ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (Bengaluru Airport) ಲಕ್ನೋಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಅಪಹರಣದ (Hijack) ಬೆದರಿಕೆ ಪತ್ರ ಪತ್ತೆಯಾದ ಹಿನ್ನೆಲೆಯಲ್ಲಿ ವಿಮಾನವನ್ನು ತುರ್ತಾಗಿ ಬೆಂಗಳೂರಿಗೇ ವಾಪಸ್ ತಂದು ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿದೆ. ಶನಿವಾರ ಸಂಜೆ ನಡೆದ ಈ ಘಟನೆ ಪ್ರಯಾಣಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು. ತನಿಖೆಯ ನಂತರ ಇದೊಂದು ಹುಸಿ ಬೆದರಿಕೆ (Hoax) ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
178 ಪ್ರಯಾಣಿಕರಿದ್ದ ಇಂಡಿಗೋ ವಿಮಾನ (6E 451) ಸಂಜೆ 5:50 ಕ್ಕೆ ಬೆಂಗಳೂರಿನಿಂದ ಟೇಕ್ ಆಫ್ ಆಗಿತ್ತು. ಹಾರಾಟ ಆರಂಭವಾದ 30 ನಿಮಿಷಗಳ ನಂತರ ಶೌಚಾಲಯದಲ್ಲಿ ಕೈಬರಹದ ಚೀಟಿಯೊಂದು ಪತ್ತೆಯಾಯಿತು. ಅದರಲ್ಲಿ "ಈ ವಿಮಾನವು ಸರಿಯಾಗಿ ಸಂಜೆ 6:30 ಕ್ಕೆ ಅಪಹರಣಕ್ಕೊಳಗಾಗಲಿದೆ, ನಿರ್ಲಕ್ಷಿಸಿದರೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ" ಎಂದು ಬರೆಯಲಾಗಿತ್ತು.
ಪ್ರಯಾಣಿಕರು ತಕ್ಷಣವೇ ಈ ಪತ್ರವನ್ನು ವಿಮಾನದ ಸಿಬ್ಬಂದಿಗೆ ತಲುಪಿಸಿದರು. ವಿಷಯ ತಿಳಿಯುತ್ತಿದ್ದಂತೆ ಪೈಲಟ್ ತಕ್ಷಣವೇ ಏರ್ ಟ್ರಾಫಿಕ್ ಕಂಟ್ರೋಲ್ ಸಂಪರ್ಕಿಸಿ, ತುರ್ತು ಲ್ಯಾಂಡಿಂಗ್‌ಗೆ ಅನುಮತಿ ಪಡೆದರು. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಗರಿಷ್ಠ ಭದ್ರತಾ ಮುನ್ನೆಚ್ಚರಿಕೆ ವಹಿಸಿ ವಿಮಾನವನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿ, ಪ್ರತ್ಯೇಕ ಜಾಗಕ್ಕೆ ಕರೆದೊಯ್ಯಲಾಯಿತು. ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಹಾಗೂ ಶ್ವಾನ ದಳದ ಸಿಬ್ಬಂದಿ ಸುಮಾರು ಒಂದೂವರೆ ಗಂಟೆಗಳ ಕಾಲ ಇಡೀ ವಿಮಾನವನ್ನು ಜಾಲಾಡಿದರು. ಯಾವುದೇ ಅಪಾಯಕಾರಿ ವಸ್ತುಗಳು ಪತ್ತೆಯಾಗಿಲ್ಲ.
ಭದ್ರತಾ ತಪಾಸಣೆ ಪೂರ್ಣಗೊಂಡ ನಂತರ ವಿಮಾನವು ಲಕ್ನೋಗೆ ಪ್ರಯಾಣ ಬೆಳೆಸಿತು. ಈ ಬೆದರಿಕೆ ಪತ್ರವನ್ನು ಶೌಚಾಲಯದಲ್ಲಿ ಇಟ್ಟ ಕಿಡಿಗೇಡಿ ಯಾರು ಎಂಬುದನ್ನು ಪತ್ತೆಹಚ್ಚಲು ವಿಮಾನ ನಿಲ್ದಾಣದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.