ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Priyank Kharge: ಪ್ರೇಕ್ಷಕರು ಬದಲಾದಾಗ ಭಾಷೆಯಲ್ಲೂ ಬದಲಾವಣೆ; ಮೋಹನ್ ಭಾಗವತ್ ಅಮೆರಿಕ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ವ್ಯಂಗ್ಯ

ನ್ಯೂಯಾರ್ಕ್‌ನಲ್ಲಿ ನಡೆದ ‘ಒನ್ ವರ್ಲ್ಡ್ ಒನ್ ಹ್ಯುಮಾನಿಟಿ’ ಎಂಬ ಬಹುಧರ್ಮೀಯ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಮಾತನಾಡಿ, ಹಿಂದುತ್ವದ ಪರಿಕಲ್ಪನೆ ಮುಸ್ಲಿಮರಿಲ್ಲದ ಭಾರತವನ್ನು ಬಯಸುವುದಿಲ್ಲ ಎಂದು ಹೇಳಿದ್ದರು. ಇದಕ್ಕೆ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು: ಅಮೆರಿಕದಲ್ಲಿ ಹಿಂದುತ್ವ, ಮುಸ್ಲಿಮರು ಹಾಗೂ ‘ಹಿಂದೂ ರಾಷ್ಟ್ರ’ದ ಕುರಿತು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ನೀಡಿರುವ ಹೇಳಿಕೆಗೆ ತೀವ್ರ ಪ್ರತಿಕ್ರಿಯಿಸಿರುವ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge), ಭಾರತದಲ್ಲಿ ಮತ್ತು ವಿದೇಶಗಳಲ್ಲಿ ಆರ್‌ಎಸ್‌ಎಸ್‌ನ ನಿಲುವು ಹಾಗೂ ಭಾಷೆಯಗಳಲ್ಲಿ ವ್ಯತ್ಯಾಸ ಕಂಡುಬರುತ್ತಿದೆ ಎಂದು ಟೀಕಿಸಿದ್ದಾರೆ.

ನ್ಯೂಯಾರ್ಕ್‌ನಲ್ಲಿ ಆಗಸ್ಟ್ 29ರಂದು ನಡೆದ ‘ಒನ್ ವರ್ಲ್ಡ್ ಒನ್ ಹ್ಯುಮಾನಿಟಿ’ ಎಂಬ ಬಹುಧರ್ಮೀಯ ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್ ಮಾತನಾಡಿ, ಹಿಂದುತ್ವದ ಪರಿಕಲ್ಪನೆ ಮುಸ್ಲಿಮರಿಲ್ಲದ ಭಾರತವನ್ನು ಬಯಸುವುದಿಲ್ಲ ಎಂದು ಹೇಳಿದ್ದರು.

ಭಾಗವತ್ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, “ಪ್ರೇಕ್ಷಕರು ಬದಲಾದಾಗ ಭಾಷೆಯಲ್ಲೂ ಎಷ್ಟು ದೊಡ್ಡ ಬದಲಾವಣೆ!” ಎಂದು ವ್ಯಂಗ್ಯವಾಡಿದ್ದಾರೆ.

ಆರ್‌ಎಸ್‌ಎಸ್‌ ಭಾರತದಲ್ಲಿ ಕಳೆದ ಒಂದು ಶತಮಾನದಿಂದ ‘ಹಿಂದೂ ರಾಷ್ಟ್ರ’ದ ಪರಿಕಲ್ಪನೆಯನ್ನು ಪ್ರತಿಪಾದಿಸುತ್ತಾ ಬಂದಿದೆ. ಆದರೆ, ಅಮೆರಿಕದ ನೆಲದಲ್ಲಿ ಧಾರ್ಮಿಕ ಸೌಹಾರ್ದ, ವಿಶ್ವಮಾನವ ಏಕತೆ ಮತ್ತು ಎಲ್ಲರನ್ನು ಒಳಗೊಂಡ ಸಮಾಜದ ಕುರಿತು ಮಾತನಾಡಲಾಗುತ್ತಿದೆ. ಭಾರತದಲ್ಲಿ ಪ್ರತಿಪಾದಿಸುವ ನಿಲುವು ಮತ್ತು ವಿದೇಶದಲ್ಲಿ ನೀಡುವ ಸಂದೇಶದ ನಡುವಿನ ಈ ವ್ಯತ್ಯಾಸವನ್ನು ಗಮನಿಸಬೇಕಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಮೋಹನ್ ಭಾಗವತ್ ಅವರ ಮೂರು ರಾಷ್ಟ್ರಗಳ ಪ್ರವಾಸ ಹಾಗೂ ಅವರು ನೀಡುತ್ತಿರುವ ‘ವಿಶ್ವಮಾನವ ಏಕತೆ’ ಸಂದೇಶವನ್ನು ಭಾರತೀಯ ಮೂಲದ ವಲಸಿಗರಿಂದ ನಿಧಿ ಸಂಗ್ರಹಿಸಲು ಆರ್‌ಎಸ್‌ಎಸ್‌ ಬಳಸಿಕೊಳ್ಳುತ್ತಿದೆಯೇ ಎಂಬ ಪ್ರಶ್ನೆಯನ್ನೂ ಅವರು ಎತ್ತಿದ್ದಾರೆ. ವಿದೇಶಗಳಲ್ಲಿರುವ ಭಾರತೀಯ ಸಮುದಾಯವನ್ನು ಸಂಘಟಿಸುವಲ್ಲಿ ಆರ್‌ಎಸ್‌ಎಸ್‌ನ ವಿದೇಶಿ ಜಾಲದ ಪಾತ್ರದ ಬಗ್ಗೆಯೂ ಪರಿಶೀಲನೆ ಅಗತ್ಯವಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಆರ್‌ಎಸ್‌ಎಸ್‌ನ ವಿದೇಶಿ ಅಂಗವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಉಲ್ಲೇಖಿಸಿರುವ ಹಿಂದೂ ಸ್ವಯಂಸೇವಕ ಸಂಘದ ಚಟುವಟಿಕೆಗಳ ಬಗ್ಗೆಯೂ ಅವರು ಪ್ರಶ್ನೆಗಳನ್ನು ಎತ್ತಿದ್ದಾರೆ. ವಲಸೆ ಭಾರತೀಯರನ್ನು ಸಂಘಟಿಸುವುದು ಹಾಗೂ ನಿಧಿ ಸಂಗ್ರಹಿಸುವ ಪ್ರಕ್ರಿಯೆಯಲ್ಲಿ ಅದರ ಪಾತ್ರವೇನು ಎಂಬುದನ್ನು ಪರಿಶೀಲಿಸಬೇಕಿದೆ ಎಂದು ಅವರು ಹೇಳಿದ್ದಾರೆ.

ಭಾಗವತ್ ಭಾಗವಹಿಸಿದ್ದ ನ್ಯೂಯಾರ್ಕ್‌ನ ಕಾರ್ಯಕ್ರಮವನ್ನು ಆಯೋಜಿಸಿದ್ದ AHEAD ಸಂಘಟನೆಯ ಬಗ್ಗೆಯೂ ಪ್ರಿಯಾಂಕ್ ಖರ್ಗೆ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. AHEAD ತನ್ನನ್ನು ಅಂತರ್‌ಧರ್ಮೀಯ ಸಂವಾದ, ಧಾರ್ಮಿಕ ಸಾಮರಸ್ಯ ಹಾಗೂ ಎಲ್ಲರನ್ನೂ ಒಳಗೊಂಡ ಭವಿಷ್ಯಕ್ಕಾಗಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿ ಪರಿಚಯಿಸಿಕೊಳ್ಳುತ್ತದೆ. ಆದರೆ, ಆ ಸಂಘಟನೆಯ ಸ್ಥಾಪಕರಿಗೆ ಆರ್‌ಎಸ್‌ಎಸ್‌ ಪರಿಸರದೊಂದಿಗೆ ನಂಟಿದೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ಆರ್‌ಎಸ್‌ಎಸ್ ಬಗ್ಗೆ ಅವಹೇಳನಕಾರಿ ಹೇಳಿಕೆ ಪ್ರಕರಣ; ಗೃಹ ಸಚಿವ ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಜಾಮೀನು ಮಂಜೂರು

ಆರ್‌ಎಸ್‌ಎಸ್‌ನ ವಿದೇಶಿ ಸಂಪರ್ಕ, ಸಂಘಟನಾ ಜಾಲ ಮತ್ತು ನಿಧಿ ಸಂಗ್ರಹಣೆಯ ವ್ಯವಸ್ಥೆಯ ಕುರಿತು ಸಮಗ್ರ ಪರಿಶೀಲನೆ ನಡೆಯಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.

ವಿದೇಶಗಳಲ್ಲಿ ವಿಶ್ವಮಾನವ ಏಕತೆ ಹಾಗೂ ಧಾರ್ಮಿಕ ಸಾಮರಸ್ಯದ ಸಂದೇಶ ನೀಡುವುದರ ಜೊತೆಗೆ, ಭಾರತದಲ್ಲಿ ಆರ್‌ಎಸ್‌ಎಸ್‌ ಪ್ರತಿಪಾದಿಸುತ್ತಿರುವ ‘ಹಿಂದೂ ರಾಷ್ಟ್ರ’ದ ಪರಿಕಲ್ಪನೆಯನ್ನೂ ಸಾರ್ವಜನಿಕರು ಪ್ರಶ್ನಿಸಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಆರ್‌ಎಸ್‌ಎಸ್‌ ಅನ್ನು ನೋಂದಾಯಿಸಬೇಕು ಎಂಬ ತಮ್ಮ ಹಿಂದಿನ ಆಗ್ರಹವನ್ನು ಪ್ರಿಯಾಂಕ್ ಖರ್ಗೆ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.