ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸ್ಟಿಂಗ್ ಆಪರೇಷನ್(Sting Operation) ವಿಷಯವಾಗಿ ಆಡಳಿತ-ಪ್ರತಿಪಕ್ಷದ ನಡುವೆ ವಾಗ್ದಾಳಿ ನಡೆಯುತ್ತಿರುವ ಹೊತ್ತಿನಲ್ಲಿ ಹಲವು ಸಚಿವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರನ್ನು ಭೇಟಿಯಾಗಿ ‘ವಿವರಣೆ’ ನೀಡಿರುವುದು ಹಲವು ರೀತಿಯ ವ್ಯಾಖ್ಯಾನಗಳಿಗೆ ನಾಂದಿ ಹಾಡಿದೆ.
ಹಿಂದಿನ ಸಚಿವ ಸಂಪುಟ ಸಭೆಯಲ್ಲಿ ಚಟುಕು ಕಾರ್ಯಚರಣೆಯ ಎಚ್ಚರಿಕೆ ನೀಡಿದ ಬಳಿಕ, ರಾಜ್ಯಾದ್ಯಂತ ಸ್ಟಿಂಗ್ ಆಪರೇಷನ್ ಗದ್ದಲ ಜೋರಾಗಿದೆ. ಈ ನಡುವೆ ಸಿದ್ದರಾಮಯ್ಯ ಅವರೂ ತಮ್ಮ ವಿರುದ್ಧ ಅಪಪ್ರಚಾರ ನಡೆಯುತ್ತಿರುವ ವಿಡಿಯೊಗೆ ಸಂಬಂಧಿಸಿದಂತೆ ದೂರು ನೀಡಿದ್ದರಿಂದ ರಾಜಕೀಯ ಹಗ್ಗ-ಜಗ್ಗಾಟಕ್ಕೆ ಕಾರಣವಾಗಿದೆ.
ಈ ನಡುವೆ ಕೇಂದ್ರ ಸಚಿವ ಕುಮಾರಸ್ವಾಮಿ(H D Kumaraswamy) ಅವರು ‘ಸಿದ್ದರಾಮಯ್ಯ ಅವರನ್ನು ಸ್ಟಿಂಗ್ ಆಪರೇಷನ್ ಮೂಲಕ ಬ್ಲಾಕ್ಮೇಲ್ ಮಾಡಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಲಾಗಿದೆ’ ಎಂದು ಆರೋಪಿಸಿರುವುದು ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿತ್ತು. ಈ ಎಲ್ಲದರ ನಡುವೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ಅವರು ಸಿದ್ದರಾಮಯ್ಯ ಅವರನ್ನು ಮೈಸೂರಿನಲ್ಲಿ ಶುಕ್ರವಾರ ಭೇಟಿಯಾಗಿ ಸ್ಟಿಂಗ್ ಆಪರೇಷನ್ ಪ್ರಕರಣ ಸಂಪೂರ್ಣ ವಿವರಣೆಯನ್ನು ನೀಡಿದ್ದಾರೆ.
ಇದನ್ನೂ ಓದಿ: Karnataka Sting Operation: ಸಿದ್ದರಾಮಯ್ಯ ವಿರುದ್ಧ ಆಕ್ಷೇಪಾರ್ಹ ವಿಡಿಯೊ ಪ್ರಸಾರ ಮಾಡದಂತೆ ಕೋರ್ಟ್ನಿಂದ ಪ್ರತಿಬಂಧಕಾದೇಶ
ಸ್ವತಃ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(D K Shivakumar) ಅವರೂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲಿದ್ದಾರೆ ಎನ್ನಲಾಗಿತ್ತು. ಯುವ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಈ ವಿಷಯದ ಬಗ್ಗೆ ಚರ್ಚಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಡಿಕೆಶಿ ಕಾರ್ಯಕ್ರಮದ ಬಳಿಕ ನೇರವಾಗಿ ಬೆಂಗಳೂರಿಗೆ ಬಂದಿರುವುದರಿಂದ ಡಿಕೆ-ಸಿದ್ದು ಭೇಟಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಸ್ಟಿಂಗ್ ಆಪರೇಷನ್ ಬಗ್ಗೆ ವಾರದಿಂದಲೇ ಚರ್ಚೆಗಳು ನಡೆಯುತ್ತಿದ್ದರೂ ಡಿ.ಕೆ.ಶಿವಕುಮಾರ್ ‘ನಿರಂತರ’ ಕಾರ್ಯದೊತ್ತಡದ ಕಾರಣಕ್ಕೆ ಭೇಟಿಯಾಗಿಲ್ಲ ಎನ್ನಲಾಗಿದೆ. ಆದರೆ ಸಿದ್ದರಾಮಯ್ಯ ಅವರು ಬೆಂಗಳೂರಿಗೆ ವಾಪಸಾಗುತ್ತಿದ್ದಂತೆ ಡಿಕೆ ಭೇಟಿಯಾಗಿ ಚರ್ಚೆ ನಡೆಸುವ ಸಾಧ್ಯತೆಯಿದೆ. ಆದರೆ ಅದಕ್ಕೂ ಮೊದಲು ಸಿದ್ದರಾಮಯ್ಯ ಅವರು ನೀಡಿರುವ ದೂರಿನ ವಿಚಾರಣೆ, ಸ್ಟಿಂಗ್ ಆಪರೇಷನ್ ಆರೋಪದ ‘ಸೂಕ್ಷ್ಮ’ ವಿಷಯಗಳನ್ನು ಗೃಹ ಸಚಿವ ಪ್ರಿಯಾಂಕ್ ಮೂಲಕ ಸಿದ್ದರಾಮಯ್ಯ ಅವರ ಕಿವಿಗೆ ಡಿಕೆ ಮುಟ್ಟಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಿದ್ದು ದೂರು; ವಿಚಾರಣೆಗೆ ವೇಗ: ಈ ನಡುವೆ ಸಿದ್ದರಾಮಯ್ಯ ಅವರು ಅಕ್ಟೋಬರ್ 6ರಂದು ನೀಡಿದ ದೂರಿನ ಪ್ರತಿ ಲಭ್ಯವಾಗಿದ್ದು, ಅದರಲ್ಲಿರುವ ಆರೋಪಗಳು ಹಾಗೂ ತನಿಖೆಯ ಬೆಳವಣಿಗೆಗಳು ಗಮನ ಸೆಳೆದಿವೆ. ಸೆ.27ರಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದ ವಿಡಿಯೊ ಕುರಿತು ಸಿದ್ದರಾಮಯ್ಯ ದೂರು ದಾಖಲಿಸಿದ್ದರು. ಅಪರಿಚಿತ ವ್ಯಕ್ತಿಗಳು ನಕಲಿ ಗುರುತು ಬಳಸಿ, ಗುಪ್ತವಾಗಿ ವಿಡಿಯೊ ಚಿತ್ರೀಕರಿಸಿ, ತಮ್ಮ ವಿರುದ್ಧ ಸುಳ್ಳು ಮತ್ತು ದುರುದ್ದೇಶಪೂರಿತ ಆರೋಪ ಪ್ರಸಾರ ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ. ವಿಡಿಯೋವನ್ನು ಯೂಟ್ಯೂಬ್ ವಾಹಿನಿಯಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಗೌರವಕ್ಕೆ ಧಕ್ಕೆ ತರಲು ಪ್ರಯತ್ನಿಸಲಾಗಿದೆ ಎಂಬುದು ದೂರಿನ ಪ್ರಮುಖ ಅಂಶವಾಗಿದೆ.
ಯಾವ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲು?: ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ ದೂರಿನ ಆಧಾರದಲ್ಲಿ ಅ.6ರಂದು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 66(ಇ) ಹಾಗೂ ಬಿಎನ್ಎಸ್ ಸೆಕ್ಷನ್ಗಳಾದ 61, 3(5), 308(6), 336(4) ಮತ್ತು 340(2) ಅಡಿಯಲ್ಲಿ ಪ್ರಕರಣ ದಾಖಲಿಸ ಲಾಗಿದೆ ಎಂದು ವರದಿಯಾಗಿದೆ. ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಕೇಂದ್ರ ಅಪರಾಧ ವಿಭಾಗ ಈಗಾಗಲೇ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.
ಮಾಸ್ಟರ್ ಮೈಂಡ್ಗಾಗಿ ಶೋಧ
ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 15 ಜನರನ್ನು ಸಿಸಿಬಿಯ ಸೈಬರ್ ಕ್ರೈಂ ಪೊಲೀಸರು ವಿಚಾರಣೆಗೆ ಒಳಪಡಿಸಿ ಮಾಸ್ಟರ್ ಮೈಂಡ್ ಯಾರು ಎಂಬುದನ್ನು ಪತ್ತೆ ಹಚ್ಚಲು ತನಿಖೆ ಚುರುಕು ಕೊಳಿಸಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ವಿಡಿಯೊ ಅಪ್ಲೊಡ್ ಮಾಡುವ ಉದ್ದೇಶ ಕ್ಕಾಗಿಯೇ ಯೂಟ್ಯೂಬ್ ಚಾನೆಲ್ ಒಂದನ್ನು ಆರಂಭಿಸಲಾಗಿತ್ತು. ದುಷ್ಕರ್ಮಿಗಳು ಕರ್ನಾಟಕ ಹನಿಟ್ರ್ಯಾಪ್ ಹೆಸರಿನ ಯೂಟ್ಯೂಬ್ ಚಾನೆಲ್ ಮರುತೆರೆದ ತಕ್ಷಣವೇ ನಾಲ್ಕು ವಿಡಿಯೊ ಅಪ್ಲೋಡ್ ಮಾಡಲಾಗಿದೆ. ಈ ಚಾನೆಲ್ಗೆ 15 ಮಂದಿ ಚಂದಾದಾರರು ಆಗಿದ್ದು, ಆ ಚಂದದಾರರ ಪಟ್ಟಿಯನ್ನು ಸಿದ್ಧಪಡಿಸಿರುವ ಸೈಬರ್ ಕ್ರೈಂ ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಲು ಸಿದ್ಧತೆ ಮಾಡಿ ಕೊಳ್ಳುತ್ತಿದ್ದಾರೆ. ಈಗಾಗಲೇ ಈ 54 ಮಂದಿಯ ಹಿನ್ನೆಲೆಯನ್ನೂ ಸಹ ಪೊಲೀಸರು ಪರಿಶೀಲಿಸು ತ್ತಿದ್ದಾರೆ ಎಂದು ತಿಳಿದು ಬಂದಿದೆ.
![]()
ಸಚಿವರ ಮಾತಿನ ನಡವಳಿಕೆ ನೋಡಿದರೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ವ್ಯವಸ್ಥಿತ ಸಂಚು ನಡೆದಿರುವ ಅನುಮಾನ ಬರುತ್ತದೆ. ಸಿದ್ದರಾಮಯ್ಯ ಅವರ ಅತ್ಯಾಪ್ತ ವಲಯದಲ್ಲಿಯೇ ಇದ್ದು ಬೆನ್ನಿಗೆ ಚೂರಿ ಹಾಕಿದ್ದಾರೋ ಅಥವಾ ಮುಂದಿನಿಂದ ಹಾಕಿದ್ದಾರೋ ಎಂಬುದನ್ನು ನೋಡೋಣ. ಸ್ಟಿಂಗ್ ಆಪರೇಷನ್ ವಿಚಾರ ಪ್ರಸ್ತಾಪವಾಗಿ 10 ರಿಂದ 15 ದಿನದ ಬಳಿಕ ಡಿಕೆಶಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿzರೆ. ಭೇಟಿಯಾಗಿ ಅವರ ಕ್ಷಮೆ ಕೋರಿದ್ದಾರೋ? ಇಲ್ಲವೋ? ಭೇಟಿ ಫಲಪ್ರದವಾಯಿತೋ? ಗೊತ್ತಾಗಿಲ್ಲ.
-ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವ