ಬೆಂಗಳೂರು: PVR INOX ಮಲ್ಟಿಪ್ಲೆಕ್ಸ್ನಲ್ಲಿ ಗ್ರಾಹಕರು ಕುಡಿದು ಬಿಸಾಡಿದ ಪೇಪರ್ ಕಪ್ಗಳನ್ನೇ ತೊಳೆದು ಮರುಬಳಕೆ ಮಾಡುತ್ತಿದ್ದ ಗಂಭೀರ ಆರೋಪ ಕೇಳಿಬಂದಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ (Viral News)ಎಚ್ಚೆತ್ತ ಕರ್ನಾಟಕ ಆಹಾರ ಸುರಕ್ಷತಾ ಅಧಿಕಾರಿಗಳು ಜ್ಯೂಸ್ ಕೌಂಟರ್ ಅನ್ನು ಬಂದ್ ಮಾಡಿಸಿ, ಬೀಗ ಜಡಿಯುವ ಮೂಲಕ ಕಠಿಣ ಕ್ರಮ ಕೈಗೊಂಡಿದ್ದಾರೆ.
ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ನವೆಂಬರ್ 5ರಂದು ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ PVR INOX ನ ಜ್ಯೂಸ್ ಕೌಂಟರ್ ಸಿಬ್ಬಂದಿ ಈಗಾಗಲೇ ಗ್ರಾಹಕರು ಬಳಸಿ ಬಿಸಾಡಿದ್ದ ಪೆಪ್ಸಿ ಬ್ರ್ಯಾಂಡ್ನ ಕಪ್ಗಳನ್ನು ಒಟ್ಟಿಗೆ ಜೋಡಿಸಿಟ್ಟು, ಅವುಗಳನ್ನೇ ಸ್ವಚ್ಛಗೊಳಿಸಿ ಮತ್ತೊಮ್ಮೆ ಜ್ಯೂಸ್ ವಿತರಿಸಲು ಬಳಸುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು.
ಇದು ಸಾರ್ವಜನಿಕರಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿಡಿಯೋ ಮತ್ತು ಗ್ರಾಹಕರ ದೂರಿನ ಬೆನ್ನಲ್ಲೇ ಆಹಾರ ಸುರಕ್ಷತಾ ಅಧಿಕಾರಿಗಳು ಮಾಲ್ನ PVR ಕೌಂಟರ್ಗೆ ಭೇಟಿ ನೀಡಿ ದಿಢೀರ್ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆಯ ವೇಳೆ ನಿಯಮಗಳ ಉಲ್ಲಂಘನೆ ಮತ್ತು ನೈರ್ಮಲ್ಯದ ಕೊರತೆ ಕಂಡುಬಂದ ಕಾರಣ ತಕ್ಷಣವೇ ಜ್ಯೂಸ್ ಕೌಂಟರ್ ಅನ್ನು ಮುಚ್ಚಿಸಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ಈ ಕುರಿತು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, "ನಿಯಮ ಉಲ್ಲಂಘಿಸಿರುವ ಸಂಸ್ಥೆಗೆ ನೋಟಿಸ್ ನೀಡಲಾಗಿದ್ದು, ಜ್ಯೂಸ್ ಕೌಂಟರ್ ಅನ್ನು ಮುಚ್ಚಿಸಲಾಗಿದೆ. ದೊಡ್ಡ ಬ್ರ್ಯಾಂಡ್ ಆಗಿರಲಿ ಅಥವಾ ಸಣ್ಣ ವ್ಯಾಪಾರಿಯಾಗಿರಲಿ, ಸಾರ್ವಜನಿಕರ ಆರೋಗ್ಯದ ವಿಷಯದಲ್ಲಿ ಎಲ್ಲರಿಗೂ ಒಂದೇ ನಿಯಮ ಅನ್ವಯಿಸುತ್ತದೆ" ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಯಾವುದೇ ಅಖಾದ್ಯ ಅಥವಾ ಅಶುಚಿತ್ವದ ಪ್ರಕರಣಗಳಿದ್ದರೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ದೂರು ನೀಡಲು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.