ಬೆಂಗಳೂರು: ರಾಜ್ಯದಲ್ಲಿ ಜಾರಿಗೊಂಡಿರುವ ಪೇಪರ್‌ಲೆಸ್ ಡಿಜಿಟಲ್ ಇ-ನೋಂದಣಿ ವ್ಯವಸ್ಥೆ ( Paperless digital e-registration system) ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಸಾಮಾನ್ಯ ಜನರ ಆಸ್ತಿ ಭದ್ರತೆ ಗಂಭೀರ ಅಪಾಯಕ್ಕೆ ಸಿಲುಕಿದೆ. ವಿಶ್ವಾಸಾರ್ಹವಲ್ಲದ ಈ ವ್ಯವಸ್ಥೆಯ ಲೋಪದೋಷಗಳನ್ನು ಸರಿಪಡಿಸಿದ್ದರೆ ರಾಜ್ಯಾ ದ್ಯಂತ ಹೋರಾಟ ನಡೆಸುವುದಾಗಿ ರಾಜ್ಯ ನೋಂದಣಿ ಮತ್ತು ಮುದ್ರಂಕ ಇಲಾಖೆಯಿಂದ ಪರವಾನಗಿ ಪಡೆದ (ದಸ್ತು)ಪತ್ರ ಬರಹಗಾರರ ಒಕ್ಕೂಟ ಎಚ್ಚರಿಕೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಪ್ರಧಾನ ಕಾರ್ಯದರ್ಶಿ, ವ್ಯವಸ್ಥೆಯಲ್ಲಿ ಸಾಕಷ್ಟು ಲೋಪದೋಷಗಳಿದ್ದು, ಜನ ಸಾಮಾನ್ಯರ ಆಸ್ತಿ ರಕ್ಷಣೆಗೆ ಗಂಭೀರ ಸವಾಲು ಎದುರಾಗಿದೆ. ತಾಂತ್ರಿಕ ದೋಷಗಳು, ಭದ್ರತಾ ಕೊರತೆ ಹಾಗೂ ಪಾರದರ್ಶಕತೆಯ ಅಭಾವದಿಂದ ಈ ವ್ಯವಸ್ಥೆ ಭೂ ಮಾಫಿಯಾ ಮತ್ತು ಹ್ಯಾಕರ್‌ಗಳಿಗೆ ನೆರವಾಗಲಿದೆ. ಇ-ನೋಂದಣಿ ಬಳಿಕ ಖರೀದಿದಾರರಿಗೆ ಯಾವುದೇ ಭೌತಿಕ ದಾಖಲೆಗಳನ್ನು ನೀಡುತ್ತಿಲ್ಲ. ಡಿಜಿಟಲ್ ಲಾಕರ್‌ನಲ್ಲೇ ದಾಖಲೆಗಳು ಉಳಿಯು ತ್ತಿರುವುದರಿಂದ ಜನರಿಗೆ ತಮ್ಮ ಆಸ್ತಿಯ ನಿಖರ ದಾಸ್ತಾವೇಜುಗಳು ದೊರೆಯುವುದಿಲ್ಲ ಎಂದರು.
ಆಸ್ತಿ ಬಗ್ಗೆ ವಾರಸುದಾರರಿಗೆ ಮಾಹಿತಿಯೇ ಇರುವುದಿಲ್ಲ. ಆಸ್ತಿ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಆಸ್ತಿ ಖರೀದಿ ಬಗ್ಗೆ ಕುಟುಂಬ ಸದಸ್ಯರಿಗೆ ಸ್ಪಷ್ಟ ಮಾಹಿತಿ ಸಿಗದಿರುವುದರಿಂದ ಮುಂದಿನ ದಿನಗಳಲ್ಲಿ ಆಸ್ತಿಗಳು ಕೈತಪ್ಪುವ ಕಳವಳ ಹೆಚ್ಚಾಗಿದೆ. ಇ-ಸಹಿ ದುರುಪಯೋಗವಾಗಲಿದ್ದು, ಮೋಸಕ್ಕೆ ಅವಕಾಶವಾಗಲಿದೆ.
ಭೌತಿಕ ಸಹಿಯ ಬದಲು ಇ-ಸಹಿಯನ್ನು ಬಳಸುವುದರಿಂದ ಹಿರಿಯ ನಾಗರಿಕರು, ಅಕ್ಷರಜ್ಞಾನದ ಕೊರತೆಯವರು ಮೋಸಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆ ಎಂದು ಧರ್ಮರಾಜ್ ವಿ.ಏಕಕೋಟೆ ಆರೋಪಿಸಿದರು.
ಈ ಪೇಪರ್‌ಲೆಸ್ ವ್ಯವಸ್ಥೆ ಭೂಮಾಫಿಯಾ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡಲಿದೆ. ಬ್ಯಾಂಕ್ ಸಾಲಕ್ಕೂ ಅಡೆತಡೆಯಾಗಲಿದೆ. ಮೂಲ ದಾಖಲೆಗಳಿಲ್ಲದೇ ಬ್ಯಾಂಕ್‌ಗಳಲ್ಲಿ ಆಸ್ತಿ ಮೇಲೆ ಸಾಲ ಪಡೆಯುವುದು ಕಷ್ಟಕರವಾಗಿದೆ. ಜೊತೆಗೆ ಒಟಿಪಿ ಗೊಂದಲ ಹೆಚ್ಚಾಗಿದ್ದು, ಒಂದೇ ನೋಂದ ಣಿಗೆ ಅನೇಕ ಬಾರಿ ಒಟಿಪಿ ಅಗತ್ಯವಿರುವುದರಿಂದ ಜನರಲ್ಲಿ ಈ ವ್ಯವಸ್ಥೆ ಆತಂಕ ಮೂಡಿಸುತ್ತಿದ್ದು, ಹ್ಯಾಕಿಂಗ್ ಭೀತಿ ಹೆಚ್ಚಾಗಿದೆ ಎಂದರು.
ವಿಲ್ ವ್ಯವಸ್ಥೆಯಲ್ಲೂ ಗೊಂದಲ ನಿರ್ಮಾಣವಾಗಲಿದೆ. ಗುಪ್ತವಾಗಿ ಮಾಡಬೇಕಾದ ವಿಲ್ ಪ್ರಕ್ರಿಯೆಯೂ ಈ ವ್ಯವಸ್ಥೆಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಇದು ಮೂಲಭೂತ ವಾಗಿ ಸಾಮಾನ್ಯರಿಗೆ ಅರ್ಥವಾಗದ ವ್ಯವಸ್ಥೆಯಾಗಿದ್ದು.
ವಿದ್ಯಾವಂತರಿಗೂ ಅರ್ಥವಾಗದ ಮಟ್ಟಕ್ಕೆ ಸಂಕೀರ್ಣವಾಗಿದೆ. ಗ್ರಾಮೀಣ ಹಾಗೂ ಸಾಮಾನ್ಯ ಜನರಿಗೆ ಈ ವ್ಯವಸ್ಥೆ ಬಗ್ಗೆ ವಿಶ್ವಾಸ ಮೂಡುತ್ತಿಲ್ಲ.
ಇದು ಪೇಪರ್‌ಲೆಸ್ ಅಲ್ಲ, ಇದು ‘ಪೆನ್‌ಲೆಸ್’ ವ್ಯವಸ್ಥೆಯಾಗಿದೆ. ಈ ವ್ಯವಸ್ಥೆಯಲ್ಲಿ ಖರೀದಿದಾರರು, ಮಾರಾಟಗಾರರು, ಸಾಕ್ಷಿದಾರರು, ಹಾಗು ಅಧಿಕಾರಿಗಳೂ ಸಹ ಭೌತಿಕ ಸಹಿ ಮಾಡುವ ಅಗತ್ಯವಿಲ್ಲ. ಇದು ವ್ಯವಸ್ಥೆಯ ನಂಬಿಕೆಯನ್ನು ಪ್ರಶ್ನಿಸುವಂತೆ ಮಾಡುತ್ತಿದೆ. ತಜ್ಞರು ಮತ್ತು ಸಂಘಟನೆಗಳು ಈ ವ್ಯವಸ್ಥೆಯ ದೋಷಗಳನ್ನು ತಕ್ಷಣ ಸರಿಪಡಿಸಬೇಕು. ಇಲ್ಲವಾದರೆ ರಾಜ್ಯಾದ್ಯಂತ ಹೋರಾಟಕ್ಕೆ ಮುಂದಾಗುತ್ತೇವೆ. ಡಿಜಿಟಲ್ ಯುಗದಲ್ಲಿ ಸುಲಭತೆಗಾಗಿ ಜಾರಿಗೊಂಡ ಈ ಇ-ನೋಂದಣಿ ವ್ಯವಸ್ಥೆ, ಇದೀಗ ಜನರ ಆಸ್ತಿ ಭದ್ರತೆಯನ್ನೇ ಪ್ರಶ್ನಿಸುವ ಸ್ಥಿತಿಗೆ ತಲುಪಿದೆ. ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಇದು ರಾಜ್ಯದ ಅಸಂಖ್ಯಾತ ಕುಟುಂಬಗಳಿಗೆ ದೊಡ್ಡ ಸಂಕಷ್ಟವನ್ನುಂಟುಮಾಡುವ ಸಾಧ್ಯತೆ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ನವೀನ್ ಕುಮಾರ್ ಎಸ್, ಸಹ ಕಾರ್ಯದರ್ಶಿ ಗಳಾದ ಕರಿಬಸಪ್ಪ ಬಳ್ಳಿ, ಈ.ಕೃಷ್ಣಮೂರ್ತಿ, ಖಜಾಂಚಿಗಳಾದ ಡಿ.ಆರ್.ಗಿರಿರಾಜು, ಕೆ.ಗಂಗಾಧರ್, ಸಂಚಾಲಕರಾದ ರಾಜಶೇಖರ್, ನಿರ್ದೇಶಕರುಗಳಾದ ಕೇಶವಮೂರ್ತಿ, ನಾಗರಾಜ್ ಟಿ, ಜಿ.ಲಕ್ಷ್ಮಣ್, ಜಯಕುಮಾರ್ ಜೆ.ಜಿ ಉಪಸ್ಥಿತರಿದ್ದರು.