ಬೆಂಗಳೂರು: ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ (Bengaluru Central Jail) ಕೈದಿಗಳು ಮೊಬೈಲ್ ಬಳಕೆ, ಎಣ್ಣೆ ಪಾರ್ಟಿ ಮಾಡುವುದು ಸೇರಿ ಹಲವು ಕರ್ಮಕಾಂಡಗಳು ಬೆಳಕಿಗೆ ಬಂದಿದ್ದವು. ನಿಯಮಬಾಹಿರ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಹಲವು ಕ್ರಮ ಕೈಗೊಂಡಿದ್ದರೂ ಪ್ರಯೋಜನವಾದಂತೆ ಕಾಣುತ್ತಿಲ್ಲ. ಇದೀಗ ಕೈದಿಯೊಬ್ಬ ಜೈಲಿನಲ್ಲಿ ಕುಳಿತೇ ತನ್ನ ಪತ್ನಿಗೆ ವಿಡಿಯೊ ಕಾಲ್ ಮಾಡಿರುವುದು ಬೆಳಕಿಗೆ ಬಂದಿದ್ದು, ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಚಾರಣಾಧೀನ ಕೈದಿಯಾಗಿದ್ದ ಅಕ್ಬರ್ ಎಂಬಾತ ಜೈಲಿನಲ್ಲಿ ಕುಳಿತುಕೊಂಡೇ ಪತ್ನಿಗೆ ವಿಡಿಯೊ ಕಾಲ್ ಮಾಡಿರುವುದು ಬೆಳಕಿಗೆ ಬಂದಿದೆ. ಈತ ಕದ್ದು-ಮುಚ್ಚಿ ಸೆಲ್ನಲ್ಲಿ ಮೊಬೈಲ್ ಇಟ್ಟುಕೊಂಡು ಬಳಕೆ ಮಾಡುತ್ತಿದ್ದ ಎನ್ನಲಾಗಿದೆ. ಆರೋಪಿ ಸದ್ಯ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಆದರೆ ಈಗ ಈತನ ವಿಡಿಯೊ ವೈರಲ್ ಆಗುತ್ತಿದೆ.
ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೊ ಶೇರ್ ಮಾಡಿದ ಪತ್ನಿ!
ಜೈಲಿನ ಒಳಎ ಕುಳಿತು ಪತ್ನಿಗೆ ವಿಡಿಯೊ ಕಾಲ್ ಮಾಡಿರು ವಿಡಿಯೊ ಈಗ ವೈರಲ್ ಆಗುತ್ತಿದೆ. ವಿಡಿಯೊ ಕಾಲ್ ಮಾಡಿರುವುದನ್ನು ಸ್ಕ್ರೀನ್ ರೆಕಾರ್ಡ್ ಮಾಡಿ, ಅದನ್ನು ಆಕೆಯ ಪತ್ನಿಯೇ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾಳೆ. ಅಷ್ಟೇ ಅಲ್ಲದೆ ಆತ ಏನೋ ದೊಡ್ಡ ಸಾಧನೆ ಮಾಡಿದ್ದಾನೆ ಅನ್ನೋ ಹಾಗೇ ಜೈಲಿಂದ ರಿಲೀಸ್ ಆಗಿರುವ ವಿಡಿಯೊವನ್ನು ಕೂಡ ಪತ್ನಿ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾಳೆ. ಏಪ್ರಿಲ್ 28 ರಂದು ಅಕ್ಬರ್ ಜೈಲಿನಿಂದ ಬಿಡುಗಡೆಯಾಗಿದ್ದು, ಆತ ರಿಲೀಸ್ ಆದ ವಿಡಿಯೋವನ್ನೂ ಪತ್ನಿ ಹಂಚಿಕೊಂಡಿದ್ದಾಳೆ.
ಮದುವೆಯಲ್ಲಿ ಸ್ಟಂಟ್ ಮಾಡಲು ಹೋಗಿ ವರನ ಕೈಯಲ್ಲೇ ಸಿಡಿದ ಫೈರ್ ಗನ್ ; ಅಪಾಯಕಾರಿ ವಿಡಿಯೋ ವೈರಲ್
ಈ ಹಿಂದೆಯೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಂಕಿತ ಉಗ್ರ ಜುಹಾದ್ ಹಮೀದ್ ಶಕೀಲ್ ಮನ್ನಾ ಕೈಯಲ್ಲಿ ಮೊಬೈಲ್ ಇರುವ ವಿಡಿಯೊ ವೈರಲ್ ಆಗಿತ್ತು. ಶಂಕಿತ ಉಗ್ರನ ಕೈಯಲ್ಲಿ ಮೊಬೈಲ್ ಹೇಗೆ ಬಂತು ಎನ್ನುವ ಸಂಬಂಧ ಎನ್ಐಎ ತನಿಖೆ ನಡೆಸಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಹಾಗೂ ಉಗ್ರರಿಗೂ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಹಲವು ಬಾರಿ ಕೇಳಿಬಂದಿವೆ. ಇದೀಗ ಆರೋಪಿಯೊಬ್ಬನ ವಿಡಿಯೊ ವೈರಲ್ ಆದ ಹಿನ್ನೆಲೆಯಲ್ಲಿ ಜೈಲಿನಲ್ಲಿ ಭದ್ರತಾ ವ್ಯವಸ್ಥೆ ಬಗ್ಗೆ ಸಾರ್ವಜನಿಕರು ಅಸಮಾಧಾನ ಹೊರಹಾಕುತ್ತಿದ್ದಾರೆ.