ನಾಗೇಂದ್ರ ವಿರುದ್ಧ ಬಿಜೆಪಿ ಬೀದಿ ಯಾತ್ರೆ
170 ಕಿಮೀ ನಡಿಗೆ, ಜೆಡಿಎಸ್ ಬೆಂಬಲ
ಬೆಂಗಳೂರು: ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದ ಬಿಜೆಪಿ ಇದೀಗ ಸದನದ ಹೊರಗೂ ಈ ಹೋರಾಟದ ಬಿಸಿಯನ್ನು ಉಳಿಸುವ ಲೆಕ್ಕಾಚಾರ ದಲ್ಲಿದ್ದು, ಇದರ ಭಾಗವಾಗಿ ಪಾದಯಾತ್ರೆಯನ್ನು ಘೋಷಿಸಿದೆ. ಸೆ.1ರಿಂದ 10ರ ವರೆಗೆ ರಾಯಚೂ ರಿನ ಗುರಗುಂಟಾದಿಂದ ಬಳ್ಳಾರಿವರೆಗೆ ಸುಮಾರು 170 ಕಿಮೀ ಪಾದಯಾತ್ರೆ ಮಾಡುವುದಾಗಿ ಮಂಗಳವಾರ ಬಿಜೆಪಿ ಘೋಷಿಸಿದ್ದು, ಈ ಪಾದಯಾತ್ರೆಯಲ್ಲಿ ಮೈತ್ರಿ ಪಕ್ಷ ಜೆಡಿಎಸ್ ಸಹ ಭಾಗವಹಿಸಲಿದೆ ಎಂದು ಹೇಳಿದೆ.
ಈ ಮೂಲಕ ನಾಗೇಂದ್ರ ರಾಜೀನಾಮೆ ಕೊಡಬೇಕೆಂಬ ಹೋರಾಟವನ್ನು ತಾರ್ತಿಕ ಅಂತ್ಯಕ್ಕೆ ಮುಟ್ಟಿಸುವ ಆಲೋಚನೆಯಲ್ಲಿದೆ. ಪಾದಯಾತ್ರೆಯ ಮೂಲಕ ಪಕ್ಷದ ಸಂಘಟನೆಗೂ ಚುರುಕು ಮುಟ್ಟಿಸುವ ಲೆಕ್ಕಾಚಾರದಲ್ಲಿ ಬಿಜೆಪಿ ನಾಯಕರಿದ್ದಾರೆ.
ಪಾದಯಾತ್ರೆಗೆ ಸಂಬಂಧಿಸಿದಂತೆ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯೇಂದ್ರ, ಬಿಜೆಪಿಯಿಂದ ಸೆ.1ರಿಂದ 10ರವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ರಾಯಚೂರಿನಿಂದ ಶುರುವಾಗಿ ಬಳ್ಳಾರಿ ಯಲ್ಲಿ ಸಮಾರೋಪವಾಗಲಿದೆ.
ಇದನ್ನೂ ಓದಿ: B Nagendra: ವಾಲ್ಮೀಕಿ ನಿಗಮ ಹಗರಣದಲ್ಲಿ ಸಚಿವ ಬಿ. ನಾಗೇಂದ್ರಗೆ ತುಸು ರಿಲೀಫ್; ಹೈಕೋರ್ಟ್ ಮಹತ್ವದ ಆದೇಶ
170 ಕಿಮೀವರೆಗೆ ಪಾದಯಾತ್ರೆ ಮಾಡುತ್ತೇವೆ ಎಂದು ಘೋಷಿಸಿದರು. ರಾಜ್ಯದ ಅಭಿವೃದ್ಧಿಯ ನಿರ್ಲಕ್ಷ್ಯ, ರೈತರ ಸಂಕಷ್ಟ, ಬಡವರಿಗೆ ಯೋಜನೆ ನೀಡದೇ ಇರುವುದು, ಉದ್ಯೋಗಾವಕಾಶ ಸೃಷ್ಟಿ ಯಲ್ಲಿ ವೈಫಲ್ಯ, ಮೀಸಲಾತಿ ಜಾರಿ, ಉತ್ತರ ಕರ್ನಾಟಕದ ಸಮಸ್ಯೆ, ಹೊಸ ಹುದ್ದೆಗಳ ನೇಮಕಾತಿ ಬಗ್ಗೆ ಸಿಎಂ ಆಸಕ್ತಿ ವಹಿಸುತ್ತಿಲ್ಲ... ಇವುಗಳ ಬಗ್ಗೆ ರಾಜ್ಯದ ಜನರಿಗೆ ತಿಳಿಸಿ ಸರಕಾರದ ಬಂಡವಾಳ ಬಯಲು ಮಾಡಲು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಕಾಂಗ್ರೆಸ್ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಬಡವರ, ರೈತರ,ಯುವಕರ ವಿರೋಧಿ ಸರ್ಕಾರದ ಬಣ್ಣ ಬಯಲು ಮಾಡಲು ಹಾಗೂ ಜನರಲ್ಲಿ ಜಾಗೃತಿ ಮೂಡಿಸಲು ಈ ಹತ್ತು ದಿನಗಳ ಕಾಲ ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ವಿಜಯೇಂದ್ರ ಹೇಳಿದರು. ಪಾದಯಾತ್ರೆಯ ಉದ್ಘಾಟನೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಸಮಾರೋಪಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿ ಇತರೆ ಕೇಂದ್ರ ಸಚಿವರು ಬರುತ್ತಾರೆ. ಇದು ಬಿಜೆಪಿ ನೇತೃತ್ವದ ಪಾದಯಾತ್ರೆ. ಕುಮಾರಸ್ವಾಮಿ ಅವರ ಜತೆಗೂ ಮಾತಾಡಿದ್ದೇವೆ, ಅವರೂ ಸಹಕಾರ ಕೊಡುತ್ತಾರೆ.
ಪಾದಯಾತ್ರೆಗೆ ಜೆಡಿಎಸ್ ಬೆಂಬಲ ಇದೆ. ರಾಯಚೂರಿನ ಗುರಗುಂಟಾದಿಂದ ಸೆ.1ಕ್ಕೆ ಪಾದಯಾತ್ರೆ ಆರಂಭವಾಗಲಿದೆ. ಬಳ್ಳಾರಿಯಲ್ಲಿ ಪಾದಯಾತ್ರೆ ಅಂತ್ಯವಾಗಲಿದ್ದು, ಅ ಸಮಾರೋಪ ಕಾರ್ಯ ಕ್ರಮ ನಡೆಯಲಿದೆ ಎಂದು ತಿಳಿಸಿದರು.
ಡಿಕೆಶಿ ಸರಕಾರ ಟೇಕಾಫ್ ಆಗೇ ಇಲ್ಲ: ಡಿಕೆಶಿ ಸಿಎಂ ಆಗಿ ಪ್ರಮಾಣವಚನ ತಗೊಂಡಾಗ ಉತ್ಸಾಹ ದಿಂದ ಕಾಣುತ್ತಿದ್ದರು. ಆದರೆ ಕಳೆದ ಎರಡೂವರೆ ತಿಂಗಳಲ್ಲಿ ಅವರ ಉತ್ಸಾಹ ಕಳೆಗುಂದಿದೆ. ಸಂಪುಟ ವಿಸ್ತರಣೆ ತಡವಾಯ್ತು, ಪಟ್ಟಿ ಹಗ್ಗಜಗ್ಗಾಟ, ಖಾತೆ ಹಂಚಿಕೆ, ಸಿದ್ದರಾಮಯ್ಯ ಮುನಿಸು ಎಲ್ಲವೂ ನಡೀತು. ಒಟ್ಟಾರೆ ಡಿ.ಕೆ.ಶಿವಕುಮಾರ್ ಸಿಎಂ ಗದ್ದುಗೆ ಮೇಲೆ ಕೂತ ಬಳಿಕ ಸರಕಾರ ಟೇಕಾಫ್ ಆಗೇ ಇಲ್ಲ ಎಂದು ಟೀಕಿಸಿದ ಅವರು. ಅಧಿವೇಶನ ಆರಂಭಕ್ಕೂ ಮುನ್ನ ನಾವು ಸುದ್ದಿ ಗೋಷ್ಠಿ ನಡೆಸಿ ಬಿ.ನಾಗೇಂದ್ರ ವಜಾ ಮಾಡಲು ಒತ್ತಾಯಿಸಿದ್ದೇ ಎಂದರು.
ಮಾರ್ಗದಲ್ಲಿ ಕೆಲ ಬದಲಾವಣೆ ಸಾಧ್ಯತೆ
ಸದ್ಯ ಸಿದ್ಧಪಡಿಸಿರುವ ರೂಟ್‌ಮ್ಯಾಪ್‌ನಲ್ಲಿ ಏಳು ದಿನಕ್ಕೆ ಪಾದಯಾತ್ರೆ ಸಂಪೂರ್ಣ ವಾಗಲಿದೆ. ಆದರೆ ಉದ್ಘಾಟನೆ ಹಾಗೂ ಸಮಾರೋಪದ ದಿನ ನಿರೀಕ್ಷಿತ ಪ್ರಮಾಣದಲ್ಲಿ ನಡಿಗೆ ಮಾಡುವುದು ಕಷ್ಟ ಎನ್ನುವ ಮಾತುಗಳಿರುವುದರಿಂದ ಇನ್ನೆರಡು ದಿನದಲ್ಲಿ ತಂಗುವ ಸ್ಥಳದಲ್ಲಿ ಬದಲಾವಣೆ ಮಾಡುವ ಸಾಧ್ಯತೆಯಿದೆ. ನಿತ್ಯ 15-18 ಕಿಮೀ ನಡಿಗೆ ಮಾಡುವಂತೆ ಪರಿಷ್ಕೃತ ಮ್ಯಾಪ್ ಸಿದ್ಧಪಡಿಸುವ ಸಾಧ್ಯತೆಯಿದೆ.
![]()
ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ರಾತ್ರಿಹಗಲು ಧರಣಿ ನಡೆಸುತ್ತೇವೆ ಎಂದು ಘೋಷಣೆ ಮಾಡಿದ ಕೂಡಲೇ ಕಾಂಗ್ರೆಸ್ ಸರಕಾರ ಹೆದರಿಕೊಂಡು ಸದನವನ್ನು ರದ್ದು ಮಾಡಿದೆ. ಎಲ್ಲ ವಿಷಯಗಳ ಬಗ್ಗೆ ಚರ್ಚೆಗೆ ನಾವು ಸಿದ್ಧವಿದ್ದರೂ ಕಾಂಗ್ರೆಸ್ ತಯಾರಿರಲಿಲ್ಲ. ಬರ, ನೈಸ್ ಟೋಲ್, ಕೆಪಿಎಸ್‌ಸಿ ಅಕ್ರಮ ಕುರಿತು ಚರ್ಚಿಸಲು ನಾವು ಸಿದ್ಧವಾಗಿದ್ದರೂ ಅವರು ಸಿದ್ಧರಿಲ್ಲ.
-ಆರ್.ಅಶೋಕ್, ಪ್ರತಿಪಕ್ಷ ನಾಯಕ