ಬೆಂಗಳೂರು, ಜು. 19: 20 ವರ್ಷದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಯೊಬ್ಬ ತನ್ನ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ (Bengaluru News) ನಡೆದಿದೆ. ಇದನ್ನು ಆತ್ಮಹತ್ಯೆ (self-harming) ಎಂದು ಪೊಲೀಸರು ಶಂಕಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬೆಂಗಳೂರಿನ ಮಾರಪ್ಪನಪಾಳ್ಯದ ನಿವಾಸಿ ಉದಯ್ ಗೌಡ ಮೃತ ವಿದ್ಯಾರ್ಥಿ.
ಉದಯ್ ಗೌಡ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದ. ಆತ ವಾಸವಾಗಿದ್ದ ಮನೆಯಿಂದ ಕೆಟ್ಟ ವಾಸನೆ ಬರಲು ಪ್ರಾರಂಭಿಸಿದ ನಂತರ ನೆರೆಹೊರೆಯವರು ಅನುಮಾನಗೊಂಡು ಆತನ ಕುಟುಂಬಕ್ಕೆ ಮಾಹಿತಿ ನೀಡಿದರು. ಕೊಠಡಿ ತೆರೆದಾಗ ಆತನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿತು. ದೇಹವು ಕೊಳೆತ ಸ್ಥಿತಿಯಲ್ಲಿತ್ತು. ಹೀಗಾಗಿ ಸುಮಾರು ಮೂರು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಪುತ್ರನ ಸಾವಿನ ಸುದ್ದಿ ಕೇಳಿ ಕುಟಂಬ ಶೋಕ ಸಾಗರದಲ್ಲಿ ಮುಳುಗಿದೆ. ʼʼಉದಯ್ ಪ್ರತಿದಿನ ಬೆಳಗ್ಗೆ 7 ಗಂಟೆ ಸುಮಾರಿಗೆ ಕಾಲೇಜಿಗೆ ಹೊರಡುತ್ತಿದ್ದ. ಸಾಮಾನ್ಯವಾಗಿ ರಾತ್ರಿ 11 ಗಂಟೆಗೆ ಮನೆಗೆ ಹಿಂತಿರುಗುತ್ತಿದ್ದ. ಆರೋಗ್ಯ ಸಮಸ್ಯೆಗಳಿಂದಾಗಿ ಕಳೆದ ನಾಲ್ಕು ದಿನಗಳಿಂದ ಮನೆಯಿಂದ ದೂರವಿದ್ದ. ಆ ಸಮಯದಲ್ಲಿ ಈ ಘಟನೆ ಸಂಭವಿಸಿದೆʼʼ ಎಂದು ಕುಟುಂಬಸ್ಥರು ಹೇಳಿದ್ದಾರೆ. ಆತನ ಸಾವಿನ ಕಾರಣ ಇನ್ನೂ ದೃಡವಾಗಿಲ್ಲ. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಎಂದು ಪೊಲೀಸರು ಶಂಕಿಸಿದ್ದಾರೆ. ಅದಾಗ್ಯೂ ಎಲ್ಲ ಕೋನಗಲಿಂದಲೂ ತನಿಖೆ ನಡೆಸುತ್ತಿದ್ದಾರೆ.
ಪ್ರಿಯಕರನೊಂದಿಗೆ ಸೇರಿ ಹಾವಿನಿಂದ ಕಚ್ಚಿಸಿ ಪತಿಯನ್ನೇ ಕೊಂದ ಪತ್ನಿ
ಉದಯ್ ಇತ್ತೀಚೆಗೆ ತಿರುಪತಿ ತೀರ್ಥಯಾತ್ರೆಯಿಂದ ಹಿಂತಿರುಗಿದ್ದ. ಯಾವುದೇ ಸಮಸ್ಯೆ ಬಗ್ಗೆ ಆತ ಎಂದಿಗೂ ಮಾತನಾಡಿರಲಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ. ಆತ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನೆಂದು ತಮಗೆ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ.
ತನಿಖೆಯ ಭಾಗವಾಗಿ ಪೊಲೀಸರು ಉದಯ್‌ನ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.