ಬೆಂಗಳೂರು: ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವುದು ಹೆಮ್ಮೆಯ ಸಂಗತಿ. ವೈದ್ಯರ ಸಾಧನೆಯನ್ನು ಗುರುತಿಸಿ ವಿಶ್ವವಾಣಿ ಟಿವಿ (Vishwavani TV) ಸಂಸ್ಥೆಯು ಪ್ರೈಡ್ ಆಫ್ ಹೆಲ್ತ್‌ಕೇರ್ ಅವಾರ್ಡ್ ನೀಡಿ ಗೌರವಿಸುತ್ತಿದೆ. ಸಮಾಜಕ್ಕೆ ಕೊಡುಗೆ ನೀಡುವವರನ್ನು ಸನ್ಮಾನಿಸುವ ಕೆಲಸ ಹೆಚ್ಚಬೇಕು. ಈ ನಿಟ್ಟಿನಲ್ಲಿ ವಿಶ್ವವಾಣಿ ಟಿವಿ ಕಾರ್ಯ ಶ್ಲಾಘನೀಯ ಎಂದು ಜನಪ್ರಿಯ ನಟಿ ಮಾನ್ವಿತಾ ಕಾಮತ್ (Manvita Kamath) ಹೇಳಿದರು. ವಿಶ್ವವಾಣಿ ಟಿವಿ ಬೆಂಗಳೂರಿನಲ್ಲಿ ಬುಧವಾರ ಆಯೋಜಿಸಿದ್ದ ‘ಪ್ರೈಡ್ ಆಫ್ ಹೆಲ್ತ್‌ಕೇರ್ ಅವಾರ್ಡ್’ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಇಂದಿನ ಪೀಳಿಗೆಯ ಅತೀ ದೊಡ್ಡ ಸಮಸ್ಯೆ ಒತ್ತಡ. ಪ್ರತಿಯೊಬ್ಬರೂ ಒತ್ತಡದಲ್ಲಿಯೇ ಜೀವನ ನಡೆಸುತ್ತಿದ್ದಾರೆ. ದೈಹಿಕ ಆರೋಗ್ಯ ಕಾಪಾಡಿಕೊಳ್ಳುವ ಜೊತೆಗೆ ಮಾನಸಿಕ ಆರೋಗ್ಯದ ಸಮತೋಲನವೂ ಅಷ್ಟೇ ಮುಖ್ಯವಾಗಿರುತ್ತದೆ. ವ್ಯಾಯಾಮ, ಯೋಗ, ನಡಿಗೆ, ಸಮತೋಲಿತ ಆಹಾರ ಇವೆಲ್ಲವೂ ಮನುಷ್ಯನ ಸಂಪೂರ್ಣ ದೇಹ ಆರೋಗ್ಯವಾಗಿರುವಂತೆ ಮಾಡುತ್ತದೆ. ಕಾರ್ಯದೊತ್ತಡವನ್ನು ನಿಭಾಯಿಸಿ ಕೆಲಸ ಮಾಡುವ ಕುರಿತು ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ಮಾನ್ವಿತಾ ಹೇಳಿದರು.
ಮಹಿಳೆಯರ ಋತುಬಂಧದ ಸಮಸ್ಯೆ ಕುರಿತು ಮಾತನಾಡಿದ ಮಾನ್ವಿತಾ ಕಾಮತ್, 40 ವರ್ಷಕ್ಕೂ ಮೇಲ್ಪಟ್ಟ ಮಹಿಳೆಯರು ಋತುಬಂಧದ ಸಮಯದಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇದೇ ಸಮಯದಲ್ಲಿ ಗರ್ಭಕೋಶದ ಸಮಸ್ಯೆ, ಅಧಿಕ ರಕ್ತಸ್ರಾವ ಹಾಗೂ ದೇಹದಲ್ಲಿ ಪೋಷಕಾಂಶದ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಹಲವರಿಗೆ ಮಾನಸಿಕ ತೊಂದರೆಯೂ ಉಂಟಾಗುತ್ತದೆ. ಈ ಸಮಯದಲ್ಲಿ ಸರಿಯಾದ ಆರೈಕೆ ಹಾಗೂ ಸರಿಯಾದ ಔಷಧ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಪ್ರಾರಂಭಿಸಿರುವ ʻಋತುತಾರೆʼ ಯೋಜನೆ ಮಹಿಳೆಯರಿಗೆ ಸಹಾಯಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.