ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಂಗಾಂಗ ದಾನಿಗಳ ನಿಸ್ವಾರ್ಥ ಕೊಡುಗೆಗೆ ನಮನ ಸಲ್ಲಿಕೆ: ಗ್ಲೆನೆಗಲ್ಸ್ ಬಿಜಿಎಸ್ ಆಸ್ಪತ್ರೆಯಲ್ಲಿ 120ಕ್ಕೂ ಹೆಚ್ಚು ಕುಟುಂಬಗಳಿಗೆ ಸನ್ಮಾನ

ಅಂಗಾಂಗ ದಾನದ ಮೂಲಕ ತಮ್ಮ ಸಾವಿನ ನಂತರವೂ ಹಲವರ ಬದುಕಿಗೆ ಮರು ಜನ್ಮ ನೀಡಿ ಹೊಸ ಆಶಾಕಿರಣ ಮೂಡಿಸಿದ ಅಂಗಾಂಗ ದಾನಿಗಳು ಮತ್ತು ಅವರ ಕುಟುಂಬಗಳ ನಿಸ್ವಾರ್ಥ ಕೊಡುಗೆಯನ್ನು ಸ್ಮರಿಸಲು ಬೆಂಗಳೂರಿನ ಕೆಂಗೇರಿಯ ಗ್ಲೆನೆಗಲ್ಸ್ ಬಿಜಿಎಸ್ ಆಸ್ಪತ್ರೆಯು ʼಮುಂದುವರಿಯುವ ಅಮರ ಪರಂಪರೆʼ ( ಎ ಲೆಗಸಿ ದ್ಯಾಟ್‌ ಲೈವ್ಸ್‌ ಆನ್‌) ಕಾರ್ಯಕ್ರಮದ ಮೂಲಕ ಭಾವಪೂರ್ಣ ಗೌರವ ಸಲ್ಲಿಸಿದೆ.

ಬೆಂಗಳೂರು: ಅಂಗಾಂಗ ದಾನದ ಮೂಲಕ ತಮ್ಮ ಸಾವಿನ ನಂತರವೂ ಹಲವರ ಬದುಕಿಗೆ ಮರು ಜನ್ಮ ನೀಡಿ ಹೊಸ ಆಶಾಕಿರಣ ಮೂಡಿಸಿದ ಅಂಗಾಂಗ ದಾನಿಗಳು ಮತ್ತು ಅವರ ಕುಟುಂಬಗಳ ನಿಸ್ವಾರ್ಥ ಕೊಡುಗೆಯನ್ನು ಸ್ಮರಿಸಲು ಬೆಂಗಳೂರಿನ ಕೆಂಗೇರಿಯ ಗ್ಲೆನೆಗಲ್ಸ್ ಬಿಜಿಎಸ್ ಆಸ್ಪತ್ರೆಯು ʼಮುಂದುವರಿಯುವ ಅಮರ ಪರಂಪರೆʼ ( ಎ ಲೆಗಸಿ ದ್ಯಾಟ್‌ ಲೈವ್ಸ್‌ ಆನ್‌) ಕಾರ್ಯಕ್ರಮದ ಮೂಲಕ ಭಾವಪೂರ್ಣ ಗೌರವ ಸಲ್ಲಿಸಿದೆ.

ʼವಿಶ್ವ ಅಂಗಾಂಗ ದಾನ ದಿನʼದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ 120ಕ್ಕೂ ಹೆಚ್ಚು ಅಂಗಾಂಗ ದಾನಿಗಳ ಕುಟುಂಬದ ಸದಸ್ಯರು ಭಾಗವಹಿಸಿದ್ದರು. ಅಗಲಿದ ತಮ್ಮ ಆತ್ಮೀಯರ ಸ್ಮರಣಾರ್ಥ ಆಕಾಶ ಬುಟ್ಟಿಗಳನ್ನು ಹಾರಿಸುವ ಮೂಲಕ ಭಾವಪೂರ್ವಕ ನಮನ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಆಸ್ಪತ್ರೆ ಮತ್ತೊಂದು ಮಹತ್ವದ ಮೈಲಿಗಲ್ಲನ್ನೂ ದಾಖಲಿಸಿದೆ. ಆಸ್ಪತ್ರೆಯಲ್ಲಿ ಇದುವರೆಗೆ 1,500ಕ್ಕೂ ಅಧಿಕ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಒಟ್ಟಾರೆ ಶೇಕಡ 98ರಷ್ಟು ಯಶಸ್ಸಿನ ಪ್ರಮಾಣದೊಂದಿಗೆ ಕಿಡ್ನಿ, ಯಕೃತ್ತು, ಶ್ವಾಸಕೋಶ, ಹೃದಯ ಸೇರಿದಂತೆ ವಿವಿಧ ಅಂಗಾಂಗಗಳ ಕಸಿ ಚಿಕಿತ್ಸಾ ಸೌಲಭ್ಯವನ್ನು ಆಸ್ಪತ್ರೆ ಒದಗಿಸುತ್ತಿದೆ.

ಇದನ್ನೂ ಓದಿ: Bangalore News: ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರದಲ್ಲಿ ಅದ್ದೂರಿ ಕಾರ್ಯಕ್ರಮ: ಡಾ.ಟಿ.ಎಸ್.ಸತ್ಯವತಿ ಅವರಿಗೆ ಸನ್ಮಾನ ಹಾಗೂ ಕೈಲಾಸ ಮಾನಸ ಸರೋವರ ದರ್ಶನ

ಅಂಗಾಂಗ ದಾನಿಗಳ ಸೇವೆಯನ್ನು ಶಾಶ್ವತವಾಗಿ ಸ್ಮರಿಸುವ ಉದ್ದೇಶದಿಂದ ಆಸ್ಪತ್ರೆಯಲ್ಲಿ ನಿರ್ಮಿಸಿ ರುವ ಅಂಗದಾನಿಗಳ ಸ್ಮರಣಾರ್ಥ ಗೌರವ ಗೋಡೆ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಯಾಗಿತ್ತು.

2022ರಲ್ಲಿ ನಿರ್ಮಿಸಲಾಗಿರುವ ಈ ಗೋಡೆಯ ಮೇಲೆ ಸದ್ಯಕ್ಕೆ 150ಕ್ಕೂ ಹೆಚ್ಚು ಅಂಗದಾನಿಗಳ ಹೆಸರುಗಳನ್ನು ದಾಖಲಿಸಲಾಗಿದೆ. 24 ಅಡಿ ಉದ್ದ ಮತ್ತು 10 ಅಡಿ ಅಗಲದ ಈ ಸ್ಮರಣಾರ್ಥ ಗೋಡೆ ಯಲ್ಲಿ ಮುಂದಿನ ದಿನಗಳಲ್ಲಿ 800ಕ್ಕೂ ಹೆಚ್ಚು ಅಂಗದಾನಿಗಳ ಹೆಸರುಗಳನ್ನು ದಾಖಲಿಸಲು ಅವಕಾಶ ಇದೆ. ಅಂಗದಾನಿಗಳ ನಿಸ್ವಾರ್ಥ ಸೇವೆ ಹಾಗೂ ಅವರ ಕುಟುಂಬಗಳ ತ್ಯಾಗವನ್ನು ಶಾಶ್ವತ ವಾಗಿ ಸ್ಮರಿಸುವ ಸ್ಮಾರಕವಾಗಿ ಈ ಗೋಡೆ ರೂಪುಗೊಂಡಿದೆ.

ಗ್ಲೆನಿಗಲ್ಸ್ ಬಿಜಿಎಸ್ ಆಸ್ಪತ್ರೆಯ ಅಂಗಾಂಗ ಕಸಿ ಕಾರ್ಯಕ್ರಮವು ವಿವಿಧ ಅಂಗಾಂಗಗಳ ಕಸಿ ಚಿಕಿತ್ಸೆ ಯಲ್ಲಿ ತನ್ನ ಪರಿಣತಿಯನ್ನು ಪ್ರದರ್ಶಿಸಿದೆ. ಇದುವರೆಗೆ 1,000ಕ್ಕೂ ಅಧಿಕ ಕಿಡ್ನಿ ಕಸಿ, 350ಕ್ಕೂ ಅಧಿಕ ಯಕೃತ್ತು ಕಸಿ, 20ಕ್ಕೂ ಅಧಿಕ ಶ್ವಾಸಕೋಶ ಕಸಿ, 12 ಸಂಯುಕ್ತ ಯಕೃತ್ತು ಮತ್ತು ಕಿಡ್ನಿ ಕಸಿ, ಏಳಕ್ಕೂ ಹೆಚ್ಚು ಹೃದಯ ಕಸಿ ಹಾಗೂ 12 ಸಂಯುಕ್ತ ಕಿಡ್ನಿ ಮತ್ತು ಮೆದೊಜ್ಜೀರಕ ಗ್ರಂಥಿ ಕಸಿ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ವಿವಿಧ ಅಂಗಾಂಗಗಳ ಕಸಿ ಚಿಕಿತ್ಸೆಯಲ್ಲಿ ಅತ್ಯಾಧುನಿಕ ಸೇವೆ ಒದಗಿಸುವ ಆಸ್ಪತ್ರೆಯ ವಿವಿಧ ವಿಭಾಗಗಳಲ್ಲಿನ ವೈದ್ಯಕೀಯ ಪರಿಣತಿ ಮತ್ತು ಸಾಮರ್ಥ್ಯವನ್ನು ಈ ಸಾಧನೆಗಳು ಪ್ರತಿಬಿಂಬಿಸುತ್ತವೆ.

Humanity 2

ಆಕಾಶ ಬುಟ್ಟಿಗಳನ್ನು ಹಾರಿ ಬಿಡುವುದರ ಮೂಲಕ ಅಂಗಾಂಗ ದಾನಿಗಳಿಗೆ ಗೌರವ ಅರ್ಪಿಸುವುದು ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. 120ಕ್ಕೂ ಹೆಚ್ಚು ಅಂಗದಾನಿ ಕುಟುಂಬಗಳ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಗಲಿದ ತಮ್ಮ ಬಂಧುಗಳನ್ನು ಸ್ಮರಿಸುವುದರ ಜೊತೆಗೆ, ಅಂಗದಾನದ ನಿರ್ಧಾರದಿಂದ ಹೊಸ ಬದುಕು ಪಡೆದವರ ಬದುಕಿನ ಸಂಭ್ರಮಾಚರಿಸಿ ದರು.

ದೇಶದಲ್ಲಿ ಅಂಗಾಂಗ ಕಸಿ ಚಿಕಿತ್ಸೆಯಲ್ಲಿ ಮಹತ್ವದ ಪ್ರಗತಿ ಕಂಡುಬಂದಿದ್ದರೂ, ಅಂಗದಾನದ ಅಗತ್ಯ ಇನ್ನೂ ಹೆಚ್ಚಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧೀನ ದಲ್ಲಿರುವ ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆಯ (ಎನ್‌ಒಟಿಟಿಒ) ಅಧ್ಯಯನ ವರದಿ ಪ್ರಕಾರ, 2025ರಲ್ಲಿ ದೇಶದಲ್ಲಿ ದಾಖಲೆಯ 20,138 ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗಳು ನಡೆದಿವೆ.

ಆದಾಗ್ಯೂ, ದೇಶದಲ್ಲಿ ಅಂಗಾಂಗ ದಾನದ ಪ್ರಮಾಣ ಇನ್ನೂ ಪ್ರತಿ 10 ಲಕ್ಷ ಜನಸಂಖ್ಯೆಗೆ ಒಬ್ಬ ದಾನಿಗಿಂತಲೂ ಕಡಿಮೆ ಪ್ರಮಾಣದಲ್ಲಿ ಇದೆ. ಮೃತ ಅಂಗಾಂಗ ದಾನಿಯೊಬ್ಬರು ಗರಿಷ್ಠ ಎಂಟು ಮಂದಿಯ ಜೀವ ಉಳಿಸಲು ನೆರವಾಗಬಲ್ಲರು. ಹೀಗಾಗಿ ಅಂಗಾಂಗ ದಾನದ ಕುರಿತು ಸಾರ್ವಜನಿಕ ರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವುದು ಹಾಗೂ ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡುವವರ ಸಂಖ್ಯೆ ಹೆಚ್ಚಿಸುವುದರಿಂದ ಅಂಗಾಂಗಗಳ ಬೇಡಿಕೆ ಮತ್ತು ಲಭ್ಯತೆಯ ನಡುವಣ ಅಂತರವನ್ನು ಕಡಿಮೆ ಮಾಡಲು ನೆರವಾಗಲಿದೆ.

ಅಂಗಾಂಗ ದಾನಿಗಳ ಬೆಲೆಕಟ್ಟಲಾಗದ ಕೊಡುಗೆ ಸ್ಮರಿಸುವ, ನಮನ ಸಲ್ಲಿಸುವ ಕಾರ್ಯಕ್ರಮಕ್ಕೆ ಗ್ಲೆನೆಗಲ್ಸ್ ಬಿಜಿಎಸ್ ಆಸ್ಪತ್ರೆಯ ಮೂತ್ರಪಿಂಡ ತಜ್ಞ ಹಾಗೂ ಅಂಗಾಂಗ ಕಸಿ ವೈದ್ಯಕೀಯ ವಿಭಾಗದ ಮುಖ್ಯಸ್ಥರು ಹಾಗೂ ಹಿರಿಯ ಸಲಹೆಗಾರರಾದ ಡಾ.ಅನಿಲ್ ಕುಮಾರ್ ಬಿ.ಟಿ., ಯಕೃತ್ತು ಕಸಿ ಮತ್ತು ಯಕೃತ್ತು, ಮೇದೋಜ್ಜೀರಕ ಗ್ರಂಥಿ, ಪಿತ್ತಕೋಶ ಮತ್ತು ಪಿತ್ತರಸ ನಾಳಗಳಿಗೆ ಸಂಬಂಧಿಸಿದ ರೋಗಗಳಿಗೆ ಶಸ್ತ್ರಚಿಕಿತ್ಸೆ ನಡೆಸುವ ವಿಶೇಷ ಶಸ್ತ್ರಚಿಕಿತ್ಸಾ (ಎಚ್‌ಪಿಬಿ) ವಿಭಾಗದ ಮುಖ್ಯಸ್ಥರು ಹಾಗೂ ಪ್ರಮುಖ ಸಲಹೆಗಾರರಾದ ಡಾ.ಮಹೇಶ್ ಗೋಪಶೆಟ್ಟಿ, ಮತ್ತು ಹೃದಯ-ರಕ್ತನಾಳ ಶಸ್ತ್ರ ಚಿಕಿತ್ಸಾ ವಿಭಾಗದ ಸಲಹೆಗಾರರಾದ ಡಾ.ಉಮೇಶ್ ನರಪ್ಪ ನೇತೃತ್ವ ವಹಿಸಿದ್ದರು.

ಡಾ.ಅನಿಲ್ ಕುಮಾರ್ ಬಿ.ಟಿ. ಅವರು ಮಾತನಾಡಿ, ʼಅಂಗಾಂಗ ಕಸಿ ಚಿಕಿತ್ಸೆಯ ಹಿಂದೆ ಬಂಧು ಗಳನ್ನು ಕಳೆದುಕೊಂಡ ಅಪಾರ ದುಃಖದ ನಡುವೆಯೂ ಅಸಾಮಾನ್ಯ ನಿರ್ಧಾರ ಕೈಗೊಂಡ ಕುಟುಂಬವೊಂದರ ಅಸಾಮಾನ್ಯ ತ್ಯಾಗವಿರುತ್ತದೆ. ಅವರ ಧೈರ್ಯವು ಕಸಿ ಚಿಕಿತ್ಸೆಗಾಗಿ ಕಾಯು ತ್ತಿರುವ ರೋಗಿಗಳು ಮತ್ತು ಕುಟುಂಬಗಳಿಗೆ ಹೊಸ ಭರವಸೆ ನೀಡಿದೆ.

ಇಂದು ನಾವು ಅವರ ಉದಾರತೆಯನ್ನು ಗೌರವಿಸುವುದರ ಜೊತೆಗೆ, ಅಂಗಾಂಗ ಕಸಿ ಶಸ್ತ್ರ ಚಿಕಿತ್ಸೆ ಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಮತ್ತು ಹೆಚ್ಚಿನ ಜನರು ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡುವಂತೆ ಪ್ರೋತ್ಸಾಹಿಸಲು ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆʼ ಎಂದು ಹೇಳಿದ್ದಾರೆ.

ಗ್ಲೆನೆಗಲ್ಸ್‌ ಬಿಜಿಎಸ್‌ ಆಸ್ಪತ್ರೆಯ ಡಾ. ಮಹೇಶ್ ಗೋಪಶೆಟ್ಟಿ ಅವರು ಪ್ರತಿಕ್ರಿಯಿಸಿ, ʼಅಂಗಾಂಗ ಕಸಿ ಚಿಕಿತ್ಸೆಯ ಭವಿಷ್ಯವು ವೈದ್ಯಕೀಯ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕೆ ಮಾತ್ರ ಸೀಮಿತ ವಾಗಿಲ್ಲ. ಅಂಗಾಂಗ ದಾನವು ಸಮಾಜದ ಸಾಮೂಹಿಕ ಜವಾಬ್ದಾರಿಯಾಗಿದೆ ಎಂಬ ಮನೋಭಾವ ವನ್ನು ಬೆಳೆಸುವುದು ಸದ್ಯದ ಅಗತ್ಯವಾಗಿದೆ. 1,500ಕ್ಕೂ ಅಧಿಕ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗಳನ್ನು ಪೂರ್ಣಗೊಳಿಸಿರುವುದು ನಾವು ಸಾಧಿಸಿರುವ ಪ್ರಗತಿಯನ್ನು ತೋರಿಸುತ್ತದೆ. ಮುಂಬರುವ ದಿನ ಗಳಲ್ಲಿ ಇನ್ನಷ್ಟು ಸಾಧಿಸುವ ದೊಡ್ಡ ಅವಕಾಶವೂ ನಮ್ಮ ಮುಂದಿದೆʼ ಎಂದು ಹೇಳಿದ್ದಾರೆ.

ಗ್ಲೆನೆಗಲ್ಸ್ ಬಿಜಿಎಸ್ ಆಸ್ಪತ್ರೆಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿ ಬಗಲಿ ಅವರು ಮಾತನಾಡಿ, ʼಆಸ್ಪತ್ರೆಗಳು ಅತ್ಯಾಧುನಿಕ ಅಂಗಾಂಗ ಕಸಿ ಚಿಕಿತ್ಸೆಯನ್ನು ಒದಗಿಸಬಹುದಾದರೂ, ಈ ಚಿಕಿತ್ಸೆಗಳು ಸಾಧ್ಯವಾಗಲು ಅಂಗದಾನಿಗಳು ಮತ್ತು ಅವರ ಕುಟುಂಬಗಳ ಉದಾರ ಧೋರಣೆ ಯೇ ಪ್ರಮುಖ ಕಾರಣವಾಗಿದೆ. ಗ್ಲೆನೆಗಲ್ಸ್ ಬಿಜಿಎಸ್ ಆಸ್ಪತ್ರೆಯು ವಿಶ್ವದರ್ಜೆಯ ಅಂಗಾಂಗ ಕಸಿ ಚಿಕಿತ್ಸೆಯನ್ನು ಒದಗಿಸುವುದರ ಜೊತೆಗೆ, ಅಂಗದಾನದ ಕುರಿತು ಹೆಚ್ಚಿನ ಜಾಗೃತಿ ಮೂಡಿಸಲು ಬದ್ಧವಾಗಿದೆ. ʼಮುಂದುವರಿಯುವ ಅಮರ ಪರಂಪರೆʼ ನಂತಹ ಕಾರ್ಯಕ್ರಮಗಳ ಮೂಲಕ ಹೆಚ್ಚಿನ ಕುಟುಂಬಗಳು ಅಂಗಾಂಗ ದಾನದ ಕುರಿತು ಮುಕ್ತ ರೀತಿಯಲ್ಲಿ ಮಹತ್ವದ ಚರ್ಚೆಗಳನ್ನು ನಡೆಸುವಂತೆ ಪ್ರೋತ್ಸಾಹಿಸುವುದು ಮತ್ತು ಅಂಗಾಂಗಗಳ ಅಗತ್ಯ ಹಾಗೂ ಲಭ್ಯತೆಯ ನಡುವಣ ಅಂತರವನ್ನು ಕಡಿಮೆ ಮಾಡಲು ನೆರವಾಗುವುದು ನಮ್ಮ ಉದ್ದೇಶವಾಗಿದೆʼ ಎಂದು ಹೇಳಿದ್ದಾರೆ.