚಿವರಾಗಿದ್ದಾಗ ಪಿಡಿಒ ವರ್ಗಾವಣೆಯನ್ನು ಕೌನ್ಸಿಲಿಂಗ್ ಮೂಲಕ ನಡೆಸಲು ತಿದ್ದುಪಡಿ ಕಾಯಿದೆ ತರಲಾಗಿದೆ. ಇದರಿಂದ ಸ್ಥಳೀಯವಾಗಿ ಶಾಸಕರಿಗೆ ಹಲವು ರೀತಿಯ ಸಮಸ್ಯೆ ಗಳು ಎದುರಾಗಿದೆ.
ಹಲವು ಪಿಡಿಒಗಳು ನಮ್ಮ ಮಾತುಗಳನ್ನೇ ಕೇಳುತ್ತಿಲ್ಲ. ಆದ್ದರಿಂದ ಪಿಡಿಒ ವರ್ಗಾವಣೆಯನ್ನು ಕೌನ್ಸಿಲಿಂಗ್ ಬದಲಿಗೆ ಈ ಹಿಂದೆ ಇದ್ದ ಪದ್ಧತಿಯಂತೆ ನಡೆಸಲು ಅವಕಾಶ ಕಲ್ಪಿಸಬೇಕು ಎಂದು 30ಕ್ಕೂ ಹೆಚ್ಚು ಶಾಸಕರು ಒತ್ತಡ ಹೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ಗಳಿಗೆ ಕ್ಷೇತ್ರವಾರು ಸದಸ್ಯರನ್ನು ನೇಮಿಸುವ ಬಗ್ಗೆ, ಭಾರತ್ ಜೋಡೋ ಸಮಿತಿಗಳಿಗೆ ಪ್ರತಿಕ್ಷೇತ್ರದಲ್ಲಿ ಕನಿಷ್ಠ ನೂರು ಜನರ ತಂಡವನ್ನು ಕಟ್ಟುವ ಬಗ್ಗೆ ಶಾಸಕರಿಗೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ. ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಸಚಿವರು, ವಿಧಾನ ಸಭಾ ಶಾಸಕರು, ವಿಧಾನಪರಿಷತ್ ಸದಸ್ಯರು ಭಾಗವಹಿಸಿದ್ದರು.
1 ದಿನ ಸದನ ವಿಸ್ತರಣೆ
ಈ ನಡುವೆ ಮಳೆಗಾಲದ ಅಧಿವೇಶನ ಮೂರು ದಿನ ಮೊದಲೇ ಬರ್ಖಾಸ್ತುಗೊಳಿಸಿದ್ದ ರಾಜ್ಯ ಸರಕಾರ ಇದೀಗ ವಿಶೇಷ ಅಧಿವೇಶನವನ್ನು ಹೆಚ್ಚುವರಿ ಒಂದು ದಿನ ನಡೆಸುವ ಬಗ್ಗೆ ಚಿಂತನೆ ನಡೆಸಿದ್ದು, ಇದೇ ವಿಷಯವನ್ನು ಶಾಸಕಾಂಗ ಪಕ್ಷದ ಸಭೆ ಯಲ್ಲಿಯೂ ಪ್ರಸ್ತಾಪಿಸಲಾಗಿದೆ ಎನ್ನಲಾಗಿದೆ