ಬೆಂಗಳೂರು : ನಿನ್ನೆ ವಿಧಿವಶರಾದ ಕನ್ನಡದ ಖ್ಯಾತ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ (94) (SL Bhyrappa) ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಇಂದು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅವಕಾಶ ಮಾಡಲಾಗಿದೆ. ಸಾರ್ವಜನಿಕರು, ಅಭಿಮಾನಿಗಳು ಈ ಸಂದರ್ಭದಲ್ಲಿ ಅವರ ದರ್ಶನ ಪಡೆಯಬಹುದು.
ಮಧ್ಯಾಹ್ನ 2 ಗಂಟೆಯ ಬಳಿಕ ಶರೀರವನ್ನು ಮೈಸೂರಿಗೆ ತೆಗೆದುಕೊಂಡು ಹೋಗಲಾಗುತ್ತದೆ. ಮೈಸೂರಿನ ಕಲಾ ಮಂದಿರದಲ್ಲಿ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆವರೆಗೆ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ. ನಂತರ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಚಿತಾಗಾರದಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.
ಕಳೆದ ಆರು ತಿಂಗಳಿಂದ ಭೈರಪ್ಪ ಅವರು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರ ಮನೆಯಲ್ಲಿದ್ದರು. ಭೈರಪ್ಪ ಅವರ ಕೊನೆಯ ಸಮಯದಲ್ಲಿ ವಿಶ್ವೇಶ್ವರ ಭಟ್ಟರು ಮತ್ತು ಅವರ ಕುಟುಂಬಸ್ಥರು ಆರೈಕೆ ಮಾಡಿದ್ದಾರೆ. ವಿಶ್ವೇಶ್ವರ ಭಟ್ಟರು ಸಿಎಂ ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಿ, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಮೈಸೂರು ಜಿಲ್ಲಾಡಳಿತಕ್ಕೆ ಸಿಎಂ ನಿರ್ದೇಶನ ನೀಡಿದ್ದಾರೆ. ನಾಳೆ ಮೈಸೂರಿನಲ್ಲಿ ಅಂತಿಮ ದರ್ಶನ ಹಾಗೂ ಶುಕ್ರವಾರ ಅಂತ್ಯ ಸಂಸ್ಕಾರ ನಡೆಸಲು ಜಿಲ್ಲಾಡಳಿತ ವ್ಯವಸ್ಥೆ ಮಾಡುತ್ತಿದೆ.
ಸಕಲ ಸರ್ಕಾರಿ ಗೌರವಗಳೊಂದಿಗೆ ಕನ್ನಡದ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, ಪದ್ಮಭೂಷಣ ಪುರಸ್ಕೃತರು, ಹಿರಿಯ ಸಾಹಿತಿ ಡಾ.ಎಸ್ಎಲ್ ಭೈರಪ್ಪ ಅವರ ನಿಧನಕ್ಕೆ ರಾಜ್ಯ ಸರ್ಕಾರವು ತೀವ್ರ ಸಂತಾಪವನ್ನು ಪ್ರಕಟಿಸಿದೆ. ಡಾ.ಎಸ್ಎಲ್ ಭೈರಪ್ಪ ಮೃತರ ಗೌರವಾರ್ಥ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಬೇಕು ಎಂದು ಮೈಸೂರು ಜಿಲ್ಲಾಧಿಕಾರಿ ಸೇರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಇದನ್ನೂ ಓದಿ: SL Bhyrappa: 'ಆವರಣ' ಕಾದಂಬರಿಗಾಗಿ ಬಾನು ಮುಷ್ತಾಕ್ ಮನೆಯಲ್ಲಿ ಒಂದು ವಾರ ಇದ್ದ ಭೈರಪ್ಪ!