ಬೆಂಗಳೂರು: ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಜನರಿಗೆ ಕೇಂದ್ರ ಸರಕಾರದಿಂದ ಪರಿಹಾರ ದೊರಕಿಸಿಕೊಡುವುದು ನಮ್ಮ ಆದ್ಯತೆಯಾಗಿದೆ. ಇದಕ್ಕಾಗಿ ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕರೆದೊಯ್ಯಲು ನಿರ್ಧರಿಸಿದ್ದೇವೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ(Dr G Parameshwar) ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿಗೆ ಸಂಬಂಧಿಸಿದ ವಿಚಾರದಲ್ಲಿ ಸಣ್ಣಪುಟ್ಟ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪ್ರತಿಪಕ್ಷ ಗಳು ನಮ್ಮೊಂದಿಗೆ ಸಹಕರಿಸಬೇಕು. ಪ್ರಧಾನಮಂತ್ರಿಗಳು, ಕೇಂದ್ರ ಗೃಹ ಸಚಿವರು ಹಾಗೂ ಕೇಂದ್ರ ಕೃಷಿ ಸಚಿವರ ಭೇಟಿಗೆ ಮೊದಲು ಸಮಯಾವಕಾಶ ಪಡೆಯಬೇಕಾಗುತ್ತದೆ. ಅವರ ಭೇಟಿಗೆ ಅವಕಾಶ ದೊರೆತ ನಂತರವೇ ಸರ್ವಪಕ್ಷ ನಿಯೋಗವನ್ನು ಕರೆದೊಯ್ಯಲು ದಿನಾಂಕ ನಿಗದಿಪಡಿಸ ಬಹುದು.
ಏಕಾಏಕಿ ದಿನಾಂಕ ನಿಗದಿಪಡಿಸಿ ನಿಯೋಗವನ್ನು ದೆಹಲಿಗೆ ಕರೆದೊಯ್ಯುವುದು ಸಾಧ್ಯವಿಲ್ಲ. ಈ ಹಿಂದೆ ಸರಕಾರ ನಡೆಸಿರುವ ಬಿಜೆಪಿಯವರಿಗೆ ಈ ಆಡಳಿತಾತ್ಮಕ ಪ್ರಕ್ರಿಯೆಗಳು ತಿಳಿದಿಲ್ಲವೇ ಎಂದು ಪ್ರಶ್ನಿಸಿದರು. ಈ ಹಿಂದೆ ನಾನು ರೇಷ್ಮೆ ಸಚಿವನಾಗಿದ್ದ ಸಂದರ್ಭದಲ್ಲಿ ರೇಷ್ಮೆ ಉದ್ಯಮಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ನಿಯೋಗವನ್ನು ದೆಹಲಿಗೆ ಕರೆದೊಯ್ದಿದ್ದೆ. ಆಗ ಪ್ರಧಾನ ಮಂತ್ರಿಗಳ ಭೇಟಿಗೆ ಮೊದಲೇ ಸಮಯಾವಕಾಶ ಕೋರಿದ್ದರೂ ಅವಕಾಶ ದೊರೆತಿರಲಿಲ್ಲ.
ಇದನ್ನೂ ಓದಿ: Dr G Parameshwar: ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಕ್ಕೆ ಅನುದಾನ ನೀಡಲು ಮನವಿ
ನಿಯೋಗ ದೆಹಲಿಗೆ ತೆರಳಿದ ನಂತರ, ಭೇಟಿಗೆ ಸಮಯ ನಿಗದಿಯಾಗದೇ ನಮ್ಮನ್ನು ಏಕೆ ಕರೆದುಕೊಂಡು ಬಂದಿದ್ದೀರಿ ಎಂದು ನಿಯೋಗದ ಸದಸ್ಯರು ಪ್ರಶ್ನಿಸಿದ್ದರು. ಆ ಸಂದರ್ಭದಲ್ಲಿ ಪಿ.ವಿ.ನರಸಿಂಹರಾವ್(P V Narasima Rao) ಅವರು ಪ್ರಧಾನಮಂತ್ರಿಯಾಗಿದ್ದರು. ಪ್ರತಿಪಕ್ಷದವರು ಈ ವಿಚಾರವನ್ನು ಸಮಸ್ಯೆಯನ್ನಾಗಿ ಮಾಡುತ್ತಿದ್ದಾರೆ ಎಂದು ಮನವರಿಕೆ ಮಾಡಿ, ಭೇಟಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದೆವು. ಬಳಿಕ ಪ್ರಧಾನ ಮಂತ್ರಿಗಳು ತಕ್ಷಣವೇ ಭೇಟಿಗೆ ಅವಕಾಶ ನೀಡಿದ್ದರು. ಅದರಂತೆ ನಿಯೋಗವನ್ನು ಕರೆದೊಯ್ದು ಅವರನ್ನು ಭೇಟಿ ಮಾಡಿದ್ದೆವು ಎಂದು ಹೇಳಿದರು.
62 ಸಾವಿರ ಕೋಟಿ ನಷ್ಟ: ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯಿಂದ ಸುಮಾರು 62 ಸಾವಿರ ಕೋಟಿ ರೂ. ನಷ್ಟವಾಗಿದೆ. ಈ ನಷ್ಟಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರದಿಂದ ಎಷ್ಟು ಪರಿಹಾರವನ್ನು ಕೋರಬೇಕು ಎಂಬ ಲೆಕ್ಕಾಚಾರವನ್ನು ಅಧಿಕಾರಿಗಳು ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ದಸರಾ ಉತ್ಸವ ಮುಕ್ತಾಯಗೊಂಡಿರುವುದರಿಂದ ಮುಂದಿನ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಕೈಗೊಳ್ಳಲಾ ಗುವುದು. ಸರ್ವಪಕ್ಷ ಸಭೆಯನ್ನು ಕರೆದು ಎಲ್ಲ ಪಕ್ಷಗಳ ನಾಯಕರೊಂದಿಗೆ ಮತ್ತೊಂದು ಸುತ್ತಿನ ಚರ್ಚೆ ನಡೆಸಲಾಗುವುದು. ಬಳಿಕ ಕೇಂದ್ರದ ನಾಯಕರ ಭೇಟಿಗೆ ಸಮಯ ನಿಗದಿಪಡಿಸಿಕೊಂಡು ನಿಯೋಗವನ್ನು ಕರೆದೊಯ್ಯಲಾಗುವುದು. ಬಿಜೆಪಿ ಸೇರಿದಂತೆ ವಿಪಕ್ಷಗಳ ನಾಯಕರನ್ನು ನಿಯೋಗದಲ್ಲಿ ಭಾಗವಹಿಸುವಂತೆ ಮತ್ತೊಮ್ಮೆ ಮನವಿ ಮಾಡಿಕೊಳ್ಳಲಾಗುವುದು. ಅವರು ಬಂದರೆ ಸಂತೋಷ. ಬರದಿದ್ದರೆ ಏನು ಮಾಡಲು ಸಾಧ್ಯ? ರಾಜ್ಯದಲ್ಲಿ ಆಡಳಿತ ನಡೆಸು ತ್ತಿರುವ ನಾವು ಜನರ ಹಿತದೃಷ್ಟಿಯಿಂದ ಕೇಂದ್ರ ಸರಕಾರದ ಬಳಿಗೆ ತೆರಳಿ ಪರಿಹಾರವನ್ನು ಕೇಳಲೇ ಬೇಕು. ಅದು ನಮ್ಮ ಜವಾಬ್ದಾರಿ ಎಂದು ಸ್ಪಷ್ಟಪಡಿಸಿದರು.
ಜಾತಿ ಬಣ್ಣ ಹಚ್ಚುವುದು ಕೀಳುಮಟ್ಟದ ಆಲೋಚನೆ ಮೈಸೂರು ದಸರಾ ಸಂದರ್ಭದಲ್ಲಿ ಮುಖ್ಯಮಂತ್ರಿಗಳೊಂದಿಗೆ ತೆರಳುತ್ತಿದ್ದ ಕೆಲವು ಸಚಿವರನ್ನು ಪೊಲೀಸರು ತಡೆದಿರುವ ವಿಡಿಯೊ ವೈರಲ್ ಆಗಿರುವ ಕುರಿತು ಹಾಗೂ ಈ ವಿಚಾರದಲ್ಲಿ ಬಿಜೆಪಿ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಿದ ಡಿಸಿಎಂ ಜಿ.ಪರಮೇಶ್ವರ್ ಅವರು, ಮೈಸೂರು ದಸರಾ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಶಿಷ್ಟಾಚಾರ ಪಾಲಿಸುವ ವೇಳೆ ನಡೆದ ಘಟನೆಗಳಿಗೆ ಜಾತಿ ಬಣ್ಣ ಹಚ್ಚುವುದು ಕೀಳುಮಟ್ಟದ ಆಲೋಚನೆಯಾಗಿದೆ.
ಇಂತಹ ವಿಚಾರಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಸರಿಯಲ್ಲ. ಮುಖ್ಯಮಂತ್ರಿಗಳಿಗೆ ಅವರದೇ ಆದ ಶಿಷ್ಟಾಚಾರವಿರುತ್ತದೆ. ಅದನ್ನು ಪೊಲೀಸರು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ವಿಶೇಷವಾಗಿ ಅಪಾರ ಜನಸಂದಣಿ ಇರುವ ಸಂದರ್ಭಗಳಲ್ಲಿ ಭದ್ರತೆ ಮತ್ತು ಶಿಷ್ಟಾಚಾರದ ನಿಯಮಗಳನ್ನು ಹೆಚ್ಚು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತದೆ. ಮುಖ್ಯಮಂತ್ರಿಗಳನ್ನು ಹೊರತು ಪಡಿಸಿ ಬೇರೆ ಯಾರನ್ನೂ ಒಳಗೆ ಬಿಡಬಾರದು ಎಂಬ ಸೂಚನೆ ಪೊಲೀಸರಿಗೆ ಇದ್ದಿರಬಹುದು. ಈ ಬಗ್ಗೆ ನನಗೆ ನಿಖರ ಮಾಹಿತಿ ಇಲ್ಲ. ಆದರೆ, ಮೇಲಧಿಕಾರಿಗಳಿಂದ ಬಂದ ಸೂಚನೆಗಳನ್ನು ಪೊಲೀಸರು ಪಾಲಿಸಿರುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
![]()
ಹಿತಾಸಕ್ತಿಗೆ ಸಂಬಂಧಿಸಿದ ವಿಚಾರಗ ಳಲ್ಲಿ ಸಣ್ಣಪುಟ್ಟ ರಾಜಕೀಯ ಭಿನ್ನಾಭಿಪ್ರಾಯ ಗಳನ್ನು ಬದಿಗಿಡ ಬೇಕು. ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಜನರಿಗೆ ಪರಿಹಾರ ದೊರಕಿಸಿಕೊಡು ವುದು ನಮ್ಮೆಲ್ಲರ ಆದ್ಯತೆಯಾಗಬೇಕು. ಕೇಂದ್ರ ಸರಕಾರದಿಂದ ಬರ ಪರಿಹಾರ ಪಡೆಯುವುದೇ ಈ ಸರ್ವಪಕ್ಷ ನಿಯೋಗದ ಪ್ರಮುಖ ಉದ್ದೇಶ.
-ಡಾ.ಜಿ.ಪರಮೇಶ್ವರ್, ಡಿಸಿಎಂ