ಬೆಂಗಳೂರು: ಬಿಡದಿ ಬಳಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಟೌನ್‌ಶಿಪ್ (Bidadi Township) ನಿರ್ಮಾಣಕ್ಕಾಗಿ ರೈತರ ಭೂಮಿ ಸ್ವಾಧೀನಕ್ಕೆ, ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡರ (H.D. Deve Gowda) ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸಿಎಂ ಡಿಕೆ ಶಿವಕುಮಾರ್ ಅವರಿಗೆ ಸುದೀರ್ಘ 11 ಪುಟಗಳ ಪತ್ರವನ್ನು ಬರೆದಿದ್ದಾರೆ. "ಟೌನ್‌ಶಿಪ್ ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆಯಿಂದ ರೈತರ ಭೂಮಿಯನ್ನು ಕೈಬಿಡಬೇಕು" ಎಂದು ದೇವೇಗೌಡ ಒತ್ತಾಯಿಸಿದರು.
ಬಿಡದಿ ಹೋಬಳಿಯ ಬೈರಮಂಗಲ, ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 24 ಗ್ರಾಮಗಳಲ್ಲಿನ ಹಲವಾರು ಸರ್ವೆ ನಂಬರುಗಳಲ್ಲಿರುವ ಸುಮಾರು 10 ಸಾವಿರ ಎಕರೆ ಜಮೀನನ್ನು ಸರ್ಕಾರ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಟೌನ್‌ಶಿಪ್ ಯೋಜನೆ ನಿರ್ಮಾಣಕ್ಕೆ ಭೂಸ್ವಾಧೀನಕ್ಕೆ ಸರ್ವೆ ಪ್ರಾರಂಭಿಸುವ ಹಂತದಲ್ಲಿರುವುದರಿಂದ ಮಾಜಿ ಪ್ರಧಾನಿ ಈ ಪತ್ರವನ್ನು ಬರೆದಿದ್ದಾರೆ.
'ರಾಮನಗರ ಮತ್ತು ಕನಕಪುರ ತಾಲ್ಲೂಕುಗಳಲ್ಲಿ ಕೈಗಾರಿಕಾಭಿವೃದ್ಧಿಗೆ ಸರ್ಕಾರ ಈಗಾಗಲೇ ಸಾವಿರಾರು ಎಕರೆ ರೈತರ ಭೂಮಿಯನ್ನು ವಶಪಡಿಸಿಕೊಂಡಿದ್ದು, ಬೆಂಗಳೂರಿಗೆ ಹೊಂದಿಕೊಂಡಿರುವ ಕಾರಣಕ್ಕೆ ಈ ಭಾಗದಲ್ಲಿ ಹಲವಾರು ಖಾಸಗಿ ಉದ್ದಿಮೆಗಳು ಸ್ಥಾಪನೆಯಾಗಿವೆ. ಇಂತಹ ಸ್ಥಿತಿಯಲ್ಲಿಮತ್ತಷ್ಟು ಟೌನ್‌ಶಿಪ್ ಯೋಜನೆಗಾಗಿ ಕೃಷಿ ಸಾಗುವಳಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ರೈತರನ್ನು ಒಕ್ಕಲೆಬ್ಬಿಸುವುದು ಬೇಡ'' ಎಂದು ಎಚ್‌ಡಿ ದೇವೇಗೌಡ ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
ಮುಂದುವರೆದು, ರೈತರ ಜೀವನಕ್ಕೆ ಉಪ-ಕಸಬು ಆಗಿರುವ ಹೈನುಗಾರಿಕೆ, ರೇಷ್ಮೆ ಬೆಳೆಗಳನ್ನು ತಮ್ಮ ಜೀವನ ನಿರ್ವಹಣೆಗೆ ಆಶ್ರಯಿಸಿಕೊಂಡಿದ್ದಾರೆ. ಈ ಭೂಸ್ವಾಧೀನದಿಂದ ಸಾವಿರಾರು ಕುಟುಂಬಗಳ ಜೀವನ ನಿರ್ವಹಣೆಗೆ ಧಕ್ಕೆ ಉಂಟಾಗಿ, ರೈತ ಕುಟುಂಬದ ಯುವಕರು ನಿರುದ್ಯೋಗಿಳಾಗಿ ಬೀದಿಪಾಲಾಗುತ್ತಾರೆ. ಒಂದು ಸಾವಿರ ಎಕರೆ ಅಂಗಳವುಳ್ಳ ಮತ್ತು ಹಲವು ದಶಕಗಳಿಂದ ನೀರಾವರಿಗೆ ಆಶ್ರಯವಾಗಿದ್ದ ಭೈರಮಂಗಳ ಕೆರೆಯು ಇಂದು ವೃಷಭಾವತಿ ಕಣಿವೆಯಿಂದ ಬರುವ ತ್ಯಾಜ್ಯದ ನೀರು ಮತ್ತು ಕೈಗಾರಿಕ ಮಾಲಿನ್ಯ ನೀರಿನಿಂದ ತುಂಬಿ ಕೆರೆ ಅಂಗಳ ನೊರೆ ಮತ್ತು ಕಳೆಯಿಂದ ಅವೃತವಾಗಿದೆ. ಇದರಿಂದ ಸುತ್ತು-ಮುತ್ತಲಿನ ಗ್ರಾಮಗಳಲ್ಲಿ ವಾಸಿಸುತ್ತಿರುವ ನಾಗರೀಕರು ಮತ್ತು ಜಾನುವಾರುಗಳ ಮೇಲೆ ಪರಿಸರ ಮಾಲಿನ್ಯ, ಕಲುಷಿತ ನೀರಿನ ವಾಸನೆಯಿಂದ ತೀವ್ರತರವಾದ ಆರೋಗ್ಯ ಸಮಸ್ಯೆ ಉಂಟಾಗಿದೆ.
ಅಲ್ಲದೇ ರಾಜ್ಯ ಸರ್ಕಾರ ಸಣ್ಣ ನೀರಾವರಿ ಇಲಾಖೆ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅಂದಾಜು ರೂ.300 ಕೋಟಿ ವೆಚ್ಚದಲ್ಲಿ ಈ ಕೆರೆಯನ್ನು ಪುನರ್ ಜೀವನಗೊಳಿಸಲು ಕೈಗೊಂಡಿರುವ ಯೋಜನೆಗಳು ದಶಕಗಳಿಂದ ನೆನೆಗುದಿಗೆ ಬಿದ್ದಿವೆ. ಇಂತಹ ಪರಿಸ್ಥಿತಿಯಲ್ಲಿ ಭೈರಮಂಗಲ ಕೆರೆಯ ಪಕ್ಕದಲ್ಲಿ ಸಮಗ್ರ ಉಪನಗರ ಯೋಜನೆಯನ್ನು ಕೈಗೊಂಡು ಸುತ್ತಮುತ್ತಲಿನ ಪರಿಸರಕ್ಕೆ ಧಕ್ಕೆ ತರುವುದು ಸಾರ್ವಜನಿಕ ದೃಷ್ಟಿಯಲ್ಲಿ ಒಳ್ಳೆಯದಲ್ಲ ಎಂದು ಅವರು ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಬಿಡದಿ ರೈತ ಮಹಿಳೆಯರ ಪೊರಕೆ ಸೇವೆ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಗಂಟೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ರಾಜ್ಯ ಸರ್ಕಾರಕ್ಕೆ ಬಿಡದಿ ಟೌನ್‌ಶಿಪ್ ನಿರ್ಮಾಣ ಪ್ರಸ್ತಾವನೆ ಹೊಸದೇನಲ್ಲ. ಈ ಹಿಂದೆ ಅಂದರೆ 2006-08 ಅವಧಿಯಲ್ಲಿ ಹೆಚ್.ಡಿ.ಕುಮಾರಸ್ವಾಮಿರವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಬೆಂಗಳೂರು ನಗರದ ಮೇಲಿನ ಒತ್ತಡ ನಿರ್ವಹಣೆ ಮಾಡುವ ದೂರದೃಷ್ಟಿಯಿಂದ ಮತ್ತು ನಗರ ಮಟ್ಟದಲ್ಲಿ ಹಾದು ಹೋಗುವ ವಾಹನಗಳ ಸಾಂದ್ರತೆಯನ್ನು ತಪ್ಪಿಸಲು ಬೆಂಗಳೂರು ನಗರಕ್ಕೆ ಹೊಂದಿಕೊಂಡಂತೆ ಐದು ಉಪನಗರಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿತ್ತು.
(1) ನಂದಗುಡಿ - ಹೊಸಕೋಟೆ ತಾಲ್ಲೂಕು
(2) ಕಸಬಾ- ರಾಮನಗರ ತಾಲ್ಲೂಕು
(2) ಬಿಡದಿ - ರಾಮನಗರ ತಾಲ್ಲೂಕು
(4) ಸೋಲೂರು - ರಾಮನಗರ ತಾಲ್ಲೂಕು
(5) ಸಾತನೂರು - ಕನಕಪುರ ತಾಲ್ಲೂಕು
ತದನಂತರ, ಬಿಡದಿ ಟೌನ್‌ಶಿಪ್ ಅನ್ನು ಪೈಲೆಟ್ ಪ್ರಾಜೆಕ್ಟ್ ಆಗಿ ಕೈಗೆತ್ತಿಕೊಂಡು ನವದೆಹಲಿಯ ಡಿಎಲ್‌ಎಫ್ ಸಂಸ್ಥೆಯಿಂದ 9684 ಎಕರೆ ಜಮೀನಿನಲ್ಲಿ ಉಪನಗರ ನಿರ್ಮಿಸಲು ನಿರ್ಧರಿಸಲಾಯಿತು. ಆದರೆ, ರೈತರ ವಿರೋಧ ಮತ್ತು ಇಂತಹ ಬೃಹತ್ ಗಾತ್ರದ ಯೋಜನೆಯಿಂದ ಸ್ಥಳೀಯವಾಗಿ ಉಂಟಾಗುವ ಪರಿಣಾಮಗಳನ್ನು ಪರಿಗಣಿಸಿ, ಈ ಯೋಜನೆಯನ್ನು ಕೈಬಿಡಲಾಯಿತು.
2008-100 ಬಿ.ಎಸ್.ಯಡಿಯೂರಪ್ಪನವರು 2009ನೇ ಇಸವಿಯಲ್ಲಿ ಡಿಎಲ್‌ಎಫ್ ಸಂಸ್ಥೆ ಠೇವಣ ಇಟ್ಟಿದ್ದ ರೂ. 400 ಕೋಟಿ ಹಣವನ್ನು ಬಿಎಂಆರ್‌ಡಿಎ ಸಂಸ್ಥೆ ಮುಖೇನ ಬಡ್ಡಿ ಸಮೇತ ವಾಪಸ್ಸು ಮಾಡಿ ಈ ಯೋಜನೆಯನ್ನು ತದನಂತರ, ಕೈಬಿಡಲಾಗಿದೆ. 2006-2008 ಹಿರಿಯ ಮುಖಂಡರಾದ ಅವಧಿಯಲ್ಲಿ ಶ್ರೀ.ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಬಿಡದಿ ಟೌನ್‌ಶಿಪ್ ನಿರ್ಮಾಣದ ತೀರ್ಮಾನದಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಶ ಹೆಚ್.ಕೆ ಪಾಟೀಲ್ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಪಕ್ಷವೇ ಒಂದು ಸತ್ಯಶೋಧನಾ ಸಮಿತಿಯನ್ನು ರಚಿಸಲಾಗಿದೆ ಎಂದು ವರದಿಯಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
Gururaj Gantihole Column: ಬಿಡದಿ ಟೌನ್ʼಶಿಪ್ʼಗೆ ಬಿಡದ ಹಠ: ಬೇರೆಲ್ಲೂ ಯಾಕಿಲ್ಲ ?
ಈ ಮೇಲಿನ ಎಲ್ಲಾ ಕಾರಣಗಳಿಂದ ಮತ್ತು ಸ್ಪಷ್ಟ ಪಡಿಸಿದ ಅಂಶಗಳಿಂದ ರಾಜ್ಯ ಸರ್ಕಾರ ಕೈಗೊಂಡಿರುವ ಗ್ರೇಟರ್ ಬೆಂಗಳೂರು ಸಮಗ್ರ ಉಪ-ನಗರ ಯೋಜನೆಯನ್ನು ಕೂಡಲೇ ಕೈಬಿಡಬೇಕೆಂದು ಒತ್ತಾಯಿಸುತ್ತೇನೆ. ಒಂದು ವೇಳೆ ರಾಜ್ಯ ಸರ್ಕಾರ ನನ್ನ ಈ ಮನವಿಯನ್ನು ತಿರಸ್ಕರಿಸಿದರೆ. ಈಗಾಗಲೇ ನಿರಂತರ ಹೋರಾಟ ಮತ್ತು ಧರಣಯಲ್ಲಿ ಇರುವ ರೈತರನ್ನು ಬೆಂಬಲಿಸಿ, ನಮ್ಮ ಜನತಾದಳ (ಜಾತ್ಯಾತೀತ) ಪಕ್ಷದ ವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು ಎಂಬುದನ್ನು ತಮ್ಮ ಗಮನಕ್ಕೆ ತರಲು ಇಚ್ಚಿಸುತ್ತೇನೆ.
ಮುಂದುವರೆದು, ನನ್ನ 7 ದಶಕಗಳ ಸಾರ್ವಜನಿಕ ಜೀವನದಲ್ಲಿ ರಾಜ್ಯ ಮತ್ತು ದೇಶದ ರೈತರ ಹಿತಕ್ಕೆ ಶ್ರಮಿಸುತ್ತಿದ್ದೇನೆ ಹಾಗೂ ಅಧಿಕಾರ ತ್ಯಾಗ ಮಾಡಿದ್ದೇನೆ. ರಾಜ್ಯ ಸರ್ಕಾರ ನನ್ನ ಮನವಿಯನ್ನು ತಿರಸ್ಕರಿಸಿದರೆ, ಹಾಗೂ ನನ್ನ ಈ ಕೂಗಿಗೆ ಮನಕೊಡದೆ ಇದ್ದರೆ, ವಿಧಾನಸೌಧದ ಆವರಣದಲ್ಲಿನ ಗಾಂಧೀಜಿ ಪ್ರತಿಮೆ ಮುಂದೆ ಕುಳಿತು ಸತ್ಯಾಗ್ರಹ ನಡೆಸುತ್ತೇನೆ ಎಂಬ ಅಂಶವನ್ನು ತಮ್ಮ ಗಮನಕ್ಕೆ ತರಲು ಇಚ್ಚಿಸುತ್ತೇನೆ ಎಂದು ಮಾಜಿ ಪ್ರಧಾನಿ ದೇವೇಗೌಡ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.