ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರಾಜ್ಯದ ಎಲ್ಲಾ ನಗರಗಳಲ್ಲಿ ಸಂಚಾರಿ ಗ್ರಿಡ್ ರೂಪಿಸಲು ಚಿಂತನೆ: ಡಿಸಿಎಂ ಡಿ.ಕೆ. ಶಿವಕುಮಾರ್

ದಾವೋಸ್ ಕಾರ್ಯಕ್ರಮದಲ್ಲಿ ಕೆಲವು ಕಂಪನಿಗಳು ಕರ್ನಾಟಕದ 2-3ನೇ ಹಂತದ ನಗರಗಳ ಬಗ್ಗೆಯೂ ಆಸಕ್ತಿ ಹೊಂದಿದ್ದು, ಈ ನಗರಗಳು ಪ್ರಕಾಶಮಾನವಾಗಿ, ಯುವ ಪ್ರತಿಭೆಗಳನ್ನು ಹೊಂದಿರಬೇಕು ಎಂದು ಚರ್ಚೆ ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ಎಲ್ಲಾ ನಗರ ಪ್ರದೇಶಗಳಿಗೆ ಸಂಚಾರ ಯೋಜನೆ ರೂಪಿಸಬೇಕು ಎಂದು ಡಿಕೆ ಶಿವಕುಮಾರ್‌ ತಿಳಿಸಿದ್ದಾರೆ.

ಸಂಗ್ರಹ ಚಿತ್ರ

ಬೆಂಗಳೂರು: ಮುಂದಿನ 25 ವರ್ಷಗಳಲ್ಲಿ ಆಗಲಿರುವ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಎಲ್ಲಾ ನಗರಗಳಲ್ಲೂ ಸಂಚಾರಿ ಗ್ರಿಡ್ ರೂಪಿಸಲು ಚಿಂತನೆ ನಡೆಸಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ದಾವೋಸ್ ವಿಶ್ವ ಆರ್ಥಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಸ್ಸಾದ ಬಳಿಕ ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಶಿವಕುಮಾರ್ ಅವರು ಭಾನುವಾರ ಮಾತನಾಡಿದರು.

“ದಾವೋಸ್ ಕಾರ್ಯಕ್ರಮದಲ್ಲಿ ಕೆಲವು ಕಂಪನಿಗಳು ಕರ್ನಾಟಕದ 2-3ನೇ ಹಂತದ ನಗರಗಳ ಬಗ್ಗೆಯೂ ಆಸಕ್ತಿ ಹೊಂದಿದ್ದು, ಈ ನಗರಗಳು ಪ್ರಕಾಶಮಾನವಾಗಿ, ಯುವ ಪ್ರತಿಭೆಗಳನ್ನು ಹೊಂದಿರಬೇಕು ಎಂದು ಚರ್ಚೆ ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ಎಲ್ಲಾ ನಗರ ಪ್ರದೇಶಗಳಿಗೆ ಸಂಚಾರ ಯೋಜನೆ ರೂಪಿಸಬೇಕು. ಮುಂದಿನ 25 ವರ್ಷಕ್ಕೆ ಅಗತ್ಯವಿರುವ ಸಂಚಾರಿ ಮಾರ್ಗದ ಯೋಜನೆ ರೂಪಿಸಬೇಕು. ಎಲ್ಲಾ ನಗರ ಪ್ರದೇಶಗಳಲ್ಲಿ ವರ್ತುಲ ರಸ್ತೆಗಳಿಗೆ ಯೋಜನೆ ರೂಪಿಸಬೇಕು ಎಂದು ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ. ಸಮಯವೇ ಹಣ, ಯಾರೂ ಸಹ ಸಮಯ ವ್ಯರ್ಥ ಮಾಡಿಕೊಳ್ಳಲು ಬಯಸುವುದಿಲ್ಲ. ಹೀಗಾಗಿ ನಾವು ಈಗಿನಿಂದಲೇ ಯೋಜನೆ ರೂಪಿಸಬೇಕಿದೆ. ಈ ಬಗ್ಗೆ ನಾನು, ನಗರಾಭಿವೃದ್ಧಿ ಸಚಿವರು, ಗ್ರಾಮೀಣಾಭಿವೃದ್ಧಿ ಸಚಿವರು ಹಾಗೂ ಪೌರಾಡಳಿತ ಸಚಿವರು ಸಭೆ ಸೇರಿ, ನಗರ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ” ಎಂದು ತಿಳಿಸಿದರು.

“ಮುಂದಿನ 25 ವರ್ಷಗಳಲ್ಲಿ ಕರ್ನಾಟಕದ ಜನಸಂಖ್ಯೆಯಲ್ಲಿ ಸುಮಾರು 70% ನಗರ ಪ್ರದೇಶಕ್ಕೆ ವರ್ಗಾವಣೆಯಾಗುವ ಲೆಕ್ಕಾಚಾರ ಅವರದ್ದಾಗಿದೆ. ನಮ್ಮ ಪ್ರಗತಿ ನೋಡಿ ಅವರು ಈ ಲೆಕ್ಕಾಚಾರ ಮಾಡಿದ್ದಾರೆ. ಇದಕ್ಕೆ ಯಾವ ತಯಾರಿ ನಡೆಸಿದ್ದೀರಿ ಎಂದು ಕೇಳಿದರು. ಹೀಗಾಗಿ ನಾವು ಸಮಯ ವ್ಯರ್ಥ ಮಾಡದೇ ಇಡೀ ರಾಜ್ಯದಲ್ಲಿ ಸಂಚಾರಿ ಗ್ರಿಡ್ ರೂಪಿಸಬೇಕು ಎಂದು ತೀರ್ಮಾನಿಸಿದ್ದೇವೆ. ಎಲ್ಲಿ ರಸ್ತೆ ಬರುತ್ತದೆ, ರಸ್ತೆ ಅಗಲೀಕರಣ ಎಷ್ಟಿರಬೇಕು ಎಂಬುದರ ಬಗ್ಗೆ ಕಾನೂನಾತ್ಮಕವಾಗಿ ಚರ್ಚೆ ಮಾಡಿ ಹೊಸ ತೀರ್ಮಾನ ಮಾಡಬೇಕಿದೆ. ಬೆಂಗಳೂರಿನಲ್ಲಿ ಪೆರಿಫೆರಲ್ ರಿಂಗ್ ರಸ್ತೆಗೆ ಅಧಿಸೂಚನೆ ಹೊರಡಿಸಿ ನಂತರ ಅದನ್ನು ಕಾರ್ಯರೂಪಕ್ಕೆ ತರಲು ತಡವಾಗಿದೆ. ಈ ರೀತಿ ಆಗದಂತೆ ನೋಡಿಕೊಳ್ಳಬೇಕು” ಎಂದರು.

45ಕ್ಕೂ ಹೆಚ್ಚು ಕಂಪನಿಗಳ ಜೊತೆ ಹೂಡಿಕೆ ಬಗ್ಗೆ ಚರ್ಚೆ

“ದಾವೋಸ್ ಕಾರ್ಯಕ್ರಮದಲ್ಲಿ ಡಾಟಾ ಸೆಂಟರ್, ಗ್ಲೋಬಲ್ ಕೇಪಬಲ್ ಸೆಂಟರ್, ಆಹಾರ ಮತ್ತು ಪಾನೀಯ, ಏವಿಯೇಷನ್, ನವೀಕೃತ ಇಂಧನ, ಇವಿ, ಎಲೆಕ್ಟ್ರಾನಿಕ್ಸ್, ಅಡ್ವಾನ್ಸ್ ಮ್ಯಾನ್ಯುಫ್ಯಾಕ್ಚರ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಮಾರು 45ಕ್ಕೂ ಹೆಚ್ಚು ಕಂಪನಿಗಳ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಾಗಿದೆ. ನಮ್ಮಲ್ಲಿ ಲಭ್ಯವಿರುವ ನೀರು, ವಿದ್ಯುತ್ ಪ್ರಮಾಣ ಸೇರಿದಂತೆ ಎಲ್ಲಾ ಅಗತ್ಯ ಮಾಹಿತಿಗಳನ್ನು ಕಂಪನಿಗಳು ಪಡೆದಿವೆ. ಹೊರ ದೇಶಗಳಲ್ಲಿ ಉದ್ಯಮ ಮಾಡುತ್ತಿರುವ ಅನಿವಾಸಿ ಭಾರತೀಯರು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರುಗಳು ಕೂಡ ನಮ್ಮ ಕೈಗಾರಿಕ ಸಚಿವರಾದ ಎಂ.ಬಿ ಪಾಟೀಲ್ ಅವರನ್ನು ಭೇಟಿ ಮಾಡಿದ್ದಾರೆ” ಎಂದು ವಿವರಿಸಿದರು.

“ಈ ಬಾರಿಯ ಕಾರ್ಯಕ್ರಮದಲ್ಲಿ ನಮ್ಮ ರಾಜ್ಯದಲ್ಲಿ ಹೂಡಿಕೆ ಮಾಡುವ ಕಂಪನಿಗಳ ಜೊತೆಗಿನ ಒಪ್ಪಂದಕ್ಕೆ ಅಲ್ಲಿ ಸಹಿ ಹಾಕುವುದು ಬೇಡ ಎಂದು ನಿರ್ಧರಿಸಿದ್ದೇವೆ. ಹೊರ ದೇಶಗಳ ಕಂಪನಿಗಳು ಇಲ್ಲಿಗೆ ಬಂದು, ಇಲ್ಲಿನ ವಾತಾವರಣ, ಯುವ ಪ್ರತಿಭೆ, ಇಲ್ಲಿನ ಸೌಲಭ್ಯ, ಇಂಧನ, ನೀರಿನ ಸೌಲಭ್ಯ ಗಮನಿಸಬೇಕು. ಇನ್ನು ನಮ್ಮ ರಾಜ್ಯದ ಉದ್ಯಮಿಗಳು ಕೂಡ ಅಲ್ಲಿಗೆ ಬಂದು ತಮ್ಮ ಉದ್ಯಮ ವಿಸ್ತರಣೆಗೆ ತಮ್ಮ ಆಲೋಚನೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 11 ಲಕ್ಷ ಕೋಟಿಯಷ್ಟು ಬಂಡವಾಳ ಹೂಡಿಕೆ ಪ್ರಸ್ತಾವನೆ ಬಂದಿದ್ದು, ಇದರಲ್ಲಿ 50% ನಷ್ಟು ಹೂಡಿಕೆ ಕಾರ್ಯಗತಗೊಳ್ಳುತ್ತಿದೆ. ಹೀಗಾಗಿ ದಾವೋಸ್ ನಲ್ಲಿ ಒಪ್ಪಂದಕ್ಕೆ ಸಹಿ ಹಾಕದೇ, ಇಲ್ಲೇ ಸಹಿ ಹಾಕಲು ತೀರ್ಮಾನಿಸಿದ್ದೇವೆ” ಎಂದು ತಿಳಿಸಿದರು.

“ನಮ್ಮ ರಾಜ್ಯದಲ್ಲಿ ಆ್ಯಪಲ್ ಫೋನ್ ತಯಾರಿಸಲು ಫಾಕ್ಸ್ ಕಾನ್ ಕಂಪನಿಗೆ ಜಾಗ ನೀಡಿರುವ ಬಗ್ಗೆ, ಅಲ್ಲಿ 30 ಸಾವಿರ ಜನ ಉದ್ಯೋಗ ಮಾಡುತ್ತಿರುವ ಬಗ್ಗೆ ಅವರು ಗಮನಹರಿಸಿದ್ದಾರೆ. ಚೀನಾ ಹೊರತುಪಡಿಸಿದರೆ, ಭಾರತದ ದಕ್ಷಿಣದ ರಾಜ್ಯಗಳಲ್ಲಿ ಕೆಲಸ ಮಾಡಲು ಉತ್ತಮ ವಾತಾವರಣವಿದೆ ಎಂದು ಅನೇಕ ಉದ್ಯಮಿಗಳು ಭಾವಿಸಿದ್ದಾರೆ. ”

“ಬಿಡದಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಎಐ ಸಿಟಿಗೆ ಅನೇಕರು ಉತ್ಸುಕರಾಗಿದ್ದಾರೆ. ಈ ಯೋಜನೆಗೆ ಅನೇಕರು ವಿರೋಧ ವ್ಯಕ್ತಪಡಿಸುತ್ತಿರಬಹುದು. ಕೆಲವರು ಕೆಲವು ರೈತರಿಂದ ಇದಕ್ಕೆ ವಿರೋಧವಿದೆ ಎನ್ನುವಂತೆ ಮಾಡುತ್ತಿದ್ದಾರೆ. ಅವರಿಗೆ ಒಂದು ಮಾತು ಹೇಳುತ್ತೇನೆ. ರೈತರು ತಾವಾಗಿಯೇ ಜಮೀನು ಬಿಟ್ಟುಕೊಡುವಾಗ ಈ ಅಭಿವೃದ್ಧಿಯನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ. ಬೆಂಗಳೂರು ಬಿಜಿನೆಸ್ ಕಾರಿಡಾರ್ ಯೋಜನೆಯ ಭೂಸಂತ್ರಸ್ತ ರೈತರಿಗೆ ನಾವು ನೀಡಿರುವ ಪರಿಹಾರದ ಅವಕಾಶವನ್ನು ದೇಶದ ಇತರೆ ಯಾವುದೇ ಭಾಗದಲ್ಲಿ ನೀಡಲು ಸಾಧ್ಯವಾಗಿಲ್ಲ” ಎಂದು ಹೇಳಿದರು.

“ನನ್ನ ಚರ್ಚೆ ವೇಳೆ ವಾಹನ ನಿಲುಗಡೆ ವಿಚಾರವಾಗಿ ಕೆಲವು ಸಲಹೆಗಳನ್ನು ನನಗೆ ನೀಡಿದ್ದಾರೆ. ಅವುಗಳನ್ನು ನೋಡಿದ್ದೇನೆ. ಮಹಾರಾಷ್ಟ್ರ ಸಿಎಂ ಕೂಡ ಟನಲ್ ರಸ್ತೆ ಬಗ್ಗೆ ಅಲ್ಲಿ ಚರ್ಚೆ ಮಾಡಿದರು. ನಾನು ನನ್ನ ತಂಡವನ್ನು ಕರೆದುಕೊಂಡು ಹೋಗುತ್ತೇನೆ. ಟನಲ್ ವ್ಯವಸ್ಥೆ ವೆಚ್ಚ, ಟನಲ್ ಕೊರೆಯುವ ಯಂತ್ರಗಳು, ಕೊಳಗೇರಿ ಪ್ರದೇಶ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿದ್ದೇವೆ. ಒಂದೆರಡು ದಿನಗಳ ಪ್ರವಾಸ ಮಾಡಿ ಅವರ ಜೊತೆ ವಿಸ್ತೃತವಾಗಿ ಚರ್ಚೆ ಮಾಡಲಾಗುವುದು” ಎಂದು ತಿಳಿಸಿದರು.

ಕಾನೂನು ಪಾಲನೆ, ಶಿಸ್ತಿನ ಬಗ್ಗೆ ಜನರಲ್ಲಿ ಪ್ರಜ್ಞೆ ಮೂಡಿಸಬೇಕು

“ಇಡೀ ದಾವೋಸ್ ನಮ್ಮ ಸದಾಶಿವನಗರ, ಅರಮನೆ ಮೈದಾನದಷ್ಟು ವ್ಯಾಪ್ತಿಯಲ್ಲಿರಬಹುದು. ಅಷ್ಟು ಸಣ್ಣ ಪ್ರದೇಶದಲ್ಲಿ ಎಲ್ಲಾ ಪ್ರಮುಖ ನಾಯಕರು ರಸ್ತೆ ಮಾರ್ಗದಲ್ಲೇ ಸಂಚಾರ ಮಾಡಿದರು. ನಾನು ಜ್ಯೂರಿಚ್ ಕಡೆ 200 ಕಿ.ಮೀ ಪ್ರಯಾಣ ಮಾಡುವಾಗ ಸುಮಾರು 30-40 ಟನಲ್ ರಸ್ತೆಗಳಿವೆ. 60 ವರ್ಷಗಳ ಹಿಂದೆಯೇ ಟನಲ್ ರಸ್ತೆ ನಿರ್ಮಿಸಿದ್ದಾರೆ. ಅಲ್ಲಿ ಶಿಸ್ತು, ಸಂಚಾರ ಪ್ರಜ್ಞೆ, ಕಾನೂನು ಪಾಲನೆ ಬಗ್ಗೆ ಗಮನಿಸಿದೆ. ಈ ಪ್ರವಾಸ ರಾಜ್ಯಕ್ಕೆ ಇದೊಂದು ಫಲಪ್ರದಾಯಕ ಕಾರ್ಯಕ್ರಮವಾಗಿತ್ತು. ನಮ್ಮಲ್ಲಿ ಬಂಡವಾಳ ಆಕರ್ಷಿಸಿ, ಯುವಕರಿಗೆ ಉದ್ಯೋಗ ಸೃಷ್ಟಿಸಲು ಉತ್ತಮ ವೇದಿಕೆಯಾಗಿತ್ತು. ನಮ್ಮ ಜನರು ಕಾನೂನಿಗೆ ಗೌರವ ನೀಡುವ ಪ್ರಜ್ಞೆ ಮೂಡಿಸಬೇಕು. ಅಲ್ಲಿ ಯಾವುದೇ ವಾಹನ ಬೇರೆ ವಾಹನವನ್ನು ಓವರ್ ಟೇಕ್ ಮಾಡುತ್ತಿರಲಿಲ್ಲ. ಶಿಸ್ತಿನ ವಿಚಾರದಲ್ಲಿ ನಾವು ಅರಿವು ಮೂಡಿಸಬೇಕಿದೆ.” ಎಂದು ಅಭಿಪ್ರಾಯಪಟ್ಟರು.

ವಿಶ್ವದ ನಾಯಕರು, ಉದ್ಯಮಿಗಳ ಭೇಟಿ

“ನಾನು ಮೊದಲನೇ ಬಾರಿಗೆ ದಾವೋಸ್ ನ ವಿಶ್ವ ಆರ್ಥಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಕಳೆದ ವರ್ಷ ಹೋಗಲು ಪ್ರಯತ್ನಿಸಿದ್ದೆ, ಸಾಧ್ಯವಾಗಿರಲಿಲ್ಲ. ನಾನು ಈ ಪ್ರವಾಸ ರದ್ದು ಮಾಡಿದ್ದೆ. ಆದರೆ ನಮ್ಮ ನಾಯಕರ ಒತ್ತಡ, ವಿರೋಧ ಪಕ್ಷಗಳ ಸಲಹೆ ಮೇರೆಗೆ ಒಂದು ದಿನ ತಡವಾಗಿ ತೆರಳಿದೆ. ಎ ಸ್ಪಿರಿಟ್ ಆಪ್ ಡೈಲಾಗ್ಸ್ ಪರಿಕಲ್ಪನೆಯಡಿಯಲ್ಲಿ ಈ ವರ್ಷ 56ನೇ ವಿಶ್ವ ಆರ್ಥಿಕ ವೇದಿಕೆ ಕಾರ್ಯಕ್ರಮ ನಡೆಯಿತು. ರಾಜ್ಯ, ದೇಶದ ವಿಚಾರ ಹೇಳಲು ವೇದಿಕೆ ಇತ್ತು. ಇಲ್ಲಿ ಭಾರತದ ಪೆವಿಲಿಯನ್ ಕೂಡ ಕಲ್ಪಿಸಲಾಗಿತ್ತು. ಭಾರತದಿಂದ 10 ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದರು. ಅಮೆರಿಕ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಸೇರಿದಂತೆ 65 ದೇಶಗಳ ಸರ್ಕಾರದ ಮುಖ್ಯಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಲಾನ್ ಮಸ್ಕ್ ಸೇರಿದಂತೆ ವಿಶ್ವದ ಅನೇಕ ದೊಡ್ಡ ಉದ್ಯಮಿಗಳು ಭಾಗವಹಿಸಿದ್ದರು. 100 ಕ್ಕೂ ಹೆಚ್ಚು ಸಭೆಗಳು, ನೀತಿಗಳು ಚರ್ಚೆಯಾದವು. ನಮಗೂ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ನಾಯಕರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು” ಎಂದು ತಿಳಿಸಿದರು.

“ಭಾರತ ಮುಂದುವರಿಯುತ್ತಿರುವ ದೇಶ, ಇಲ್ಲಿನ ಯುವ ಪ್ರತಿಭೆಗಳ ಬಗ್ಗೆ ವಿಶ್ವಾಸ ಎದ್ದು ಕಾಣುತ್ತಿತ್ತು. ಭಾರತವನ್ನು ಬೆಂಗಳೂರಿನ ಮೂಲಕ ನೋಡುವುದನ್ನು ನಾನು ಕಂಡೆ. ನಾನು ಈ ಮಾತನ್ನು ಈ ಹಿಂದೆಯೂ ಹೇಳಿದ್ದೆ. ಬೆಂಗಳೂರಿನಲ್ಲಿ ಈಗಾಗಲೇ 450ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳಿವೆ. 2047 ವೇಳೆಗೆ ಭಾರತದಲ್ಲಿನ ಜನ ನಗರ ಪ್ರದೇಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸ್ಥಳಾಂತರವಾಗುತ್ತಾರೆ. ಅವರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಲು ಯಾವ ಕ್ರಮ ಕೈಗೊಳ್ಳಲಾಗುವುದು ಎಂದು ಚರ್ಚೆ ಮಾಡಲಾಯಿತು” ಎಂದು ಮಾಹಿತಿ ನೀಡಿದರು.

“ನಾನು ಈ ಕಾರ್ಯಕ್ರಮದ ವೇಳೆ ಅಂತಾರಾಷ್ಟ್ರೀಯ ಸಚಿವರುಗಳನ್ನು ಭೇಟಿ ಮಾಡಿದ್ದು, ವಿಶ್ವ ಬ್ಯಾಂಕಿನ ಮುಖ್ಯಸ್ಥರಾದ ಅಜಯ್ ಬಂಗಾ ಅವರನ್ನು ಭೇಟಿ ಮಾಡಿದ್ದೆ. ನ್ಯಾಟೋ ಪ್ರಧಾನ ಕಾರ್ಯದರ್ಶಿ ಮಾರ್ಕ್ ರೂಟ್ ಅವರನ್ನು ಭೇಟಿ ಮಾಡಿದ್ದೆ. ಕೇಂದ್ರ ಸಚಿವರಾದ ಅಶ್ವಿನ್ ವೈಷ್ಣವ್, ಪ್ರಹ್ಲಾದ್ ಜೋಷಿ, ರಾಮ್ ಮೋಹನ್ ನಾಯ್ಡು ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸ್ವಿಜರ್ಲೆಂಡ್ ಭಾರತೀಯ ರಾಯಭಾರಿ ಮಾರ್ಡು ಕುಮಾರ್ ಅವರು ನಮ್ಮ ಕರ್ನಾಟಕ ಪೆವಿಲಿಯನ್ ಗೆ ಬಂದು ಚರ್ಚೆ ಮಾಡಿದರು. ಸೌದಿ ಅರೆಬಿಯಾ ಆರ್ಥಿಕ ಸಚಿವರನ್ನು ಭೇಟಿ ಮಾಡಲಾಯಿತು. ವಿದೇಶಿ ನೇರ ಬಂಡವಾಳ ಹೂಡಿಕೆ ಮೂಲಕ ಅನೇಕರು ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಅಮೆರಿಕದ ಕಂಪನಿಗಳು ಕೂಡ ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ ತೋರಿದ್ದಾರೆ” ಎಂದು ಹೇಳಿದರು.

“ನಮ್ಮ ದೇಶದ ಮಾನವ ಸಂಪನ್ಮೂಲ ಬೇರೆ ಎಲ್ಲೂ ಇಲ್ಲ. ನಮ್ಮಲ್ಲಿರುವ ತಾಂತ್ರಿಕ ಪ್ರತಿಭೆ, ಇಂಜಿನಿಯರ್, ವೈದ್ಯಕೀಯ ಸಿಬ್ಬಂದಿ ಬೇರೆ ರಾಜ್ಯಗಳಲ್ಲಿ ಇಲ್ಲ. ಬಿಡಿಎ ಅಧ್ಯಕ್ಷರಾದ ಹ್ಯಾರೀಸ್ ಅವರು ಬೆಂಗಳೂರು ಮೂಲಕ ನಾವು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಸಂದೇಶ ನೀಡಿದ್ದಾರೆ. ಬೆಂಗಳೂರಿನಲ್ಲಿರುವ ಕೇಬಲ್ ವಿಚಾರವಾಗಿ ಅನೇಕ ಟೀಕೆಗಳು ವ್ಯಕ್ತವಾಗಿವೆ. ನಾವು ಭೂಗತ ವ್ಯವಸ್ಥೆ ಮಾಡಿದ್ದರೂ ಯಾರೂ ಅದನ್ನು ಬಳಸಿಕೊಳ್ಳುತ್ತಿಲ್ಲ” ಎಂದು ಹೇಳಿದರು.

ಕರ್ನಾಟಕಕ್ಕೆ ಎಷ್ಟು ಕಂಪನಿ ಬರಬಹುದು ಎಂದು ಕೇಳಿದಾಗ, “ನಮ್ಮ ಜೊತೆ 45 ಕಂಪನಿಗಳು ದ್ವಿಪಕ್ಷೀಯವಾಗಿ ಚರ್ಚೆ ಮಾಡಿದ್ದು, ನ್ಯಾನೋ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್, ಎಐ ತ್ರಜ್ಞಾನದ ವಿಚಾರವಾಗಿ ಚರ್ಚೆ ಮಾಡಲಾಯಿತು. ನಮ್ಮ ಕರಾವಳಿ ಪ್ರದೇಶದ ಪ್ರವಾಸೋದ್ಯಮ ಅಭಿವೃದ್ಧಿ ವಿಚಾರವಾಗಿ ಚರ್ಚೆ ಮಾಡಿದೆವು” ಎಂದು ತಿಳಿಸಿದರು.

ವಿದೇಶಿ ನೇರ ಬಂಡವಾಳ ಹೂಡಿಕೆ ಬಗ್ಗೆ ಕೇಳಿದಾಗ, “ಇಲ್ಲಿಗೆ ವಿದೇಶಿ ನೇರ ಬಂಡವಾಳ ಹೂಡಿಕೆ ಬರಬೇಕಾದರೆ, ಭಾರತದ ಕೆಲವು ಮಾರ್ಗಸೂಚಿಗಳಿವೆ. ಈಗಾಗಲೇ ಅನೇಕ ಎಫ್ ಡಿಐಗಳು ಬಂದಿದ್ದು, ಹೊಸ ತಂತ್ರಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ನಮ್ಮ ಜೊತೆ ಚರ್ಚೆ ಮಾಡಿದ್ದಾರೆ. ಕೆಲವರು ರೇಸ್ ಕೋರ್ಸ್ ಜಾಗವನ್ನು ನಮಗೆ ನೀಡಿ ಎಂದು ಅನೇಕರು ನನಗೆ ಕೇಳಿದರು. ಆ ರೀತಿ ನೀಡಲು ಆಗುವುದಿಲ್ಲ. ಇದಕ್ಕಾಗಿ ಬೇರೆ ಜಾಗಗಳಿವೆ ಎಂದು ಹೇಳಿದೆ. ಮತ್ತೆ ಕೆಲವರು ಖಾಸಗಿ ಸಾರ್ವಜನಿಕ ಸಹಭಾಗಿತ್ವಕ್ಕೂ ಆಸಕ್ತಿ ತೋರಿದ್ದಾರೆ. ವಿಮಾನ ನಿಲ್ದಾಣದ 40 ಕಿ.ಮೀ ವ್ಯಾಪ್ತಿಯಲ್ಲಿ ನಮಗೆ ಜಾಗ ಬೇಕು ಎಂದು ಕೇಳುತ್ತಿದ್ದಾರೆ. ಬೆಂಗಳೂರು ಸುತ್ತಮುತ್ತಲ ಪ್ರದೇಶದಲ್ಲಿ ತಮ್ಮ ಸಂಸ್ಥೆ ಆರಂಭಿಸಲು ಬಹಳ ಉತ್ಸುಕರಾಗಿದ್ದಾರೆ” ಎಂದು ತಿಳಿಸಿದರು.

ಸ್ಪೀಡ್ ಆಫ್ ಡೂಯಿಂಗ್ ಬಿಸಿನೆಸ್ ಮಾಡುತ್ತೇವೆ

45 ಕಂಪನಿಗಳ ಜೊತೆಗಿನ ಚರ್ಚೆ ಬಳಿಕ ಎಷ್ಟು ಕಂಪನಿಗಳು ರಾಜ್ಯಕ್ಕೆ ಬರಬಹುದು ಎಂದು ಕೇಳಿದಾಗ, “ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಮಾಡಲಾದ ಒಫ್ಪಂದದ ಪೈಕಿ 50% ಬಂಡವಾಳ ಹೂಡಿಕೆ ಕಾರ್ಯಗತಗೊಳ್ಳುತ್ತಿವೆ. ಅನೇಕ ಕಂಪನಿಗಳು ಈಸ್ ಆಫ್ ಡೂಯಿಂಗ್ ಬಿಸಿನೆಸ್, ಕಾಲಾವಧಿ ಬಗ್ಗೆ ಹೆಚ್ಚಿನ ಗಮನಹರಿಸಿ ಎಂದು ಸಲಹೆ ನೀಡಿದ್ದಾರೆ. ನಮ್ಮ ಅರ್ಜಿ 28 ಕಡೆ ಹೋಗಬೇಕು, ಇದನ್ನು ತ್ವರಿತವಾಗಿ ಸಾಗಬೇಕು ಎಂದಿದ್ದಾರೆ. ಹೀಗಾಗಿ ನಾವು ಸ್ಪೀಡ್ ಆಫ್ ಡೂಯಿಂಗ್ ಬಿಸಿನೆಸ್ ಮಾಡುವುದಾಗಿ ಹೇಳಿದ್ದೇವೆ” ಎಂದರು.

ಟನಲ್ ರಸ್ತೆ ವಿಚಾರವಾಗಿ ಜೈಕಾ ಜೊತೆ ಚರ್ಚೆ

ದಾವೋಸ್ ಟನಲ್ ರಸ್ತೆ ನೋಡಿದ ಬಳಿಕ ಇಲ್ಲಿನ ಟನಲ್ ರಸ್ತೆಯಲ್ಲಿ ಏನಾದರೂ ಬದಲಾವಣೆ ಮಾಡಲಾಗುವುದೇ ಎಂದು ಕೇಳಿದಾಗ, “ನಮ್ಮ ಟನಲ್ ರಸ್ತೆ ಎಲ್ಲಾ ಕಡೆಗಳಿಗಿಂತ ಆಧುನಿಕವಾಗಿದೆ. ಮಹಾರಾಷ್ಟ್ರ ಸಿಎಂ ಅವರು ಹೇಳಿದಂತೆ ಎಲಾನ್ ಮಸ್ಕ್ ಅವರು ಹೊಸ ತಂತ್ರಜ್ಞಾನದಲ್ಲಿ ತ್ವರಿತವಾಗಿ ಟನಲ್ ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ. ಆದರೆ ಅದರ ಗಾತ್ರ ಸಣ್ಣದಿದೆ. ಅದು ಮೆಟ್ರೋ ಸುರಂಗಕ್ಕೆ ಅನುಕೂಲವಾಗುತ್ತದೆ. ನಮ್ಮ ಮಾದರಿಯಲ್ಲೇ ಮಹಾರಾಷ್ಟ್ರದವರು ಜಪಾನಿನ ಜೈಕಾ ಜೊತೆ ಒಪ್ಪಂದ ಮಾಡಿಕೊಂಡಿದ್ದಾರಂತೆ. ನಾನು ಕೂಡ ಜಪಾನ್ ಪ್ರವಾಸ ಮಾಡಿ ನೋಡುತ್ತೇನೆ. ಬಿಡಿಎ ಅಧ್ಯಕ್ಷರು ಖಾಸಗಿ ಪ್ರವಾಸ ಮಾಡಿ ಸಲಹೆ ನೀಡಿದ್ದಾರೆ. ಜೈಕಾ ಸಂಸ್ಥೆ ಯವರು ನೀರಿನ ವ್ಯವಸ್ಥೆಗೆ ಸಂಬಂಧಿಸಿದಂತೆ ಸಹಾಯ ಮಾಡಿದ್ದು, ಎರಡನೇ ಟನಲ್ ರಸ್ತೆಗೆ ಸಹಾಯ ಮಾಡುವ ಬಗ್ಗೆ ಚರ್ಚೆ ಮಾಡಲಾಗುವುದು” ಎಂದರು.

ಭಾರತದ ಆರ್ಥಿಕತೆ ವಿಚಾರವಾಗಿ ನಿಮ್ಮ ಹೇಳಿಕೆ ರಾಹುಲ್ ಗಾಂಧಿ ಅವರ ಹೇಳಿಕೆಗೆ ವಿರುದ್ಧವಾಗಿತ್ತು ಎಂದು ಕೇಳಿದಾಗ, “ನೀವು ಈ ವಿಚಾರದಲ್ಲಿ ರಾಜಕೀಯ ತರಬೇಡಿ. ಹೃದಯ ಶ್ರೀಮಂತಿಕೆಯಿಂದ ಆಲೋಚಿಸಿ. ನಾವೆಲ್ಲರೂ ಈ ಪ್ರಗತಿಯನ್ನು ಸಂಭ್ರಮಿಸೋಣ, ನಾಳೆ ಗಣರಾಜ್ಯೋತ್ಸವ ಆಚರಿಸೋಣ, ಬೇರೆಯವರ ತಪ್ಪನ್ನು ಹುಡುಕುವುದು ಬೇಡ. ವಿದೇಶಕ್ಕೆ ಹೋಗಿ ನಾವು ಭಾರತಕ್ಕೆ ನೋವು ಮಾಡುವುದಿಲ್ಲ. ರಾಹುಲ್ ಗಾಂಧಿ ಅವರು ಕೂಡ ಈ ರೀತಿ ಮಾಡಿಲ್ಲ. ರಾಹುಲ್ ಗಾಂಧಿ ಅವರು ನಮ್ಮ ಆಂತರಿಕ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾವು ನಮ್ಮ ದೇಶವನ್ನು ಬಿಟ್ಟುಕೊಡುವುದಿಲ್ಲ. ನಮ್ಮ ಸಂವಿಧಾನವನ್ನು ಇಡೀ ಪ್ರಪಂಚ ಒಪ್ಪಿದೆ. ನಮ್ಮ ದೇಶದ ಒಂದೊಂದು ರಾಜ್ಯದಷ್ಟು ವಿಸ್ತೀರಣದಲ್ಲಿ ಬೇರೆ ದೇಶಗಳಿವೆ. ಕೇರಳದ ವಾತಾವರಣ, ಸಂಸ್ಕೃತಿ ಬರೆ ರೀತಿ ಇದೆ. ಅಲ್ಲಿನ 50% ಜನಸಂಖ್ಯೆ ಹೊರ ದೇಶಗಳಲ್ಲಿ ಇದ್ದಾರೆ. ಆಂಧ್ರ ಪ್ರದೇಶ ತಮ್ಮದೇ ಆದ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಭಾರತದ ಧ್ವಜವನ್ನು ಹಾಕಿಕೊಂಡು ಅದರ ವಿರುದ್ಧ ಮಾತನಾಡಲು ಸಾಧ್ಯವೇ?” ಎಂದರು.

ಬಿಜೆಪಿ ನಾಯಕರ ಟೀಕೆಗೆ ಉತ್ತರಿಸುವುದಿಲ್ಲ

ಈ ಪ್ರವಾಸದ ಬಗ್ಗೆ ಬಿಜೆಪಿ ನಾಯಕರು ಟೀಕೆ ಮಾಡಿದ್ದ ಬಗ್ಗೆ ಕೇಳಿದಾಗ, “ನಾನು ಬಿಜೆಪಿ ನಾಯಕರ ಹೇಳಿಕೆಗಳಿಗೆ ಉತ್ತರ ನೀಡುವುದಿಲ್ಲ. ನಾನು ಭಾರತ ಹಾಗೂ ಕರ್ನಾಟಕ ರಾಜ್ಯಕ್ಕೆ ಮಾತ್ರ ಉತ್ತರ ನೀಡುತ್ತೇನೆ. ಭಾರತವನ್ನು ಬೆಂಗಳೂರು ಮೂಲಕ ನೋಡಲಾಗುತ್ತಿದೆ. ಕರ್ನಾಟಕ ಭಾರತಕ್ಕೆ ಹೆಮ್ಮೆ ತರುತ್ತಿದೆ ಎಂದು ನಾನು ಈ ಹಿಂದೆಯೂ ಹೇಳಿದ್ದೆ, ವಿದೇಶದಲ್ಲೂ ಹೇಳಿದ್ದೇನೆ, ಈಗಲೂ ಹೇಳುತ್ತಿದ್ದೇನೆ. ಕ್ಯಾಲಿಫೋರ್ನಿಯಾದಲ್ಲಿ 13 ಲಕ್ಷ ಇಂಜಿನಿಯರಿಂಗ್ ವೃತ್ತಿ ಪರರಿದ್ದಾರೆ, ಬೆಂಗಳೂರಿನಲ್ಲಿ 25 ಲಕ್ಷ ಇಂಜಿನಿಯರಿಂಗ್ ವೃತ್ತಿಪರರಿದ್ದಾರೆ. ಇದಕ್ಕಿಂತ ಇನ್ನೇನು ಬೇಕು. ಕರ್ನಾಟಕ 13,900 ವೈದ್ಯರನ್ನು ಪ್ರತಿ ವರ್ಷ ತಯಾರು ಮಾಡುತ್ತಿದ್ದಾರೆ. ದೇಶದ ಇತರೆ ಯಾವುದೇ ರಾಜ್ಯಕ್ಕೂ ಈ ರೀತಿ ಸಾಮರ್ಥ್ಯವಿಲ್ಲ. ನಮ್ಮ ರಾಜ್ಯದಲ್ಲಿ ಪ್ರತಿ ವರ್ಷ 1 ಲಕ್ಷ ವೈದ್ಯಕೀಯ ವೃತ್ತಿಪರರು ತಯಾರಾಗುತ್ತಿದ್ದಾರೆ” ಎಂದು ತಿಳಿಸಿದರು.

ಉದ್ಯಮಗಳು ಕರ್ನಾಟಕ ರಾಜ್ಯವನ್ನು ತೊರೆಯದಂತೆ ಯಾವ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೇಳಿದಾಗ, “ನಾನು ಕರ್ನಾಟಕ ರಾಜ್ಯವನ್ನು ಇತರೆ ಯಾವುದೇ ರಾಜ್ಯದೊಂದಿಗೆ ಹೋಲಿಕೆ ಮಾಡುತ್ತಿಲ್ಲ. ಕರ್ನಾಟಕ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡುತ್ತಿದೆ. ಬೆಂಗಳೂರಿನ ಬಗ್ಗೆ ಅಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿ ಅವರು ಏನು ಹೇಳಿದ್ದಾರೆ? ಅವರು ಬೇರೆ ರಾಜ್ಯಗಳ ನಗರಕ್ಕೆ ಹೋಗಿ, ಆ ನಗರವನ್ನು ಜಾಗತಿಕ ನಗರ ಎಂದು ಕರೆದಿಲ್ಲ, ಬೆಂಗಳೂರನ್ನು ಜಾಗತಿಕ ನಗರ ಎಂದು ಬಣ್ಣಿಸಿದ್ದಾರೆ” ಎಂದು ತಿಳಿಸಿದರು.

ಐಎಂಎಫ್ ನ ಗೀತಾ ಗೋಪಿನಾಥನ್ ಅವರು ಮಾಲಿನ್ಯ ವಿಚಾರವಾಗಿ ಭಾರತವನ್ನು ಪ್ರಶ್ನಿಸಿರುವ ಬಗ್ಗೆ ಕೇಳಿದಾಗ, “ಕರ್ನಾಟಕದ ವಾತಾವರಣ ದೇಶದಲ್ಲೇ ಅತ್ಯುತ್ತಮವಾಗಿದೆ” ಎಂದರು.

ಬೆಂಗಳೂರು ಸಂಚಾರ ದಟ್ಟಣೆ 2ನೇ ಸ್ಥಾನಲ್ಲಿದೆ ಎಂದು ಕೇಳಿದಾಗ, “ಬೆಂಗಳೂರು ಸಂಚಾರ ದಟ್ಟಣೆ ನಿಯಂತ್ರಿಸಬೇಕು ಎಂಬ ಕಾರಣಕ್ಕೆ ಬೆಂಗಳೂರಿನ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 2.50 ಲಕ್ಷ ಕೋಟಿ ಹಣವನ್ನು ಐದು ವರ್ಷಗಳಲ್ಲಿ ವೆಚ್ಚ ಮಾಡಲಾಗುತ್ತಿದೆ. ಅದಕ್ಕಾಗಿ ಬೆಂಗಳೂರು ಬಿಸಿನೆಸ್ ಕಾರಿಡಾರ್ ನಿರ್ಮಿಸಲಾಗುತ್ತಿದೆ. ಇದರ ಜೊತೆಗೆ ಟನಲ್ ರಸ್ತೆಗಳು, 123 ಕಿ.ಮೀ ಎಲಿವೇಟೆಡ್ ಕಾರಿಡಾರ್ ಗಳು, 300 ಕಿ.ಮೀ ಉದ್ದದ ಬಫರ್ ರೋಡ್ ಗಳನ್ನು ನಿರ್ಮಿಸಲಾಗುತ್ತಿದೆ. ಬಫರ್ ರಸ್ತೆ ಬಗ್ಗೆ ಘೋಷಣೆ ಮಾಡಿದಾಗ ಅನೇಕರು, ನಕ್ಕರು, ಟೀಕೆ ಮಾಡಿದರು. ನೀವು ಈಜಿಪುರದ ಬಳಿ ಕೆಲಸ ನಡೆಯುತ್ತಿದೆ. ನೀವು ಹೇಗಿ ನೋಡಿ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ಈ ಯೋಜನೆಗೆ ಮಿಲಿಟರಿಯವರು ಜಾಗ ಬಿಟ್ಟುಕೊಟ್ಟಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಆ ರಸ್ತೆಯಿಂದ ಆಗುತ್ತಿರುವ ಬದಲಾವಣೆ ನೋಡಿ ನಿಮಗೆ ಅರ್ಥವಾಗುತ್ತದೆ” ಎಂದರು.

ಟನಲ್ ರಸ್ತೆ ವಿಚಾರವಾಗಿ ಬಿಜೆಪಿ ಶಾಸಕರು, ಸಂಸದರು ಟೀಕೆ ಮಾಡುತ್ತಿರುವ ಬಗ್ಗೆ ಕೇಳಿದಾಗ, “ಅವರ ಎಲ್ಲಾ ಟೀಕೆಗಳಿಗೆ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಅವರೇ ಉತ್ತರ ನೀಡಿದ್ದಾರೆ. ಹೀಗಾಗಿ ನಾನು ಅವರಿಗೆ ಉತ್ತರ ನೀಡುವುದಿಲ್ಲ” ಎಂದು ತಿಳಿಸಿದರು.